ಎದುರಾದ ಭವ್ಯ ಪುರುಷನಿಗೆ ಅವಮಾನ ಕಾಡಿದಾಗ
ಹಾರಿ ಕಿತ್ತು ಬೆತ್ತಲಾಗಿಸಿ ಬಡಿದರು ನನ್ನ ನಡುಬೀದಿಯಲಿ
ಭವ್ಯ ಪುರುಷನಿಗೆ ಬಿಗುಮಾನ ಮೂಡುವವರೆಗೂ
ಹಿಂಬಾಲಕರ ಮನ ತಣಿವವರೆಗೂ
ಕಪ್ಪು ಬಣ್ಣದ ಅಂಗಿ ನಾ ದರಿಸಿದ್ದು ತಪ್ಪಾಯಿತು..
ದೇಹವು ರಕ್ತದ ಹೊಳೆಯಲಿ ಕೆಂಪಾಯಿತು..
ಹರಿವ ತೊರೆಯ ನೀರು ಎಲ್ಲರಿಗೂ ಎಂದೆ
ಪ್ರಕೃತಿ ಎಲ್ಲರಿಗೂ ದೈವವೆಂದು ನುಡಿದೆ
ನಾಡು ಗಡಿಗೆ ಬೇಲಿ ಹಾಕಿದವರು
ಬಿಡುವು ನೀಡದೇ ನನಗೆ ಒದ್ದಾಗಲೇ
ತಪ್ಪು ನುಡಿಗೆ ಬೆಲೆತೆತ್ತೆ.
ಹರಿವ ತೊರೆಗು ಬೇಲಿಯಿದೆ ಎಂದರಿತೆ
ಶಾಂತಿ ಸಹನೆಗಳು ಜಗದ ಶ್ರೇಷ್ಠ ಗ್ರಂಥವೆಂದೆ
ನಗುತ ಬಾಳುವುದೇ ಸುಯೋಗವೆಂದೆ
ಧರ್ಮಾಂದರ ಕೆನ್ನಾಲಿಗೆಗೆ ಬಲಿಯಾದೆ
ವಾಸದ ಕುಟೀರ ಬೂಧಿಯಾಯಿತು
ಶಾಂತಿ ಸಹನೆಗಳೇ ಶಾಪವೆನಿಸಿತು
ಶ್ರೇಷ್ಠತೆಯ ಮಾತು ತಪ್ಪಾಯಿತು
ಹರೆಯದ ತರುಣಿಯೊಬ್ಬಳು ಹೊಂಡದ ರಸ್ತೆಯಲಿ
ಜಾರಿ ಬಿದ್ದು ಬಟ್ಟೆ ಹರಿದು ರೋಧಿಸುತ
ಪಕ್ಕದಲೇ ಇದ್ದ ಬಾವುಟವ ಹರಿದು
ಮಾನ ಮುಚ್ಚಿಕೊಳ್ಳಲು ಹವಣಿಸಿದಾಗ
ಗುಂಪೊಂದು ಸೇರಿ ಊರಿಗೆಲ್ಲ ಕೂಗಿ
ಹಳೆ ಟೈರುಗಳಿಗೆ ಬೆಂಕಿ ಹಚ್ಚಿ ಹರತಾಳ ಕೂಗಿದಾಗ
ನಾನರಿತೆ ಆ ಕೋಮಿನ ಬಾವುಟ ಕಿತ್ತು
ಆ ತರುಣಿಯ ಮಾನಕ್ಕಾಗಿ ಹೋರಾಡಿದ್ದು ತಪ್ಪು
ಮಾನಕ್ಕಿಂತಲು ಕೋಮಿನ ಬಾವುಟವು ಹೆಚ್ಚು..
ಇನ್ನೂ ತಪ್ಪುಗಳ ಸರಮಾಲೆ ಸಾಕಿನ್ನು
ಒಪ್ಪುಗಳ ಸರಪಳಿ ಒಪ್ಪಬೇಕಿನ್ನು..!!
ರಾಮಚಂದ್ರ ಸಾಗರ್
