ಒಲುಮೆಯಾ ಪಥದಲಿ ಜೊತೆಯಾದವರ ಮನದಲ್ಲಿ ಅಸೂಯೆ, ಅಪಹಾಸ್ಯಗಳಿಗೆ ಜಾಗವಿರದಿದ್ದಲ್ಲಿ ಬಾಳೊಂದು ನಿತ್ಯ ಬೆಳುಗುವ ಒಲವ ದೀಪವಾಗುತ್ತದೆ, ಆ ಬೆಳಕಿನಾ ಕದಿರಿನಲ್ಲಿ ಬಾಳು ಸದಾ ಹರಿವ ಪ್ರೀತಿಯ ನದಿಯಾಗುತ್ತದೆ. ಜೊತೆಯಾದವರ ಬಾಳಿನ ನೌಕೆಯು ಯಾವುದೇ ಆತಂಕವಿಲ್ಲದೇ ಗುರಿ ತಲುಪುತ್ತದೆ, ಎಲ್ಲವೂ ಬಾಳಲ್ಲಿ ಒಬ್ಬರಿಗೊಬ್ಬರೂ ಅರಿತು ಮನಗಳು ಬೆಸೆದಾಗಲೇ ಬಾಳು ಸಿಹಿಯಾಮೃತವಾಗುತ್ತದೆ, ಪ್ರೀತಿಯ ಹಂದರದಲ್ಲಿ ಬಾಳಿಗೆ ನಿತ್ಯ ಸಂಭ್ರಮ ಮೇಳೈಸುತ್ತದೆ, ಇದೇ ಜಾಡಿನಲ್ಲಿ ಬಾಳಿನ ಗೆಳತಿಯಾದವಳು ತನ್ನ ಇನಿಯನಿಗೆ ಹೇಗೆಲ್ಲಾ ಸುಂದರಬಾಳ್ವೆಗೆ ಒಲವ ಕಂಪು ಸೂಸಿದಳು ಎಂಬುದು ಈ ಕವಿತೆಯ ಸಾರ, ಗೆಳತಿಯ ಪ್ರೀತಿಯ ಸಿಹಿಗಾಳಿಯಲ್ಲಿ ಆತ ಅವಳಿಗೆ ಗುಲಾಮನಾಗುತ್ತಾನೆ, ಪ್ರತಿ ಕ್ಷಣವೂ ಪ್ರತಿ ನಿತ್ಯವೂ ಜೀವದ ಕೊನೆವರೆಗೂ...ಎಂದಿಗೂ..ಆತ ಅವಳಿಗೆ ಪ್ರೀತಿಯ ಗುಲಾಮನೇ.
ಗುಲಾಮನು ನಾನೇ..
ಮನದ ಮನೆಯ ಆರದ ಒಲವ ದೀಪವೇ
ಒಲವ ಬನದ ಸಿಹಿಯಾದ ಮೆಲುಗಾಳಿಯೇ
ಹುಚ್ಚು ಮನದ ಅವಿರತ ಕನಸಿನ ಅಲೆಯೇ
ಒಲವ ಸೌಧದದ ಮಧುರಕಾವ್ಯದ ಉಸಿರೇ
ನಿನ್ನೊಲವಿಗೆ ಸದಾ ಗುಲಾಮನು ನಾನೇ
ಬಾಳ ತೇರಲಿ ಪ್ರೇಮಾಮೃತವ ಧಾರೆಯೆಳೆದವೇ
ಒಲುಮೆಯ ಹೊನಲಲಿ ಬಾಳಿನಾ ನಾವೆಯಾದವಳೇ
ಒಲುಮೆಯ ಕುಟೀರದಲಿ ಒಲವಾಮೃತವ ಉಣಿಸಿದವಳೇ
ಬಾಳ ಯಾತ್ರೆಯಲಿ ಕೈಹಿಡಿದ ಜೀವವೇ
ನಿನ್ನೊಲವಿಗೆ ಸದಾ ಗುಲಾಮನು ನಾನೇ
ನಗುವ ನೈದಿಲೆಗೆ ನಾಚಿಸಿ ನಲಿವವಳೇ
ನಗು ಮೊಗದಲೆ ಚಂದ್ರಮನ ಕಾಡಿದವಳೇ
ನಚ್ಚು ಮಾತಿನಲೆ ಹೃದಯ ಬೆಸೆದವಳೇ
ನಟ್ಟಿರುಳು ಸಿಹಿ ಕನಸಿಗೆ ಸಿಂಗಾರ ಸೂಸಿದವಳೇ
ನಿನ್ನೊಲವಿಗೆ ಸದಾ ಗುಲಾಮನು ನಾನೇ
ಮನದ ಭಾವನೆಗಳಿಗೆ ಪ್ರೀತಿಯ ಸೌರಭ ಸೂಸಿದವಳೇ
ಬಾಳಿನಾ ಕುಸುರಿಗೆ ಭರವಸೆಯ ಇಂಧನವಾದವಳೇ
ಹರುಷದಾ ನೌಕೆಗೆ ನಗುತ ಸಾರಥಿಯಾದವಳೇ
ಒಲುಮೆಯಾ ಬದುಕಿಗೆ ಪ್ರೀತಿಯ ಮಳೆಯಾದವಳೇ
ನಿನ್ನೊಲವಿಗೆ ಸದಾ ಗುಲಾಮನು ನಾನೇ
ಒಲವ ಕುಸುಮ ಬಾಳ ಪಥದಲಿ ಚೆಲ್ಲಿದವಳೇ
ಒಲವ ಗುಡಿಗೆ ಪ್ರೀತಿಯಮಾಲೆ ಮುಡಿಸಿದವಳೇ
ಅಪಹಾಸ್ಯದ ಮಾತುಗಳಿಗೆ ಸಂಕೋಲೆ ತೊಡಿಸಿದವೇ
ಅಸೂಯೆಯ ಜಗಕೆ ಮೌನವೇ ಮಾತೆಂದವಳೇ
ನಿನ್ನೊಲವಿಗೆ ಸದಾ ಗುಲಾಮನು ನಾನೇ
ರಾಮಚಂದ್ರ ಸಾಗರ್
