Sunday, 31 December 2017

ಹೊಸ ಘಳಿಗೆಯಲಿ ಹೊಸತರ ನೆಪದಲ್ಲಾದರೂ ಮನಗಳು ಬೆಸೆಯಬೇಕು

     
       ಹಗಲು ಇರುಳಿನ ಓಟದಲ್ಲಿ ಕಳೆದ ಘಳಿಗೆಯತ್ತ ತುಸು ಮೆಲುಕು ಹಾಕಿದರೆ ಜಗದಲ್ಲಿ ಸಾಕಷ್ಟು ಘಟನೆಗಳು ಘಟಿಸಿ ಹೋಗಿರುತ್ತವೆ, ಹಲವು ನಮ್ಮ ಮನಸ್ಸಿಗೆ ಹಿತವೆನಿಸಿದರೆ ಹಲವು ಘಾತಕವೆನಿಸಿದವೂ ಇರುತ್ತವೆ, ಸಮಾಜದಲ್ಲೂ ಹೀಗೆ, ಸಮಾಜಮುಖಿ ಕಾರ್ಯಗಳು ಸಮಾಜವನ್ನು ಕಟ್ಟುವಂತೆ, ನೊಂದವರ ನೋವಿಗೆ ದನಿಯಾಗುವ, ಬಡವರ ಬವಣೆಗಳನ್ನು ಕರಗಿಸಿ ಅವರನ್ನು ಉತ್ಕøಷ್ಟದ ಮೆಟ್ಟಿಲಿಗೆ ಏರಿಸುವ ಕಾರ್ಯಗಳು ನಡೆಯುತ್ತವೆ. ಇದಕ್ಕೆ ವೈರುದ್ಯವಾಗಿ ಸಮಾಜದಲ್ಲಿ ಘರ್ಷಣೆ, ನೋವಿಗೆ ಕಾರಣವಾಗಿ ಮನುಕುಲದ ಅಡಿಗೆ ಪೆಟ್ಟು ನೀಡುತ್ತಾ ಮನುಕುಲದ ಇರುವಿಕೆಗೆ ಪ್ರಶ್ನಾರ್ಥಕವೆನಿಸುವಂತ ಘಟನೆಗಳು ಘಟಿಸಿ ಮಾನವತೆಯ ಅಡಿಗಲ್ಲಿಗೆ ಬಿರುಕು ಮೂಡಿಸುವ ಕೃತ್ಯಗಳು ಸಂಬವಿಸುತ್ತವೆ. ಎಲ್ಲವೂ ಜಗದಗಲ ಸಂಬವಿಸುತ್ತಲೇ ಇರುತ್ತವೆ, ಹಗಲು ಇರುಳುಗಳ ಓಟದಲ್ಲಿ ಎಲ್ಲವೂ ನಡೆದು ಹೋಗುತ್ತಿರುತ್ತವೆ, ಹಲವರ ಬದುಕು ಮೂರಬಟ್ಟೆಯಾಗಿ ಬೀದಿಗೆ ಬಿದ್ದವರು ಲೆಕ್ಕವಿಲ್ಲ. ಮಾತು ಮಾತಿಗೆ ನಡೆವ ಹೋರಾಟಗಳು ಸಿದ್ದಿಸಿವೆಯೇ? ಎಲ್ಲವೂ ಸಿದ್ದಿಸಿದ್ದಲ್ಲಿ ಜಗದಲ್ಲಿ ನೋವು, ಬವಣೆ, ದಾರಿದ್ರ್ಯಗಳಿಗೇಕೆ ಇನ್ನೂ ಜಾಗವಿದೆ! ಪ್ರಾಮಾಣಿಕ ಹೋರಾಟಗಳು ಮರೀಚಿಕೆಯಾಕಿ ಕೆಲವೊಂದು ಹೋರಾಟದ ಮುನ್ನಡೆಸುವ ಮುಂದಾಳುಗಳ ಒಳಮರ್ಮವೇ ಬೇರಾದಾಗ ನೊಂದವನ ನೋವಿಗೆ ಪರಿಹಾರವೆಲ್ಲಿ? ಅದುವೂ ನೆಪವಷ್ಟೇ. 
ಬಿಜಾಪುರದಲ್ಲಿ ಹಗಲು ಸಮಯದಲ್ಲೇ ದಾನಮ್ಮ ಎಂಬ ಬಾಲೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯೇ ಇಂದಿನ ನಮ್ಮ ವ್ಯವಸ್ಥೆಗೆ ಅಣಕವೆನಿಸುವಂತಿದೆ. ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣವೂ ಅಂತರಾಷ್ಟ್ರೀಯ ಮಟ್ಟದಲ್ಲೂ ಹೋರಾಟಕ್ಕೆ ವೇದಿಕೆಯಾಗಿದ್ದು, ಆ ಹೋರಾಟಕ್ಕೆ ದನಿಗೂಡಿಸಿದ ಜನಸಮೂಹವು ದೇಶದಲ್ಲಿ ಇನ್ನೆಂದು ಅತ್ಯಾಚಾರ ಕೊಲೆಗಳು ನಡೆಯುವುದಿಲ್ಲವೇನೋ ಎನ್ನುವಂತೆ ಅದು ದೇಶದುದ್ದವಷ್ಟೇ ಏಕೆ ಪರದೇಶದಲ್ಲೂ ನ್ಯಾಯಕ್ಕಾಗಿ ಹೋರಾಟದ ಕೂಗುಗಳು ಕೇಳಿದವು, ಇದಕ್ಕೆಲ್ಲಾ ಒಂದು ಕಠಿಣ ಕಾನೂನು ಬೇಕೆ ಬೇಕೆಂದು ಹಠವಿಡಿದರೂ ಅದೂ ಆಯ್ತು ಎನ್ನಿ. ಈ ಸಮಯದಲ್ಲಿ ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳ ಪರ ವಕೀಲರ ಮಾತೊಂದು ನನಗೆ ನೆನಪಿದೆ. ಆ ವಕೀಲರಿಗೆ ಒಬ್ಬರು ಪ್ರಶ್ನಿಸುತ್ತಾರೆ, ನಿಮ್ಮ ಕಕ್ಷಿದಾರರು ಭಾರತದ ಮಾನವನ್ನು ಜಗತ್ತಿನಲ್ಲಿ ಹರಾಜು ಹಾಕಿದ್ದಾರೆ, ಚಲಿಸುವ ಬಸ್ಸಿನಲ್ಲೇ ರಾಷ್ಟ್ರದ ರಾಜಧಾನಿಯಲ್ಲಿ ಅತ್ಯಾಚಾರವೆಸಗಿ ಕೊಲೆಗೈದು ಅನಾಗರೀಕವಾಗಿ ವರ್ತಿಸಿದ್ದಾರೆ ಇಂತಹವರ ಪರ ನಿಮ್ಮ ವಾದ ಎಷ್ಟು ಸರಿ, ದಯಮಾಡಿ ನಿಮ್ಮ ವಾದವನ್ನು ನಿಲ್ಲಿಸಿ, ದುರುಳರಿಗೆ ಬೇಗಲೇ ಶಿಕ್ಷೆಯಾಗಲಿ ಎಂದಾಗ, ಆ ವಕೀಲರ ಉತ್ತರ ಹೀಗಿತ್ತು ಈ ದೇಶದಲ್ಲಿ ಇನ್ನೆಂದು ಅತ್ಯಾಚಾರ ಕೊಲೆ ನಡೆಯುವುದಿಲ್ಲವೆಂದು ನೀವು ಭರವಸೆ ನೀಡುವಿರಾ, ಅತ್ಯಾಚಾರ ನಾಳೆಯಿಂದಲೇ ಎಲ್ಲೂ ನಿಲ್ಲುವುದಿಲ್ಲವೆಂದು ನೀವು ಭರವಸೆ ನೀಡಿದರೆ ನನ್ನ ವಾದವನ್ನು ನಿಲ್ಲಿಸುತ್ತೇನೆ ಎನ್ನುತ್ತಾರೆ, ಅದು ವಾಸ್ತವೂ ಸವಾಲೂ ಆಗಿತ್ತು. 
ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೊಲೆ ನಡೆದದ್ದು ಡಿಸೆಂಬರ್ 2012ರಂದು. ಇದು ಮಾಸುವ ಮೊದಲೇ ಇನ್ನೊಂದು ವಿಕೃತಿ 2013ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಧ್ಯೆ ಮುಂಬೈನ ಶಕ್ತಿ ಮಿಲ್ ನಲ್ಲಿ ಐವರು ಅತ್ಯಾಚಾರಿಗಳಿಂದ ಫೋಟೋ ಜರ್ನಲಿಸ್ಟ್ ಒಬ್ಬಳ ಮೇಲೆ ಅನೇಕ ದಿನಗಳ ಕಾಲ ಸಾಮೂಹಿತ ಅತ್ಯಾಚಾರ ನಡೆಯುತ್ತದೆ, ನಂತರ 2014ರಲ್ಲಿ ಉತ್ತರ ಪ್ರದೇಶದ  ಬದಾನ್‍ನಲ್ಲಿ ಅಪ್ರಾಪ್ತ ವಯಸ್ಸಿನ ದಲಿತ ಕುಟುಂಬದ ಎರಡು ಜನ ಹೆಣ್ಣು ಮಕ್ಕಳ ಮೇಲೆ ಇನ್ನೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆಯುತ್ತದೆ. ಇದೇ ರೀತಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಇದೇ 2017ರ ಡಿಸೆಂಬರ್ ತಿಂಗಳಲ್ಲಿ ಬಿಜಾಪುರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದವರೆಗೆ ಸಾಗುತ್ತವೆ. ಆದರೆ ಅತ್ಯಾಚಾರವನ್ನು ವಿರೋಧಿಸಿ ನಡೆದ ಹೋರಾಟಗಳು, ಜನಪರ ಕಾಳಜಿ ಇದ್ದೇ ಇವೆ, ಆದರೆ ಇದೊಂದು ನಿಲ್ಲದ ಘಾತಕವಾಗಿದೆ. ನಿರ್ಭಯಾ ಪ್ರಕರಣದ ವಕೀಲರು ಹೇಳಿದ ಮಾತು ನಿಜವೆನ್ನುವುದು ನನಗೆ ಇಂದಿಗೆ ಅರಿವಾಯ್ತು. ಆದರೆ ನಿರ್ಭಯಾ ಪ್ರಕರಣಕ್ಕಿಂತಲೂ ಬಿಜಾಪುರದ ಪ್ರಕರಣ ಹೇಯವಾಗಿದ್ದರೂ ಸಮಾಜದಲ್ಲಿ ಹೋರಾಟದ ಭಾಗ ಸ್ವಲ್ಪ ಮೌನವಾದಂತೆ ಭಾಸವಾಗಿದೆ.

ಜಗತ್ತಿನಲ್ಲಿ ಅವ್ಯಹತವಾಗಿ ನಡೆಯುತ್ತಿರುವ ಭಯೋತ್ಪಾದನೆ, ಉಗ್ರವಾದ. ಇನ್ನೊಂದು ಹಿಂಸಾ ಪ್ರವೃತ್ತಿಯ ಅನಾವರಣವಿದು, ಧರ್ಮ ಧರ್ಮಗಳ ನಡುವಿನ ತಿಕ್ಕಾಟದಲಿ ನೈಜತೆ ಅರಿವಿಲ್ಲದ ದುರುಳರ ಅಟ್ಟಹಾಸಕ್ಕೆ ದಿನ ನಿತ್ಯ ನಡೆವ ನರಮೇಧಗಳು ಲೆಕ್ಕವಿಲ್ಲ. ಸಿರಿಯಾ, ಅಫ್ಘಾನಿಸ್ತಾನ, ಇರಾಕ್, ಪಾಕಿಸ್ತಾನಗಳು ಭಯೋತ್ಪಾದನೆ ಮತ್ತು ಉಗ್ರವಾದದ ತವರೂರಾಗಿವೆ, ಇದರಲ್ಲಿ ಪಾಕಿಸ್ತಾನದ ಭಾಗವೇ ಅಧಿಕ, ಪಾಕಿಸ್ತಾನವನ್ನು ಭಯೋತ್ಪಾದನೆ ಮತ್ತು ಉಗ್ರವಾದದ ಸ್ವರ್ಗ, ಕಾರ್ಖಾನೆ ಮತ್ತು ತವರೂರು ಎಂದು ಅಂತರಾಷ್ಟ್ರೀಯವಾಗಿ ಪ್ರಸಿದ್ದಿ. ನಿತ್ಯ ಹಲವು ಮುಗ್ದರನ್ನು ಸೆರೆ ಹಿಡಿದು ಅವರ ಕತ್ತನ್ನು ಸಾರ್ವಜನಿಕವಾಗಿ ಕತ್ತರಿಸಿ ಅಂತರ್ಜಾಲದಲ್ಲಿ ವೀಡಿಯೋ ಅಪ್ಲೋಡ್ ಮಾಡಿ ಮಾನವತೆಗೆ ಸವಾಲೆಸೆವ ದುಷ್ಟರು. ಎಲ್ಲವನ್ನು ಇಡೀ ಜಗತ್ತು ಕಂಡಿಸುತ್ತದೆ. ಆದರೆ ಭಯೋತ್ಪಾದನೆಗೆ ತುತ್ತಾದವರಷ್ಟೇ ಇದರ ವಿರುದ್ಧ ಹೋರಾಡುವುದಾಗಿದೆ. ಹಿಂದೊಮ್ಮೆ ಅಮೇರಿಕಾ ಸೇರಿದಂತೆ ಜಗತ್ತಿನ ಮುಂದುವರಿದ ದೇಶಗಳ ಶೀತಲ ಸಮರದ ಭಾಗವಾಗಿ ಉದ್ಭವಿಸಿ ಸಂಘಟನೆಗಳೇ ಈ ಉಗ್ರ ಸಂಘಟನೆಳೆಂಬುದು ಸಾರ್ವತ್ರಿಕ ಸತ್ಯ. ಸೋವಿಯತ್ ಅಫ್ಘಾನ್ ಯುದ್ಧದ ಸಮಯದಲ್ಲಿ ಅಮೇರಿಕಾ ಪಾಕಿಸ್ತಾನದ ನೆರವಿನಿಂದ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡಲು ಅನೇಕ ಸಂಘಟನೆಗಳನ್ನು ರಚಿಸಿ ಹೋರಾಡಲು ಅಣಿಗೊಳಿಸುತ್ತದೆ, ಇದಕ್ಕೆ ಸೌದೀ ಅರೇಬಿಯಾದ ಒಸಾಮ ಬಿನ್ ಲಾಡೆನ್ ಎಂಬ ತನ್ನ ನಂಬಿಗಸ್ತನನ್ನು ಮುಖ್ಯಸ್ತನನ್ನಾಗಿ ನೇಮಿಸಿ ಸಾಕಷ್ಟು ಹಣದ ನೆರವನ್ನು ನೀಡುತ್ತದೆ. ಒಸಾಮ ಬಿನ್ ಲಾಡೆನ್ ನೈತ್ಯತ್ವದ ಸಂಘಟನೆಯ ಹೆಸರು ತಾಲಿಬಾನ್ ಸಂಘಟನೆ. ಅಫ್ಘಾನ್ ಬಾಷೆಯಲ್ಲಿ ತಾಲಿಬಾನ್ ಎಂದರೆ ವಿಧ್ಯಾರ್ಥಿ ಎಂದರ್ಥ. ಆ ವಿಧ್ಯಾರ್ಥಿ ಸಂಘಟನೆ ಮುಂದೊಂದು ಜಗತ್ತಿನ ಪ್ರಭಾವೀ ಉಗ್ರ ಸಂಘಟನೆಯಾಗಿ ಲಕ್ಷಾಂತರ ಜನರನ್ನು ನಿರ್ಗತಿಕರನ್ನಾಗಿಸಿದ್ದು, ಸಾರ್ವಜನಿಕವಾಗಿಯೇ ಕತ್ತು ಸೀಳಿದ್ದೂ ಲೆಕ್ಕವಿಲ್ಲ, ಮಾನವನ ಕತ್ತು ಸೀಳುವುದು ಬಾಳಿನ ಹಣ್ಣಿನ ಸಿಪ್ಪೆಯನ್ನು ಸುಲಿವುದಕ್ಕಿಂತಲೂ ಸರಳವಾಗಿ ಮಾಡುವವರು ತಾಲಿಬಾನ್ ಉಗ್ರರೆಂದು ಜಗತ್ತಿನಲ್ಲಿ ಹೆಸರಾದರು, ಆದರೆ ಇವರ ಹುಟ್ಟಿಗೆ ಮೂಲ ಕಾರಣ ಅಮೇರಿಕ ಎನ್ನುವುದು ಮರೆವಂತಿಲ್ಲ, ಮುಂದೇ ಅದರ ಊಟ ಅಮೇರಿಕಾವೆ ಈಗ ಉಣ್ಣುವಂತಾಗಿದೆ. ಆದರೆ ಆರ್ಥಿಕವಾಗಿ ಅಮೇರಿಕಾದಷ್ಟು ಸದೃಡವಲ್ಲದ ಭಾರತದಂತಹ ದೇಶ ಸೇರಿದಂತೆ ಜಗದಗಲ ವ್ಯಾಪಕವಾಗಿ ಹಬ್ಬುತ್ತಿರುವ ಈ ಉಗ್ರವಾದದ ಪಿಡುಗಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಮಾತು ಬಂದರೂ ನಿರ್ದಯವಾಗಿ ಹತ್ತಿಕ್ಕುವ ಕ್ರಿಯೆ ಇನ್ನೂ ನಡೆಯುತ್ತಿಲ್ಲ. ಜಗತ್ತಿನ ಎಲ್ಲಾ ದೇಶಗಳು ಸಮ್ಮತಿಸಿ ಶಾಂತಿ ಸೌಹಾರ್ದಕೆ ಒಪ್ಪಿಗೆ ಹಾಕಿ ಉಗ್ರವಾದ ಮಟ್ಟಹಾಕುವುದು ಕಠಿಣವೇನು ಅಲ್ಲ. ಆದರೆ ಮಾಡುವ ಕೆಲಸ ಮಾತ್ರ ಆಗುತ್ತಿಲ್ಲ.

ಇನ್ನೂ ಧರ್ಮ ಜಾತಿ ವರ್ಣಗಳ ತಿಕ್ಕಾಟದಲಿ ಸಮಾಜಗಳು ವಿಭಜನೆಯ ಹಾದಿ ಹಿಡಿದಿವೆ, ಸಮಾಜಮುಖಿ ಸಮಾಜವು ನಿತ್ಯ ವಿಭಜನೆಯತ್ತ ಜಾರುತ್ತಿದೆ, ಎಲ್ಲವೂ ಹಣ ಅಧಿಕಾರದ ಅಮಲಿನಲ್ಲಿ ಮಾನವೀಯ ಗುಣಗಳು ಗೌಣವಾಗಿ ಮಲಗಿವೆ. ಘಮ ಘಮ ಎನಿಸಬೇಕಿದ್ದ ಮಾನವೀಯ ಗುಣಗಳು ಬುದ್ಧನ ಸತ್ಯಗಳನ್ನು ಒಪ್ಪಿದ ಮಯನ್ಮಾರ್‍ನ ನೆಲದಲ್ಲಿ ರಕ್ತದೋಕುಳಿಯ ಆಟವಾಡಿ ರೊಹಿಂಗ್ಯಾ ಹತ್ಯಾಕಾಂಡ ನಡೆಯುತ್ತದೆ. ರಾಖೈನ್ ನಲ್ಲಿ ರೊಹಿಂಗ್ಯಾ ಪಂಗಡದ ಉಗ್ರವಾದೀ ಗುಂಪೊಂದು ಮಯನ್ಯಾರ್ ಸೇನೆಯ ಕಾವಲು ಪಡೆಯ ಮೇಲೆ ದಾಳಿ ಮಾಡಿ 12 ಜನ ಸೈನಿಕರನ್ನು ಹತ್ಯೆಗೈಯುತ್ತದೆ. ಇದರಿಂದ ಕುಪಿತವಾದ ಮಯನ್ಮಾರ್ ಸೇನೆ ಮಾಡಿದ್ದು ಹೇಯ ಕೃತ್ಯ. ಮಯನ್ಯಾರ್ ಸೇನೆ ಮತ್ತು ಸರ್ಕಾರ ಮತ್ತು ಬಹುಸಂಖ್ಯಾತ ಭೌದ್ಧ ಸಮುದಾಯ ಮಾಡಿದ್ದೇನು.? ಹಗಲು ಅತ್ಯಾಚಾರ, ಕೊಲೆ, ಜೀವಂತ ದಹನದ ಮೂಲಕ ರೊಹಿಂಗ್ಯಾ ಜನಾಂಗದ ಮೇಲೆ ಹಗಲು ರಾತ್ರಿ ಅವರನ್ನು ಬಿಡಿಸಿಕೊಳ್ಳಲು ಆಗದಂತೆ ಸುತ್ತಲೂ ಸುತ್ತುವರಿದು ಹತ್ಯೆಗೈಯುತ್ತದೆ. ನಿಜವಾಗಿ ಸತ್ತವರ ಸಂಖ್ಯೆ ಲೆಕ್ಕವಿಲ್ಲ, ಹೇಳುವುದು ಸಾವಿರದ ಲೆಕ್ಕ, ನೈಜ ಲೆಕ್ಕ ಕಂಡವರಿಗೇ ಗೊತ್ತು. ಲಕ್ಷಾಂತರ ಜನ ಮಯನ್ಯಾರ್ ತೊರೆದು ಭಾಂಗ್ಲಾ ಸೇರಿದಂತೆ ಜಗತ್ತಿನ ವಿವಿಧ ದೇಶಗಳಿಗೆ ಪ್ರಾಣ ಭಿಕ್ಷೆ ಬೇಡುತ್ತಾ ಓಡಿಹೋದರು, ಆದರೆ ಉಗ್ರವಾದದ ನಂಟಿದ್ದ ಕಾರಣದಿಂದ ಜಗತ್ತಿನ ಅನೇಕ ದೇಶಗಳು ಆಶ್ರಯ ನೀಡಲು ಹಿಂದೇಟು ಹಾಕಿದರು, ಇದರಿಂದ ತಾವು ಸಾಗುವ ದೋಣಿಯಲ್ಲೇ ಅನೇಕ ದಿನ ಉಪವಾಸದಿಂದ ಅಸಂಖ್ಯ ರೊಹಿಂಗ್ಯಾಗಳು ಸಾವಪ್ಪಿದರು. 

ಇನ್ನೂ ಇತ್ತೀಚೆಗೆ ದೇಶದಲ್ಲಿ ಧರ್ಮಗಳ ಆಧಾರದಲ್ಲಿ ಪಂಥಗಳ ನಡುವೆ ನಡೆವ ಕೆಸರೆರೆಚಾಟವನ್ನು ಗಮನಿಸಿದರೆ ಸಭ್ಯತೆಗೆ ಕೊನೆ ಹೇಳಿದಂತಿದೆ. ಎಷ್ಟೇ ತಪ್ಪಿದ್ದರೂ ತಮ್ಮವನ್ನು ರಕ್ಷಿಸಿ ಹೇಳಿಕೆ ನೀಡುವುದು ಮತ್ತು ಇನ್ನೊಂದು ಪಂಥವನ್ನು ನಿತ್ಯ ತೆಗಳುತ್ತಾ ಸಾಗುವುದೇ ಪಂಥಗಳ ಕೆಲಸ. ತಮ್ಮದೇ ಸತ್ಯದ ನಡೆವಾದವೆಂದು ಹಠವಿಡಿದು ರಚ್ಚೆ ಹಿಡಿದವರ ನಡುವೆ ಸಾಮಾನ್ಯನ ಬದುಕೇನು..? ಪಂಥಗಳ ಹುಚ್ಚಾಟದಲ್ಲಿ ರಸ್ತೆ ಮೇಲೆ ಸುಡುವ ಟೈರುಗಳು, ಬಡವನ ಮನೆ, ಬದುಕು, ಹೊಟ್ಟೆಪಾಡು ಎಲ್ಲವೂ ನಶ್ವರ. ಬಸವಣ್ಣ, ಬುದ್ದ, ಅಂಬೇಡ್ಕರ್, ಗಾಂಧೀ ಬೆಳಗಿದ ನಾಡಿನಲ್ಲಿ ಇಂದು ನಡೆವುತಿರುವುದಾದರೂ ಏನು..? ಕುಲ ಕುಲವೆಂದು ಹೊಡದಾಟದಂತೆ ಬಸವಣ್ಣ ನುಡಿದ ನುಡಿಗೆ ಅಣಕವೆನಿಸುವಂತೆ ಕುಲಗಳ ನಡುವಿನ ಹುಚ್ಚಾಟದ ಹೋರಾಟಗಳು ಅಧಿಕಾರಕ್ಕಾಗಿ ಮಿತಿ ಮೀರಿವೆ. ಇತಿಗಳು ಹೊಸಕಿಹಾಕಿವೆ. ಶಾಂತಿ ಪರಿವಾಳ ರಕ್ತದ ಮಡಿಲಲ್ಲಿ ಮಲಗಿದೆ, ಶಾಂತೀ ಎಂಬುದು ಬರೀ ಮಾತಲ್ಲಿ ಉಳಿದಿದೆ, ಆಶಾಂತತೆ ಮತ್ತೂ ಅಭದ್ರತೆಯ ಸಮಾಜದಲ್ಲಿ ನಿತ್ಯ ನಡೆವ ಕೊಲೆ, ಸುಲಿಗೆ ಮತ್ತು ಅತ್ಯಾಚಾರಗಳಿಗೆ ಕಡಿವಾಣ ಹಾಕುವವರು ಯಾರು..? ಎಲ್ಲದಕ್ಕೂ ಉತ್ತರಿಸುವ ಮಂದಿ ಕಿಚ್ಚನ್ನು ಇನ್ನಷ್ಟು ಹಚ್ಚಿ ಅಧಿಕಾರಕ್ಕಾಗಿ ಹಪಹಪಿಸುವಾಗ ನ್ಯಾಯಕ್ಕಾಗಿ ನಾವು ಸಾಮಾನ್ಯರು ಯಾರಲ್ಲಿ ಭಿಕ್ಷೆ ಬೇಡುವುದೆನ್ನುವುದು ಪ್ರಶ್ನಾರ್ಥವಾಗಿದೆ. ಹಗಲು ನಡೆದ ಅತ್ಯಾಚಾರಕ್ಕೆ ಕಂಡಿಸಲು ಒಕ್ಕೊರಲ ದನಿಯೂ ಮೂಡದು ಎಂದರೆ ನೀವೇ ಊಹಿಸಿಕೊಳ್ಳಿ ಇದರು ಮರ್ಮ. ಎಲ್ಲವೂ ಇಷ್ಟೇ ಹೋರಾಟದ ಹೆಸರಲ್ಲಿ ನಿತ್ಯ ಸುಡುವ ಟೈರುಗಳ ಭೂಧಿಯೇ ಉತ್ತರಿಸಬೇಕೇನೋ..? ಏನೇ ಆದರೂ ಹೊಸತರ ಹಸಿಲಲ್ಲಿ ಅಂದರೆ ಹಗಲು ಇರುಳುಗಳ ಓಟದಲ್ಲಿ ಬದಲಾಗುವ ಅಂಕೆಗಳ ಆಟದಲ್ಲಿ ಹೊಸವರುಷವೆನ್ನುವ ಮುಂದಿನ ದಿನದಲ್ಲಾದರೂ ಉತ್ತರ ಸಿಗಲಿ, ಜಗವು ಶಾಂತಿ ಗೂಡಾಗಲಿ ಎನ್ನೋಣ.. ಮತ್ತೆ ರಸ್ತೆ ಮೇಲೆ ಅನಾಥವಾಗಿ ಸುಟ್ಟು ಹೋದ ಹಳೇ ಟೈರಿನ ಭೂಧಿಯ ಪ್ರಶ್ನಿಸುವುದು ಬೇಡವಲ್ಲವೇ..?

ಇದೇ ಆಶಾವಾದದಲ್ಲಿ ಹೊಸ ವರುಷ ಕವಿತೆ ಬರೆದಿರುವೆ

ಹೊಸ ವರುಷ

ಹೊಸ ವರುಷವೇ ನೀ ಬೆಳಕಾಗು 
ಶಾಂತಿ ಸೆಲೆಯ ನಾಡಾಗು
ಸಹೋದರತೆಯ ತೇರಾಗು 
ರೋಧನೆಯಿಲ್ಲದ ಜಗವಾಗು..

ಜ್ಞಾನ ದೀವಟಿಯು ನಿತ್ಯ ಬೆಳಗುತಿರಲಿ
ಸಂತಸದ ಹೊನಲು ನಿತ್ಯ ತುಂಬಿರಲಿ
ಎಲ್ಲರ ಮನಸು ಸದಾ ನಗುತಿರಲಿ
ಎಲ್ಲರ ಬದುಕು ಸದಾ ಪಳಿಸುತಿರಲಿ...

ಯಶಸ್ಸಿನ ಫಲವು ಸದಾ ಒಲಿಯಲಿ
ಜಗದ ಚೆಲುವು ಸದಾ ಸಂಭ್ರಮಿಸಲಿ
ಎಲ್ಲರ ಮೊಗದಲಿ ನಿತ್ಯ ನಗುವಿರಲಿ
ಸಹೋದರ ಬಂಧುಗಳಲಿ ನಿತ್ಯ ಹಿತವಿರಲಿ...

ಪ್ರಕೃತಿಯ ಮುನಿಸು ಕಾಡದಿರಲಿ
ಮಳೆ ಬೆಳೆಯು ಚಿನ್ನವಾಗಲಿ
ಜಗದ ಜೀವಗಳು ಸೊರಗದಿರಲಿ
ಸಂತುಷ್ಟಿಯ ಹಿತವು ಮೇಳೈಸುತಿರಲಿ...

ಕ್ಷಾಮ ರೋಗಗಳು ಬಾರದಿರಲಿ
ಕಹಿಯ ಸತ್ವವು ನುಸುಳದಿರಲಿ
ನಾಡಿನ ನಾಯಕರು ಸೇವಕರಾಗಿರಲಿ 
ನಾಡಿನ ಜನರು ನಗುತಿರಲಿ...

ರಾಮಚಂದ್ರ ಸಾಗರ್