Tuesday, 4 April 2017

ನೀ ನಲಿದಾಗ..

ಮುಸ್ಸಂಜೆಯ ಸಾಗರದ ತೀರದಲಿ
ಹೊನ್ನ ಬಂಡೆಗಳ ಶಿರದಲಿ
ನೀ ನಗುತ ನಲಿದಾಡುತಲಿರಲು
ಬೀಸುವ ತಂಗಾಳಿಗೂ ಪುಳಕವು
ಮುಸ್ಸಂಜೆಯ ರಂಗಿಗೂ ಹರುಷವೂ..

ಬೀಸುವ ಅಲೆಗಳ ಭೋರ್ಗರೆತದಲಿ
ಒಲವಗೀತೆಯ ನವಿರು ನಾದಸ್ವರದಲಿ
ಪ್ರೀತಿ ಪದಗಳ ಪುಟಿತದಲಿ
ಮನದ ತುಂಬ ಸವಿಗಾನವೂ..

ಬಾನ ರಂಗು ಹೊಳಪಿನಲ್ಲಿ
ಹೊಳೆವ ಹೊನ್ನೆ ರಂಗಿನ ಸೊಬಗಿನಲ್ಲಿ
ನಾಚಿ ನಗುವ ನಿನ್ನ ಸವಿನೋಟದಲಿ
ಮೋಹದ ಜಲಧಿಯ ಸಂಭ್ರಮವೂ..

ಹೊನ್ನೆ ಬಂಡೆಯ ನೃತ್ಯಮಂಟಪದಲ್ಲಿ
ನಲಿದು ನಗುವ ಚೆಲುವ ಬಳ್ಳಿಯು
ಹೃದಯ ನಲಿಸಿದ ಬಾಳ ಗೆಳತಿಯು
ನೀ ಲತಾಕುಂಜದಲ್ಲಿ ಸದಾ ನಗುವ ಹೂವು..
ಮನದ ಗೂಡಲಿ ಬಾಡದ ಒಲವು..

ಲಲಿತ ಮನೋಹರ ಘಳಿಗೆಯಲಿ
ಉದಯಿಸಲು ಶಶಿಗೂ ಕಾತುರವು
ನಗುವ ನೈದಿಲೆಗೂ ಹರುಷವೂ
ಇದೇನು ಮೋಡಿಯು ಗೆಳತೀ..
ನಿನ್ನೊಲವ ಜಗದ ಸ್ಪೂರ್ತಿಯು..

ರಾಮಚಂದ್ರ ಸಾಗರ್