Thursday, 30 March 2017

ಶಾಂತಿ ದೀಪದ ಸಾಹಿತಿ-ಮುದಲ್ ವಿಜಯ್

       ಶ್ರೀಯುತ ಮುದಲ್ ವಿಜಯ್ ರವರು ಕನ್ನಡ ಹೊಸ ಪೀಳಿಗೆ ಭರವಸೆ ಮೂಡಿಸಿದ ಸಾಹಿತಿಗಳಲ್ಲಿ ಒಬ್ಬರು, ಸಾಹಿತಿ ಎಂಬುವವನಿಗೆ ಎಷ್ಟೇ ವಿದ್ವತ್ತು ಇದ್ದರೂ ಆತನಿಗೆ ಸಹನೆ, ಸೌಹಾರ್ದತೆ, ಕಿರಿಯರನ್ನು ಬೆಳೆಸಬೇಕೆಂಬ ಹಂಬಲವಿಲ್ಲದಿದ್ದರೆ ಆತನ ಪಾಂಡಿತ್ಯವೆಲ್ಲವೂ ವರಲೆ ತಿಂದ ಮರವಿದ್ದಂತೆ, ಅದೂ ಆತನೊಂದಿಗೆ ಬಿದ್ದುಹೋಗುವ, ನಶಿಸಿಹೋಗುವ ವಸ್ತುವಾಗುತ್ತದೆ, ಆದರೆ ಇವೆಲ್ಲಕ್ಕೂ ವಿರುದ್ದವಾಗಿ ಸಾಹಿತಿ ಮುದಲ್ ವಿಜಯ್ ರವರು ನಡೆಯುತ್ತಿದ್ದಾರೆ, ತಾವು ಬರೆದ ಸಾಹಿತ್ಯದೊಂದಿಗೆ ಸಮಾಜದಲ್ಲಿ ಸಮರಸತೆಗಾಗಿ ಪ್ರೀತಿ ಕರುಣೆ ಹುಡುಕುತ್ತಾ ಸಾಗುತ್ತಿರುವ, ಹಾಗೂ ನಾಡಿನುದ್ದು ಯುವ ಬರಹಗಾರರಿಗೆ ಜಾತಿ ಮತಗಳ ಬೇದ ಭಾವವಿಲ್ಲದೇ ಸ್ನೇಹದ ತೋಟದ ಹೂಗಳಂತೆ ಎಲ್ಲರನ್ನೂ ಪ್ರೀತಿಸುತ್ತಾ ಸಾಗುತ್ತಿದ್ದಾರೆ, ಜಾತಿ, ಧರ್ಮ ಕಂದಾಚಾರದಲ್ಲಿ ತೊಡಗಲು ಇವರಿಗೆ ಮಾನವ ನಿರ್ಮಿತ ಜಾತಿ ಎಂಬುದೇ ಇಲ್ಲ, ಇವರದೂ ಸ್ನೇಹವೇ ಧರ್ಮ, ಪ್ರೀತಿಯೇ ಜಾತಿ, ಸಾಹಿತ್ಯವೇ ಆರಾಧನೆ, ಇವರು ಮೂಲತಃ ತಮಿಳುನಾಡಿನವರು, ಇವರ ತಂದೆ ತಾಯಿ ಬದುಕಿಗಾಗಿ ಬೆಂಗಳೂರು ಬಂದು ಸೇರಿದರು, ವಿಜಯ್ ರವರು ಕನ್ನಡ ಮಾಧ್ಯಮದಲ್ಲೇ ಅಧ್ಯಯನ ಮಾಡಿದರು, ಜೊತೆಗೆ ಕನ್ನಡ ಸಾಹಿತ್ಯದ ಒಲವುಹೊಂದಿದರು, ಇದರ ಫಲವೇ ಇಂದು ಒಬ್ಬ ಉತ್ತಮ ಸಾಹಿತಿಯಾಗಿದ್ದಾರೆ. ನಾನು ಕೆಲವು ಬುದ್ಧೀವಂತ ಹಿರಿಯ ಸಾಹಿತಿಗಳನ್ನು(ಅವರ ಲೆಕ್ಕದಲ್ಲಿ ಮಾತ್ರ) ನೋಡಿದ್ದೇನೆ, ತಮ್ಮ ಜಾತಿ ಧರ್ಮಗಳ ಜನರ ಉನ್ನತಿಗೆ ಹೋರಾಡುವ ಬೊಗಳೇ ಸಾಹಿತಿಗಳೇ ಹೆಚ್ಚುತ್ತಿದ್ದಾರೆ, ಅನ್ಯರು ಏನೇ ಕೇಳಿದರೂ ಹೀಯಾಳಿಸುವುದು, ಅನ್ಯರ ಸಾಹಿತ್ಯ ಜರಿಯುವುದು ಅಷ್ಟೇ ಅವರ ಬದುಕು. ತನ್ನಲ್ಲಿರುವ ಪಾಂಡಿತ್ಯ ಸಮಾಜದ ಸಮರಸಕ್ಕೆ ಉದ್ದಾರಕ್ಕೆ ಮಾರಕವಾದರೇ ಆತನು ಸಾಹಿತಿಯಾಗದೇ ಭಯೋತ್ಪಾದಕನಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ ಒಬ್ಬ ಸಾಹಿತಿಯಾದವನು ಬರೆಯುವಂತದ್ದು ಸಮಾಜದ ಜನರ ಪ್ರೀತಿ ಮಮತೆಯನ್ನು ಹೆಚ್ಚಿಸಬೇಕು, ಸ್ನೇಹ ಸಿಂಚನದಲ್ಲಿ ಸಮಾಜ ನಲಿಯಬೇಕು, ಎಲ್ಲಾ ಧರ್ಮ,ಕರ್ಮಗಳನ್ನು ಪ್ರೀತಿಯಿಂದ ಕಾಣಬೇಕು, ಮನುಜರಲ್ಲಿ ಮೂಡತೆಯು ಮರೆಯಾಗಿ ಯಾವುದು ನಿಜ, ಯಾವುದು ಸುಳ್ಳು ಎಂಬುದು ಅರಿವಾಗಬೇಕು. ಈ ನಿಟ್ಟಿನಲ್ಲಿ ಸಾಹಿತಿಯಾದವನು ನಡೆದರೆ ಅದು ಸಮಾಜಕ್ಕೂ ಸಿದ್ದಿ ಆತನಿಗೂ ಭೂಷಣ.

       ಇಲ್ಲಿ ಮುದಲ್ ವಿಜಯರ್ ರವರು ಸಮಾಜದ ಸಾಮರಸ್ಯವನ್ನು ಮುಖ್ಯವಾಗಿಟ್ಟು ತಮ್ಮ ಕೃತಿಗಳನ್ನು ರಚಿಸಿದ್ದಾರೆ, ಇವರು ಬರೆದ ಬರವಣಿಗೆ ಯಾವುದೇ ಜನರನ್ನು ನೋಯಿಸದೇ ಸಮಾಜದ ಕಂದಾಚಾರಗಳ ನಿರ್ಮೂಲನೆಗಾಗಿ ಹಾಗು ಸಹೋದರತೆ, ಸಹಿಷ್ಣುತೆಗಾಗಿ ಪರಿಶ್ರಮಿಸಿದ್ದಾರೆ, ಇವರ ಪರಿಶ್ರಮದ ಫಲವೇ ಕಡಲಿನಾಳದ ಕವನ, ಅಂತರಾಳದ ಅಳಲು, ನೆನಪು, ನಿರ್ವಾಣ ಹೀಗೇ.. ಈ ಕೃತಿಗಳನ್ನು ತಮ್ಮ ವಿಮರ್ಶೆಗಳ ಮೂಲಕ ತಮಗನ್ನಿಸಿದ್ದನ್ನು ಶ್ರೀಯುತ ಗಣಪತಿ ಕೆ ಹೆಗಡೆಯವರು ತಮ್ಮ ಲೇಖನಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ, ಅದುವೇ “ವಿಜಯ್ ಕೃತಿಸ್ಪಂದನೆ” ವಿಮರ್ಶೆಯನ್ನು ಉತ್ತಮವಾಗೇ ನಿರೂಪಿಸಿದ್ದಾರೆ ಕೃತಿಕಾರರು. ಆದರೂ ಎಲ್ಲಾ ಓದಿ ಮುಗಿಸಿದೊಡನೇ ವಿಜಯ್ ರವರ ಎಲ್ಲಾ ಕೃತಿಗಳನ್ನು ಓದಿದ ನನಗೆ ಇಷ್ಟೇ ಎಂಬ ಭಾಸ ಕಾಡುತ್ತದೆ, ಏನೇ ಹೇಳಿದರೂ ಸಾಗರದ ನೀರನ್ನು ಬೊಗಸೆಯಲ್ಲಿ ಹಿಡಿಯಲು ಸಾಧ್ಯವಿಲ್ಲವೇಗೋ ಹಾಗೇ ಎಲ್ಲವನ್ನು ವಿಮರ್ಶೆಯ ಹೆಸರಲ್ಲಿ ಎಲ್ಲವನ್ನು ಹಿಡಿದಿಡಲು ಸಾಧ್ಯವಿಲ್ಲದಿದ್ದರೂ ಗಣಪತಿ ಹೆಗಡೆಯವರು ತಮ್ಮ ಮನದಾಳದ ಮಾತುಗಳನ್ನು ಉತ್ತಮವಾಗಿ ಹೇಳಿದ್ದಾರೆ, ಓದುಗರಿಗೆ ಇನ್ನೂ ಹತ್ತಿರವಾಗಿದ್ದಾರೆ. ಹಾಗೂ ಬಾಲಿಶಃ ಕೃತಿಗಳ ವಿಮರ್ಶೆಗಾಗಿ ಬಡಿದಾಡು ಕೆಲವು ಬುದ್ಧಿವಂತರಿಗಿಂತ ಉತ್ತಮ ಕೃತಿಗಳಿಗೆ ವಿಮರ್ಶೆ ಬರೆದ ಹೆಮ್ಮೆಯಂತೂ ಅವರಿಗಿದೆ.

         ಅನೇಕ ವರ್ಷಗಳ ಹಿಂದೆ ಓದಿದ್ದೆ, ಕಡಲಿನಾಳ ಕವನ ಸಂಕಲನ, ಅದೂ ಆಡಿಯೋ ಸಿ ಡಿ ಆಗಿಯೂ ಜನಪ್ರಿಯವಾಗಿದೆ, ಈ ಕವನ ಸಂಕಲನದುದ್ದಕ್ಕೂ ಕವಿ ಸಮಾಜದ ಸಾಮರಸ್ಯಕ್ಕೆ ಹೋರಾಡಿದ್ದಾರೆ, ಶಾಂತಿಗಾಗಿ ಹೋರಾಡುವ ಸೇನಾನಿಯಂತೆ ವಿಜಯ್ ಕಂಡಿದ್ದಾರೆ, ಶಾಂತಿಯ ನೌಕೆಯ ನಾವಿಕನಾಗಿ ಮುನ್ನಡೆದಿದ್ದಾರೆ, ಮಾನವ ಕುಲ ಉಳಿಯಲು ಜಾತಿ ಮೌಢ್ಯ ಅಳಿಬೇಕೆಂದು ಹಠವಿಡಿದ ಕವಿಯ ಮನದಾಳದ ನುಡಿಯೇ ಕಡಲಿನಾಳದ ಕವನ ಸಂಕಲ, ಪ್ರತೀ ಕವಿತೆಗಳು, ಜಾತಿ ಕೊಲ್ಲುವ ಸದ್ದಾಗಿವೆ, ಸಾಮರಸ್ಯಕೆ ಸಹಕಾರಿಯಾಗಿವೆ. ಹಲವು ಬಾರಿ ನನ್ನ ಕಾಡುವ ಒಂದು ಕವಿತೆ;

“ಶಾಂತಿ ದೀಪ ಬೆಳಗುತಿದೆ ದೇವ ಗುಡಿಯ ಮುಂದೆ
ಜಾತಿ ಬೆಂಕಿ ಉರಿಯುತಿದೆ ನಮ್ಮ ಮನದ ಹಿಂದೆ
ಸೂರ್ಯ ಚಂದ್ರ ಭೂಮಿಯು ಯಾವ ಮತಕೆ ಸೇರಿದೆ
ಗಾಳಿ ಬೆಳಕು ನೀರಿಗೆ ಬೇದ ಭಾವ ಎಲ್ಲಿದೆ” 
ಈ ಕವಿತೆಯಲ್ಲಿ ನೋಡಿ, ಇಲ್ಲಿ ಮನುಜ ದೇವ ಗುಡಿಯ ಮುಂದೆ ಹೋಗಿ ದೇವರಿಗೆ ದೀಪ ಹಚ್ಚುತ್ತಾನೆ, ದೇವರನ್ನು ಪ್ರಾರ್ಥಿಸುತ್ತಾ ನಿಲ್ಲುತ್ತಾನೆ, ಆದರೆ ಆತನ ಮನದಲ್ಲಿ ಏನಿರಬೇಕು, ಸುತ್ತಲೂ ಇರುವವರನ್ನು ಆತ ಏನೆಂದು ಕಾಣಬೇಕು, ದೇವರ ಮುಂದೆ ಬೆಳಗುವ ಶಾಂತಿ ದೀಪವನ್ನು ನೋಡಿಯೂ ಮನದ ಕೆಟ್ಟ ಗುಣಗಳನ್ನು ಮನುಜ ದೂರಮಾಡಲಾರ, ನಿತ್ಯ ದೇವರನ್ನು ಆರಾಧಿಸುತ್ತಾನೆ, ಬರುತ್ತಾನೆ, ದೇವರ ಗುಡಿಯ ಮುಂದೆ ಉರಿಯುವ  ದೀಪದ ಬೆಳಕಿನಲ್ಲಿ ಅಲ್ಲಿ ನೆರೆದ ಎಲ್ಲರ ಮೊಗವು ಬೆಳಗುತ್ತದೆ, ಎಲ್ಲರ ಕಣ್ಣಿಗೂ ದೃಷ್ಟಿ ಹಾಯುತ್ತದೆ, ಉರಿವ ದೀಪಕ್ಕೆ ಮತ್ತು ದೇವರಿಗೆ ಯಾವುದೇ ಬೇದಭಾವವಿಲ್ಲ, ಎಲ್ಲರು ಒಂದೇ, ಆದರೆ ಎದುರು ನಿಂತ ಮನುಜರ ಮನದಲ್ಲಿ ಜಾತಿಯ ಬೆಂಕಿಯು ಜ್ವಾಲಾಮುಖಿಯಂತೆ ಉರಿಯುತ್ತಿರುತ್ತದೆ, ಅದು ಪರಿವರ್ತನೆಯಾಗಿ ಎಲ್ಲರೂ ಒಂದೆಂಬ ಭಾವ ಬೆಸೆದಲ್ಲಿ ಜಾತಿ ಬೆಂಕಿ ಆರುತ್ತದೆ, ಶಾಂತಿ ದೀಪ ದೇವರಗುಡಿಯಲ್ಲಿ ಬೆಳಗಿದಂತೆ ಜನರ ಮನದಲ್ಲೂ ಬೆಳಗಬೇಕು, ತನ್ಮೂಲಕ ಸಮಾಜದಲ್ಲಿ ಶಾಂತಿ ಅರಳಬೇಕು, ಸೌಹಾರ್ದತೆ ನಲಿಯಬೇಕು, ಬವಣೆಯ ಸುಳಿಗೆ ಸಿಲುಕಿದ ಸಮಾಜ ಒಂದೆಂಬ ಭಾವದಲ್ಲಿ ಒಗ್ಗೂಡಬೇಕು, ಶಾಂತಿ ಮಂತ್ರ ಎಲ್ಲರೆದೆಯ ಹಾಡಾಗಬೇಕು. ಇದು ಕವಿಯಾಶಯ. ಈ ರೀತಿ ಕಡಲಿನಾಳದ ಪ್ರತಿ ಕವಿತೆಗಳು ಉತ್ತಮವಾಗಿವೆ, ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ,  ಕೃತಿಯ ವಸ್ತು ಸಾಮರಸ್ಯ ಸಮಾಜದ ಒಳಿತಿಗಾಗಿ ಹಾತೊರೆದಿವೆ. ಅರ್ಥವಿರದ ಧರ್ಮದ ಪರಿಪಾಲನೆಯ ಬದಲು ರವಿ ಚಂದ್ರರಂತೆ ಎಲ್ಲರನ್ನು ಮುಕ್ತವಾಗಿ ಹರಸುವ ಮಾನವೀಯ ಗುಣಗಳ ಧರ್ಮವನ್ನೇ ಆರಾಧಿಸೋಣ ಎಂದು ಕವಿ ಅಂಗಲಾಚಿದ್ದಾರೆ. ಹಾಗೂ ಯಶಸ್ಸನ್ನು ಪಡೆದಿದ್ದಾರೆ.
      ಮನವ ಸುಡುವ ವೇದನೆ ಏನೆಂದು ಕವಿಯು “ಅಂತರಾಳದ ಅಳಲಲ್ಲಿ” ತೋಡಿಕೊಂಡಿದ್ದಾರೆ, ಜನನ ಮರಣಗಳೆರಡ ಮಧ್ಯೆದಲ್ಲಿ ನಾನು ಎಂದು ಗರ್ವಿಸುವ ಮನುಜನಿಗೆ ಎಲ್ಲಿ ನೆಲೆಯುಂಟು, ನಾನು ಎಂಬ ಅಹಂನಲ್ಲಿ ಬೆಲೆ ಕಳೆದುಕೊಂಡು ಮಾನವೀಯ ಗುಣಗಳ ಕೊಂದ ಮೇಲೆ ಉಳಿವುದಾದರೇನು ಎಂಬ ದಾಟಿಯಲ್ಲಿ ಹಾಗೂ ಸಮಾಜದ ಮೂಡನಂಬಿಕೆಗಳ ಬಗ್ಗೆ ಅಂತರಾಳದ ಅಳಲಲ್ಲಿ ಕವಿ ತಮ್ಮ ಮನದಾಳದ ನುಡಿಗಳನ್ನು ಹೇಳಿದ್ದಾರೆ.
“ಜನನ ಮರಣಗಳೆರೆಡು ದಿನಗಳ ಮಧ್ಯೆ
ನಾನು ಎಂದು ಗರ್ವಿಸುವ ಮನುಜನೆ
ನಿನಗೆಲ್ಲಿ ನೆಲೆಯುಂಟು, ನಿನಗೆಲ್ಲಿ ಬೆಲೆಯುಂಟು”
“ಊರಾದರೇನು ಕಾಡಾದರೇನು ಮನದತುಂಬ ಛಲವಿರಲು” ಎನ್ನುವ ಕವಿ ಸಕಾರಾತ್ಮಕಭಾವದಲ್ಲಿ ಮನಸ್ಸುಗಳಿಗೆ ಗೆಲುವಿದೆ, ಕೈಕಟ್ಟಿ ದುಡಿಯಬೇಕು ಎನ್ನುತ್ತಾ ಕಾಯಕವೇ ಕೈಲಾಸವೆಂದು ಅಣ್ಣ ಬಸವಣ್ಣರನ್ನು ನೆನೆದಿದ್ದಾರೆ. ಬೇಕು ಬೇಕು ಅನ್ನುವವರೇ ಹೆಚ್ಚಿದರೆ ಬಡವರ ದಾರಿದ್ರ್ಯ ಕೊನೆಯಾಗುವುದೆಂದು..? ಎಂದು ಗುಡುಗಿದ್ದಾರೆ, ಬದುಕಿಗೆ ಬೇಕಿರುವುದು ಆಸೆಯೇ ಹೊರತು ದುರಾಸೆಯಲ್ಲ, ಆದರೆ ಅದನ್ನು ಮಾನವ ಅರ್ಥೈಸಿಕೊಳ್ಳುವ ವ್ಯವದಾನ ಹೊಂದಬೇಕು, ವಸುಮತಿಯ ಒಡಲು ತಣಿಯಬೇಕು, ಕೆಟ್ಟ ಗುಣಗಳ ಚಿಗುರಿನಲ್ಲಿ ಚಿವುಟಿ ಒಳ್ಳೆಯ ಗುಣಗಳನ್ನು ಹೆಮ್ಮರವಾಗಿ ಬೆಳೆಸಿಕೊಳ್ಳಬೇಕೆಂಬುದು ಕವಿಯಾಶಯ, ಅದೂ ಈಡೇರಲಿ ಜಗವು ಸಂತಸದ ಗೂಡಾಗಲಿ ಎಂಬುದು ಎಲ್ಲರಾಶಯವಾಗಬೇಕು, ಆಗಲೇ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಈ ರೀತಿ ಉತ್ತಮ ಸಂದೇಶಗಳ ಸವಾರಿಯೇ ಕವಿಯ “ಅಂತರಾಳದ ಅಳಲು” ಇದು ಜ್ಞಾನದೀವಟಿಗಾಗಿ ಕವಿಯ ಹೃದಯದಾ ಕೂಗು, ಈ ಕೂಗು ಎಲ್ಲರಿಗೂ ಕೇಳಲಿ, ಶುದ್ಧ ಸಮಾಜವು ಮೇಳೈಸಲಿ ಎಂಬುದು ಅಭಿಲಾಷೆ.
         ನಮ್ಮ ಬಂಧು ಬಳಗದ ನೈಜ ಮುಖವಾಡ ಕಳಚಿ ಬೀಳುವುದು ನಮಗೆ ಒಂದು ಕಾಯಿಲೆ, ಇಲ್ಲವೇ ಪಾರಾಗಲು ಅಸಾಧ್ಯವಾದ ಕಷ್ಟ ಬಂದೊದಗಿದಾಗ, ನೆನಪು ಕಾದಂಬರಿಯಲ್ಲಿ ಕಥಾ ನಾಯಕನಿಗೆ ಕ್ಯಾನ್ಸರ್ ನಿಂದ ಬಳಲುತ್ತಿರುತ್ತಾರೆ, ಆಗ ಆತನ ಜೀವನ, ರೋಧನೆ ತುಂಬಿದ ಆತನ ಜಗದಲ್ಲಿ ಆತನೊಂದಿಗೆ ಸಂತೈಸಲು, ಮನಸ್ಸಿಗೆ ಸಮಾಧಾನಿಸಲು ಯಾರೆಲ್ಲ ಇರುತ್ತಾರೆಂಬುದು ಕುತೂಹಲ, ಅಧೈರ್ಯದ ಮನಕೆ ಬೆಂಗಾವಲಾಗಿ ಧೈರ್ಯ ತುಂಬುವವರು ಕಡಿಮೆ,  ರೋಗಿಯ ಹತ್ತಿರ ಹೋದರೆ ನಮಗೆಲ್ಲ ಗ್ರಹಚಾರವೆಂದು ಯೋಚಿಸಿ ದೂರಾಗುವ ಬಂಧು ವರ್ಗ, ಆತ ಸಾಯುತ್ತಾ ಬಿದ್ದಿರುವಾಗಲೇ ಹಣಕ್ಕಾಗಿ ಬಡಿದಾಡುವ ಬಂಧುವರ್ಗವಿಂದು ನಾವು ನೋಡುತ್ತೇವೆ. ರೋಗಿಯು ಸಾಯುವ ಮುನ್ನ ಸಹಿಗಾಗಿ ಒದ್ದಾಡುವ ಜನ ಆತನು ಚಿಕಿತ್ಸೆಹೊಂದಿ ಬದುಕಲೆಂದು ಸಂತೈಸುವವರು ಕಡಿಮೆಯಾಗಿದ್ದಾರೆ, ಯಾರಾದರು ದೊಡ್ಡ ಕಾಯಿಲೆಯಿಂದ ಬಿದ್ದರೆ ಮೊದಲು ಶುರುವಾಗುವ ಲೆಕ್ಕವೇ ಆಸ್ತಿಯ ಲೆಕ್ಕ, ಆತನಿಗೆ ಉತ್ತರದಾರನಾರು, ಮಾಲಿಕನಾರು, ಮುಂದಿನ ಪಟ್ಟದ ಚಿಂತೆ ಜೊತೆಗೆ ಕಾಯಿಲೆ ಬಿದ್ದವನು ಈ ಜಗಳದಿಂದಲೇ ಬೇಗ ಸಾಯುತ್ತಾನೆ, ಇನ್ನೂ ಬದುಕಬೇಕಿದ್ದವನೂ ಬದುಕುವುದಿಲ್ಲ, ರೋಗದಿಂದ ಬಳಲುವವನಿಗೆ ಸಂತೈಸುವ ಕಾರ್ಯ ಯಾರು ಮಾಡಬೇಕು, ಜೀವನವಿಡೀ ಗಳಿಸಿದ ಸಂಪತ್ತು ಕೊನೆಗೆ ಅನ್ಯರ ಪಾಲು, ಅದೂ ರೋಗಿಯೊಬ್ಬ ಬಡವನಾದರೇ ಅವನ ಬವಣೆ ಇನ್ನೂ ಹೇಳತೀರದು, ಯಾರದರೂ ಸ್ನೇಹಿರಿದ್ದರೆ ಅವರೇ ಸಂತೈಸಬಹುದು, ಸಹಾಯಮಾಡಬಹುದು, ಇಲ್ಲೂ ಅಷ್ಟೇ ಇನ್ನೂ ಬಾಳಿ ಬದುಕಿ ಜಗದ ನಲಿವುಗಳಲ್ಲಿ ಭಾಗಿಯಾಗಬೇಕಾದ ಕಥಾ ನಾಯಕ ದುರಂತ ಅಂತ್ಯ ಕಾಣುತ್ತಾನೆ, ಆದರೆ ಅತನೊಂದಿಗೆ ಕೊನೆ ಸಮಯದ ವರೆಗೂ ಉಳಿದದ್ದು ಮಾತ್ರವೇ ಕೃತಿಕಾರ ವಿಜಯ್ ಕುಮಾರ್, ಇದೊಂದು ನೈಜ ಘಟನೆಯಾಧಾರಿತ ಕಾದಂಬರಿ, ಇಲ್ಲಿ ಕೊನೆಯಲ್ಲಿ ಸಿಗುವ ಸಂದೇಶವೆಂದರೆ ಸಾವಿನ ಅಂಚಿನಲ್ಲಿದ್ದವರಿಗೆ ನಾವು ಇನ್ನೂ ಸ್ಪೂರ್ತಿ ತುಂಬಿ ಅವರಿಗೆ ಧೈರ್ಯ ತುಂಬಿದರೆ ಇನ್ನು ಬದುಕುತ್ತಾರೆ, ಧೈರ್ಯ ತುಂಬುವ ಮನಸುಗಳು ಮುಖ್ಯ.
       
      ಇನ್ನೂ ಚಟಗಳ ದಾಸ್ಯನಾದ ಮಾನವನ ಮನದ ಗತಿಯ ಸ್ಥಿತಿಯ ಅನಾವರಣವೇ ‘ನಿರ್ವಾಣ’. ದುಶ್ಚಟಗಳಿಗೆ ಬೆಂಡಾದ ಮಾನವ ಹೇಗೆ ಒದ್ದಾಡುತ್ತಾನೆ, ಯಾವುದು ಸತ್ಯ, ಯಾವುದು ನಿಜವಾಸ ಸಂತಸವೆಂಬುದು ಅರಿಯದೇ ಒದ್ದಾಡುತ್ತಾನೆ, ಕೊನೆಗೆ ಚಟಗಳ ದಾಸ್ಯದಿಂದ ಹೊರಬರಲಾರದೇ ಜೀವನದ ಪಯಣ ಮುಗಿಸುತ್ತಾನೆ, ಅಂತವರು ಈ ಸಂಕೋಲೆಯಿಂದ ಹೇಗೆ ಹೊರಬಂದು ಹೊಸಜೀವನ ನಡೆಸಬೇಕೆಂದು ತಿಳಿಹೇಳುವ ಕಥೆಯನ್ನೊಳಗೊಂಡ ನಿರ್ವಾಣ ಕಾದಾಂಬರಿ ಸಮಾಜಕ್ಕೆ ಬಲು ಉಪಕಾರಿಯಾಗಿದೆ.

        ಹೀಗೆ ಇನ್ನೂ ಮುಂದುವರೆದು ಇವರ ಕೃತಿಗಳು ಉತ್ತಮವಾಗಿವೆ, ಸಮಾಜದ ಅಂಕುಡೊಂಕನ್ನು ತಿದ್ದಲು ಪರಿಶ್ರಮಿಸಿವೆ, ಒಟ್ಟಾರೆ ಕವಿಯಂತು ಶಾಂತಿ, ಸಹೋದರತೆ, ಪ್ರೀತಿಗಾಗಿ ಹಠ ಹಿಡಿದ ಯೋಗಿಯಾಗಿದ್ದಾರೆ, ಯೋಗಿಯ ತಪಸ್ಸು ಯಶಸ್ಸುಹೊಂದಲೆಂದು ಎಲ್ಲರೂ ಆಶಿಸೋಣ...
ಉತ್ತಮ ಕೃತಿಗಳನ್ನು ಆಯ್ದು ವಿಮರ್ಶೆ ಕೃತಿ ರಚಿಸಿದ ಗಣಪತಿ ಹೆಗಡೆಯವರು ಅಭಿನಂದಾರ್ಹರು..

ರಾಮಚಂದ್ರ ಸಾಗರ್