Friday, 24 March 2017

ಭ್ರಷ್ಟಾರದ ವಿರುದ್ದ ದನಿ ಎತ್ತುವವರೆಲ್ಲಾ ಸಾಚಾಗಳೇ..

      ಇಂದು ಭ್ರಷ್ಟಾಚಾರದ ಕರಿ ನೆರಳು ದೇಶವನ್ನು ಕ್ಯಾನ್ಸರ್ ನಂತೆ ಕಾಡುತ್ತಿದೆ, ನೊಂದವರ ನೋವು ಕೇಳದ ಕಿವಿಗಳು ಹೆಚ್ಚಾಗುತ್ತಿವೆ, ಎಲ್ಲವೂ ಪ್ರಜಾಪ್ರಭುತ್ವದಲ್ಲಿ ನಿಷ್ಪಕ್ಷಪಾತದಿಂದ ನೆರವೇರಬೇಕಾದ ಕಾರ್ಯಗಳು, ಬಡವನಿಗೆ ತಲುಪಬೇಕಾದ ಯೋಜನೆಗಳು ಹಲವು ಹಂತದಲ್ಲೇ ನಿಲುಗಡೆಯಾಗಿ ದೇಶದಲ್ಲಿ ಬಡತನ ಮತ್ತು ದಾರಿದ್ರ್ಯ ಹಾಗೆಯೇ ಉಳಿದಿದೆ, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಬಡತನದ ಪ್ರಮಾಣ ಶೇಕಡ 40 ರಷ್ಟಿತ್ತು, ಆದರೆ ಇಂದು ಅದರ ಮಟ್ಟ ರಂಗರಾಜನ್ ಕಮಿಟಿ ವರದಿಯಂತೆ ಒಟ್ಟಾರೆ ಶೇಕಡ 30 ರಷ್ಟಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಹತ್ತಿರ 7 ದಶಕಗಳು ಕಳೆಯುತ್ತಾ ಬಂದರೂ ನಮ್ಮ ದೇಶದಲ್ಲಿ ಬಡತನ ನಿರ್ಮೂಲನೆ ಹಸಿವು ಮುಕ್ತ, ವಸತಿ ರಹಿತ ಸಮಾಜದ ನಿರ್ಮಾಣಕ್ಕಾಗಿ ಲಕ್ಷಾಂತರ ಕೋಟಿ ಹಣವನ್ನು ವ್ಯಯಿಸಲಾಗಿದೆ, ರಾಜ್ಯ ಸರ್ಕಾರಗಳು ತಮ್ಮ ಮುಖ್ಯ ಯೋಜನೆಯಾಗಿ ಬಡತನ ನಿರ್ಮೂಲನೆಗಾಗಿಯೇ ಶ್ರಮಿಸುತ್ತಿವೆ, ವರ್ಷದಿಂದ ವರ್ಷಕ್ಕೆ ಆಯವ್ಯಯದಲ್ಲಿ ಹಣವನ್ನು ಹೆಚ್ಚುಸುತ್ತಲೇ ಬರುತ್ತಿವೆ, ಆದರೆ ದೇಶದಲ್ಲಿ ಬಡವರು ಇನ್ನೂ ಬಡವರಾಗೇ ಏಕಿದ್ದಾರೆ, ವಸತಿ ರಹಿತರಿಗೆ, ಭೂ ರಹಿತ ಕೂಲಿ ಕಾರ್ಮಿಕರಿಗೆ ಊಳಲು ಭೂಮಿ ಏಕೆ ಇನ್ನೂ ದೊರೆತಿಲ್ಲ, ಇದೆಲ್ಲಾ ಎಲ್ಲಿಗೆ ಹೋಯಿತು, ವೆಚ್ಚವಾದ ಮೊತ್ತದ ಸಂಪೂರ್ಣ ಯಥೋಚಿತ ಬಳಕೆಯಾಗಿದ್ದಲ್ಲಿ, ನೈಜ ಫಲಾನುಭವಿಗೆ ತಲುಪಿದ್ದೇ ಆದಲ್ಲಿ, ನಮ್ಮ ದೇಶದ ಬಡತನ ಏಕೆ ಇನ್ನೂ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆಯುವ ಸನಿದಲ್ಲಿ ಕೇವಲ 10 ಪ್ರತಿಶತ ಬಡವರ ಸಂಖ್ಯೆ ಕಡಿಮೆಯಾಗಿದೆ, ಇದನ್ನು ನೋಡಿದರೆ ಒಮ್ಮೆ ಆಶ್ಚರ್ಯ ಜೊತೆಗೆ ಅಂಜಿಕೆಯೂ ಮೂಡುತ್ತದೆ, ಕೆಲವೊಮ್ಮೆ ನಾಚಿಕೆಯೂ ಆಗುತ್ತದೆ. 
ಎರಡನೇ ಮಹಾಯುದ್ದದಲ್ಲಿ ಜಪಾನ್ ಮೇಲೆ ಅಮೇರಿಕಾದವರು ನ್ಯೂಕ್ಲಿಯರ್ ವೆಪನ್ ಉಪಯೋಗಿಸಿ ಜಪಾನ್‍ನ್ನು ಅರ್ಧ ಸುಟ್ಟು ಕರಕಲಾಗಿಸಿದರು, ಇನ್ನೆಂದು ಉಳಿಯದ ನಾಡೆಂದು ಅಂದು ಜಗವೆಲ್ಲ ಮಾತನಾಡಿತ್ತು, ಜಪಾನ್ ಒಂದು ಸ್ಮಶಾನದ ಭೂಮಿಯೆಂದು ಕರೆದವರು ಉಂಟೂ, ಆ ದೇಶ ಉಳಿಯಲು ಸಾಧ್ಯವೇ ಇಲ್ಲ ಎಂಬುದು ರಾಜಕೀಯ ಪಂಡಿತರ ಮಾತಾಗಿತ್ತು, ಆದರೆ ಸುಟ್ಟು ಗಾಯದಲ್ಲಿ ಆ ದೇಶದ ಜನರ ಹೋರಾಟ, ಆರ್ಥಿಕತೆಯಲ್ಲಿ ಇಂದು ಜಪಾನ್ ಜಗದ ಶಕ್ತಿಶಾಲಿ ದೇಶಗಳಲ್ಲೊಂದು, ಇನ್ನೂ ಈ ದೇಶದ ನೈಸರ್ಗಿಕ ಸ್ಥಿತಿಯನ್ನು ಅವಲೋಕಿಸಿದರೆ ಇದು ಪದೇ ಪದೇ ಭೂಕಂಪ, ಜ್ವಾಲಾಮುಖಿಗಳಿಂದ ತತ್ತರಿಸುತ್ತದೆ, ವಾಸಿಸಲು ಅಷ್ಟೊಂದು ಉತ್ತಮ ವಾತಾವರಣದಲ್ಲಂತೂ ಇಲ್ಲ, ಇಂದು ಜಪಾನ್‍ನಿಂದ ಆರ್ಥಿಕ ಸಹಕಾರಕ್ಕೆ ಮುಗಿಬೀಳುವ ದೇಶಗಳ ಸಂಖ್ಯೆ ಯಥೇಚ್ಚವಾಗಿದೆ, ಇದರಲ್ಲಿ ಭಾರತದ ಪಾಲು ದೊಡ್ಡದಿದೆ, ಜಗತ್ತಿನ ಪವರ್‍ಫುಲ್ ಆರ್ಥಿಕ ಶಕ್ತಿಯಾಗಲು ಜಪಾನ್ ತೆಗೆದುಕೊಂಡದ್ದು ಎರಡನೇ ಮಹಾಯುದ್ದದ ನಂತರ ಕೇವಲ ಎರಡು ದಶಕ, ಆದರೆ ಬ್ರಿಟೀಷ್ ಮುಕ್ತ ಭಾರತವಾಗಿ ನಾವು ಏಳು ದಶಕಗಳು ಕಳೆದರೂ ನಮಗೆ ಜಪಾನ್‍ಗೆ ಆಗುವಂತ ಯಾವುದೇ ಅಪಾಯವೊದಗಲಿಲ್ಲ, ಚೀನಾ ಮತ್ತು ಪಾಕಿಸ್ತಾನದಿಂದ ಎರಡು ಬಾರಿ ದೇಶ ಯುದ್ದವನ್ನು ಅನುಭವಿಸಿದರೂ ಅದು ಜಪಾನ್‍ಗಾದ ಪೆಟ್ಟಿನ ಮುಂದೆ ಅಂತಹುದ್ದೇನು ಅಲ್ಲ, ನಮ್ಮ ದೇಶದ ನೈಸರ್ಗಿಕ ಸಂಪತ್ತು, ನೈಸರ್ಗಿಕ ಭದ್ರತೆಯ ಮುಂದೆ ಜಪಾನ್ ಯಾವುದೇ ಲೆಕ್ಕವಲ್ಲ, ನಮ್ಮದು ಅಗಾಧ ಸಂಫನ್ಮೂಲಗಳನ್ನು ಒಳಗೊಂಡ ಬಡದೇಶವಾಗಿದೆ, ಇರುವ ಸಂಪನ್ಮೂಲಗಳನ್ನು ನಾವು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಗಂಜೀ ಕಾಸಿಗಾಗಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅದಿರನ್ನು ಅಗೆದು ವಿದೇಶಕ್ಕೆ ರಫ್ತುಮಾಡುತ್ತೇವೆ, ಅದೇ ನಮ್ಮಲ್ಲಿನ ಕೈಗಾರಿಕಾ ಅಭಿವೃದ್ಧಿ ಹೊಂದಿಲ್ಲ, ಗಣಿಗಾರಿಕೆ ಮಾತ್ರ ಅಭಿವೃದ್ಧಿ ಹೊಂದಿದೆ, ಅದೂ ವಿದೇಶಕ್ಕೆ ಅದಿರು ಸಾಗಿಸಲು, ವಿದೇಶೀ ಕಂಪೆನಿಗಳಿಗೆ ಕಚ್ಛಾ ಸರಕು ಪೂರೈಸುವ ದೇಶವಾಗಿ ಭಾರತ ಉಳಿದಿದ್ದೇ ದೇಶ ಇನ್ನು ಬಡತನ ತೊಟ್ಟಿಲಲ್ಲೇ ಮಲಗಿದೆ. ದೇಶದ ಸಂಪನ್ಮೂಲಗಳ ಬಳಕೆ ದೇಶದಲ್ಲೇ ಆಗಬೇಕು, ದುಡಿಯುವ ಎಲ್ಲಾ ಕೈಗಳಿಗೆ ಕೆಲಸಸಿಗಬೇಕು, ದುಡಿಮೆ ಎಲ್ಲರಿಗೂ ಸಿಗಬೇಕು, ಹಸಿವು ದಾರಿದ್ರ್ಯ ಮುಕ್ತ ದೇಶ ನಮ್ಮದಾಗಬೇಕು.
ನಮ್ಮ ದೇಶದಲ್ಲಿ ಎಲ್ಲವನ್ನು ಮುನ್ನಡೆಸಬೇಕಾದ ನಾಯಕರು ಇಂದು ಭ್ರಷ್ಟಾಚಾರ ಬಲೆಯಲ್ಲಿ ಬೀಳುತಿದ್ದಾರೆ, ದಿನಕೊಂದು ಹಗರಣಗಳು, ದಿನಕ್ಕೊಂದು ವಿವಾದಗಳು, ಎಲ್ಲವನ್ನು ಮೌನವಾಗಿ ನೋಡುತ್ತಾ ಕೂರುವುದು ಶ್ರೀಸಾಮಾನ್ಯನ ಸದ್ಯದ ಬದುಕಾಗಿದೆ, ಜನರಿಂದ ಜನರಿಗಾಗಿ ಆಯ್ಕೆಯಾಗಬೇಕಾದವರು ಜಾತಿ ಧರ್ಮದ ಆಧಾರಿತ ಸಮಜದ ನಿರ್ಮಾಣದಲ್ಲಿ ತೊಡಗಿ ಶುದ್ಧ ಸಮಜಮುಖಿ ಸಮಾಜದ ಸ್ವಾಸ್ಥ ಕದಡುತ್ತಾ ಸಾಗುತ್ತಿರುವುದು ಭಯಭೀತ ಸಮಾಜದಲ್ಲಿ ಸುಧಾರಣೆ ಮರೀಚಿಕೆಯಾಗಿದೆ. ಹಲವಾರು ಜನ ನಾನು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುವೆಯೆಂದು ಬರುವವರು ಬೀದಿಗೊಬ್ಬರು ದೊರೆತರೂ ಅವರ ಸಾಚಾತನವು ಪ್ರಶ್ನಾರ್ಹವಾಗಿದೆ, ಉದಾಹರಣಗೆ ನನಗೆ ತಾನೊಬ್ಬ ಮಹಾನ್ ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಟ ನಡೆಸುವ ನಾಯಕನು ಬರಹಗಾರನೆಂದು ನನಗೆ ಪರಿಚಿತನಾದ, ನಾನು ಆತನ ಬರವಣಿಗೆ ನೋಡಿ ಆತನೊಬ್ಬ ನೈಜ ಹೋರಾಟಗಾನೆಂದು ನಂಬಿದ್ದೆ, ಆದರೆ ಕೊನೆಗೆ ನನಗೆ ಅರಿವಾಯಿತು ಆತ ಸರ್ಕಾರಕ್ಕೆ ಮೋಸಮಾಡಿ ಅನೇಕ ಭೂ ಮಂಜೂರಾತಿಗಳನ್ನು ಮಾಡಿಸಿಕೊಂಡು ಸರ್ಕಾರಕ್ಕೆ ಮೋಸಮಾಡಿದವನೆಂದು ಹಾಗೂ ಮೋಸಮಾಡಲು ನಿತ್ಯ ಹವಣಿಸುವನೆಂದು ಅರಿವಾಯಿತು, ಬಡಜರಿಗಾಗಿ ಇರುವ ವಸತಿ ಮಂಜೂರಾತಿ ಕಬಳಿಸಿದವನೆಂದು ಅರಿವಾಯಿತು, ಕೊನೆಗೆ ಅವನೊಂದಿಗೆ ನಾಲ್ಕು ದಿನ ಓಡಾಡಿದ್ದಕ್ಕೆ ನನಗೆ ನಾಚಿಕೆಯಾಯಿತು, ಈ ರೀತಿ ದೇಶದಲ್ಲಿರುವ ಭ್ರಷ್ಟಾಚಾರವನ್ನೇ ಬಂಡವಾಳಮಾಡಿಕೊಂಡು ಅದರ ವಿರುದ್ಧ ಹೋರಾಟ ಮಾಡುವೆಯೆಂದು ಕೂಗಾಡುತ್ತಾ ದೇಶಕ್ಕೆ ಮೊಸಮಾಡುವವರು ಹೆಚ್ಚುತ್ತಿದ್ದಾರೆ, ಇಂತಹ ನಕಲಿ ಹೋರಾಟಗಾರರಿಂದ ನಾವು ಎಚ್ಚರಿಕೆ ವಹಿಸಬೇಕು, ಸುಖಾ ಸುಮ್ಮನೇ ಹಿಂದು ಮುಂದೂ ಯೋಚಿಸದೇ ಇಂತವರಿಗೆ ಜೈ ಎಂದರೆ ನಮ್ಮ ದೇಶಕ್ಕೆ ನಾವೇ ದ್ರೋಹವೆಸಗಿದಂತೆ.
  ನಿಸ್ವಾರ್ಥ ನಾಯಕರು ಮರೆಯಾಗುತಿದ್ದಾರೆ, ಜನರಲ್ಲಿ ಈ ದೇಶಕಂಡ ಮಹಾನ್ ಚೇತನಗಳಾದ ಅಂಬೇಡ್ಕರ್, ಬುದ್ಧ, ಗಾಂಧೀ, ಬಸವಣ್ಣರ ಚಿಂತನೆಗಳು ಚರ್ಚೆಗೆ ಹಚ್ಚುವ ಪ್ರಕ್ರಿಯೆ ಕಡಿಮೆಯಾಗಿದೆ. ದೇಶಕಂಡ ಮಾಹಾನ್ ಚೇತನಗಳ ಜ್ಞಾನದ ಸೆಲೆಯಲ್ಲಿ ದೇಶದ ಬಂಧುಗಳು ಗಟ್ಟಿಗೊಳ್ಳಬೇಕು, ನಕಲಿ ಹೋರಾಟಗಾರರನ್ನು ನಿರ್ಲಕ್ಷಿಸಿ, ಜಾತಿ ಧರ್ಮದ ಆದಾರದಲ್ಲಿ ವೋಟ್ ಮಾಡುವುದನ್ನು ಬಿಟ್ಟು ಶಕ್ತಿಯುತ ಭಾರತದ ನಿರ್ಮಾಣಕ್ಕೆ ಪಣತೊಡೋಣ, ನಮ್ಮಲ್ಲಿನ ಉಸಿರು ಹಾರಿಹೋಗುವುದರೊಳಗಾಗಿ ಈ ಪುಣ್ಯ ಭೂಮಿಗಾಗಿ ತುಸು ಒಳಿತನ್ನು ಮಾಡೋಣ, ತನ್ಮೂಲಕ ಪ್ರಗತಿಗೆ ಹರಿಕಾರರಾಗೋಣ, ಜಗದೆಲ್ಲೆಡೆ ಭಾರತೀಯರ ಶಕ್ತಿ ತೋರಿಸೋಣ..ಭಾರತೀಯರೆಂದು ಎದೆಯುಬ್ಬಿಸಿ ನಡೆಯೋಣ..
ಭಾರತ್ ಮಾತಾ ಕೀ ಜೈ..

       ರಾಮಚಂದ್ರ ಸಾಗರ್