Saturday, 18 February 2017

ನಾ ಇವಳಿಗೆ ಸೋತಂತೆ...

ಹೂಬನದಲಿ ನೀ ನಗುತ ನಡೆದರೆ ಗೆಳತಿ
ಅರಳಿ ಕಂಪಿಸುವ ಕುಸುಮಗಳಿಗು ಸೋಲು
ಚೆಲುವ ಸಮರದಲಿ ನಿನಗೇ ಗೆಲುವು
ಚದುರೆಯ ನಗುವಿಗೆ ಮನಸಿಗು ಸೋಲು..

ತಂಗಾಳಿಯಲಿ ನೀ ನಾಚುತ ನಡೆದರೆ ಗೆಳತಿ
ಬೀಸುವ ತಂಗಾಳಿಗು ಬೀಸಲು ಖುಷಿಯು
ತಳಿರು ಸೊಬಗಿಗು ನೀನೆ ಉಸಿರು
ತರಲೆ ಕನಸಿಗು ನೀನದೇ ತಳಕು..

ಪಳಿಸುವ ಮುಂಜಾವ ರವಿ ಕದಿರಲಿ
ನೀ ಹೆಜ್ಜೆಯನಿತ್ತರೆ ಬೆಳ್ಳಿ ಬೊಂಬೆಯೇ ನಡೆದಂತೆ
ಸೌಂದರ್ಯ ಚಹರೆ ಮೂಡಿದಂತೆ
ಚೆಲುವ ಗೋಪುರವು ಸಾಗಿದಂತೆ.. 

ಚೆಲುವ ತನಯೆಯ ಒಯ್ಯಾರದ ನಡಿಗೆಗೆ
ತರಲೆ ಕನಸುಗಳು ಜೊತೆಯಾದಂತೆ
ತನುವು ಅರಿವಿಲ್ಲದೆ ಅವಳೆಡೆಯೇ ಸಾಗಿದಂತೆ
ತರುಣಿಯ ನಗುವಿಗೆ ನಾ ಬೆರಗಾದಂತೆ..

ಚೆಲುವ ಬನದಲಿ ಕುಸುಮಗಳ ಕಂಪಲಿ
ಚೆಲುವ ತನಯೆಯ ಜೊತೆಯಲಿ
ಘಮ ಘಮಿಸು ಬಾಳು ಅರಳಿದಂತೆ
ಪಳ ಪಳಿಸು ನಗುವು ಜೊತೆಯಾದಂತೆ..
ನಾ ಇವಳಿಗೆ ಸೋತಂತೆ...

      ರಾಮಚಂದ್ರ ಸಾಗರ್