ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು, ಈ ಸಂದಂರ್ಭದಲ್ಲಿ "ಪ್ರೀತಿಯೆಂದರೆ" ಕವಿತೆ ಪುನಃ ಪೋಸ್ಟ್ ಮಾಡುತ್ತಿರುವೆ. ಪ್ರೀತಿ ಎಂಬುದು ಹೃದಯಗಳ ವಿಷಯ, ಇಲ್ಲಿ ದೈಹಿಕ ಬೆಸುಗೆಯೇ ಮುಖ್ಯವಲ್ಲ, ಗಂಡು ಹೆಣ್ಣು, ಪ್ರಕೃತಿಯ ಎಲ್ಲ ಜೀವಿಗಳು, ಒಬ್ಬರನ್ನೊಬ್ಬರು ಅವಲಂಬಿಸಿ ಬದುಕುತ್ತಿರುವುದು ಈ ಪ್ರೀತಿ ಸೆಲೆಯ ಬಲದಿಂದ. ನಿರ್ಮಲ ಪ್ರೀತಿಯೆಂದರೆ ಬಾಳಲ್ಲಿ ಜೊತೆಯಾದ ಜೋಡಿಗಳು ಕೇವಲ ದೈಹಿಕ ಆಕರ್ಷಣೆ, ಸಂಪತ್ತು, ಅಂತಸ್ತುಗಳ ಅಮಲಿನಲ್ಲಿ ಬೆಸುಗೆಯಾದವರಲ್ಲ. ಆ ರೀತಿ ಆಗಿದ್ದೇ ಆದಲ್ಲಿ ಅದೊಂದು ತಾತ್ಕಾಲಿಕ ಪೆರೇಡ್ ಅಷ್ಟೇ. ನಾನು ಎಷ್ಟೋ ಜನರನ್ನು ನೋಡಿದ್ದೇನೆ ಅಫಘಾತ , ಅನಾರೋಗ್ಯ ಇನ್ನಿತರೆ ಕಾರಣಗಳಿಂದ ಗಂಡ ಹೆಂಡತಿ ಯಾರಾದರೊಬ್ಬರು ಶಾಶ್ವತವಾಗಿ ವಿಕಲರಾದರೂ, ದೈಹಿಕ ಅಸಮರ್ಥರಾದರೂ ಕೂಡ ನಿರ್ಮಲ ಪ್ರೀತಿಯಲ್ಲಿ ಬದುಕಿನ ಕೊನೆವರೆಗೂ ಪ್ರೀತಿಯಿಂದ ಬದುಕುತ್ತಿದ್ದಾರೆ. ಬದುಕಿನ ಒಂದು ಮಜಲನ್ನು ತ್ಯಾಗಮಾಡುತ್ತಾರೆ. ನೊಂದ ಸಂಗಾತಿಗೆ ಧೈರ್ಯ ತುಂಬುತ್ತಾರೆ, ಸಂಗಾತಿಯ ನೋವು ತನ್ನ ನೋವಾಗುತ್ತದೆ, ಇಲ್ಲಿ ಪ್ರೀತಿ ಕಾವ್ಯ ಅರಳುತ್ತದೆ, ಶೃಂಗಾರ, ಕಾಮ ಕಾಡುವುದಿಲ್ಲ. ಪ್ರೀತಿ ಕಾವ್ಯದಲ್ಲಿ ಮನಗಳು ಬೆಸೆದರೆ ಸಾಕು, ದೇಹವು ಬೆಸೆದು ಹಾಡಾಗಬೇಕಿಲ್ಲ, ಶೃಂಗಾರ,ಕಾಮದಲ್ಲಿ ಒದ್ದೆಯಾಗಬೇಕಿಲ್ಲ. ಜೊತೆಯಾದ ಸಂಗಾತಿ ಸುಖಕಷ್ಟೇ ಅಲ್ಲ, ದುಃಖಕ್ಕೂ ಬೇಕು, ದುಃಖದಲ್ಲೂ ಪಾಲ್ಗೊಳ್ಳಬೇಕು, ಒಬ್ಬರಲ್ಲಾದ ನೋವಿಗೆ, ವಿಕಲತೆಗೆ ಡೈವರ್ಸ್ ಒಂದೇ ಪರಿಹಾರವಾಗಬಾರದು, ಶೃಂಗಾರ ಕಾಮದ ಕನಸು ಕಾಣುತ್ತಾ ಇನ್ನೊಂದೆಡೆ ಓಡಬಾರದು, ನಾಡಿನ ಸಂಸ್ಕಾರದ ಗುಣವೂ ಗಟ್ಟಿಯಾಗಬೇಕು. "ಪ್ರೀತಿಯೆಂದರೆ ಬದುಕಿನ ಕೊನೆವರೆಗೂ ಜೊತೆಯಾದವರ ಹಿತಕಾಯುವುದೇ ಹೊರತು ಲಾಭ ಕೋರುವುದಲ್ಲ.."
ಪ್ರೀತಿಯೆಂದರೇ....
ಪ್ರೀತಿಯೆಂದರೆ ಮನದೊಳಗೆ
ನೀ ಬೆಳಗಿದ ದೀವಟಿಯು
ಪ್ರೀತಿಯೆಂದರೆ ಬದುಕೊಳಗೆ
ನೀ ಹಾಸಿದ ಹೂ ಪಥವು..
ಪ್ರೀತಿಯೆಂದರೆ ಉಸಿರೊಳಗೆ
ನೀ ಬೆರೆಸಿದ ಅಮೃತವು
ಪ್ರೀತಿಯೆಂದರೆ ಕಾವ್ಯದೊಳಗೆ
ನೀ ಬರೆಸಿದ ಅಕ್ಷರವೂ..
ಪ್ರೀತಿಯೆಂದರೆ ಗಾನದೊಳಗೆ
ನೀ ಬೆರೆಸಿದಾ ಸ್ವರವೂ
ಪ್ರೀತಿಯೆಂದರೆ ಪದಗಳಲಿ
ನೀ ಬರೆಸಿದಾ ಒಲವ ಓಲೆಯು..
ಪ್ರೀತಿಯೆಂದರೆ ತುಸು ನಗುವಿನಲಿ
ನೀ ಅರಳಿಸಿದಾ ಆಸೆಯು
ನೀ ಕರಗಿಸಿದ ಕಹಿಯು
ನೀ ಮೂಡಿಸಿದಾ ಭರವಸೆಯೂ..
ಪ್ರೀತಿಯೆಂದರೆ ಒಲವ ಜಗದೊಳಗೆ
ನೀ ತುಂಬಿದ ಒಲವ ರಂಗು
ಪ್ರೀತಿಯೆಂದರೆ ಮನದ ಮನೆಯೊಳಗೆ
ನೀ ಸದಾ ಬೆಳಗುವ ದೀವಟಿಯು..
ಪ್ರೀತಿಯೆಂದರೆ ಬದುಕೊಳಗೆ
ತ್ಯಾಗ ಮಮತೆಯ ಆರಾಧನೆಯು
ಜೀವದ ಕೊನೆವರೆಗೂ
ಉಸಿರಿಗೆ ಉಸಿರಾಗುವ ಸಂಜೀವಿನಿಯೂ..
ರಾಮಚಂದ್ರ ಸಾಗರ್