ಸಾರ್ವಜನಿಕನೊಬ್ಬ ಇಂದಿನ ಸಮಾಜದಲ್ಲಿ ಸಮಾಜಮುಖಿ ಕಾರ್ಯದಿಂದ ದೂರಾಗುವ ಮನಸ್ಥಿತಿ ಹಾಗೂ ಪರಿಸ್ಥಿತಿಗಳೆರಡೂ ಹೆಚ್ಚುತ್ತಿವೆ. ಮಿತಿ ಮೀರುತ್ತಿರುವ ಭ್ರಷ್ಟಾಚಾರ ದೇಶವನ್ನು ಕೊಲ್ಲುತ್ತಿದೆ ಹಾಗೂ ಸಮಾನ್ಯನನ್ನು ಬೆದರಿಸುತ್ತಿದೆ. ಭ್ರಷ್ಟಾಚಾರದ ಪರಿಧಿಯಲ್ಲಿ ದೇಶದ ಎಲ್ಲಾ ವ್ಯವಸ್ತೆಗಳು ಗೌಣವಾದಂತೆ ಭಾಸವಾಗುತ್ತಿವೆ. ಗಾಂಧಿ ತತ್ವಗಳೆರಡನ್ನು ನುಡಿಯುವಂತೆ ಕೇಳಿದರೂ ಹೇಳದ ಸ್ಥಿತಿಯಲ್ಲಿ ನಮ್ಮ ಅನೇಕ ಜನತೆ ತಲುಪಿದ್ದಾರೆ. ಅಶಾಂತತೆ ಸಮಾಜದಲ್ಲಿ ತಾಂಡವವಾಡುತ್ತಿದೆ. ಸಹೋದರತ್ವ ಸೌಹಾರ್ದತೆಗಳು ಕ್ಷೀಣಿಸುತ್ತಿವೆ. ಅಂದು ಬ್ರೀಟೀಷ್ ಮುಕ್ತ ಭಾರತಕ್ಕಾಗಿ ಶಾಂತಿ ತತ್ವದಲ್ಲಿ ಒಗ್ಗಟ್ಟಿನ ಉಸಿರಲ್ಲಿ ದೇಶವನ್ನು ಸ್ವಾತಂತ್ರ್ಯಗೊಳಿಸಿ ಬೀಗಿದ ನಾಡೆಂಬುದು ಹೇಳಿಕೊಳ್ಳಲು ವ್ಯಥೆಯಾಗುತ್ತಿದೆ. ಅಂದು ನಾಯಕರೆನಿಕೊಂಡವರು ನುಡಿದರೆ ದೇಶವೇ ಎದ್ದು ನಿಲ್ಲುತ್ತಿತ್ತು. ಅವರ ಮಾತಲ್ಲಿ ನಿಸ್ವಾರ್ಥ ಸೇವೆಯ ನುಡಿಯಿರುತ್ತಿತ್ತು. ಅಂದು ಇಂದಿನ ಮಟ್ಟದಲ್ಲಿ ಸುಧಾರಿತ ಅಭಿವೃದ್ಧಿ ಹೊಂದಿದ ಸಂವಹನ ತಂತ್ರಜ್ಞಾನವನ್ನು ದೇಶ ಹೊಂದಿರಲಿಲ್ಲ. ಆದರೂ ನಾಯಕರ ನುಡಿ ಎಲ್ಲರನ್ನೂ ಮುಟ್ಟುತ್ತಿತ್ತು, ಕಾರಣ ಜನರ ಶ್ರದ್ಧೆಯಾಗಿತ್ತು. ನಾಡಿನ ಕಳಕಳಿಯೂ ಆಗಿತ್ತು. ದೇಶವನ್ನು ಬ್ರಿಟೀಷ್ ಮುಕ್ತಗೊಳಿಸಲೇಬೇಕೆಂಬ ಹಠ ಪ್ರತಿ ಮನದಲ್ಲೂ ಮರವಾಗಿತ್ತು. ಮರದ ಬೇರುಗಳು ದಿನದಿಂದ ದಿನಕ್ಕೆ ಅಂದು ಬಿಗಿಯಾಗುತ್ತಿದ್ದವು. ನಾಯಕರ ನುಡಿಗಳು ಪೋಷಣೆಯ ಸತ್ವಗಳಾಗಿದ್ದವು.
ಇಂದು ನಾಯಕತ್ವ ಗುಣಗಳು ನಾಯಕರಲ್ಲಿ ಕೊರತೆಯಾಗಿದೆ. ಬಡತನವನ್ನು ಸೋಲಿಸಿ ದೇಶವನ್ನು ಹಸಿವು ಮುಕ್ತಗೊಳಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಕೇವಲ ಸರ್ಕಾರಗಳಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬ ಸಾಮಾನ್ಯನ ಕೊಡುಗೆಯೂ ಅಮೂಲ್ಯ. ಆದರೆ ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂಪನ್ಮೂಲಗಳ ಹಂಚಿಕೆ ಜನಸಾಮಾನ್ಯರಲ್ಲಿ ಸಮಾನವಾಗಿ ಹಂಚಿಕೆಯಾಗಿಲ್ಲ. ಸಿರಿವಂತರು ಮುಕ್ತವಾಗಿ ಎಷ್ಟು ಬೇಕಾದರೂ ಗಳಿಸಿ ಸಂಪಾದಿಸಿಟ್ಟುಕೊಳ್ಳಬಹುದಾಗಿದೆ. ತಮ್ಮ ಅಗತ್ಯಕ್ಕೆ ಮಿಕ್ಕಿದ ಭಾಗವನ್ನು ಅನ್ಯರ ಉದ್ದಾರಕ್ಕೆ ವ್ಯಯಿಸುವ ಗುಣವಾಗಲಿ ವ್ಯವಸ್ತೆಯಾಗಲೀ ಇಲ್ಲದಿರುವುದು ಬಡತನವನ್ನು ಸೋಲಿಸಿ ದೇಶವನ್ನು ನೈಜ ರಾಮಾರಾಜ್ಯವಾಗಿಸುವ ಗಾಂಧೀ ಕನಸು ಕೇವಲ ಕನಸೆಂಬುದು ವಿಷಾದವಾಗಿದೆ. ಸಂಪತ್ತಿನ ಗಳಿಕೆಯ ಮೇಲೆ ಮಿತಿ ಹೇರುವುದು ಅಗತ್ಯ. ಸಿರಿವಂತರಲ್ಲಿ ಮಿಕ್ಕಿದ ಸಂಪತ್ತನ್ನು ದೇಶದ ಪ್ರಗತಿಗೆ ಬಳಸಬೇಕು. ಭೂಮಾಲೀಕರಿಂದ ಅಗತ್ಯಕ್ಕಿಂತ ಮಿತಿ ಮೀರಿ ಅವರ ಬಳಿಯಿರುವ ಜಮೀನುಗಳನ್ನು ಕೂಲಿ ಕಾರ್ಮಿಕರಿಗೆ ವರ್ಗಾಯಿಸಬೇಕು. ಸಂಪನ್ಮೂಲಗಳ ವಿಕೇಂದ್ರೀಕರಣದ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಕ್ರಾಂತಿಯಾಗಬೇಕು. ದುಡಿಯುವ ವರ್ಗಗಳು ಸಮಾದಲ್ಲಿ ತುಂಬಿರಬೇಕು. ಸಾಮಾಜಿಕ ಕಳಕಳಿಯಿಂದ ನಾಯಕರೆನಿಸಿಕೊಂಡವರು ಸಂಪತ್ತುಗಳ ವಿಕೇಂದ್ರೀಕರಣಕ್ಕೆ ಸಹಕರಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಆದರೆ ಇಂದಿನ ವ್ಯವಸ್ತೆಯಲ್ಲಿ ಅಧಿಕಾರಕ್ಕೆ ಬರಲು ವಾಮ ಮಾರ್ಗವನ್ನು ಆಯ್ದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹಣ, ಹೆಂಡಗಳ ಮೂಲಕ ಅಧಿಕಾರವೆಂಬುದು ಮಾತಾಗಿಹೋಗಿದೆ. ಇನ್ನೂ ದೇಶದ ಅಭಿವೃದ್ಧಿಯನ್ನು, ಬಡವರ ದೀನರ ಸೇವೆಯನ್ನು ಯಾರಿಂದ ಬಯಸಬೇಕು..? ಕೊನೆಗೆ ಗೆದ್ದವನು ಅಧಿಕಾರ ಉಳಿಸಿಕೊಳ್ಳಲು ಅವಧಿಯುದ್ದಕ್ಕೂ ಜಗ್ಗಾಡಬೇಕು. ಆತನು ಮಾಡುವ ಕಾರ್ಯ ಹಾಗೂ ಆತನ ಅಧಿಕಾರ ಕಸಿಯಲು ಸೋತವನು ನಿತ್ಯ ಹೋರಾಡುತ್ತಾರೆ. ಅವಶ್ಯವಿರುವ ಎಲ್ಲ ವಾಮಮಾರ್ಗವನ್ನು ಬಳಸುತ್ತಾರೆ. ನಿತ್ಯ ಅಧಿಕಾರದ ಜಗ್ಗಾಟದಲ್ಲಿ ಅಭಿವೃದ್ಧಿಯು ಗೌಣವಾಗುತ್ತಿದೆ. ಉತ್ತಮ ಅಭಿವೃದ್ಧಿ ಪರ ಕಾರ್ಯಗಳಿದ್ದರು ಅಭಿನಂದಿಸುವುದು ಕ್ಷೀಣವಾಗಿದೆ. ಕೇವಲ ಟೀಕೆಗಳಲ್ಲೇ ರಾಜಕೀಯವಿದೆ ಎಂಬಂತಾಗಿದೆ. ಕಲುಷಿತ ರಾಜಕೀಯವು ಶುದ್ಧವಾಗಬೇಕಿದೆ. ಶುದ್ಧತೆಯ ಪರಿಮಳದಲ್ಲಿ ದೇಶವು ಗಟ್ಟಿ ನಾಯಕರನ್ನು ಕಾಣಬೇಕಿದೆ.
ಯೋಚಿಸುವ ವ್ಯವಧಾನ ಮರೆತ ಅಧಿಕಾರಶಾಹಿಗಳು ಹೆಚ್ಚುತಿರುವುದು ಒಂದೆಡೆಯಾದರೆ, ತಪ್ಪುಗಳನ್ನು ಎತ್ತಿತೋರಿಸಿ ಸಮಾಜ ತಿದ್ದಲೇ ಬೇಕೆಂಬ ಹಠವಾದಿ ಸಮಾಜಮುಖಿಗಳಿಗೆ ಸಿಗುತ್ತಿರುವ ಗೌರವ ರಕ್ಷಣೆಯು ಕಡಿಮೆಯಾಗಿದೆ. ದೇಶದಲ್ಲಿ ಮಾನವ ಹಕ್ಕು ಹಾಗೂ ಆರ್.ಟಿ. ಐ. ಕಾರ್ಯಕರ್ತರ ಮೇಲಿನ ದೌರ್ಜನ್ಯಗಳ ಸಂಖ್ಯೆಯಲ್ಲಿ ಏರುಮುಖವನ್ನು ನೋಡಿದರೆ ಇದೂ ಕಂಡಿತವಾಗಿಯೂ ನೈತಿಕತೆ ಕೊಂದ ಮನಸುಗಳ ವಿಜೃಂಬಣೆ ಸಮಾದಲ್ಲಿ ಹೆಚ್ಚುತ್ತಿರುವ ಚಿಹ್ನೆಯಾಗಿದೆ. ಒಂದಂತೂ ಸತ್ಯ, ಗಾಂಧಿಯಿಂದ ಬೆಳಗಿದ ದೇಶದಲ್ಲಿ ಗಾಂಧಿ ತತ್ವಗಳು ದಿನದಿಂದ ದಿನಕ್ಕೆ ಗೌಣವಾಗುತ್ತಿವೆ. ಸತ್ಯದ ಪಥದಲ್ಲಿ ನ್ಯಾಯದ ನಡಿಗೆಯಲ್ಲಿ ನಡೆವವನಿಗೆ ಜೀವನ ಕಠಿಣವೆಂಬುದು ಎದುರಾಗುವ ಸಾಮಾನ್ಯ ಸತ್ಯವಾಗಿದೆ. ಒಬ್ಬ ಮಾಡುವ ಸುಧಾರಣೆಯನ್ನು ಹೊಗಳುವವರು ಒಬ್ಬರಿದ್ದರೆ ತೆಗಳುವವರು ಅಷ್ಟೇ ತುಂಬಿದ್ದಾರೆ, ಯಾವುದು ನೈಜ ಎಂಬುದು ಅರಿಯಾಗದ ಸ್ಥಿತಿಯಲ್ಲಿ ಸಮಾಜವಿದೆ. ಬುದ್ದ, ಬಸವಣ್ಣ ರಂತ ದಾರ್ಶನಿಕರನ್ನು ಕಂಡ ನಮ್ಮ ನಾಡು ಪುನಃ ಸತ್ಯದ ಪಥದಲ್ಲಿ, ಸಮಾನತೆಯ ಸತ್ವದ ರುಚಿಯನ್ನು ಎಲ್ಲಾ ರಂಗಗಳಲ್ಲೂ ಕಂಡು ಸಮಾಜವು ನಲಿಯಬೇಕು, ನಿಸ್ವಾರ್ಥ ನಾಯಕರು ದೇಶದುದ್ದಕ್ಕೂ ಹರಡಬೇಕಿದೆ.