ಭಾರತವು ವಿಶಾಲ ದೇಶ. ಅಪಾರ ಮಾನವ ಸಂಪನ್ಮೂಲವನ್ನು ಹೊಂದಿದೆ. ಒಟ್ಟು ಸುಮಾರು 121.10 ಕೋಟಿ ಜನಸಂಖ್ಯೆಯನ್ನು ದೇಶ ಹೊಂದಿದೆ. ಇದರಲ್ಲಿ 10.39 ಕೋಟಿ ಜನ ವೃದ್ದಾಪ್ಯದಿಂದ ಬಳಲುತ್ತಿದ್ದಾರೆ. ದೇಶದ ಮುಖ್ಯ ಸಮಸ್ಯೆಗಳಲ್ಲಿ ವೃದ್ದಾಪ್ಯದ ಸಮಸ್ಯೆಯು ಪ್ರಮುಖವಾಗಿದೆ. ದೇಶದ ಒಟ್ಟು ಸಮಸ್ಯೆಗಳಲ್ಲಿ ಶೇಕಡ 30 ಭಾಗವು ವೃದ್ದಾಪ್ಯದಿಂದ ಬಳಲುವವರ ಅನಾರೋಗ್ಯ, ವಸತಿ, ಪೋಷಣೆ, ಏಕಾತಾನಯತೆ, ಆಸ್ತಿವ್ಯಾಜ್ಯ, ಕುಟುಂಬ ವ್ಯಾಜ್ಯ ಸಾಮಾನ್ಯ ಆಗಿವೆ. ಕೆಲವೊಂದು ಸಮೀಕ್ಷೆಗಳ ಪ್ರಕಾರ ಭಾರತದಲ್ಲಿನ ಪ್ರತಿ ಹತ್ತು ಜನ ಹಿರಿಯ ನಾಗರೀಕರಲ್ಲಿ ಆರು ಜನ ತಮ್ಮ ಮಕ್ಕಳಿಂದ ಹೊರಹಾಕಲ್ಪಟ್ಟವರು ಇಲ್ಲವೇ ಮಕ್ಕಳ ಅಸಹಾಕಾರ ಇಲ್ಲವೇ ಮಕ್ಕಳ ವೈಭೋವೋಪೇತ ಜೀವನದಿಂದ ಕಡೆಕಣಿಸಲ್ಪಟ್ಟು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ಮನೆಯಿಂದ ಹೊರದೂಡಲ್ಪಟ್ಟವರಾಗಿರುತ್ತಾರೆ. ಆಸ್ತಿ ಹಂಚಿಕೆಯ ತಕರಾರು ಕೂಡ ಮುಖ್ಯವಾಗಿದೆ. ತಂದೆ ತಾಯಿಯರಿಗೆ ವಯಸ್ಸಾದೊಡನೆ ಮಕ್ಕಳು ಅವರ ಹೆಸರಿನ ಆಸ್ತಿಯನ್ನು ಪಡೆಯಲು ಬಡಿದಾಡುತ್ತಾರೆ. ಆದರೆ ಅವರ ಪೋಷಣೆಯ ಬಗ್ಗೆ ಗಮನ ಹರಿಸುವುದಿಲ್ಲ. ತಂದೆ ತಾಯಿಯರಿಗೆ ವಯಸ್ಸಾದೊಡನೆ ನಿಮ್ಮ ಹೆಸರಿನಲ್ಲಿ ಆಸ್ತಿ ಇರುವುದರ ಔಚಿತ್ಯವೇನು..? ಎಂದು ಪ್ರಶ್ನಿಸುವುದು ಸಾಮಾನ್ಯವಾಗಿದೆ. ಒಂದು ವೇಳೆ ಹಿರಿಯರು ಖಾಯಿಲೆಗಳಿಂದ ಬಳಲುತಿದ್ದರೆ ಮೊದಲು ಅವರ ಹೆಸರಿನ ಆಸ್ತಿಯನ್ನು ಪಾಲು ಮಾಡಿಕೊಳ್ಳಲು ಹಾಗು ಅದರಲ್ಲಿ ತಮ್ಮ ಜೀವನಮಟ್ಟವನ್ನು ಉತ್ತಮ ಪಡಿಸಿಕೊಳ್ಳಲು ಬಡಿದಾಡುತ್ತಾರೆ. ಅವರ ಆರೋಗ್ಯದ ಕಡೆ ಗಮನಕೊಡುವುದು ಕಡಿಮೆ. ಈ ರೀತಿಯ ಸಮಾಜದಲ್ಲಿನ ಬೆಳವಣಿಗೆಗಳಿಂದ ವೃದ್ದಾಪ್ಯವೆಂದರೆ ಜನರು ಬೆಚ್ಚುವ ಸಮಯ ಒದಗಿದೆ. ವೃದ್ದಾಪ್ಯವೆಂದರೆ ವಿಷದ ಕಾಲವೆನ್ನು ಸ್ಥಿತಿ ನಿರ್ಮಾಣವಾಗಿದೆ.
ವೃದ್ದಾಪ್ಯವನ್ನು ಬಂಡವಾಳ ಮಾಡಿಕೊಂಡು ಅನೇಕ ವಾಣಿಜ್ಯ ಕಂಪನಿಗಳು ವೃದ್ದಾಪ್ಯ ವಿಮೆ, ಆರೋಗ್ಯ ಯೋಜನೆ, ವಸತಿಯೋಜನೆ ಗಳನ್ನು ಜಾರಿಗೆ ತಂದಿವೆ. ದೇಶದಲ್ಲಿ ವೃದ್ದಾಪ್ಯ ವಲಯದಲ್ಲಿ ಬಂಡವಾಳವನ್ನು ಕಾರ್ಪೋರೇಟ್ ವಲಯಗಳು ಯಥೇಚ್ಚವಾಗಿ ಹೂಡುತ್ತಿವೆ. ವೃದ್ದಾಪ್ಯದಲ್ಲಿ ನಿಮ್ಮ ಬದುಕು ಯೌವ್ವನದಂತಿರುತ್ತದೆ ನಮ್ಮ ಕಂಪನಿಯ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ ವೃದ್ದಾಪ್ಯದಲ್ಲಿ ನಿಶ್ಚಿಂತೆಯಾಗಿರಿ ಎಂಬ ಅಡಿ ಬರಹದಲ್ಲಿ ಯೋಜನೆಗಳ ಜಾಹೀರಾತುಗಳು ಸಾಮಾನ್ಯವಾಗಿದೆ. ಹಾಗೂ ವೃದ್ದಾಪ್ಯವನ್ನೇ ಬಂಡವಾಳವಾಗಿಸಿ ದುಡಿಮೆಮಾಡಿಕೊಳ್ಳಲು ಕಾರ್ಪೋರೇಟ್ ವಲಯವೂ ತೋರಿಸುತ್ತಿರುವ ಉತ್ಸುಕವನ್ನು ನೋಡಿದರೆ ವೃದ್ದಾಪ್ಯದ ಕಹಿ ದೇಶದಲ್ಲಿ ಎಷ್ಟು ಬಿಗಿಯಾಗುತ್ತಿದೆ ಎಂಬುದು ಅರಿವಾಗುತ್ತದೆ. ವೃದ್ದಾಪ್ಯದ ಬದುಕಿನ ಅಭದ್ರತೆಗೆ ಹೆದರಿ ಇಂದಿನ ಯುವ ಪೀಳಿಗೆಯು ಹೆಚ್ಚಿನ ಮೊತ್ತವನ್ನು ಪಿಂಚಣಿ ಉಳಿತಾಯ ಯೋಜನೆಗಳು ಅಂದರೆ ಅರವತ್ತರ ನಂತರ ಮಾಸಿಕ ನಿಯಮಿತ ಮೊತ್ತವು ವೇತನದಂತೆ ಸಿಗುವಂತೆ ದೊರಕುವ ಯೋಜನೆಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇಂತಹ ಯೋಜನೆಗಳಿಗೆ ಆಧಾಯ ತೆರಿಗೆ ವಿನಾಯ್ತಿಯು ಇದೆ. ದೇಶದ ವೇತನ ಆಧಾರಿತ ಉದ್ಯೋಗಿಗಳು ನಿವೃತ್ತಿಯಾದ ನಂತರ ಆಯ್ದುಕೊಳ್ಳುವ ಯೋಜನೆಗಳು ಸಹ ಬದಲಾಗುತ್ತಿವೆ. ನಿವೃತ್ತಿಯಾದೊಡನೆ ಇಡಿಗಂಟಿನ ಮೊತ್ತ ಪಡೆಯುವ ಬದಲು ನಿವೃತ್ತಿಯ ನಂತರ ಮಾಹೆಯಾನ ನಿರ್ಧಿಷ್ಟ ಮೊತ್ತ ದೊರಕುತ್ತಾ ಹೋದಲ್ಲಿ ಹಣಕಾಸಿನ ಸಮಸ್ಯೆಯನ್ನು ವೃದ್ದಾಪ್ಯದಲ್ಲಿ ಎದುರಿಸುವ ಮುನ್ನೆಚ್ಛರಿಕೆಯ ಯೋಜನೆಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ವೃದ್ದಾಪ್ಯದಲ್ಲಿ ಬರುವ ಅನಾರೋಗ್ಯ, ವಸತಿ ಇನ್ನಿತರೆ ಸಮಸ್ಯೆಗಳಿಗೆ ಈ ಹಣವನ್ನೇ ಜನತೆ ನಂಬಿದ್ದಾರೆ.
ಭಾರತ ಸರ್ಕಾರದ ‘ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ’ ಸಚಿವಾಲಯವು ಅನೇಕ ಯೋಜನೆಗಳನ್ನು ಹೊತ್ತ ಹೊತ್ತಿಗೆಯನ್ನು ಹಿರಿಯ ನಾಗರೀಕರಿಗಾಗಿ ಬಿಡುಗಡೆಮಾಡಿ ಅನುಷ್ಠಾನಕ್ಕಾಗಿ ಕ್ರಮವಹಿಸಿದೆ. ವೃದ್ಧಾಪ್ಯ ದೇಶದಲ್ಲಿ ಸರ್ಕಾರಿ ಯೋಜನೆಯು ಆಗಿದೆ. ಅದಕ್ಕಾಗಿ ಸರ್ಕಾರವು ಅನೇಕ ಯೊಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ‘ಹಿರಿಯ ನಾಗರೀಕರಿಗಾಗಿ ಸಮಗ್ರ ಯೋಜನೆಗಳು’ ಇದು ಮುಖ್ಯ ಯೋಜನೆಯಾಗಿದೆ. ಇದರಲ್ಲಿ ಈ ಮುಂದಿನ ಸೌಲಭ್ಯಗಳನ್ನು ಒದಗಿಸಲಾಗಿದೆ; ವೃದ್ದರ ವಸತಿ ಗೃಹಗಳು, ವೃದ್ದರ ಹಾರೈಕೆ ನಿಲಯಗಳು, ಆಸ್ಪತ್ರೆ ಸೇವೆಗಳು, ವೃದ್ದರ ಸ್ವ-ಸಹಾಯ ಸಂಘಗಳು, ಫಿಸಿಯೋಥೆರಪಿ ಕೇಂದ್ರಗಳು, ಕೌಶಲ್ಯಾಭಿವೃದ್ಧಿ ಯೋಜನೆಗಳು, ಸಹಾಯ ಮತ್ತು ಸಲಹಾ ಕೇಂದ್ರಗಳು, ಇನ್ನಿತರೆ ಮಾನಸಿಕ ನೆಮ್ಮಧಿಗೆ ಅಗತ್ಯ ಸೇವೆಗಳನ್ನು ಅಳವಡಿಸಲಾಗಿದೆ.
ಪೋಷಕರು ಮತ್ತು ಹಿರಿಯ ನಾಗರೀಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007 ನ್ನು ಭಾರತ ಸರ್ಕಾರವು ಜಾರಿಗೆ ತಂದಿದೆ. ಈ ಮೂಲಕ ಹಿರಿಯ ನಾಗರೀಕರಿಗೆ ಅಗತ್ಯ ಸೌಲಭ್ಯ ಬದುಕಿನ ಭದ್ರತೆಗಾಗಿ ಕಾಯ್ದೆಯನ್ನು ರೋಪಿಸಿ ಸಹಕರಿಸಿದೆ. ಈ ಕಾಯ್ದೆಯ ಮುಖ್ಯ ಅಂಶಗಳು ಹೀಗಿವೆ; ಹಿರಿಯ ನಾಗರೀಕರ ಪಾಲನೆ ಮತ್ತು ನಿರ್ವಹಣೆ ಅವರ ಮಕ್ಕಳು ಮತ್ತು ಸಂಬಂಧಿಕರಿಂದ ಕಡ್ಡಾಯ, ಮಕ್ಕಳು ಮತ್ತು ಸಂಬಂಧಿಕರು ಪಾಲನೆಯಲ್ಲಿ ಉದಾಸೀನತೆ ತೋರಿದಲ್ಲಿ ಹಿರಿಯ ನಾಗರೀಕರು ನೀಡಿದ ಆಸ್ತಿಯನ್ನು ಪುನಃ ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು, ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ದಂಡನೆ, ಹಿರಿಯ ನಾಗರೀಕರಿಗೆ ವಸತಿ ಗೃಹಗಳ ನಿರ್ಮಾಣ, ಹಿರಿಯ ನಾಗರೀಕರ ಆಸ್ತಿ ಮತ್ತು ಜೀವನಕ್ಕೆ ಭದ್ರತೆ ಒದಗಿಸುವುದು, ಹಿರಿಯ ನಾಗರೀಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ಈ ರೀತಿ ಕಾಯ್ದೆ ಮೂಲಕವೂ ಸರ್ಕಾರವು ಹಿರಿಯ ನಾಗರೀಕರಿಗೆ ಸಹಕರಿಸಿದೆ. ಹಿರಿಯ ನಾಗರೀಕರ ಆಸ್ತಿಯ ಮೇಲಿನ ಮಮಕಾರ ಅವರ ಪಾಲನೆಯಲ್ಲಿ ಅವರ ಮಕ್ಕಳು ಮತ್ತು ಸಂಬಂಧಿಗಳಿಗೆ ಬಾರದಿರುವುದು ಸರ್ಕಾರ ಕಾಯ್ದೆಯ ಮೂಲಕ ಒತ್ತಾಯಪಡಿಸುವ ಕಾರ್ಯಕ್ಕೂ ಅವಕಾಶವಾಗಿದೆ. ಸಹಜವಾಗಿ ದೊರೆಯಬೇಕಾದ ಪ್ರೀತಿ, ಮಮತೆ ವಿಷಯಗಳು ಕಾಯ್ದೆಯಿಂದ ಬಲವಂತವಾಗಿ ದೊರೆತಾವೆಯೇ..? ತಂದೆ ತಾಯಿ ಮಕ್ಕಳನ್ನು ತಮ್ಮ ಜೀವಿತಾವಧಿಯ ಮುಖ್ಯ ಧ್ಯೇಯವಾಗಿ ಬೆಳೆಸುತ್ತಾರೆ, ತಮ್ಮ ದುಡಿಮೆಯ ಮುಖ್ಯ ವ್ಯಯ ಮಕ್ಕಳ ವಿಧ್ಯೆ ಅವರ ಕೌಶಲ್ಯಾಭಿವೃದ್ಧಿಗಾಗಿ ಮಡುತ್ತಾರೆ. ವೃದ್ದಾಪ್ಯದಲ್ಲಿ ಮಕ್ಕಳು ಇದೇ ರೀತಿ ತಮ್ಮನ್ನು ಸಲಹಬೇಕೆಂಬುದು ನೈತಿಕವಾಗಿ ಅವರ ಹಕ್ಕಾಗಿರುತ್ತದೆ.
ಪ್ರತಿ ವರ್ಷ ಅಕ್ಟೋಬರ್ ಒಂದರಂದು ಹಿರಿಯ ನಾಗರೀಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಮಕ್ಕಳು ತಮ್ಮ ತಂದೆ ತಾಯಂದಿರನ್ನು ಬೇಟಿ ಮಾಡಿ ಶುಭಕೋರುವುದು ಆಧುನಿಕ ಮಾದರಿಯ ಸಂಪ್ರದಾಯದ ಇನ್ನೊಂದು ಮಗ್ಗಲು. ಈ ದಿನ ಯಾರು ಯಾರನ್ನು ನೋಡಿ ಸಂತಸಪಡಬೇಕು..? ವೃದ್ದರ ಬದುಕು ವಿಷದ ಬದುಕಾಗಿ ಮಮತೆ, ಪ್ರೀತಿ ದೊರೆಯದೇ ವಂಚನೆಗೊಳಗಾಗುತ್ತಿರುವುದನ್ನು ಸಹಿಸಲು ಸಾಧ್ಯವೇ..?
ರಾಮಚಂದ್ರ ಸಾಗರ್