
ಶಾಲೆ ಕಾಲೇಜುಗಳಲ್ಲಿ ನಿಗಧಿತ ಪಠ್ಯದೊಂದಿಗೆ ಸಾಗುವ ಬದುಕಿನ ಬಹುಭಾಗ ಬದುಕಿನಲ್ಲಿ ನಿಜವಾಗಲು ಏನನ್ನು ಕಲಿಸಲು ಸಾಧ್ಯ. ಕೇವಲ ಪಠ್ಯಗಳಲ್ಲಿ ಹೇಳಲಾದ ವಿಷಯಗಳ ಜೊತೆಗೆ ಜೀವನ ಅರ್ಧ ಭಾಗವನ್ನು ಇಂದಿನ ಯುವ ಪೀಳಿಗೆ ಕಳೆಯುತ್ತಿದೆ. ನೈತಿಕ ಮೌಲ್ಯಗಳ ಬಗೆಗೆ ಅವರಿಗೆ ಜ್ಞಾನಾರ್ಜನೆಯು ಕಡಿಮೆ. ವಿಜ್ಞಾನ ವಾಣಿಜ್ಯದ ಜೊತೆಗೆ ವ್ಯವಹರಿಸುತ್ತಾ ಬೆಳೆದ ಒಂದು ದೇಹವಾಗಿ ಇಂದಿನ ಯುವ ಪೀಳಿಗೆ ಬಿಂಬಿತವಾಗುತ್ತಿದೆ. ಮಾನಸಿಕವಾಗಿ ಅವರೆಷ್ಟು ಸಬಲರು ಎಂಬದು ಪ್ರಶ್ನಾರ್ಥವಾಗಿದೆ. ಜೀವನದಲ್ಲಿ ಬರುವ ಕಷ್ಟ ಸುಖಗಳ ನಡುವೆ ಬದುಕಿನ ಪಥದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕೆಂದು ಅರಿಯುವುದು ಇವರು ತಮ್ಮ ಅರ್ಧ ಜೀವನದ ಭಾಗವನ್ನು ಸವೆಸಿದ ನಂತರ. ಅಂದರೆ ತಮ್ಮ ಶಿಕ್ಷಣವನ್ನು ಸಂಪೂರ್ಣ ಮುಗಿಸಿ ಯಾವುದೋ ಒಂದು ಕಂಪನಿಯಲ್ಲಿ ಅಥವಾ ಒಂದು ಉದ್ಯೋಗದಲ್ಲಿ ತಾವು ತೊಡಗಿದಾಗಲೇ ನೈಜ ಜೀವನ ಅರ್ಥವಾಗುತ್ತಾ ಹೋಗುತ್ತದೆ. ಜೀವನದಲ್ಲಿ ಕಷ್ಟ, ನೋವು, ಸವಾಲುಗಳು ಎದುರಾಗುತ್ತವೆ. ಇಂದಿನ ಪೀಳಿಗೆ ಸಣ್ಣ ಪುಟ್ಟ ವಿಷಯಗಳಿಗೂ ಖಿನ್ನತೆಗೊಳಗಾಗುತ್ತಾರೆ. ಕಾರಣ ಅವರನ್ನು ಬೆಳೆಸುವ ಶೈಲಿ, ಪಾಲಕರು ಪಾಲನೆ ಮಾಡುವ ಶೈಲಿ ಎರಡೂ ಬದಲಾಗುತ್ತಿದೆ. ದಿನದ ಬಹುಭಾಗ ಓದಿನಲ್ಲಿಯೇ ಕಳೆದು, ಶಾಲೆ ಕಾಲೇಜುಗಳು ನೀಡುವ ಪಠ್ಯಾಧಾರಿತ ಓದು ಆಟಗಳು ಮಾತ್ರ ಅವರ ಗುರಿಯಾಗಿವೆ. ಉಳಿದವುಗಳು ಜೀವನದ ಬಹು ಅಮೂಲ್ಯ ಘಳಿಗೆಗಳು ಅವರ ಗಮನಕ್ಕೆ ಬರುವುದಿಲ್ಲ. ಪೋಷಕರು ಸಹ ತಮ್ಮ ಒತ್ತಡ ಬದುಕಿನ ನಡುವೆ ಅವರ ಪೋಷಣೆಗೂ ಒತ್ತು ನೀಡುವುದಕ್ಕೆ ಹೆಚ್ಚಿನ ಸಮಯ ವ್ಯಯಿಸುವುದಿಲ್ಲ. ಎಲ್ಲವೂ ಒತ್ತಡದಲ್ಲೇ ಕಳೆಯುವುದು ಪೋಷಕ ಮತ್ತು ಮಕ್ಕಳ ನಡುವಿನ ಸಂಬಂಧಗಳು ಗೌಣವಾಗುತ್ತಿವೆ.
ಶಾಲೆಯಲ್ಲಿ ಹೆಚ್ಚು ಅಂಕ ಬರದೇ ಇದ್ದರೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯಗಳು ಮನದ ಶಕ್ತಿಯ ದೌರ್ಬಲ್ಯಕ್ಕೆ ಮುಖ್ಯ ಉದಾಹರಣೆ. ಪಠ್ಯದಲ್ಲಿ ಅನುತ್ತೀರ್ಣವಾದರೆ ಜೀವನ ಮುಗಿದಂತೆ ಎಂದು ಭಾವಿತವಾದ ವಾತಾವರಣದಲ್ಲೇ ಮಕ್ಕಳು ಬೆಳೆಯುತ್ತಾರೆ. ಭವಿಷ್ಯ ಎಂದರೆ ಇಂದಿನ ಪೀಳಿಗೆಯ ಮನದಲ್ಲಿ ಹೆಚ್ಚು ಅಂಕ ಗಳಿಸುವುದು ಹಾಗೂ ಪಠ್ಯದಂತೆ ಅಭ್ಯಾಸ ಮಾಡಿ ಮುಗಿಸುವುದು ಎನ್ನುವುದಾಗಿದೆ. ಸ್ನೇಹಿತರೊಡನೆ, ಸಮಾಜದೊಡನೆ ಹೇಗೆ ಬೆಳೆಯಬೇಕು, ಬೆರೆಯಬೇಕು, ಸಮಾಜಮುಖಿ ಕಾರ್ಯಗಳು ಎಂದರೇನು ಅವುಗಳೊಂದಿಗೆ ಬದುಕು ಹೇಗೆ ಸಾಗಬೇಕೆಂಬುದು ಇಂದಿನ ಶಿಕ್ಷಣದಲ್ಲಿ ಕಾಣಸಿಗುವುದಿಲ್ಲ. ಆಧುನಿಕ ವಿಜ್ಞಾನವೇ ಬದುಕಾಗಿದೆ. ಬಂಧುರ ಜಗದಲ್ಲಿ ಎಲ್ಲರೊಡನೆ ಸಹಬಾಳ್ವೆಯೊಂದಿಗೆ ಬದುಕುವುದು ಪೈಪೋಟಿಯುತ ಜಗದಲ್ಲಿ ಕಷ್ಟ, ಸವಾಲುಗಳನ್ನು ಎದುರಿಸು ಮನಸ್ಥಿತಿಯನ್ನು ಒಮ್ಮೆಲೇ ಜೀವನದಲ್ಲಿ ಯಾರಿಂದಲೂ ಗಳಿಸಲು ಸಾಧ್ಯವಿಲ್ಲ. ಮಗು ಹುಟ್ಟಿನಿಂದ ಎಲ್ಲವನ್ನು ಪಡೆಯಬೇಕು. ನೋವು ನಲಿವುಗಳು ಜೊತೆಯಾಗಿರಬೇಕು, ಬದುಕಿಗೆ ಅನುಭವಗಳು ಸಾರ್ಥಕವಾಗುವಂತೆ ಪಕ್ವವಾಗಬೇಕು. ಇಂದಿನ ಶಿಕ್ಷಣ ಪದ್ಧತಿಗನುಗುಣವಾಗಿ ಉನ್ನತ ವ್ಯಾಸಂಗಕ್ಕಾಗಿ ಹೈಟೆಕ್ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಪೋಷಕರು ಸೇರಿಸುತ್ತಾರೆ. ನೋವು ಎಂಬುದು ಅವರಿಗೆ ಅರಿವಾಗದಂತೆ ಎಲ್ಲವನ್ನು ಕರುಣಿಸುತ್ತಾರೆ. ಇವರು ಅಂಕಗಳಿಸುವ ಕಾಯಕದಲ್ಲಿ ಮಾತ್ರವೇ ಮಗ್ನರಾಗುತ್ತಾರೆ. ಉನ್ನತ ಶ್ರೇಣಿ ಪಡೆದು ಯಾವುದೋ ಖಾಸಗಿ ಹೈಟೆಕ್ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಮಾತ್ರ ಅವರ ಧ್ಯೇಯವಾಗಿರುತ್ತದೆ.
ಮುಂದೆ ಉನ್ನತ ವಿಜ್ಞಾನ ಪದವಿ ಇನ್ನಿತರೆ ಉನ್ನತ ಸಾಧನೆಯೊಂದಿಗೆ ಬದುಕಿನ ಅರ್ಧ ಭಾಗ ಸವೆಸಿದವರು ಖಾಸಗೀ ಕಂಪನಿಯಲ್ಲಿ ಉನ್ನತ ಹುದ್ದೆಯ ಓಳ್ಳೆಯ ವೇತನ ದೊರೆಯುವ ಹುದ್ದೆ ದೊರೆತರೂ ತಮ್ಮ ನೈಜ ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳಿಗೂ ಖಿನ್ನತೆಗೊಳಗಾಗುತ್ತಾರೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುವ ಟೆಕ್ಕಿಗಳು ಬಹುಜನರು ದಾಂಪತ್ಯ ಸಮಸ್ಯೆ, ಕುಟುಂಬ ದೌರ್ಜನ್ಯಗಳಿಂದ ಬೇಸತ್ತು ಹೋಗುವವರ ಸಂಖ್ಯೆ ಅಧಿಕ. ಜೀವನದ ಅರ್ಧ ಭಾಗದಿಂದ ಮಾತ್ರವೇ ನೈಜ ಜೀವನ ಆರಂಭಿಸುವ ಇವರು ಎಲ್ಲವೂ ಇದ್ದರು ಮಾನಸಿಕವಾಗಿ ಕುಗ್ಗಿದ ಸ್ಥಿತಿಯಲ್ಲಿರುತ್ತಾರೆ. ಮಾನಸಿಕವಾಗಿ ದೌರ್ಭಲ್ಯ ಮನದವರಾಗಿ ಸಣ್ಣಪುಟ್ಟ ವಿಷಯಗಳಿಗೆ ಟೆಕ್ಕಿಗಳು ಖಿನ್ನತೆಗೊಳಗಾಗುತ್ತಾರೆ. ಇವರ ಪೂರ್ವಾಪರ ವಿಚಾರಿಸಿ ನೋಡಿದರೆ ಉನ್ನತ ವಿಧ್ಯೆಯನ್ನು ಹೊಂದಿದವರು, ಆಧುನಿಕವಾಗಿ ಪರಿಣಿತರು ಆದರೂ ಬದುಕು ಎಂಬ ಪಥದಲ್ಲಿ ಸೋಲುತ್ತಾರೆ. ಕಠಿಣ ಹಾದಿಯು ಬದುಕೆಂದು ನರಳುವವರು ಹೆಚ್ಚುತ್ತಿದ್ದಾರೆ. ಎಷ್ಟೇ ಹಣವಿದ್ದರು ನೆಮ್ಮದಿಯ ಜೀವನ ಕಡಿಮೆಯಾಗಿರುತ್ತದೆ. ಜೀವನದ ಉದ್ದಗಲ ನೋವು ನೋಡದವರು ಎಷ್ಟೇ ಪ್ರಯತ್ನಿಸಿದರು ನಲಿವು ಕಾಣದ ಸ್ಥಿತಿಗೆ ತಲುಪುತ್ತಾರೆ.
ಆದ್ದರಿಂದ ಈಗಿನ ಮಕ್ಕಳಿಗೆ ಶಾಲೆಯಲ್ಲಿ ದೊರೆಯುವ ಶಿಕ್ಷಣದ ಜೊತೆಗೆ ಬದುಕಿನ ಎಲ್ಲ ಮಜಲುಗಳು, ನೋವು, ಕಷ್ಟದ ಚಿತ್ರಣಗಳನ್ನು ತೆರೆದಿಡಬೇಕು. ಜೀವನದ ಪಾಠವನ್ನು ತಿಳಿ ಹೇಳಬೇಕು. ಬದುಕು ಎಲ್ಲರಿಗೂ ಎಲ್ಲವನ್ನು ಕಲಿಸುತ್ತದೆ. ಆದರೆ ಅದಾಗ್ಗೆ ಕಲಿಸುವವರೆಗೆ ಕಾಯುವುದು ಯಥೋಚಿತವಲ್ಲ. ಸಮಾಜದ ಪ್ರಸ್ತುತ ನಡಿಗೆ ಹೇಗಿದೆ, ಜಗತ್ತಿನ ಇಂದಿನ ಸಾಮಾನ್ಯ ಸಮಸ್ಯೆಗಳೇನು ಎಂಬುದು ಕೇವಲ ಇವರ ಅರಿವಿಗಿರದೇ ಅವುಗಳನ್ನು ನಿಭಾಯಿಸುವ ಕಾರ್ಯದಲ್ಲಿ ಇವರನ್ನು ತೊಡಗಿಸಬೇಕು. ಇದನ್ನೂ ಸಹ ಪಠ್ಯವಾಗಿಸಬೇಕು. ಜಗದ ಇಂದಿನ ತೊಡಕುಗಳು ಎಂದು ಕೇವಲ ಸ್ಪದಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ನಡೆಸುವ ಸರಕಾಗದೇ ಅವುಗಳ ನಿರ್ಮೂಲನೆಯು ವಿಧ್ಯಾರ್ಥಿಗಳಿಂದ ಹೇಗೆ ಸಾಧ್ಯ ಎಂಬುದನ್ನು ಇವರ ಮೂಲಕ ಕಾರ್ಯರೂಪಕ್ಕೆ ತರಿಸುವ ಚಾಲನೆಯನ್ನು ಪೋಷಕರು ಜೊತೆಯಾಗಿ ಶಿಕ್ಷಣ ಸಂಸ್ಥೆಗಳು ಮಾಡಬೇಕು. ಸಮಸ್ಯೆಗಳನ್ನು ಎದುರಿಸುವ ಕಾರ್ಯವನ್ನು ವಿಧ್ಯಾರ್ಥಿ ದೆಸೆಯಿಂದಲೇ ನೀಡಬೇಕು. ಮನೆಯಲ್ಲಿ ಆರ್ಥಿವಾಗಿ ಸಬಲರಿದ್ದರೂ ಸಮಾಜದ ಸಮಸ್ಯೆಗಳು, ಜಗತ್ತಿನ ಇಂದಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳ ನಿರ್ಮೂಲನೆಗಾಗಿ ಅವರಿಗೆ ಕಾರ್ಯಾಗಾರ ಮಾಡಿ ಗುರಿ ನಿಗಧಿಪಡಿಸಬೇಕು. ಬದುಕಿನಲ್ಲಿ ವಿಧ್ಯಾರ್ಥಿ ದೆಸೆಯಿಂದ ಬಾಲ್ಯದಿಂದಲು ನೋವು, ಬವಣೆಗಳ ಪರಿಚಯವನ್ನು ಮಾಡಿಸಬೇಕು. ಇದು ಅವರಿಗೆ ಮುಂದಿನ ಹಾದಿಗೂ ಸಹಕಾರಿಯಾಗುತ್ತದೆ. ಶಕ್ತಿಯುತ ಯುವ ಪೀಳಿಗೆಯ ನಿರ್ಮಾಣಕ್ಕೂ ದಾರಿಯಾಗುತ್ತದೆ ಎಂಬುದು ಆಶಾವಾದ.