Friday, 14 April 2023

ಮಹಾನಾಯಕ

 


ದಿವಸ ಜಗತ್ತು ಕಂಡ ಮಹಾನ್ ಮಾನವತಾವಾದಿ, ಸುಜ್ಞಾನದ ಸಾಗರ, ಸಮಾಜಮುಖಿ ಚಿಂತನೆಯ ಹರಿಕಾರ, ಜ್ಷಾನದ ಬೆಳಕಿನ ಸೂರ್ಯ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತೋತ್ಸವ. ಸುದಿನ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗಾಗಿ ಧಾರೆಯೆರೆದ ಜ್ಞಾನದ ಬೆಳಕನ್ನು ಸಮಾಜದ ಸರ್ವತೋಮುಖ ಶ್ರೇಯಕ್ಕಾಗಿ ನಿತ್ಯವೂ ಸಶಕ್ತವಾಗಿ ಬಳಸಿಕೊಳ್ಳಲು ಪಣತೊಡುತ್ತೇವೆ ಎನ್ನುವ ಆಶಯದೊಂದಿಗೆ ಎಲ್ಲರಿಗೂ ಶ್ರೀಯುತರ 132ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುತ್ತಾ ನಾ ಬರೆದ "ಮಹಾನಾಯಕ" ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ..

ವಂದನೆಗಳೊಂದಿಗೆ...

 

ಮಹಾನಾಯಕ

 

ಜಾತಿ ಧರ್ಮಗಳ ಸಂಕೋಲೆಯನು

ವಿಮುಕ್ತಿಗೊಳಿಸಿದ ಮಹಾನಾಯಕನು

ವರ್ಣ ದ್ವೇಷಗಳ ಜ್ವಾಲೆಯನು

ಆರಿಸಿದ ದಿವ್ಯ ಯೋಗಿಯು..

 

ಸಂವಿಧಾನ ರಚಿಸಿದ ಶಿಲ್ಪಿಯು

ಭವ್ಯ ದೇಶ ಬೆಳಗಿದ ಕಿಡಿಯು

ದೀನ ದಲಿತರ ದೀವಟಿಗೆಯು

ಶ್ರಮಿಕ ಕಾಯಕೆ ಸ್ಪೂರ್ತಿಯು..

 

ಶಿಕ್ಷಣ ಜ್ಞಾನವು ಬೆಳಕೆಂದರು

ಬವಣೆಗಳ ಪರಿಹರಿಸಿಕೊಳ್ಳಲು

ಸಂಘಟನೆಯೆ ಪರಿಹಾರವೆಂದರು

ಒಂದಾಗಿ ನಡೆವುದೆ ಬಾಳೆಂದರು..

 

ಮಾನವೀಯತೆ ಸಹಬಾಳ್ವೆ

ಪ್ರೀತಿ ವಿಶ್ವಾಸಗಳನು ಆರಾಧಿಸೆಂದರು

ಬೇದವೆಣಿಸದ ಕುಲಕೇಳದ ನಾಡು

ಎಲ್ಲರೆದೆಯ ಗುರಿಯಾಗಲೆಂದರು...

 

ದಾರಿದ್ರ್ಯ ಬಡತನ ಕೊನೆಯಾಗಿಸಲು

ಜೀವಮಾನವನು ಸವೆಸಿದರು

ಜೀವದುಸಿರಿನ ಕೊನೆವರೆಗು

ಬುದ್ಧ ನುಡಿಯನು ನುಡಿದವರು..

 

ಜಗದ ಇತಿಹಾಸ ಪುಟದಲಿ

ಪದಗಳಿಗೆ ಸೀಮಿತಗೊಳ್ಳದ ಮಹಾನಾಯಕನು

ನಮ್ಮೆಲ್ಲರ ಹೃದಯದಲ್ಲಿ

ನಿತ್ಯ ಬೆಳಗುವ ದೇವನು...


ರಚನೆ: ರಾಮಚಂದ್ರ ಸಾಗರ್


Wednesday, 22 March 2023

ಯುಗಾದಿ..

 

ಎಲ್ಲಾ ಸಹೋದರ ಬಂಧುಗಳಿಗೂ ಯುಗಾದಿಯ  ಶುಭಾಶಯಗಳು. ಚಂದ್ರಮಾನ ಯುಗಾದಿಯು ಎಲ್ಲರ ಬಾಳಲ್ಲೂ ಆರೋಗ್ಯ, ನಗು, ಸಂಪತ್ತು, ಪ್ರೀತಿ, ಸ್ನೇಹ, ಸಹಬಾಳ್ವೆಯನ್ನು ಕರುಣಿಸಲಿ..

ಸಮಾಜ  ಎನ್ನುವುದು ಒಂದು ಸುಂದರ ಹೂಗಿಡ. ಆ ಗಿಡಕ್ಕೆ ಹಾನಿಮಾಡುವ ಎಲ್ಲಾ ಬಗೆಯ ಕೀಟಗಳು, ರೋಗಗಳು, ದುಷ್ಟ, ವಿಕೃತ ಮನಸ್ಸಗಳು ಇನ್ನು ಮುಂಬರುವ ದಿನಗಳಲ್ಲಿ ಮರೆಯಾಗಲಿ ಆ ಹೂಗಿಡವು ಚೆಲುವನ್ನು ಕಂಗೊಳಿಸುತ್ತಾ ಸುಂದರವಾದ ಚೆಲುವನ್ನು ಬೀರುತ್ತಾ ಸಮೃದ್ಧ ಹಾಗೂ ಸಂಪ್ರೀತಿಯ ಸಮಾಜವು ನಮ್ಮೆಲ್ಲರದಾಗಲಿ ಮುಂಬರುವ ವರ್ಷದುದ್ದಕ್ಕೂ ಎಲ್ಲರ ಕಣ್ಣಲ್ಲೂ ಸ್ನೇಹ, ಸಹಬಾಳ್ವೆ, ಪ್ರೀತಿ, ವಿಶ್ವಾಸಗಳು ಸದಾ ಅರಳುತ್ತಾ ಅಲೆಯಾಗಿ  ನೆಲೆಯಾಗಲಿ ಆದಷ್ಟು ಬೇಗನೇ ಈಗ ಕೂಡಿ ಬಂದಿರುವ ಸಕಾಲದಲ್ಲಿ ವಿಕೃತ ಮನಸ್ಸುಗಳು ದಹನವಾಗಲಿ ಎಂದು ಆಶಿಸಿ ಯುಗಾದಿ ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ...ಎಲ್ಲರಿಗು ಯುಗಾದಿಯ ಹೊಸ ಹರುಷದ ಸ್ವಾಗತವನ್ನು ಕೋರುತ್ತಾ ಮತ್ತೊಮ್ಮೆ ಎಲ್ಲಾ ಸಚ್ಚರಿತ ಮನಸ್ಸುಗಳಿಗೆ ಶುಭಾಶಯಗಳು..

ಯುಗಾದಿ..

ಕಹಿಯ ಬವಣೆ ಕರಗಲು
ಸಿಹಿಯ ಬದಕು ಅರಳಲು
ಮನ ಮನಗಳಲಿ ಯುಗಾದಿ
ಹಚ್ಚಬೇಕಿದೆ ಹೊಸ ದೀವಟಿ..

ಚೈತ್ರಮಾಸದ ಹೊಸದಿನ
ಕರೆತರಲಿ ಹೊಸತನ
ಎಲ್ಲರೆದೆಯ ಬೆಳಗಲು
ಉದಯಿಸಲಿ ಬಂಧುತ್ವ...

ರವಿ ಚಂದ್ರರ ಗತಿಯಲ್ಲಿ
ಬಾನು ಭುವಿಯ ಪರಿಧಿಯಲ್ಲಿ
ಬದಲಾಗುವ ಘಳಿಗೆಯಲ್ಲಿ
ಮರೆಯಾಗಲಿ ಮತ್ಸರ
ಯುಗಾದಿ ತರಲಿ ಸಂತಸ ...

ಅರೆ ನಿಮಿಷವಾದರು
ಅನ್ಯರ ಮನ ನೋಯಿಸದಿರು
ಕಹಿಯ ಮನಸು ದಹಿಸಿ
ಸಿಹಿಯ ಮನಸು ಅರಳಿಸಿ
ಹರುಷದ ಗೂಡಾಗು..

 

ಹರಕುಬಾಯಿ ಮೂಕವಾಗಲಿ

ವಿಕೃತ ಮನಸ್ಸು ದಹನವಾಗಲಿ

ಸಜ್ಜನನು ನಾಯಕನಾಗಲಿ

ಸಹಿಷ್ಣುತೆ ಮೆರೆದಾಡಲಿ..

 

ವರುಷದ ಆಯುಷ್ಯ
ಕರಗದಿರಲಿ ವ್ಯರ್ಥ
ಅಂತ್ಯವಾಗುವ ಮುನ್ನ
ಬೆಳಗುವ ದೀಪವಾಗು
ಸಿಹಿಯಾದಿಯಾಗಲಿ ತನು ಮನ...

ರಚನೆ: ರಾಮಚಂದ್ರ ಸಾಗರ್


Sunday, 12 June 2022

ಜೇನಿನ ಹೂಮಳೆ


ಗೆಳೆಯಾ ..

ನನ್ನೆದೆಯಲಿ ಬಿಡುವಿರದೆ ಸುರಿದಿದೆ

ನಿನ್ನೊಲವಿನ ಸವಿಜೇನಿನ ಹೂಮಳೆ

ಅನುರಾಗದ ಜಗದಲಿ ಬೀಸುತಿದೆ

ನೀನೆನ್ನುವ ಪ್ರೀತಿಯ ಅತಿಶಯವೆ


ಸೌರಭದ ತಂಗಾಳಿಯಲಿ ಕಾಡಿದೆ

ಜೊತೆಯಾಗಿ ಸಾಗುವ ಬಯಕೆ

ಶಮನವಾಗದ ಕನಸಲಿ ಬೇಡಿದೆ

ನೀನೆನ್ನುವ ಚುಂಬಕ ದೊರೆಯ


ಪ್ರೇಮಕಾಸಾರದ ನಾವೆಯೊಳು

ಬಾಹುಬಂಧನಕೆ ಆಸರೆಯಾಗು

ಅಧರಗಳ ನಿವೇದನೆಗೆ ಉತ್ತರಿಸು

ಕಾರ್ಗಾಲದ ಚಳಿ ಮರೆಯಾಗಿಸು


ಹೃದಯ ತರಂಗದ ಒಲವಿನ ಸ್ವರದಲಿ

ಕಾತರಿಸುವ ಬಾಳಿಗೆ ನೀ ವರವಾಗು

ಮನ ನಲಿಸು ಸೌಜನ್ಯದ ನಗುವಿನಲಿ 

ಸೋಲಿಲ್ಲದ ಹಾದಿಗೆ ನೀ ಸ್ವಾಗತಿಸು


ಹೂಮಳೆಯ ಚಿತ್ತಾರದ ಜಗದಲಿ

ಮುಗುದೆಯ ಪಾವನ ಹೃದಯಕೆ 

ಅನುದಿನವು ನೀ ಜೊತೆಯಾಗಿರು

ಪ್ರೇಮವೇ ಬಾಳಾಗಿಸಿ ಉಸಿರಾಗಿಸು


ರಚನೆ: ರಾಮಚಂದ್ರ ಸಾಗರ್


ರಂಗೇರಿಸು ಬಾ


ಗೆಳೆಯಾ..

ಮುಸ್ಸಂಜೆಯ ಕೆಂಪು ಕಡಲ ರಮಿಸುವ ಕಿನಾರೆಯಲಿ

ಕೆನ್ನೆಗೆ ಕೆಂಪು ರಂಗೇರಿಸು ಬಾ ಮುತ್ತುಗಳ ಕಾಣಿಕೆಯಲಿ..


ರಂಗು ತುಂಬಿದ ಮೋಡಿಯ ಸೋಜಿಗದ ಜಗದಲಿ

ಬಿಸಿಯುಸಿರು ತಾಕಿಸಿ ಹೃದಯಕೆ ಸಂತೈಸು ಕ್ಷಣದಲಿ..


ಹೂಮನದ ಸಿಂಗಾರದ ಪ್ರೇಮೋಲ್ಲಾಸದ ಘಮಲಿನಲಿ

ಭಾವಬಂಧನಕೆ ಹರುಷವೇ ಉಡುಗೊರೆಯಾಗಲಿ..


ನನ್ನೆದೆಯಲಿ ನರ್ತಿಸುವ ಹೊಂಗನಸುಗಳ ಸಾಕಾರದಲಿ

ನಿನ್ನ ಅನುಪಮ ಪ್ರೇಮವು ಸದಾ ಭೋರ್ಗಯರೆಯಲಿ..


ಒಲವು ತುಂಬಿದ ನಿನ್ನ ಕಂಗಳು ಸದಾ ಕೆಣಕುತಿರಲಿ

ಬಾಳು ಸಿಹಿಯಾಗಿಸುವ ಹಂಬಲದ ಅತಿಶಯದಲಿ..


ನಮ್ಮೊಲವ ಸಮ್ಮೋಹದ ಪ್ರೇಮಾಮೃತದ ಸವಿಪಾನದಲಿ

ಸಾವಿಲ್ಲದ ಪ್ರೀತಿಯ ಕಡಲು ಉಲ್ಲಾಸದಿ ಉದಿತವಾಗಲಿ..


ಅಧರಾಮೃತದ ಸವಿಲೇಪದ ಪಾರುಪತ್ಯದ ಸಡಗರದಲಿ

ಸಂಭ್ರಮದ ಸಿಂಗಾರದ ಸವಿಜೇನಿನ ಬಾಳು ನಮ್ಮದಾಗಲಿ..


ರಚನೆ: ರಾಮಚಂದ್ರ ಸಾಗರ್