Monday, 21 December 2020

ದಿನವೂ ನಗುತಿರಬೇಕು..


ಗೆಳತಿ..

ನೀ ಕದಲದೆ ಗೆಳತಿ ನನ್ನೆಡೆಗೇ ನೋಡಬೇಕು

ಪ್ರೀತಿಯ ಹಾಡೊಂದನು ನಾ ಬರೆಯಬೇಕು

ನೀ ಸಹಕರಿಸಿ ಈ ಹೃದಯಕೆ ಹಾರೈಸಬೇಕು...


ಪ್ರೇಮದ ಸ್ವರವೊಂದನು ನಾ ಪೋಣಿಸಬೇಕು

ನೀ ಕಣ್ಣಲ್ಲೇ ಹೂಬಾಣ ನನ್ನೆದೆಗೆ ತೂರಬೇಕು

ಆ ಕ್ಷಣಕೆ ನಾ ನಿನ್ನಲೇ ಕ್ಷಣ ಕ್ಷಣವೂ ಬೇಡಬೇಕು..


ಮೆಲುನಗುತ ಅನುದಿನವು ನೀ ನನ್ನ ಕೊಲ್ಲಬೇಕು

ನಿನ್ನೊಲವ ಸುಳಿಯಲಿ ನಾ ನರಳಬೇಕು

ನಿನ್ನ ಬಂಧನದ ಸವಿಯನು ನಾ ಸಂಭ್ರಮಿಸಬೇಕು...


ಸೋಲಿಲ್ಲದ ಕಡಲಲೆಯಂತೆ ನೀ ಅಪ್ಪಬೇಕು

ಆ ಅಲೆಯಪ್ಪುವ ಕಿನಾರೆಯು ನಾನಾಗಬೇಕು

ಆ ಅಕ್ಕರೆಯ ಸಕ್ಕರೆಯಲಿ ನೀ ಜೇನಾಗಬೇಕು...


ಈ ದೇಹದ ಉಸಿರು ಎಂದಿಗು ನೀನಗಾಬೇಕು

ಸಾವಿಲ್ಲದ ಒಲವಿಗೆ ನೀನೇ ಕಾರಣವಾಗಬೇಕು

ಅನುಪಮ ಬದುಕು ನಮ್ಮದಾಗಬೇಕು...


ಬಾಡದ ಹೂವು ನಿನ್ನ ಹೂ ನಗುವಾಗಬೇಕು

ಆ ಹೊಳಪಿನ ನಗುವಿನಲ್ಲೇ ನಾ ನಲಿಯಬೇಕು

ಆ ಸೊಬಗಿನಲಿ ಜಗದ ಚೆಲುವೆ ನೀನಾಗಬೇಕು...


ನನ್ನ ಭಾವದ ನುಡಿಗಳಿಗೆ ನೀ ಆಧಾರವಾಗು

ನಿನ್ನ ಮೋಹದ ನೆರಳಿಗೆ ನಾ ಶರಣಾಗುವೆನು

ಹರುಷದಾ ಬಾಳಿಗೆ ನೀ ಸಾರಥಿಯಾಗು...


ದಿನಗಳು ಅನುರಾಗದ ಕಹಳೆಯಾಗಲಿ ಗೆಳತಿ

ಮನಗಳು ಆನಂದದ ಕಡಲಾಗಲಿ ಒಡತಿ

ದುಗುಡದ ಸಣ್ಣ ಬಿಂದುವು ಕಾಡದಿರಲಿ....


ನಿನ್ನ ನಗುವೇ ಚೆಲುವಿನ ಮಳೆಯಾಗಬೇಕು

ಅದರಲಿ ಮೈಮರೆತು ದಿನವು ನಾ ನಲಿಯಬೇಕು

ಚೆಲುವಿನ ಧಾರೆಯೇ ದಿನವೂ ನನ್ನದಾಗಬೇಕು...


ನಿನ್ನ ಕಣ್ಣೇ ಒಲವಿನ ಹೊಳಪಿನ ದೀಪವಾಗಬೇಕು

ಆ ಬೆಳಕಿನಲಿ ಪ್ರೇಮದ ಬಾಳು ನೀ ಬೆಳಗಬೇಕು

ಮಮತೆಯ ಹೂವಾಗಿ ದಿನವೂ ನೀ ನಗುತಿರು ಬಾ ಗೆಳತಿ..


ರಾಮಚಂದ್ರ ಸಾಗರ್


Wednesday, 16 December 2020

ದೀಪವಾಗು ಬಾ


ಹರುಷದ ಕಿರಣವೇ ನೀ ರವಿಯ ಗುಡಿಯಿಂದ

ಹೊನ್ನಿನ ತೇರಿನಲಿ ಹರಸಲು ಬಾ!


ಶುಭದ ಬೆಳಕೇ ನೀ ಬೆಳ್ಳಿಯ ಮೋಡದಂಚಿಂದ

ಜಗವನು ಬೆಳಗಲು ಉಲ್ಲಾಸದಿ ಬಾ!


ಸತ್ಕಾರದ ಕಾಂತಿಯೇ ನೀ ಅಭಿರಾಮದಾಗಸದಿಂದ

ಅಕ್ಕರೆಯ ಅರಮನೆಗೆ ದೀಪ್ತಿಯಾಗಲು ಬಾ!


ಸಂಭ್ರಮದ ಹೊಳಪೇ ನೀ ಮುಗಿಲ ಬಾಗಿಲಿನಿಂದ

ಮರುಧರೆಯ ಹಸಿರಾಗಿಸುವ ಚೇತನವಾಗಲು ಬಾ!


ಮುಂಜಾನೆಯ ರಶ್ಮಿಯೇ ನೀ ರಮ್ಯತೆಯ ತೇರಿನಿಂದ

ಲೋಕವೆಲ್ಲ ಸಂಚರಿಸುತಾ ಚೆಲುವಾಗಲು ಬಾ!


ಮೋಹದ ಬೆಳಕೇ ನೀ ಒಲವಿನ ಮಳೆಯಿಂದ

ಭುವಿಯೆಲ್ಲೆಡೆ ಪ್ರೀತಿಯ ಅಲೆಯಾಗಲು ಬಾ!


ಉಲ್ಲಾಸದ ಕಿರಣವೇ ನೀ ಉನ್ನತಿಕೆಯ ಗರಿಮೆಯಿಂದ

ಮನವೆಲ್ಲ ಅನುದಿನವು ಪಾವನವಾಗಿಸಲು ಬಾ!


ಹೃದಯದೊಲವೇ ನೀ ಕವಿಯ ಚಿತ್ತದಿಂದ

ಕಾಂತಿಯ ಕವಿತೆಯಾಗಿ ಎಂದಿಗೂ ಆರದ ದೀಪವಾಗು ಬಾ!


ರಚನೆ: ರಾಮಚಂದ್ರ ಸಾಗರ್

ಚಿತ್ರ ಕೃಪೆ: ಮಧುರ ವಿ ಆಚಾರ್


Tuesday, 8 December 2020

ನೋಡು ಬಾ ಗೆಳತಿ..


ಪ್ರೇಮದ ಹೂವು ಅರಳುತಿದೆ 

ನೋಡಲ್ಲಿ ಒಲುಮೆಯಾ ಗೆಳತಿ

ಪ್ರೀತಿಯ ಹೊಂಗಿರಣ ಮೂಡುತಿದೆ 

ನೋಡಲ್ಲಿ ನನ್ನೊಲವಿನ ರಾಣಿ..


ಮಂಜಿನ ಹನಿಗಳ ಸೊಬಗಿನಲಿ

ನಮ್ಮೀ ಬಿಂಬವು ಹೊಳೆಯುತಿದೆ

ತಿಳಿ ಸರೋವರದ ನೀರಿನಲಿ

ನಮ್ಮೀ ನಗುಮೊಗವು ಕಾಣುತಿದೆ..


ಹೂತೋಟದ ಬಣ್ಣದ ಚಿತ್ತಾರದಲಿ

ನಮ್ಮೀ ಮನವು ನಲಿಯುತಿದೆ

ಸೌಂದರ್ಯದ ಬೃಂದಾವನದಲಿ

ನೆಲೆಯಾಗಲು ಬಾಳೆಲ್ಲಾ ಬೇಡುತಿದೆ..


ನಗುವ ಮಲ್ಲಿಗೆಯ ಸಿಂಗಾರದಲಿ

ಮನ ರಮಿಸುವ ವರವಿದೆ ಗೆಳತಿ

ಘಮಿಸುವ ಮಲ್ಲಿಗೆಯ ಸೌರಭದಲಿ

ನಮ್ಮೊಲವು ಕಂಪಿಸುವ ಸುಳಿಯಿದೆ..


ಹರಿವ ತೊರೆಯ ಹರುಷದಲಿ

ಕಾಡುವುದು ನಮ್ಮೊಲವ ಚೈತನ್ಯತಾನೆ..

ಸುಳಿದಾಡುವ ಸಿಹಿಗಾಳಿಯಲಿ

ಗುನುಗುವುದು ನಮ್ಮೊಲವ ಗೀತೆತಾನೆ..


ನೋಡಲ್ಲಿ ಓ ಗೆಳತಿ ಈ ಮುಂಜಾನೆಯಲಿ

ನಮ್ಮೊಲವ ಪ್ರೇಮದ ಹೂವು ಅರಳುತಿದೆ...


ರಾಮಚಂದ್ರ ಸಾಗರ್


Friday, 4 December 2020

ನಿನ್ನ ನಗುವಿನಲೆಯಿಂದಲೇ..


ನಿನ್ನ ನಗುವಿನಲೆಯಿಂದಲೇ ಅನುರಾಗದ ಸ್ವರಮೇಳವು ಹೊಮ್ಮುತಿರಲು

ನೀನೇನೆ ಗೆಳತಿ ಒಲವರಾಗದ ಜನನಿಯು..


ನಿನ್ನ ಸಹವಾಸದಿಂದಲೇ ಉಲ್ಲಾಸದ ಬದುಕು ಜೊತೆಯಾಗಿರಲು

ನೀನೇನೆ ಗೆಳತಿ ಪ್ರೇಮೋಲ್ಲಾಸದ ಭವ್ಯ ಸೆಲೆಯು..


ನಿನ್ನ ಪ್ರೀತಿಯಿಂದಲೇ ಒಲವಿನ ಯಾತ್ರೆಯು ಕೈಗೂಡುತಿರಲು

ನೀನೇನೆ ಗೆಳತಿ ಒಲುಮೆಯಾ ದಿವ್ಯ ಸಾನಿಧ್ಯವು..


ನಿನ್ನ ಮಮತೆಯಿಂದಲೇ ಮಮಕಾರದ ಮಂದಿರವು ನೆಲೆಯಾಗಿರಲು

ನೀನೇನೆ ಗೆಳತಿ ಮೋಹದ ಕುರುಹೂ..


ನಿನ್ನ ಕಣ್ಣ ಬೆಳಕಿಂದಲೇ ಪ್ರೇಮದೀವಿಗೆಯು ಬೆಳಗುತಿರಲು

ನೀನೇನೆ ಗೆಳತಿ ಪ್ರೀತಿಯ ಕಿರಣವು..


ನಿನ್ನ ನಗುವ ವದನದ ಸೌಜನ್ಯದ ಸೊಬಗು ಇಮ್ಮಡಿಸುತಿರಲು

ನೀನೇನೆ ಗೆಳತಿ ಚಂದಿರನದೆಗೆ ಕನಸಾದವಳು..


ನಿನ್ನ ಪ್ರೇರಣೆಯ ನುಡಿಗಳನೇ ನನ್ನೆದೆಯು ಬೇಡುತಿರಲು

ನೀನೇನೆ ಗೆಳತಿ ಹೃದಯಕೆ ಹಗಲಿರುಳು ಉಸಿರಾದವಳು


ನಿನ್ನ ಸಂಪ್ರೀತಿಯ ಸರೋವರದ ತಂಪಲೆಯು ಬೀಸುತಿರಲು

ನೀನೇನೆ ಗೆಳತಿ ಈ ಬಾಳಿಗೆ ಧನ್ಯತೆಯ ಹಿತಧಾರೆಯು..


ನಿನ್ನ ವಾತ್ಸಲ್ಯದ ಪಾವನ ಮಡಿಲೆ ಸುಯೋಗದ ಗುಡಿಯಾಗಿರಲು

ನೀನೇನೆ ಗೆಳತಿ ವಾಂಛಲ್ಯದ ಆಗಸವು...


ನಿನ್ನ ನಗುವಿನ ಸೌಗಂಧದ ಲೇಪದ ಇಂಪಿಂದ ಹೃದಯ ಕಂಪಿಸುತಿರಲು

ನೀನೇಗೆ ಗೆಳತಿ ಒಲವಿನ ಹೂಗಂಧವು..


ರಚನೆ: ರಾಮಚಂದ್ರ ಸಾಗರ್