ಗೆಳತಿ..
ನೀ ಕದಲದೆ ಗೆಳತಿ ನನ್ನೆಡೆಗೇ ನೋಡಬೇಕು
ಪ್ರೀತಿಯ ಹಾಡೊಂದನು ನಾ ಬರೆಯಬೇಕು
ನೀ ಸಹಕರಿಸಿ ಈ ಹೃದಯಕೆ ಹಾರೈಸಬೇಕು...
ಪ್ರೇಮದ ಸ್ವರವೊಂದನು ನಾ ಪೋಣಿಸಬೇಕು
ನೀ ಕಣ್ಣಲ್ಲೇ ಹೂಬಾಣ ನನ್ನೆದೆಗೆ ತೂರಬೇಕು
ಆ ಕ್ಷಣಕೆ ನಾ ನಿನ್ನಲೇ ಕ್ಷಣ ಕ್ಷಣವೂ ಬೇಡಬೇಕು..
ಮೆಲುನಗುತ ಅನುದಿನವು ನೀ ನನ್ನ ಕೊಲ್ಲಬೇಕು
ನಿನ್ನೊಲವ ಸುಳಿಯಲಿ ನಾ ನರಳಬೇಕು
ನಿನ್ನ ಬಂಧನದ ಸವಿಯನು ನಾ ಸಂಭ್ರಮಿಸಬೇಕು...
ಸೋಲಿಲ್ಲದ ಕಡಲಲೆಯಂತೆ ನೀ ಅಪ್ಪಬೇಕು
ಆ ಅಲೆಯಪ್ಪುವ ಕಿನಾರೆಯು ನಾನಾಗಬೇಕು
ಆ ಅಕ್ಕರೆಯ ಸಕ್ಕರೆಯಲಿ ನೀ ಜೇನಾಗಬೇಕು...
ಈ ದೇಹದ ಉಸಿರು ಎಂದಿಗು ನೀನಗಾಬೇಕು
ಸಾವಿಲ್ಲದ ಒಲವಿಗೆ ನೀನೇ ಕಾರಣವಾಗಬೇಕು
ಅನುಪಮ ಬದುಕು ನಮ್ಮದಾಗಬೇಕು...
ಬಾಡದ ಹೂವು ನಿನ್ನ ಹೂ ನಗುವಾಗಬೇಕು
ಆ ಹೊಳಪಿನ ನಗುವಿನಲ್ಲೇ ನಾ ನಲಿಯಬೇಕು
ಆ ಸೊಬಗಿನಲಿ ಜಗದ ಚೆಲುವೆ ನೀನಾಗಬೇಕು...
ನನ್ನ ಭಾವದ ನುಡಿಗಳಿಗೆ ನೀ ಆಧಾರವಾಗು
ನಿನ್ನ ಮೋಹದ ನೆರಳಿಗೆ ನಾ ಶರಣಾಗುವೆನು
ಹರುಷದಾ ಬಾಳಿಗೆ ನೀ ಸಾರಥಿಯಾಗು...
ದಿನಗಳು ಅನುರಾಗದ ಕಹಳೆಯಾಗಲಿ ಗೆಳತಿ
ಮನಗಳು ಆನಂದದ ಕಡಲಾಗಲಿ ಒಡತಿ
ದುಗುಡದ ಸಣ್ಣ ಬಿಂದುವು ಕಾಡದಿರಲಿ....
ನಿನ್ನ ನಗುವೇ ಚೆಲುವಿನ ಮಳೆಯಾಗಬೇಕು
ಅದರಲಿ ಮೈಮರೆತು ದಿನವು ನಾ ನಲಿಯಬೇಕು
ಚೆಲುವಿನ ಧಾರೆಯೇ ದಿನವೂ ನನ್ನದಾಗಬೇಕು...
ನಿನ್ನ ಕಣ್ಣೇ ಒಲವಿನ ಹೊಳಪಿನ ದೀಪವಾಗಬೇಕು
ಆ ಬೆಳಕಿನಲಿ ಪ್ರೇಮದ ಬಾಳು ನೀ ಬೆಳಗಬೇಕು
ಮಮತೆಯ ಹೂವಾಗಿ ದಿನವೂ ನೀ ನಗುತಿರು ಬಾ ಗೆಳತಿ..
ರಾಮಚಂದ್ರ ಸಾಗರ್
