ಹರುಷದ ಕಿರಣವೇ ನೀ ರವಿಯ ಗುಡಿಯಿಂದ
ಹೊನ್ನಿನ ತೇರಿನಲಿ ಹರಸಲು ಬಾ!
ಶುಭದ ಬೆಳಕೇ ನೀ ಬೆಳ್ಳಿಯ ಮೋಡದಂಚಿಂದ
ಜಗವನು ಬೆಳಗಲು ಉಲ್ಲಾಸದಿ ಬಾ!
ಸತ್ಕಾರದ ಕಾಂತಿಯೇ ನೀ ಅಭಿರಾಮದಾಗಸದಿಂದ
ಅಕ್ಕರೆಯ ಅರಮನೆಗೆ ದೀಪ್ತಿಯಾಗಲು ಬಾ!
ಸಂಭ್ರಮದ ಹೊಳಪೇ ನೀ ಮುಗಿಲ ಬಾಗಿಲಿನಿಂದ
ಮರುಧರೆಯ ಹಸಿರಾಗಿಸುವ ಚೇತನವಾಗಲು ಬಾ!
ಮುಂಜಾನೆಯ ರಶ್ಮಿಯೇ ನೀ ರಮ್ಯತೆಯ ತೇರಿನಿಂದ
ಲೋಕವೆಲ್ಲ ಸಂಚರಿಸುತಾ ಚೆಲುವಾಗಲು ಬಾ!
ಮೋಹದ ಬೆಳಕೇ ನೀ ಒಲವಿನ ಮಳೆಯಿಂದ
ಭುವಿಯೆಲ್ಲೆಡೆ ಪ್ರೀತಿಯ ಅಲೆಯಾಗಲು ಬಾ!
ಉಲ್ಲಾಸದ ಕಿರಣವೇ ನೀ ಉನ್ನತಿಕೆಯ ಗರಿಮೆಯಿಂದ
ಮನವೆಲ್ಲ ಅನುದಿನವು ಪಾವನವಾಗಿಸಲು ಬಾ!
ಹೃದಯದೊಲವೇ ನೀ ಕವಿಯ ಚಿತ್ತದಿಂದ
ಕಾಂತಿಯ ಕವಿತೆಯಾಗಿ ಎಂದಿಗೂ ಆರದ ದೀಪವಾಗು ಬಾ!
ರಚನೆ: ರಾಮಚಂದ್ರ ಸಾಗರ್
ಚಿತ್ರ ಕೃಪೆ: ಮಧುರ ವಿ ಆಚಾರ್
