Friday, 4 December 2020

ನಿನ್ನ ನಗುವಿನಲೆಯಿಂದಲೇ..


ನಿನ್ನ ನಗುವಿನಲೆಯಿಂದಲೇ ಅನುರಾಗದ ಸ್ವರಮೇಳವು ಹೊಮ್ಮುತಿರಲು

ನೀನೇನೆ ಗೆಳತಿ ಒಲವರಾಗದ ಜನನಿಯು..


ನಿನ್ನ ಸಹವಾಸದಿಂದಲೇ ಉಲ್ಲಾಸದ ಬದುಕು ಜೊತೆಯಾಗಿರಲು

ನೀನೇನೆ ಗೆಳತಿ ಪ್ರೇಮೋಲ್ಲಾಸದ ಭವ್ಯ ಸೆಲೆಯು..


ನಿನ್ನ ಪ್ರೀತಿಯಿಂದಲೇ ಒಲವಿನ ಯಾತ್ರೆಯು ಕೈಗೂಡುತಿರಲು

ನೀನೇನೆ ಗೆಳತಿ ಒಲುಮೆಯಾ ದಿವ್ಯ ಸಾನಿಧ್ಯವು..


ನಿನ್ನ ಮಮತೆಯಿಂದಲೇ ಮಮಕಾರದ ಮಂದಿರವು ನೆಲೆಯಾಗಿರಲು

ನೀನೇನೆ ಗೆಳತಿ ಮೋಹದ ಕುರುಹೂ..


ನಿನ್ನ ಕಣ್ಣ ಬೆಳಕಿಂದಲೇ ಪ್ರೇಮದೀವಿಗೆಯು ಬೆಳಗುತಿರಲು

ನೀನೇನೆ ಗೆಳತಿ ಪ್ರೀತಿಯ ಕಿರಣವು..


ನಿನ್ನ ನಗುವ ವದನದ ಸೌಜನ್ಯದ ಸೊಬಗು ಇಮ್ಮಡಿಸುತಿರಲು

ನೀನೇನೆ ಗೆಳತಿ ಚಂದಿರನದೆಗೆ ಕನಸಾದವಳು..


ನಿನ್ನ ಪ್ರೇರಣೆಯ ನುಡಿಗಳನೇ ನನ್ನೆದೆಯು ಬೇಡುತಿರಲು

ನೀನೇನೆ ಗೆಳತಿ ಹೃದಯಕೆ ಹಗಲಿರುಳು ಉಸಿರಾದವಳು


ನಿನ್ನ ಸಂಪ್ರೀತಿಯ ಸರೋವರದ ತಂಪಲೆಯು ಬೀಸುತಿರಲು

ನೀನೇನೆ ಗೆಳತಿ ಈ ಬಾಳಿಗೆ ಧನ್ಯತೆಯ ಹಿತಧಾರೆಯು..


ನಿನ್ನ ವಾತ್ಸಲ್ಯದ ಪಾವನ ಮಡಿಲೆ ಸುಯೋಗದ ಗುಡಿಯಾಗಿರಲು

ನೀನೇನೆ ಗೆಳತಿ ವಾಂಛಲ್ಯದ ಆಗಸವು...


ನಿನ್ನ ನಗುವಿನ ಸೌಗಂಧದ ಲೇಪದ ಇಂಪಿಂದ ಹೃದಯ ಕಂಪಿಸುತಿರಲು

ನೀನೇಗೆ ಗೆಳತಿ ಒಲವಿನ ಹೂಗಂಧವು..


ರಚನೆ: ರಾಮಚಂದ್ರ ಸಾಗರ್


Thursday, 3 December 2020

ಘನ ನಾಯಕ


ಸರ್ವರಿಗೂ ಕೀರ್ತನಾ ಸಾಹಿತ್ಯದ ಹರಿಕಾರ ಭಕ್ತ ಕನಕದಾಸರ ಜಯಂತ್ಯೋತ್ಸವದ ಶುಭಾಷಯಗಳು..

ಈ ಪುಣ್ಯ ಪುರುಷರ ನೆನೆಯುತ್ತಾ ನಾ ರಚಿಸಿದ ಕವಿತೆ ಘನ ನಾಯಕ..

ಘನ ನಾಯಕ

ಕೀರ್ತನಾ ಸಾಹಿತ್ಯದ ಹರಿಕಾರ

ಬಾಂಧವ್ಯ ಬೆಸೆದ ದಂಡನಾಯಕ

ದಹಿಸಲು ಕುಲ ಕುಲದ ವೈಷಮ್ಯ

ಸಮರ ಸಾರಿದ ಘನ ನಾಯಕ


ಭಕ್ತಿ ಪಂಥದ ಭವ್ಯ ಸಾರಥಿ

ದಾಸ ಪಂಥದ ದಿವ್ಯ ಕೀರುತಿ

ವ್ಯಾಸರಾಯರ ಹೃದಯದ ಒಡೆಯ

ಮಾಧ್ವ ತತ್ವಶಾಸ್ತ್ರ ಪಾರಾಂಗತ


ಭಕ್ತಿಯಲಿ ಹರಿಯ ತಿರುಗಿಸಿದ ದಾಸ

ಕಾಗಿನೆಲೆಯಾದಿ ಕೇಶವನಾರಾಧಕ

ಆರಾಧನೆಯ ಸಂಪನ್ನ ನಾಯಕ

ದಾಸ್ಯ ದಹಿಸಿದ ಹಠನಾಯಕ


ಮೋಹನ ತರಂಗಿಣಿ ಕಾವ್ಯದ ಜನಕ

ನಳಚರಿತ್ರೆ ಶೃಂಗಾರದ ಚಿತ್ರಕ

ರಾಮಧಾನ್ಯ ಚರಿತೆಯಲಿ ರಾಗಿಯ

ಯೋಗ ಬೋಧಿಸಿದ ದಾರ್ಶನಿಕ

ಕನ್ನಡ ಸಾಹಿತ್ಯ ಸಿರಿಯಾಗಿಸಿದ ನಾಯಕ


ಶಾಂತಿ ಪ್ರೀತಿ ಬೆಳಗಿದ ನಾಯಕ

ಬಾಡಾ ಗ್ರಾಮದ ನಮ್ಮ ತಿಮ್ಮಪ್ಪ ನಾಯಕ

ಸಾಮರಸ್ಯದ ಬದುಕು ಸಾರುತಾ

ದಾರಿದ್ರ್ಯ ದಹಿಸಿದರು ನಾಡಿನಗಲ


ಹೆಸರಾದರು ಕನಕದಾಸರೆಂದು

ಕುಲ ಕುಲಗಳ ಬೆಸೆದವರೆಂದು


ರಾಮಚಂದ್ರ ಸಾಗರ್  

Friday, 6 November 2020

ನೆನಪು..


ಕರಿಮುಗಿಲ ಬಾನಿನ ಮಳೆಧಾರೆಯ ಗರ್ಭದೊಳು

ಹನಿಗಳು ಭುವಿಯ ಮುತ್ತಿಕ್ಕುವಾಗ ಕಾಡುವುದು ನಿನ್ನದೇ ನೆನಪು


ಸಂಪಿಗೆ ಮೊಗ್ಗೆಯೊಡೆದು ಘಮಿಸುತ

 ಚೆಲ್ಲುವ ಕಂಪಿನೊಳಗು

ಇಂಪಾಗಿ ಕಂಪಿಸುತಿದೆ ನೀನೆನ್ನುವ ಸ್ನೇಹದ ಪರಿಮಳದ ನೆನಪು


ಮುಂಜಾನೆ ಹಸಿರೆಲೆಯಲಿ ಪಳಿಸುವ ಹನಿಗಳ ಹೊಳಪಿನೊಳು

ನವ್ಯತೆ ಬೆಳಗಿ ದಿನಕೆ ಸ್ವಾಗತಿಸುವ ಪರಿಯಲಿದೆ ನಿನದೆ ನೆನಪು


ದೇವ ಮಂದಿರ ಗಂಟೆಯ ನಾದದಲೊಮ್ಮಿದ ಸ್ವರಮೇಳದೊಳು

ನಿರ್ಮಲ ಭಾವದ ಪಾವಿತ್ರತೆ ಮೂಡಿಸಿದ ನಿನ್ನಯ ನೆನಪು


ಬಾಯಾರಿದ ತನುವಿಗೆ ಜೀವ ಚೇತನದ ಸುಜಲದೊಳು

ದಣಿವಾರಿದ ಮನದ ಕೃತಜ್ಞತೆಯಲಿ ಕಾಡಿದ ನಿನ್ನಯ ನೆನಪು


ಇನನ ಹೊಂಗಿರಣದ ತೇರಿನ ಸಡಗರದ ಚಿತ್ತಾರದೊಳು

ಕನುಸಗಳಿಗೆ ರಂಗು ತುಂಬಿದ ನಿನ್ನದೇ ಸಾನ್ನಿಧ್ಯದ ನೆನಪು


ದೆಸೆತಪ್ಪಿದ ನೌಕೆಯಲಿ ಬೇಡುತ ಕುಳಿತ ಮನದೊಳು

ಸಂತೈಸುತ ಜೊತೆಯಾಗುವ ನಿನ್ನಯ ನುಡಿಗಳ ನೆನಪು


ಅರುಣೋದಯದ ನಿಬ್ಬೆರಗಿನಲಿ ಕೆಂಪಾದ ಕೆಂದಾವರೆಯೊಳು

ಜಗೆವಲ್ಲ ಚೆಲುವಾಗಿಸುವ ಸಂಭ್ರಮದೊಳು ನಿನ್ನದೇ ನೆನಪು


ಹೂಬನದ ಹೂಗಳ ಲಾಲಿತ್ಯದ ವೈಭವದ ಸೊಬಗಿನೊಳು

ನೀನೆನ್ನುವ ಕೋಮಲೆಯು ನೃತ್ಯವಾಡಿದ ಸವಿ ನೆನಪು


ಪ್ರೇಮ ಸರೋವರದ ತಂಪಲೆಯ ಸುಖದೊಳು

ಕಣ ಕಣವು ಪ್ರೇಮವಾಗಿಸುವ ಸೋಜಿಗದಲ್ಲಿದೆ ನಿನ್ನದೇ ನೆನಪು


ಸಜ್ಜನಿಕೆಯ ನಿನ್ನ ಕಾಲ್ಗೆಜ್ಜೆಯ ಅನುರಾಗದ ಮೇಳದೊಳು

ಒಲವಿನ ಬದುಕಿಗೆ ಸ್ವಾಗತಿಸುವ ನಿನ್ನ ಸೌಜನ್ಯರಾಗದ ನೆನಪು


ಸುಂದರ ಕನಸುಗಳು ಹುಟ್ಟುವ ಮನದ ಗೂಡಿನೊಳು

ನೀನೆನ್ನುವ ಪ್ರೇಮಾಮೃತಧಾರೆಯ ದಿವ್ಯತೆಯ ನೆನಪು


ಜಗೆದೆಲ್ಲ ನೋವನು ಗೆಲ್ಲುವ ಮನದಾಸೆಯ ಛಲದೊಳು

ನೀನೆನ್ನುವ ಜಯ ಕರುಣಿಸುವ ಒಲವದಾತೆಯ ನೆನಪು


ಹುಣ್ಣಿಮೆಯ ರಾತ್ರಿಯಲಿ ಬಳುಕುವ ನೈದಿಲೆಯ ಸೊಬಗಿನೊಳು

ನೀನೆನ್ನುವ ವೈಯ್ಯಾರಿಯದೇ ಬಿನ್ನಾಣದ ಮೋಡಿಯ ನೆನಪು


ತುಂಬು ಚಂದಿರನ ನಗುವಿನ ಸೌಂದರ್ಯದ ಸಿರಿತನದೊಳು

ನೀನೆನ್ನುವ ಅನುಪಮ ಚೆಲುವೆಯ ಪರಮಾಪ್ತತೆಯ ನೆನಪು


ನಿದಿರೆ ಬಾರದ ರಾತ್ರಿಯಲಿ ಕಾಡುವ ಕನಸಿನೊಳು

ನೀನೆನ್ನುವ ಬಲ್ಲಿದೆ ಒಲವ ಹೂವಾಗಿ ಅರಳಿದ ನೆನಪು


ಮಲ್ಲಿಗೆಯ ಮಾಲೆಯ ಶ್ವೇತ ವರ್ಣದ ಪಾವನ ಭಾವದೊಳು

ನೀನೆನ್ನುವ ಗೆಳತಿಯ ಹೂಮನದ ಆಮಂತ್ರಣದ ನೆನಪು


ನಭದ ತಾರೆಗಳ ಉದಿತ ಬೆಳಕಿನ ಶೋಭೆಯ ಸೊಬಗಿನೊಳು

ನಿನ್ನ ಕಣ್ಣ ಕಾಂತಿಯ ಪ್ರೇರಣೆಯ ಹೊಳಪಿನ ನೆನಪು


ಸಾಗರದೆಡೆ ಓಡುವ ನದಿಯ ಉಲ್ಲಾಸದ ಮೆರವಣಿಗೆಯೊಳು

ನಿನ್ನ ಒಲವು ನನ್ನೆಡೆಗೆ ಹಾತೊರೆವ ಕನಸಿನ ನೆನಪು...


ಕ್ಷಣ ಕ್ಷಣವು ಮಿಡಿವ ಹೃದಯದ ದನಿಯೊಳಗು

ನೀ ಜೊತೆಯಾಗುವುದು ಸತ್ಯವೆನ್ನುತಾ ಕಾದ ಘಳಿಗೆಯ ನೆನಪು..


ರಾಮಚಂದ್ರ ಸಾಗರ್


Monday, 2 November 2020

ನೋವೆ ವರವೇನು?


ನಿನ್ನ ಸಿಹಿ ನೆನಪುಗಳೇ ವಿಷದ ಕಡಲಾಗಿರಲು

ಈ ಹೃದಯಕೆ ನೋವೆ ಉಡುಗೊರೆಯು 


ನೀನಿರದ ಜಗವು ಶೂನ್ಯವು ಎನಿಸುತಿರಲು

ಈ ಬಾಳಿಗೆ ಇನ್ನು ಇಹುದೇನು ಖುಷಿಯು? 


ಪ್ರೀತಿಯ ಹಾದಿಯು ವಿರಸದ ಮುಳ್ಳಾಗಿರಲು

ಈ ಜೀವಕೆ ಹೆಜ್ಜೆಯನಿಡುವುದು ಸುಳ್ಳಾಗಿಹುದು


ಕನಸಿನ ಬದುಕು ಸುಳ್ಳೆಂದು ದಿಟವಾಗಿರಲು

ಹುಸಿ ನಗುವಿನ ಮುಖದಲಿ ಕಹಿಯೆ ಕವಿಸಿದೆ 


ಸುರಿವ ವಿರಹದ ಮಳೆಯಲಿ ನಾ ಸುಡುತಿರುವ ವೇಳೆಯಲಿ

ಮನವೆಲ್ಲ ನೋವಿನ ಬೆಂಕಿಯಲಿ ಬೇಯುತಿದೆ 


ನಗುವುದನೆ ನಾ ಮರೆತು ಜೀವವೇ ಸೊರಗಿರಲು

ನೋವಿನಲಿ ತೋಯುವುದೇ ನಾ ಕಲಿಯುತಿರುವೆ 


ಬೆಳಗುವ ಬಾಳು ಕತ್ತಲಿನ ಗುಹೆಯಾಗಿ ಕಾಡುತಿರಲು

ನರಳುವುದೆ ನಿತ್ಯ ಹೃದಯಕೆ ಕೆಲಸವಾಗಿದೆ ಗೆಳೆಯಾ


ಬೇಸರವೇ ನನ್ನನು ಸುಳಿದಾಡುವ ಅಲೆಯಾಗಿರಲು

ಬಾಳಿನ ಸಡಗರವು ಬಾಡಿದ ಹೂವಾಗಿದೆ 


ನೆನಪುಗಳೆ ಹಗಲಿರುಳು ಕಾಡುವ ಕಂಬನಿಯಾಗಿರಲು

ಸುರಿವ ಕಂಬನಿಗಳೆ ನನಗೆ ಬಹುಮಾನವೇನು?


ಮೌನವೇ ಬದುಕಿಗೆ ಜೊತೆಯಾದ ವಿಧಿಯಾಗಿರಲು

ಸವಿ ಮಾತುಗಳು ಮೌನದಿ ಸಾಯುತಿರಲು ಖುಷಿಯೇನು?


ನಿನ್ನ ಸಿಹಿ ನೆನಪುಗಳೇ ವಿಷದ ಕಡಲಾಗಿರಲು

ಈ ಹೃದಯಕೆ ನೋವೆ ನೀ ನೀಡುವ ವರವೇನು ಗೆಳೆಯಾ?


ರಚನೆ: ರಾಮಚಂದ್ರ ಸಾಗರ್