ನಿನ್ನ ಸಿಹಿ ನೆನಪುಗಳೇ ವಿಷದ ಕಡಲಾಗಿರಲು
ಈ ಹೃದಯಕೆ ನೋವೆ ಉಡುಗೊರೆಯು
ನೀನಿರದ ಜಗವು ಶೂನ್ಯವು ಎನಿಸುತಿರಲು
ಈ ಬಾಳಿಗೆ ಇನ್ನು ಇಹುದೇನು ಖುಷಿಯು?
ಪ್ರೀತಿಯ ಹಾದಿಯು ವಿರಸದ ಮುಳ್ಳಾಗಿರಲು
ಈ ಜೀವಕೆ ಹೆಜ್ಜೆಯನಿಡುವುದು ಸುಳ್ಳಾಗಿಹುದು
ಕನಸಿನ ಬದುಕು ಸುಳ್ಳೆಂದು ದಿಟವಾಗಿರಲು
ಹುಸಿ ನಗುವಿನ ಮುಖದಲಿ ಕಹಿಯೆ ಕವಿಸಿದೆ
ಸುರಿವ ವಿರಹದ ಮಳೆಯಲಿ ನಾ ಸುಡುತಿರುವ ವೇಳೆಯಲಿ
ಮನವೆಲ್ಲ ನೋವಿನ ಬೆಂಕಿಯಲಿ ಬೇಯುತಿದೆ
ನಗುವುದನೆ ನಾ ಮರೆತು ಜೀವವೇ ಸೊರಗಿರಲು
ನೋವಿನಲಿ ತೋಯುವುದೇ ನಾ ಕಲಿಯುತಿರುವೆ
ಬೆಳಗುವ ಬಾಳು ಕತ್ತಲಿನ ಗುಹೆಯಾಗಿ ಕಾಡುತಿರಲು
ನರಳುವುದೆ ನಿತ್ಯ ಹೃದಯಕೆ ಕೆಲಸವಾಗಿದೆ ಗೆಳೆಯಾ
ಬೇಸರವೇ ನನ್ನನು ಸುಳಿದಾಡುವ ಅಲೆಯಾಗಿರಲು
ಬಾಳಿನ ಸಡಗರವು ಬಾಡಿದ ಹೂವಾಗಿದೆ
ನೆನಪುಗಳೆ ಹಗಲಿರುಳು ಕಾಡುವ ಕಂಬನಿಯಾಗಿರಲು
ಸುರಿವ ಕಂಬನಿಗಳೆ ನನಗೆ ಬಹುಮಾನವೇನು?
ಮೌನವೇ ಬದುಕಿಗೆ ಜೊತೆಯಾದ ವಿಧಿಯಾಗಿರಲು
ಸವಿ ಮಾತುಗಳು ಮೌನದಿ ಸಾಯುತಿರಲು ಖುಷಿಯೇನು?
ನಿನ್ನ ಸಿಹಿ ನೆನಪುಗಳೇ ವಿಷದ ಕಡಲಾಗಿರಲು
ಈ ಹೃದಯಕೆ ನೋವೆ ನೀ ನೀಡುವ ವರವೇನು ಗೆಳೆಯಾ?
ರಚನೆ: ರಾಮಚಂದ್ರ ಸಾಗರ್
