ಕರಿಮುಗಿಲ ಬಾನಿನ ಮಳೆಧಾರೆಯ ಗರ್ಭದೊಳು
ಹನಿಗಳು ಭುವಿಯ ಮುತ್ತಿಕ್ಕುವಾಗ ಕಾಡುವುದು ನಿನ್ನದೇ ನೆನಪು
ಸಂಪಿಗೆ ಮೊಗ್ಗೆಯೊಡೆದು ಘಮಿಸುತ
ಚೆಲ್ಲುವ ಕಂಪಿನೊಳಗು
ಇಂಪಾಗಿ ಕಂಪಿಸುತಿದೆ ನೀನೆನ್ನುವ ಸ್ನೇಹದ ಪರಿಮಳದ ನೆನಪು
ಮುಂಜಾನೆ ಹಸಿರೆಲೆಯಲಿ ಪಳಿಸುವ ಹನಿಗಳ ಹೊಳಪಿನೊಳು
ನವ್ಯತೆ ಬೆಳಗಿ ದಿನಕೆ ಸ್ವಾಗತಿಸುವ ಪರಿಯಲಿದೆ ನಿನದೆ ನೆನಪು
ದೇವ ಮಂದಿರದ ಗಂಟೆಯ ನಾದದಲೊಮ್ಮಿದ ಸ್ವರಮೇಳದೊಳು
ನಿರ್ಮಲ ಭಾವದ ಪಾವಿತ್ರತೆ ಮೂಡಿಸಿದ ನಿನ್ನಯ ನೆನಪು
ಬಾಯಾರಿದ ತನುವಿಗೆ ಜೀವ ಚೇತನದ ಸುಜಲದೊಳು
ದಣಿವಾರಿದ ಮನದ ಕೃತಜ್ಞತೆಯಲಿ ಕಾಡಿದ ನಿನ್ನಯ ನೆನಪು
ಇನನ ಹೊಂಗಿರಣದ ತೇರಿನ ಸಡಗರದ ಚಿತ್ತಾರದೊಳು
ಕನುಸಗಳಿಗೆ ರಂಗು ತುಂಬಿದ ನಿನ್ನದೇ ಸಾನ್ನಿಧ್ಯದ ನೆನಪು
ದೆಸೆತಪ್ಪಿದ ನೌಕೆಯಲಿ ಬೇಡುತ ಕುಳಿತ ಮನದೊಳು
ಸಂತೈಸುತ ಜೊತೆಯಾಗುವ ನಿನ್ನಯ ನುಡಿಗಳ ನೆನಪು
ಅರುಣೋದಯದ ನಿಬ್ಬೆರಗಿನಲಿ ಕೆಂಪಾದ ಕೆಂದಾವರೆಯೊಳು
ಜಗೆವಲ್ಲ ಚೆಲುವಾಗಿಸುವ ಸಂಭ್ರಮದೊಳು ನಿನ್ನದೇ ನೆನಪು
ಹೂಬನದ ಹೂಗಳ ಲಾಲಿತ್ಯದ ವೈಭವದ ಸೊಬಗಿನೊಳು
ನೀನೆನ್ನುವ ಕೋಮಲೆಯು ನೃತ್ಯವಾಡಿದ ಸವಿ ನೆನಪು
ಪ್ರೇಮ ಸರೋವರದ ತಂಪಲೆಯ ಸುಖದೊಳು
ಕಣ ಕಣವು ಪ್ರೇಮವಾಗಿಸುವ ಸೋಜಿಗದಲ್ಲಿದೆ ನಿನ್ನದೇ ನೆನಪು
ಸಜ್ಜನಿಕೆಯ ನಿನ್ನ ಕಾಲ್ಗೆಜ್ಜೆಯ ಅನುರಾಗದ ಮೇಳದೊಳು
ಒಲವಿನ ಬದುಕಿಗೆ ಸ್ವಾಗತಿಸುವ ನಿನ್ನ ಸೌಜನ್ಯರಾಗದ ನೆನಪು
ಸುಂದರ ಕನಸುಗಳು ಹುಟ್ಟುವ ಮನದ ಗೂಡಿನೊಳು
ನೀನೆನ್ನುವ ಪ್ರೇಮಾಮೃತಧಾರೆಯ ದಿವ್ಯತೆಯ ನೆನಪು
ಜಗೆದೆಲ್ಲ ನೋವನು ಗೆಲ್ಲುವ ಮನದಾಸೆಯ ಛಲದೊಳು
ನೀನೆನ್ನುವ ಜಯ ಕರುಣಿಸುವ ಒಲವದಾತೆಯ ನೆನಪು
ಹುಣ್ಣಿಮೆಯ ರಾತ್ರಿಯಲಿ ಬಳುಕುವ ನೈದಿಲೆಯ ಸೊಬಗಿನೊಳು
ನೀನೆನ್ನುವ ವೈಯ್ಯಾರಿಯದೇ ಬಿನ್ನಾಣದ ಮೋಡಿಯ ನೆನಪು
ತುಂಬು ಚಂದಿರನ ನಗುವಿನ ಸೌಂದರ್ಯದ ಸಿರಿತನದೊಳು
ನೀನೆನ್ನುವ ಅನುಪಮ ಚೆಲುವೆಯ ಪರಮಾಪ್ತತೆಯ ನೆನಪು
ನಿದಿರೆ ಬಾರದ ರಾತ್ರಿಯಲಿ ಕಾಡುವ ಕನಸಿನೊಳು
ನೀನೆನ್ನುವ ಬಲ್ಲಿದೆ ಒಲವ ಹೂವಾಗಿ ಅರಳಿದ ನೆನಪು
ಮಲ್ಲಿಗೆಯ ಮಾಲೆಯ ಶ್ವೇತ ವರ್ಣದ ಪಾವನ ಭಾವದೊಳು
ನೀನೆನ್ನುವ ಗೆಳತಿಯ ಹೂಮನದ ಆಮಂತ್ರಣದ ನೆನಪು
ನಭದ ತಾರೆಗಳ ಉದಿತ ಬೆಳಕಿನ ಶೋಭೆಯ ಸೊಬಗಿನೊಳು
ನಿನ್ನ ಕಣ್ಣ ಕಾಂತಿಯ ಪ್ರೇರಣೆಯ ಹೊಳಪಿನ ನೆನಪು
ಸಾಗರದೆಡೆ ಓಡುವ ನದಿಯ ಉಲ್ಲಾಸದ ಮೆರವಣಿಗೆಯೊಳು
ನಿನ್ನ ಒಲವು ನನ್ನೆಡೆಗೆ ಹಾತೊರೆವ ಕನಸಿನ ನೆನಪು...
ಕ್ಷಣ ಕ್ಷಣವು ಮಿಡಿವ ಹೃದಯದ ದನಿಯೊಳಗು
ನೀ ಜೊತೆಯಾಗುವುದು ಸತ್ಯವೆನ್ನುತಾ ಕಾದ ಘಳಿಗೆಯ ನೆನಪು..
ರಾಮಚಂದ್ರ ಸಾಗರ್
