Sunday, 1 November 2020

ಕನ್ನಡವೇ ಜಗವು

 


ಎಲ್ಲ ಕನ್ನಡದ ಮನಸ್ಸುಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಎಲ್ಲರ ಹೃದಯದಲ್ಲಿ ಕನ್ನಡವು ಅವರ ಬಾಳಿನುದ್ದಕ್ಕೂ ಸತ್ಕಾರದ ಹೊನಲಾಗಿ ಕಂಗೊಳಿಸಲಿ. ನವೆಂಬರ್ ಒಂದರಂದು ಮಾತ್ರವೇ ನೆಪಕ್ಕೆ ನಡೆಯುವ  ಸಂಭ್ರಮಾಚರಣೆಗಷ್ಟೇ ನಾವುಗಳು ಸೀಮಿತವಾಗಬಾರದು. ವರ್ಷದುದ್ದವೂ ಕನ್ನಡದ ಬಗೆಗಿನ ಕಾಳಜಿ, ಗೌರವ ಸದಾ ನಮ್ಮೆದೆಯಲಿ ಮೊಳಗಲಿ..ಆಗ ನಿಜವಾಗಿಯೂ ಕನ್ನಡದ  ಅಭಿವೃದ್ಧಿಯಾಗುತ್ತದೆ ಎನ್ನುವುದು ನನ್ನ ಸಣ್ಣ ಆಸೆ..


ಈ ಸುದಿನ ನಾನು "ಕನ್ನಡವೇ ಜಗವು" ಎನ್ನುವ ಕವಿತೆಯನ್ನು ಬರೆದಿರುವೆ ಬಂಧುಗಳೆ. ಕವಿತೆಯನ್ನು ಓದಿ ಹಾರೈಸಿ..


ಕನ್ನಡವೇ ಜಗವು


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು

ಕನ್ನಡವೇ ಅಮೃತವು ಕನ್ನಡವೇ ಸಂಪನ್ನವು

ಕನ್ನಡವೇ ಸಂಸ್ಕಾರವು ಕನ್ನಡವೇ ವೈಭವವು


ಕನ್ನಡವೇ ಸುಯೋಗವು ಕನ್ನಡವೇ ಸತ್ಕಾರವು

ಕನ್ನಡವೇ ಸಂಭ್ರಮವು ಕನ್ನಡವೇ ಸತ್ರವು

ಕನ್ನಡವೇ ನಿಶ್ಚಯವು ಕನ್ನಡವೇ ನಿಬ್ಬೆರಗು

ಕನ್ನಡವೇ ಬೆಳಕು ಕನ್ನಡವೇ ಬೆಡಗು


ಕನ್ನಡವೇ ಉಲ್ಲಾಸವು ಕನ್ನಡವೇ ಉನ್ನತಿಕೆಯು

ಕನ್ನಡವೇ ಸೌಖ್ಯವು ಕನ್ನಡವೇ ಸೌಂದರ್ಯವು

ಕನ್ನಡವೇ ಕಾರುಣ್ಯವು ಕನ್ನಡವೇ ಕಾರುಬಾರು

ಕನ್ನಡವೇ ಕನಕವು ಕನ್ನಡವೇ ನಾಕವು


ಕನ್ನಡವೇ ದಿವ್ಯತೆಯು ಕನ್ನಡವೇ ದಿಗಂತವು

ಕನ್ನಡವೇ ದಿಟವು ಕನ್ನಡವೇ ದೀವಟಿಗೆಯು

ಕನ್ನಡವೇ ಹುರುಳು ಕನ್ನಡವೇ ಬಲವು

ಕನ್ನಡವೇ ಅಮರವು ಕನ್ನಡವೇ ಜಗವು


ಕನ್ನಡಿಗನೆ ಪುನೀತನು ಕನ್ನಡಗನೆ ಸಜ್ಜನನು

ಕನ್ನಡಿಗನೆ ಉದಾರಿಯು ಕನ್ನಡಿಗನೆ ಉದ್ಧಾರಕನು

ಕನ್ನಡಿಗನೆ ಉದಾತ್ತನು ಕನ್ನಡಿಗನೆ ಉಚ್ಛ್ರಾಯನು

ಕನ್ನಡಿಗನೆ ಸೌಹಾರ್ದನು ಕನ್ನಡಿಗನೆ ಸೌಷ್ಠವನು


ಕನ್ನಡ ನುಡಿಯೆ ಸ್ವಾರಸ್ಯದ ದನಿಯು

ಕನ್ನಡ ನುಡಿಯೆ ಜ್ಞಾನದ ಸಿದ್ಧಿಯು

ಕನ್ನಡ ನುಡಿಯೆ ಪಾವನ ಸ್ವರವು

ಕನ್ನಡ ನುಡಿಯೆ ಹೃದಯಕೆ ಘನತೆಯು


ರಚನೆ: ರಾಮಚಂದ್ರ ಸಾಗರ್


Thursday, 29 October 2020

ನೀ ಮರೆತೆನೆಂದರೆ..


ನೀ ಮರೆತೆನೆಂದರೆ ಈ ಹೃದಯ ಮರೆಯುವುದೇನು 

ಪ್ರೀತಿಯ ಹಾದಿಯಲಿ ನೀ ಜೊತೆಯಾಗಿದ್ದು ಸುಳ್ಳೇನು? 


ನೊಂದು ಬೆಂದು ಕ್ಷಣ ಕ್ಷಣವು ನರಳುತಿಹೆನು ನಿತ್ಯ

ನೀ ಮರೆತೆನೆಂದರು ಸುಳ್ಳನೆನ್ನುವುದು ಈ ಮನವು ಸತ್ಯ


ಬ್ರಮೆಯ ಬದುಕಿನೊಳಗೆ ನಿನ್ನ ಮೋಹದ ಪಾಶದಲೆಯಲೆ

ಹುಸಿ ನಗುತ ಬಾಳಿನಲ್ಲಿ ಹೇಗೆ ಸಂತೈಸಲಿ ಈ ಹೃದಯಕೆ


ವಿಧಿಯಾಟದ ಬರಹವೋ ನನ್ನೊಲವು ನೀ ಮೆಚ್ಚಲಿಲ್ಲ

ಕಂಡ ಕನಸುಗಳೆಲ್ಲವು ಮಂಜಿನ ಹನಿಯಂತೆ ಕರಗಿತಲ್ಲ


ಸುಳಿದಾಡುವ ತಂಗಾಳಿಯೊಳಗೆ ಬಿಸಿಯುಸಿರು ಹೊಮ್ಮಿತಲ್ಲ

ಕನಸಿನಾ ಈ ಬಾಳಿನೊಳಗೆ ಕಣ್ಣೀರು ಮಳೆಯಾಯಿತಲ್ಲ


ನಿನ್ನನು ಮರೆತು ನಾ ಬಾಳೋದು ನೀ ಕಲಿಸದೆ ಹೋದೆಯಲ್ಲ

ನಿನ್ನ ನೆನಪುಗಳ ರಾಶಿಯಲ್ಲಿ ನನ್ನ ತಳ್ಳಿ ಮರೆಯಾದೆಯಲ್ಲ


ದಿಗಿಲೆದ್ದ ಹಾದಿಯಲಿ ಈ ಕಣ್ಣು ಸುಣ್ಣದಲಿ ಮುಳುಗಿತಲ್ಲ

ನಂಬಿದ ಪ್ರೀತಿಯು ಸುಳ್ಳೆಂದು ಹೃದಯ ಚೂರಾಯಿತಲ್ಲ


ಬೂದಿಯಾದ ಕನಸುಗಳಿಂದ ನಾ ಹೇಗೆ ಜೀವಿಸಲಿ ಜಗದಲಿ

ನೀನೆನ್ನುವ ವಿಷದ ಸುಳಿಗಾಳಿಯಿಂದ ನಾ ಹೇಗೆ ಬದುಕುಳಿಯಲಿ?


ನೀನೆನ್ನುವ ಮಾಯೆಯ ಸ್ಮರಣೆಯಿಂದ ನಾನೇಗೆ ಹೊರಬರಲಿ

ನೀ ನಲಿಸಿದ ದಿನಗಳು ಸುಳ್ಳೆನ್ನುವ ವರವು ಯಾರಲಿ ಬೇಡಲಿ?


ಒಲುಮೆಯಾ ಹಾದಿಯಲಿ ಬಹುದೂರ ನಗುತ ಬಂದವಳೆ

ಪಾವನ ಪ್ರೀತಿಯ ಕೊಲ್ಲದೇ ನೀ ಜೊತೆಯಾಗುವೆಯಾ ಒಲವೆ..?


ರಚನೆ: ರಾಮಚಂದ್ರ ಸಾಗರ್


Wednesday, 28 October 2020

ನೀನಲ್ಲವೇ ಗೆಳತಿ..


ಹೂಮನದ ಸೌರಭದಲಿ ಪ್ರೀತಿಯ ಸೌಗಂಧವ ಬಾಳಲಿ

ಕಂಪಿಸಿದ ಅನುಪಮ ಮಾಧುರಿಯು ನೀನಲ್ಲವೇ


ಕತ್ತಲೆಯ ಹಾದಿಯಲಿ ಕೈದೀಪವಾಗಿ ಬೆಳಗಿದವಳು

ಉಲ್ಲಾಸದ ಕಿರಣವಾಗಿ ದಾರಿಯಾದವಳು ನೀನಲ್ಲವೇ


ಮೋಹದ ಬದುಕಲಿ ಬತ್ತದ ಒಲವಿನ ನದಿಯಾದವಳು

ಸುಖವೇ ಮೈದುಂಬಿ ನನಗೊಲಿದವಳು ನೀನಲ್ಲವೇ


ಸದ್ದಿಲ್ಲದೇ ಹರಿವ ಝರಿಯಂತೆ ನಗುತ ಜೊತೆಯಾದವಳು

ಸೌಮ್ಯದ ನಡಿಗೆಯಲಿ ಸಜ್ಜನಿಕೆಯನು ಮೆರೆದವಳು ನೀನಲ್ಲವೇ


ಹಾಡುವ ತಾಳದಲಿ ಹರುಷದ ಸ್ವರವನು ಪೋಣಿಸಿದವಳು

ಸಂಗೀತದ ಅಲೆಯಲಿ ಮನ ನಲಿಸಿದ ನಲ್ಲೆಯು ನೀನಲ್ಲವೇ


ಬಳಲಿಕೆಯ ಜೀವದಲಿ ನವೋಲ್ಲಾಸದ ಚಿಲುಮೆಯಾದವಳು

ಜೀವದಾ ಸೆಲೆಯಾಗುತ ಹಿತವಾದವಳು ನೀನಲ್ಲವೇ


ಬರಡಾದ ಮನದಲಿ ಬಂಗಾರದ ಕನಸುಗಳ ಚೆಲ್ಲಿದವಳು

ಬಯಕೆಯ ಕಣಜದ ಒಡತಿಯು ಕೋಮಲೆ ನೀನಲ್ಲವೇ


ಯಾರಿಲ್ಲವೆನ್ನುವ ಕೊರಗನು ಕರಗಿಸಿದ ಕಾದಲೆಯು

ಸಂಪ್ರೀತಿಯ ಮಾಲೆಯನು ಕರುಣಿಸಿದ ಕನ್ನಿಕೆಯು ನೀನಲ್ಲವೇ


ನವ್ಯತೆಯ ಬಾಳಿಗೆ ವಿಲಾಸತೆಯ ನಗುವಿನಲಿ ಕರೆದವಳು

ಸತ್ಕಾರದ ಶರಧಿಯ ಅಲೆಯಾಗಿ ಅಪ್ಪಿದವಳು ನೀನಲ್ಲವೇ


ಶಶಿ ತುಂಬಿದ ರಾತ್ರಿಯಲಿ ತಂಗಾಳಿಯಂತೆ ರಮಿಸಿದವಳು

ಬಯಸಿದ ಪ್ರೇಮಿಯ ಮನಕೆ ಅಮೃತವಾದವಳು ನೀನಲ್ಲವೇ


ರಚನೆ: ರಾಮಚಂದ್ರ ಸಾಗರ್


Tuesday, 27 October 2020

ನೆನಪಿದೆಯಾ ಗೆಳತಿ...???


ಮುಸ್ಸಂಜೆ ರಂಗಲ್ಲಿ ನಾವಿಬ್ಬರು ಸೇರಿ ಒಂದಾಗಿ ನಲಿದಿದ್ದು ನೆನಪಿದೆಯಾ
ಕಡಲ ತೀರದಲ್ಲಿ ಕಣ್ಣೋಟದ ಕಾಂತಿಯಲಿ ಅನುರಾಗವು ಅರಳಿದ್ದು ನೆನಪಿದೆಯಾ

ಓಡುವ ಚಂದಿರನ ನೋಡುತ್ತಾ ನಾವಿಬ್ಬರು ಹೂಬನದಲ್ಲಿ ಸಾಗಿದ್ದು ನೆನಪಿದೆಯಾ
ಬೆಳದಿಂಗಳ ಬೆಳಕಲ್ಲಿ ಶ್ವೇತ ನೈದಿಲೆಯು ನಿನ್ನನ್ನೇ ಕೆಣಕಿತ್ತು ನೆನಪಿದೆಯಾ

ತಂಗಾಳಿಯ ಹವೆಯಲಿ ಬಿಸಿ ಮತ್ತೊಂದನ್ನು ನೀಡಿ ನೀ ಮೆತ್ತನೆ ಓಡಿದ್ದು ನೆನಪಿದೆಯಾ
ಖಾಲಿ ಮನದಲ್ಲಿ ಸವಿ ಕನಸುಗಳ ರಂಗೇರಿಸಿ ನೀ ಶೃಂಗಾರದ ರಥವಾಗಿದ್ದು ನೆನಪಿದೆಯಾ

ಮಧು ಪಾತ್ರೆಯ ಜೇನನ್ನು ನಾವಿಬ್ಬರು ಸೇರಿ ಒಂದಾಗಿ  ಹೀರಿದ್ದು  ನೆನಪಿದೆಯಾ
ಮನೋಗತ ಒಲವ ಮಹಲಿನಲಿ ದಿನಗಳನು ನಿಮಿಷದಂತೆ ಕಳೆದಿದ್ದು ನೆನಪಿದೆಯಾ

ಬಣ್ಣಗಳ ಚಿತ್ತಾರದಲ್ಲಿ ನಾವಿಬ್ಬರು ಒಂದಾಗಿ ಬಣ್ಣದ ಕನಸುಗಳ ಕಂಡಿದ್ದು ನೆನಪಿದೆಯಾ
ಪಿಸುಮಾತುಗಳ ಸಲ್ಲಾಪದಲ್ಲಿ ನಾವಿಬ್ಬರು ಪುಳಕಿತರಾಗಿ ತುಂಟಾಟವಾಡಿದ್ದು ನೆನಪಿದೆಯಾ

ನಭದ ತಾರೆಗಳನು ಎಣಿಸುತಾ ತಂಪಿರುಳನು ಕರಗಿಸಿದ್ದು ನೆನಪಿದೆಯಾ
ಒಲವಿನ ಕಾವ್ಯಕೆ ಪದಗಳು ಮೋಹದಿ ಪೋಣಿಸಿದ್ದು ನೆನಪಿದೆಯಾ

ನನ್ನೆದೆಯಲಿ ದನಿಸುವ ನಿನ್ನದೇ ಹೆಸರನು ನೀ ಆಲಿಸುತಾ ಅಪ್ಪಿದ್ದು ನೆನಪಿದೆಯಾ
ನನ್ನೆದೆಯ ಅಂಗಳದಲಿ ನಿನ್ನೊಲುಮೆಯ ಹೂ ಅರಳಿಸಿದ್ದು ನೆನಪಿದೆಯಾ

ನಿನ್ನ ಬಾಹುಬಂಧನದಲಿ ಸಂತೈಸುತ ನೀ ಸೌಮ್ಯದ ನಗುವು ಚೆಲ್ಲಿದ್ದು ನೆನಪಿದೆಯಾ
ನನ್ನ ಯಾತನೆಯೆನ್ನುವ ಭ್ರಮೆಯನು ನೀ ಸೌಜನ್ಯದಿ ಇತಿಹಾಡಿದ್ದು ನೆನಪಿದೆಯಾ

ಪ್ರೇಮದ ಹಂದರದಲ್ಲಿ ನಾವಿಬ್ಬರು ಒಮ್ಮನದಿ ಒಂದಾಗಿದ್ದು ನೆನಪಿದೆಯಾ
ಕ್ಷೇಮದ ಹಾದಿಯಲ್ಲಿ ಬಾಳಿನುದ್ದಕೂ ಒಂದಾಗುವ ವಚನವು ನೆನಪಿದೆಯಾ

ನೆನಪಾದರೆ ಅದುವೇ ಅಮೃತವು ನೀ ಜೊತೆಯಾದರೆ ಅದುವೇ ಸಂಭ್ರಮವು
ನೀ ಮರೆತರೆ ಅದುವೇ ಶಾಪವು ನೀ ಮರೆತರೆ ಅದುವೆ ವಿಷವು 
ನೀ ಮರೆಯದಿರು ಒಲವೆ..

ರಾಮಚಂದ್ರ ಸಾಗರ್