Tuesday, 27 October 2020

ನೆನಪಿದೆಯಾ ಗೆಳತಿ...???


ಮುಸ್ಸಂಜೆ ರಂಗಲ್ಲಿ ನಾವಿಬ್ಬರು ಸೇರಿ ಒಂದಾಗಿ ನಲಿದಿದ್ದು ನೆನಪಿದೆಯಾ
ಕಡಲ ತೀರದಲ್ಲಿ ಕಣ್ಣೋಟದ ಕಾಂತಿಯಲಿ ಅನುರಾಗವು ಅರಳಿದ್ದು ನೆನಪಿದೆಯಾ

ಓಡುವ ಚಂದಿರನ ನೋಡುತ್ತಾ ನಾವಿಬ್ಬರು ಹೂಬನದಲ್ಲಿ ಸಾಗಿದ್ದು ನೆನಪಿದೆಯಾ
ಬೆಳದಿಂಗಳ ಬೆಳಕಲ್ಲಿ ಶ್ವೇತ ನೈದಿಲೆಯು ನಿನ್ನನ್ನೇ ಕೆಣಕಿತ್ತು ನೆನಪಿದೆಯಾ

ತಂಗಾಳಿಯ ಹವೆಯಲಿ ಬಿಸಿ ಮತ್ತೊಂದನ್ನು ನೀಡಿ ನೀ ಮೆತ್ತನೆ ಓಡಿದ್ದು ನೆನಪಿದೆಯಾ
ಖಾಲಿ ಮನದಲ್ಲಿ ಸವಿ ಕನಸುಗಳ ರಂಗೇರಿಸಿ ನೀ ಶೃಂಗಾರದ ರಥವಾಗಿದ್ದು ನೆನಪಿದೆಯಾ

ಮಧು ಪಾತ್ರೆಯ ಜೇನನ್ನು ನಾವಿಬ್ಬರು ಸೇರಿ ಒಂದಾಗಿ  ಹೀರಿದ್ದು  ನೆನಪಿದೆಯಾ
ಮನೋಗತ ಒಲವ ಮಹಲಿನಲಿ ದಿನಗಳನು ನಿಮಿಷದಂತೆ ಕಳೆದಿದ್ದು ನೆನಪಿದೆಯಾ

ಬಣ್ಣಗಳ ಚಿತ್ತಾರದಲ್ಲಿ ನಾವಿಬ್ಬರು ಒಂದಾಗಿ ಬಣ್ಣದ ಕನಸುಗಳ ಕಂಡಿದ್ದು ನೆನಪಿದೆಯಾ
ಪಿಸುಮಾತುಗಳ ಸಲ್ಲಾಪದಲ್ಲಿ ನಾವಿಬ್ಬರು ಪುಳಕಿತರಾಗಿ ತುಂಟಾಟವಾಡಿದ್ದು ನೆನಪಿದೆಯಾ

ನಭದ ತಾರೆಗಳನು ಎಣಿಸುತಾ ತಂಪಿರುಳನು ಕರಗಿಸಿದ್ದು ನೆನಪಿದೆಯಾ
ಒಲವಿನ ಕಾವ್ಯಕೆ ಪದಗಳು ಮೋಹದಿ ಪೋಣಿಸಿದ್ದು ನೆನಪಿದೆಯಾ

ನನ್ನೆದೆಯಲಿ ದನಿಸುವ ನಿನ್ನದೇ ಹೆಸರನು ನೀ ಆಲಿಸುತಾ ಅಪ್ಪಿದ್ದು ನೆನಪಿದೆಯಾ
ನನ್ನೆದೆಯ ಅಂಗಳದಲಿ ನಿನ್ನೊಲುಮೆಯ ಹೂ ಅರಳಿಸಿದ್ದು ನೆನಪಿದೆಯಾ

ನಿನ್ನ ಬಾಹುಬಂಧನದಲಿ ಸಂತೈಸುತ ನೀ ಸೌಮ್ಯದ ನಗುವು ಚೆಲ್ಲಿದ್ದು ನೆನಪಿದೆಯಾ
ನನ್ನ ಯಾತನೆಯೆನ್ನುವ ಭ್ರಮೆಯನು ನೀ ಸೌಜನ್ಯದಿ ಇತಿಹಾಡಿದ್ದು ನೆನಪಿದೆಯಾ

ಪ್ರೇಮದ ಹಂದರದಲ್ಲಿ ನಾವಿಬ್ಬರು ಒಮ್ಮನದಿ ಒಂದಾಗಿದ್ದು ನೆನಪಿದೆಯಾ
ಕ್ಷೇಮದ ಹಾದಿಯಲ್ಲಿ ಬಾಳಿನುದ್ದಕೂ ಒಂದಾಗುವ ವಚನವು ನೆನಪಿದೆಯಾ

ನೆನಪಾದರೆ ಅದುವೇ ಅಮೃತವು ನೀ ಜೊತೆಯಾದರೆ ಅದುವೇ ಸಂಭ್ರಮವು
ನೀ ಮರೆತರೆ ಅದುವೇ ಶಾಪವು ನೀ ಮರೆತರೆ ಅದುವೆ ವಿಷವು 
ನೀ ಮರೆಯದಿರು ಒಲವೆ..

ರಾಮಚಂದ್ರ ಸಾಗರ್