ಹೂಮನದ ಸೌರಭದಲಿ ಪ್ರೀತಿಯ ಸೌಗಂಧವ ಬಾಳಲಿ
ಕಂಪಿಸಿದ ಅನುಪಮ ಮಾಧುರಿಯು ನೀನಲ್ಲವೇ
ಕತ್ತಲೆಯ ಹಾದಿಯಲಿ ಕೈದೀಪವಾಗಿ ಬೆಳಗಿದವಳು
ಉಲ್ಲಾಸದ ಕಿರಣವಾಗಿ ದಾರಿಯಾದವಳು ನೀನಲ್ಲವೇ
ಮೋಹದ ಬದುಕಲಿ ಬತ್ತದ ಒಲವಿನ ನದಿಯಾದವಳು
ಸುಖವೇ ಮೈದುಂಬಿ ನನಗೊಲಿದವಳು ನೀನಲ್ಲವೇ
ಸದ್ದಿಲ್ಲದೇ ಹರಿವ ಝರಿಯಂತೆ ನಗುತ ಜೊತೆಯಾದವಳು
ಸೌಮ್ಯದ ನಡಿಗೆಯಲಿ ಸಜ್ಜನಿಕೆಯನು ಮೆರೆದವಳು ನೀನಲ್ಲವೇ
ಹಾಡುವ ತಾಳದಲಿ ಹರುಷದ ಸ್ವರವನು ಪೋಣಿಸಿದವಳು
ಸಂಗೀತದ ಅಲೆಯಲಿ ಮನ ನಲಿಸಿದ ನಲ್ಲೆಯು ನೀನಲ್ಲವೇ
ಬಳಲಿಕೆಯ ಜೀವದಲಿ ನವೋಲ್ಲಾಸದ ಚಿಲುಮೆಯಾದವಳು
ಜೀವದಾ ಸೆಲೆಯಾಗುತ ಹಿತವಾದವಳು ನೀನಲ್ಲವೇ
ಬರಡಾದ ಮನದಲಿ ಬಂಗಾರದ ಕನಸುಗಳ ಚೆಲ್ಲಿದವಳು
ಬಯಕೆಯ ಕಣಜದ ಒಡತಿಯು ಕೋಮಲೆ ನೀನಲ್ಲವೇ
ಯಾರಿಲ್ಲವೆನ್ನುವ ಕೊರಗನು ಕರಗಿಸಿದ ಕಾದಲೆಯು
ಸಂಪ್ರೀತಿಯ ಮಾಲೆಯನು ಕರುಣಿಸಿದ ಕನ್ನಿಕೆಯು ನೀನಲ್ಲವೇ
ನವ್ಯತೆಯ ಬಾಳಿಗೆ ವಿಲಾಸತೆಯ ನಗುವಿನಲಿ ಕರೆದವಳು
ಸತ್ಕಾರದ ಶರಧಿಯ ಅಲೆಯಾಗಿ ಅಪ್ಪಿದವಳು ನೀನಲ್ಲವೇ
ಶಶಿ ತುಂಬಿದ ರಾತ್ರಿಯಲಿ ತಂಗಾಳಿಯಂತೆ ರಮಿಸಿದವಳು
ಬಯಸಿದ ಪ್ರೇಮಿಯ ಮನಕೆ ಅಮೃತವಾದವಳು ನೀನಲ್ಲವೇ
ರಚನೆ: ರಾಮಚಂದ್ರ ಸಾಗರ್
