Thursday, 15 October 2020

ನೀ ಸಂಭ್ರಮವಾದಂತೆ..


ಚೆಲುವೆಯೆ ನೀ ನಡೆದರೆ

ಹೂಲತೆಯೇ ನಲಿದಂತೆ

ಕೋಮಲೆಯೆ ನೀ ನಗುತಿರೆ

ಸುಮವೇ ನಾಚುತ ನಕ್ಕಂತೆ


ಗೆಳತಿಯೆ ನೀ ಜೊತೆಯಾದರೆ

ಸುಖವು ಅಲೆಯಾದಂತೆ

ಮಾಧುರಿಯೆ ನೀ ಬಳಿಯಾದರೆ

ಸಿಹಿಕಡಲು ಉಬ್ಬರಿಸಿದಂತೆ


ಸೌರಭಿಯೆ ನೀ ಕಂಪಿಸಿದರೆ

ಪ್ರೀತಿಯ ಕಂಪು ಜಗವಾದಂತೆ

ಅನುರಾಗವೆ ನೀ ಗುನುಗಿದರೆ

ಪ್ರೇಮದ ಪಲ್ಲವಿ ಹಾಡಿದಂತೆ


ನಗುವಿನಲಿ ನೀ ನುಡಿದರೆ

ಹರುಷದ ಮಳೆಯೆ ಸುರಿದಂತೆ

ವಿನಯದಿ ನೀ ಕರೆದರೆ

ಸೌಜನ್ಯವೆ ಒಲಿದಂತೆ


ಕಾದಲೆ ನೀ ಕೈಹಿಡಿದರೆ

ಬಾಳು ವೈಭವದ ತೇರಾದಂತೆ

ನಲ್ಲೆ ನೀ ಸಾರಥಿಯಾದರೆ

ಬಾಳು ಗೆಲುವಿನ ಸಂಭ್ರಮವಾದಂತೆ..


ರಚನೆ: ರಾಮಚಂದ್ರ ಸಾಗರ್

ಚಿತ್ರ: ಸಂಭ್ರಮ ಶ್ರೀ


Saturday, 10 October 2020

ನಾ ನೆನಪಾದರೆ..




ಗೆಳೆಯಾ..

ನಾ ನೆನಪಾದರೆ ನಿನಗೆ ಮರೆಯದಿರು

ನೀ ನೀಡಲು ತುಸು ನಗುವೊಂದನು...


ನೀ ಬಯಸಿದರೆ ಬಾಳಿಗೆ ಜೊತೆಯಾಗಲು

ಈ ಗುಲಾಬಿಯನು ನೀ ಸ್ವೀಕರಿಸು...


ನಾ ಪ್ರಿಯವಾದರೆ ನಿನಗೆ ಕರೆದುಬಿಡು

ನಿನ್ನ ನೆನಪಲೆ ನಾ ಮರೆಯಾಗುವ ಮುನ್ನ....


ನಿನ್ನುಡಿಯು ನನ್ನ ಕರೆವ ತನಕ

ನಾ ಕಿವಿಯಗಲಿಸಿಡುವೆ ನಿತ್ಯ...


ನೀ ನೋಡಿದ ಘಳಿಗೆ ಅರಳಿದ ಒಲವು

ಕಿಚ್ಚಾಗಿದೆ ಅಚ್ಚಾಗಿದೆ ಎದೆಯೊಳಗೆ...


ನಿನ್ನುಸಿರು ನನ್ನ ತಾಕುವ ತನಕ

ನಾ ಮಾಡುವೆನು ನಿತ್ಯ ಜಪವ..


ನೀ ಒಪ್ಪುವುದಾದರೆ ಬೇಗನೆ ಒಪ್ಪಿಬಿಡು

ನಾ ವಿಧಿಯ ಅಪ್ಪುವ ಮುನ್ನ...


ನಾ ಹಿತವಾದರೆ ನಿನ್ನ ಹೃದಯಕೆ

ನೀ ಕಾಡಿಸದೆ ಅರೆನಿಮಿಷ ಎದುರಾಗಿಬಿಡು..


ನಿನ್ನೊಲವ ರಕ್ಷೆಯ ಮಹಲಿನೊಳಗೆ

ಈ ಮುಗುದೆಯ ಮನ ರಮಿಸಿಬಿಡು..


ನಾ ಪ್ರಿಯೆಯೆನಿಸಿದರೆ ನಿನ್ನ ಉಸಿರಿನೊಳಗೆ

ನೀ ಬಾಡಿಸದಿರು ಈ ಗುಲಾಬಿಯನು 


ಕಡಲ ತಡಿಯ ತಂಗಾಳಿಯೊಳಗೆ

ಈ ಹುಡುಗಿಯ ಮನ ಸುಡದಿರು..


ನಾ ನೆನಪಾದರೆ ಗೆಳೆಯಾ ನೀ ಮರೆಯದಿರು

ಗುಲಾಬಿ ಹಿಡಿದ ಕೈಗಳ ಮೊರೆಯನು...


ರಾಮಚಂದ್ರ ಸಾಗರ್


Thursday, 8 October 2020

ನಮ್ಮದಾಗಲಿ ಗೆಳತಿ..


ಕೋಮಲ ನಿನ್ನ ನಗುವಿನ ಸಿಹಿಯಿಂದ
ಸವಿಯಾದ ಬದುಕು ನಮ್ಮದಾಗಲಿ ಒಲವೆ
ನಿರ್ಮಲ ನಿನ್ನ ಮನದ ಸಹವಾಸದಿಂದ
ಸಿದ್ಧಿಸುವ ಹಾದಿಯು ನಮ್ಮದಾಗಲಿ ಚೆಲುವೆ

ಆದರದ ನಿನ್ನ ನಗುಧಾರೆಯ ಬಲದಿಂದ
ಸತ್ಕಾರದ ಮನೆಯು ನಮ್ಮದಾಗಲಿ ಕಾದಲೆ
ಔದಾರ್ಯದ ನಿನ್ನ ಅಕ್ಕರೆಯ ನುಡಿಯಿಂದ
ಸಡಗರದ ನಾವೆಯು ನಮ್ಮದಾಗಲಿ ನಲ್ಲೆ

ಸುವರ್ಣದ ನಿನ್ನ ನಗುವಿನ ಚೆಲುವಿನಿಂದ
ಕಂಗೊಳಿಸುವ ಹೂ ಬನವು ನಮ್ಮದಾಗಲಿ
ಸುಲಲಿತ ನಿನ್ನ ಇಂಪಾದ ದನಿಯಿಂದ
ಅನುರಾಗದ ಸ್ವರಮೇಳುವು ಝೇಂಕರಿಸಲಿ

ರಮ್ಯತೆಯ ನಿನ್ನ ನಗುವಿನ ರತ್ನದಿಂದ
ರಂಜಿಸುವ ದಿನಗಳು ನಮ್ಮದಾಗಲಿ
ಪ್ರೀತಿಯ ನಿನ್ನ ರಕ್ಷೆಯ ಕೋಟೆಯಿಂದ
ಭಯವಿಲ್ಲದ ಬಂಧನವು ನಮ್ಮದಾಗಲಿ

ಬೆಳಗುವ ನಿನ್ನ ನಗುವಿನ ರಶ್ಮಿಯಿಂದ
ರಾರಾಜಿಸುವ ದೀವಿಗೆಯು ನಮ್ಮದಾಗಲಿ
ಸೌಮ್ಯದ ನಿನ್ನ ನಗುವಿನ ಸ್ನೇಹದಿಂದ
ನೋವಿರದ ಯಾತ್ರೆಯು ನಮ್ಮದಾಗಲಿ ಗೆಳತಿ..

ರಾಮಚಂದ್ರ ಸಾಗರ್

Monday, 5 October 2020

ನಗುವಿನ ಸಂಭ್ರಮವು


ನಿನ್ನ ಕುಡಿ ನೋಟದ ಸವಿ ನಗುವೇ

ವೈಭವದ ಈ ಬಾಳಿನ ಸಿರಿ ಸಂಭ್ರಮವು

ನಿನ್ನ ಸನ್ನಿಧಿಯ ಸಿಹಿ ಸಾಂಗತ್ಯವೇ

ಮಂಗಳವು ಈ ಬಾಳಲಿ ಅನುಕ್ಷಣವು 


ನಿನ್ನ ಕೋಮಲ ವದನ ಸೌಂದರ್ಯವೇ

ಹೊಂಗನಸುಗಳ ಚೆಲುವಿನ ಮೇಳವು

ನಿನ್ನ ಮುಂಗುರುಳ ಮೇರು ನರ್ತನವೇ

ಪ್ರೀತಿಯ ಮನದ ಹರುಷದ ಉಲ್ಲಾಸವು


ನಿನ್ನ ಸೌಮ್ಯದ ಮೆಲು ಮಾತುಗಳೆ

ಸಜ್ಜನಿಕೆಯ ಈ ಪ್ರೀತಿಗೆ ತೋರಣವು

ನಿನ್ನ ವಾತ್ಸಲ್ಯದ ಮಹದಾಸರೆಯೆ

ಅಕ್ಕರೆಯ ಅರಮನೆಯ ಬಂಧನವು


ನಿನ್ನ ಅಭಯದ ಆಹ್ಲಾದದ ವಚನವೇ

ಈ ಬಾಳಿಗೆ ಆನಂದದ ನೌಕೆಯು

ನಿನ್ನ ಅನುಪಮ ಪ್ರೇಮದ ಆಹ್ವಾನವೇ

ನಾ ಸಾಗುವ ಹಾದಿಯಲಿ ಗೆಲುವಿನ ಸೌಗಂಧವು


ನಿನ್ನ ಆದರದ ಪಾವನ ಹೃದಯವೇ

ಅಕ್ಷಯದ ಒಲವಿನ ಕಾಣಿಕೆಯು ಶ್ರೀರಕ್ಷೆಯು

ನಿನ್ನ ಸರಳತೆಯ ಸಂಸ್ಕಾರವೇ

ಸಂಪನ್ನತೆಯ ಶ್ರೀರಕ್ಷೆಯ ನದಿಯೆಂದಿಗು..


ನಿನ್ನ ಮೆಲು ನೋಟದ ಸೋಜಿಗವೇ

ಮನದಲಿ ಸಿಹಿ ಚೆಲ್ಲುವ ಸಡಗರವು

ನಿನ್ನ ಮೋಹಕ ಮೋಡಿಯ ನಗುವೇ

ಮೋಹಿಸುವ ಈ ಹೃದಯಕೆ ಸಂಭ್ರಮವು 


ರಚನೆ: ರಾಮಚಂದ್ರ ಸಾಗರ್

ಚಿತ್ರ: ಸಂಭ್ರಮ ಶ್ರೀ