Saturday, 10 October 2020

ನಾ ನೆನಪಾದರೆ..




ಗೆಳೆಯಾ..

ನಾ ನೆನಪಾದರೆ ನಿನಗೆ ಮರೆಯದಿರು

ನೀ ನೀಡಲು ತುಸು ನಗುವೊಂದನು...


ನೀ ಬಯಸಿದರೆ ಬಾಳಿಗೆ ಜೊತೆಯಾಗಲು

ಈ ಗುಲಾಬಿಯನು ನೀ ಸ್ವೀಕರಿಸು...


ನಾ ಪ್ರಿಯವಾದರೆ ನಿನಗೆ ಕರೆದುಬಿಡು

ನಿನ್ನ ನೆನಪಲೆ ನಾ ಮರೆಯಾಗುವ ಮುನ್ನ....


ನಿನ್ನುಡಿಯು ನನ್ನ ಕರೆವ ತನಕ

ನಾ ಕಿವಿಯಗಲಿಸಿಡುವೆ ನಿತ್ಯ...


ನೀ ನೋಡಿದ ಘಳಿಗೆ ಅರಳಿದ ಒಲವು

ಕಿಚ್ಚಾಗಿದೆ ಅಚ್ಚಾಗಿದೆ ಎದೆಯೊಳಗೆ...


ನಿನ್ನುಸಿರು ನನ್ನ ತಾಕುವ ತನಕ

ನಾ ಮಾಡುವೆನು ನಿತ್ಯ ಜಪವ..


ನೀ ಒಪ್ಪುವುದಾದರೆ ಬೇಗನೆ ಒಪ್ಪಿಬಿಡು

ನಾ ವಿಧಿಯ ಅಪ್ಪುವ ಮುನ್ನ...


ನಾ ಹಿತವಾದರೆ ನಿನ್ನ ಹೃದಯಕೆ

ನೀ ಕಾಡಿಸದೆ ಅರೆನಿಮಿಷ ಎದುರಾಗಿಬಿಡು..


ನಿನ್ನೊಲವ ರಕ್ಷೆಯ ಮಹಲಿನೊಳಗೆ

ಈ ಮುಗುದೆಯ ಮನ ರಮಿಸಿಬಿಡು..


ನಾ ಪ್ರಿಯೆಯೆನಿಸಿದರೆ ನಿನ್ನ ಉಸಿರಿನೊಳಗೆ

ನೀ ಬಾಡಿಸದಿರು ಈ ಗುಲಾಬಿಯನು 


ಕಡಲ ತಡಿಯ ತಂಗಾಳಿಯೊಳಗೆ

ಈ ಹುಡುಗಿಯ ಮನ ಸುಡದಿರು..


ನಾ ನೆನಪಾದರೆ ಗೆಳೆಯಾ ನೀ ಮರೆಯದಿರು

ಗುಲಾಬಿ ಹಿಡಿದ ಕೈಗಳ ಮೊರೆಯನು...


ರಾಮಚಂದ್ರ ಸಾಗರ್