Saturday, 12 September 2020

ಪ್ರೇಮವೆಂದರೆ..


ಪಾವಿತ್ರ್ಯ ಮನದ ಸೌಂದರ್ಯದ ರೂಪವೆ ಪ್ರೇಮ

ಜೊತೆಯಾದ ಜೀವದ ರಕ್ಷೆಯ ಅಭಯವೆ ಪ್ರೇಮ

ದುಗುಡಕು ದಣಿವಾಗಿಸುವ ವಾತ್ಸಲ್ಯದ ನಗುವೆ ಪ್ರೇಮ

ನಿಸ್ವಾರ್ಥದ ನಿನದದ ಛಲದ ಪಾವನ ನಡೆಯೆ ಪ್ರೇಮ


ಶುಭದ ಹಾಡಿನ ನವಿರಾದ ಸ್ವರಮೇಳವೇ ಪ್ರೇಮ  

ಸೌಜನ್ಯದ ಮಹಲಿನ ವಿನಯದ ಕಳಸವೆ ಪ್ರೇಮ

ಹೃದಯದ ದನಿಗೆ ಇಂಪಾಗಿಸುವ ಅನುರಾಗವೆ ಪ್ರೇಮ

ಸೌಖ್ಯ ಸೌರಭದ ಸಾಗರದಲೆಯ ಹಿತವೆ ಪ್ರೇಮ


ಬಡತನದ ಕುಟೀರದಲು ಹರುಷವ ಸುರಿಸುವುದೆ ಪ್ರೇಮ

ಬಂಧುರ ಜಗದೊಳು ಕ್ಷೇಮವ ಹಾರೈಸುವುದೆ ಪ್ರೇಮ

ಹಾಳುಸುರಿವ ಹಾದಿಯಲಿ ಹೊಂಗನಸು ಹಾಸುವುದೆ ಪ್ರೇಮ

ಸಂಪನ್ನ ಮನಗಳ ಬೆಸುಗೆಯ ಶಕ್ತಿಯೆ ಪ್ರೇಮ


ಒಲವಿನ ತೇರಿನ ಚೈತನ್ಯದ ಯಾತ್ರೆಯ ಉಸಿರೆ 

ಒಲಿದ ಜೀವಗಳ ಒಮ್ಮತದ ವಚನವೆ ಪ್ರೇಮ

ಅಪಸ್ವರ ನುಸುಳದ ನಿರ್ಮಲ ಮನದ ಕೋಟೆಯೆ 

ಅಪಥ್ಯ ಅಪಮಾನ ದಹಿಸುವ ದಿವ್ಯತೆಯೆ ಪ್ರೇಮ


ಬಾಳಿನ ಕೊನೆವರೆಗು ಕೈಹಿಡಿವ ಮಮತೆಯ ವಾಗ್ದಾನವೆ

ಭಾವನೆಗಳ ಮೆರವಣಿಗೆಯೊಳು ಆದರದ ಸಾನ್ನಿಧ್ಯವೆ 

ನಂಬಿಕೆ ಗೌರವ ಅಭಿಮಾನ ಸ್ನೇಹಗಳ ಸಂಗಮವೆ

ಪ್ರೀತಿಯ ಅಕ್ಷಯದ ಕಡಲಿನ ಸಾರ್ವಭೌಮವೆ ಪ್ರೇಮ


ರಾಮಚಂದ್ರ ಸಾಗರ್


Friday, 4 September 2020

ನೆಮ್ಮದಿ



ಬಂಗಾರದ ಬದುಕಿಗೆ ಸಂತೃಪ್ತಿಯೆ ಶ್ರೇಯವು
 ಬಂಧಿತ ಬದುಕಿಗೆ ಖಿನ್ನತೆಯೆ ಫಲವು 
ಸರಳಿ ವಣೆಗೆ ದುರಾಸೆಯೆ ಮೂಲವು 
ಸರಳ ಜೀವನಕೆ ನೆಮ್ಮದಿಯೆ ದೇಗುಲವು  

ರಾಮಚಂದ್ರ ಸಾಗರ್

Thursday, 3 September 2020

ಜಗವ ಕಟ್ಟು

ಉದಾತ್ತ ಹೃದಯಲಿ ಸಿರಿತನವ ಗಳಿಸು 
ಉದಾರತೆಯ ಶಕ್ತಿಯಲಿ ಕೋಪ ದಹಿಸು 
ಅಕ್ಕರೆಯ ಮಹಲಿನಲಿ ಸ್ನೇಹ ಬೆಳೆಸು 
ಸಚ್ಚರಿತ ಗುಣಗಳಲಿ ಜಗವ ಕಟ್ಟು 

 ರಾಮಚಂದ್ರ ಸಾಗರ್

Wednesday, 2 September 2020

ನೆರಳು

ಅಂಧಕಾರದ ಮನಸ್ಸಿಗಿದೆ ಅಜ್ಞಾನವೆನ್ನುವ ನೆರಳು

ಅಂತರಂಗದ ತುಮುಲಗಳಿಗಿದೆ ನೋವೆನ್ನುವ ನೆರಳು

ಅಂಜುಬುರುಕ ಹಾದಿಗಿದೆ ಹೇಡಿತನದ ನೆರಳು

ಅಂತಃಕರಣದ ಪರಾಮರ್ಶೆಯಲ್ಲಿದೆ ಸತ್ಯದ ನೆರಳು 

ರಾಮಚಂದ್ರ ಸಾಗರ್