Sunday, 3 February 2019

ನೀನೆ ಗೆಳತಿ..

ಕ..ಕಾಗುಣಿತದಲಿ ಒಲವಿನ ಸೆಲೆ ಅಲೆಯಾಗಿ ಕಂಗೊಳಿಸಿದಾಗ, ಒಲವು ನದಿಯಾಗಿ ಹರಿದಾಗ..

ನೀನೆ ಗೆಳತಿ..

ಕಪ್ಪಿರುಳು ಹಾದಿಯಲಿ ಬೆಳಕಾಗಿ ಬಂದವಳು
ಕಾನನದ ಕಂದರದಲಿ ಕೈಹಿಡಿದು ನಡೆಸಿದವಳು
ಕಿರುಕುಳದ ಮನದಲಿ ಸವಿಜೇನು ತುಂಬಿದವಳು
ಕೀಳುದೆಸೆಯ ಬದುಕಲಿ ಚೈತನ್ಯಧಾರೆಯಾದವಳು

ಕುಸುಮಿತ ಒಲವ ಬನದಲಿ ಸ್ವಾಗತಿಸಿ ನಕ್ಕವಳು
ಕೂಗಿಡುವ ಹೃದಯದಲಿ ರಮಿಸುವ ಸುರಕನ್ನೆಯಾದವಳು
ಕೃಪೆತೋರುವ ನಯನದಲಿ ಒಲವಿಗೆ ಆಸರೆಯಾದವಳು
ಕೆರಳಿಸು ಕನಸಲಿ ಸಿಹಿಧಾರೆಯಾದವಳು

ಕೇದಿಗೆಯ ಹೂ ಘಮಲಿನಲಿ ಮನ ಸೌರಭಿಸುವವಳು
ಕೈವಲ್ಯದ ಬದುಕಲಿ ಮೋಹದ ಮಳೆಯಾದವಳು
ಕೊನರುವ ಪ್ರೀತಿಗೆ ಆಸರೆಯ ಆಗಸವಾದವಳು
ಕೋಮಲ ಗಾನದಲಿ ಪ್ರೇಮದ ಕಡಲಾದವಳು

ಕೌಟಿಲ್ಯದ ಜಗದಲಿ ನಿರ್ಭೀತಿಯ ನಿನದ ಮೊಳಗಿಸಿದವಳು
ಕಮ್ಮಟದ ನಡುಮನೆಯಲಿ ಅಭಯದ ಉತ್ಪನ್ನವಾದವಳು
ಕಹಳೆಯ ಸದ್ದಿನಲಿ ಆಹ್ಲಾದದ ಬಾಳ್ವೆಗೆ ಕರೆಯೋಲೆಯಾದವಳು
ಕಮನೀಯ ಹೃದಯಲಿ ಮನ ಬೆಸೆದ ಚೆಲುವೆಯು ನೀನು

ಕಾಠಿಣ್ಯದ ಬದುಕನು ಹೂವಾಗಿಸಿದ ಪಾರಂಗತೆಯು
ಕಿನಾರೆಯ ಹೂಬನದಲಿ ಸೊಗಸು ಚೆಲ್ಲಿದವಳು
ಕೀರ್ತಿಸುವ ಒಲವಿಗೆ ಸುಜಲವಾಗಿ ಹರಿದವಳು
ಕುಶಲದ ಬಾಳ ನದಿಯನು 
ಮೈದುಂಬಿದವಳು ನೀನೆ ಗೆಳತಿ

ರಾಮಚಂದ್ರ ಸಾಗರ್

Thursday, 31 January 2019

ಸಾಕಾರದ ನಗುವು

ಸಜ್ಜನಿಕೆಯ ನಿನ್ನ ನಗುವಿನಲೆಯೆ ಬಾಳಿಗೆ ವರದಾನವು
ಸೌಮ್ಯದ ನಿನ್ನ ಕುಡಿನೋಟವೆ ಮನಕೆ ಸವಿಜೇನು
ಸತ್ಕಾರದ ನಿನ್ನ ಒಲವಿನೋಲೆಯೆ ಆದರದ ಸಂಕೀರ್ತನೆಯು
ಸಂಪನ್ನೆ ನಿನ್ನ ಸಾಂಗತ್ಯವೆ ಒಲವ ಸಂಕಲ್ಪವು

ಸಂಭಾವಿತೆ ನಿನ್ನ ಹಿತನುಡಿಯೆ ಬಾಳಸಾರವು
ಸಾಮ್ಯಾಜ್ಞಿ ನಿನ್ನ ಕೈಸೆರೆಯೆ ಸುಖಸಾಗರವು
ಸಾಕಾರವೆ ನಿನ್ನೊಲುಮೆಯ ಛಲವು ನನ್ನೊಳು
ಸಾಕ್ಷಾತ್ಕಾರವೆ ನಿನ್ನ ಸಂಸ್ಕಾರದ ಸಿಂಚನವು

ಸಾರ್ವಭೌಮವೆ ನಿನ್ನ ಸಾನಿಧ್ಯದಲಿ ರಮ್ಯತೆಯ ಬಾಳು
ಸೌಭಾಗ್ಯವೆ ನೀ ಹೃದಯ ಬೆಸೆದ ಘಳಿಯು
ಸೌಷ್ಠವವೆ ನಿನ್ನ ಶೋಭಿಸುವ ಮನಸು
ಸೌಗಂಧವೆ ನೀನರಳಿಸಿದ ಪ್ರೇಮ ಕುಸುಮದ ಘಮಲು

ಸಂವೇದನೆಯೆ ನೀ ಕೈತೋರಿದ ಪರಿಷ್ಕರಣದ ಬದುಕು
ಸಂಪ್ರೀತಿಯೆ ನೀ ಮನಕೆ ಮುಡಿಸಿದ ಮಲ್ಲಿಗೆಯು
ಸಂಯೋಗವೆ ನೀ ನನ್ನನು ಒಪ್ಪಿದ ಕ್ಷಣವು
ಸಮ್ಮೋಹನವೆ ನೀ ನನ್ನವಳೆನ್ನುವ ಮನದ ನುಡಿಯು

ಸಮ್ಮಿಳಿತವೆ ನಿನ್ನ ಪ್ರೀತಿ ತುಂಬಿದ ಸ್ನೇಹವು
ಸಮ್ಮೋದವೆ ನೀ ನೀಡುವ ಕೈತುತ್ತು
ಸೌಖ್ಯದ ಶರಧಿಯೆ ನೀ ಜೊತೆಯಾದ ಬಾಳು
ಸೌಂದರ್ಯದ ಆಸ್ಥಾನವೆ ನಿನ್ನ ನಗುವ ಮೊಗವು

ರಾಮಚಂದ್ರ ಸಾಗರ್

Wednesday, 30 January 2019

ದಯೆತುಂಬಿದ ಹೊನಲು

ಸತ್ಯದ ಸತ್ವವು ಜಗದಲಿ ಸಂಪನ್ನವಾಗಲಿ
ಸಾಫಲ್ಯತೆಯ ದೀಪವು ಎಲ್ಲರೆದೆಯಲಿ ಬೆಳಗಲಿ
ಸಿರಿತನವು ನಿಸ್ವಾರ್ಥತೆಯಲಿ ವಿಜೃಂಭಿಸಲಿ
ಸೀಜೇನಂತೆ ಸತ್ಯಸಾರವು ಪ್ರಿಯವಾಗಲಿ

ಸುಜರ ಸೌಮ್ಯದ ಬೀಡು ಉದಯವಾಗಲಿ
ಸೂಸುತಿರಲಿ ಸೌಜನ್ಯದ ಕಂಪು ಜಗದಲಿ 
ಸೃಜನೆಯಾಗುತಿರಲಿ ನಿತ್ಯ ಸೌಹಾರ್ದದ ಆಶಾಕಿರಣ
ಸೆಣೆಸುತಿರು ನಿತ್ಯ ಶಾಂತಿಧಾಮದ ರಕ್ಷಣೆಯಲಿ

ಸೇಡು ದಳ್ಳುರಿಯು ಜಗದಿಂದ ಕೊನೆಯಾಗಲಿ
ಸೈರಣೆ ಸಹನೆಯು ಮನಗಳ ಉಸಿರಾಗಲಿ
ಸೊರಗಿಲ್ಲದ ಬಾಂಧವ್ಯವು ನಮ್ಮದಾಗಲಿ
ಸೋಲಿರದ ಹಾದಿಯು ಎಲ್ಲರದಾಗಲಿ

ಸೌಖ್ಯದ ಸೌಧದಾಸೆರೆಯು ಜಗವಾಗಲಿ
ಸಂತಸ ಸಡಗರವು ಸರ್ವರಿಗು ಜೊತೆಯಾಗಲಿ
ಸಹೃದಯಗಳ ಸ್ನೇಹವೆ ಕಡಲಾಗಲಿ
ಸಚ್ಚರಿತ ಸದ್ಗತಿಯ ಅಲೆಯು ನಿತ್ಯ ಬೀಸುತಿರಲಿ

ಸಿದ್ಧಾಂತವು ನೊಂದವರ ದನಿಯ ಉಸಿರಾಗಲಿ
ಸೀಳುದಾರಿಯಲಿ ಸಿಲುಕಿದವರು ಹೂಪಥದಲಿ ನಲಿದಾಡಲಿ
ಸುಭಗದ ಇಳೆಯಲಿ ದೀನತೆಯು ಕ್ಷಯವಾಗಲಿ
ಸೂತ್ರ ಕೃತಿಗಳು ದಯೆತುಂಬಿದ ಹೊನಲಾಗಲಿ

ರಾಮಚಂದ್ರ ಸಾಗರ್

Tuesday, 29 January 2019

ನಮ್ಮೊಲವು ಗದ್ದುಗೆಯೇರಲಿ

(ಕಾಗುಣಿತದ ಶೈಲಿಯಲಿ ...ಸ.ಸಾ.ಸಿ. ಸೀ...ಹೀಗೆ ಮನದ ಭಾವನೆಗಳು ಪದಗಳಾಗಿ ಪುಟಿದಾಗ ಅರಳಿದ ಕವಿತೆ. ಓದಿ ಹಾರೈಸಿ..)

ಸಜೆಯಾಗಿದೆ ಗೆಳತಿ ನೀ ಕಾಣದೆ ಈ ಘಳಿಗೆಯಲಿ
ಸಾವಧಾನವೆಲ್ಲಿದೆ ಗೆಳತಿ ನೀ ಬಾರದೆ ಈ ಹೃದಯದಲಿ
ಸಿರಿತನವೆಲ್ಲಿದೆ ಗೆಳತಿ ನೀ ಜೊತೆಯಾಗದೆ ಈ ಬದುಕಲಿ
ಸೀಯಾಗದು ಗೆಳತಿ ನೀ ಮೂಡದೆ ತಂಪಿರಳು ಕನಸಲಿ

ಸುಮ್ಮನಾವೆಲ್ಲಿದೆ ಗೆಳತಿ ನೀ ನುಡಿಯದೆ ಸಲ್ಲಾಪದೋಲೆ
ಸೂತ್ರವೆಲ್ಲಿದೆ ಗೆಳತಿ ನೀ ಸುಜನತೆ ಬೋಧಿಸದೆ ಈ ಬಾಳಿಗೆ
ಸೃಷ್ಟಿಯಾಗದಿಂದು ಗೆಳತಿ ಸೌಜನ್ಯದ ಸೌಖ್ಯದ ಬದುಕು 
ಸೆರೆಮನೆಯಾಗಿದೆ ಗೆಳತಿ ನೀ ನಲಿಯದೆ ಈ ಚಿನ್ನದರಮನೆಯು

ಸೇರುವುದೆ ಗೆಳತಿ ಬಾಳನಾವೆಯು ಆ ಮೋಹದ ತೀರಕೆ?
ಸೈಸುವುದೆ ಗೆಳತಿ ಈ ಬಾಳು ನಿನ್ನ ಅಭಯದ ವಚನವಿಲ್ಲದೆ
ಸೊಗಸಾದ ಬೆಳುದಿಂಗಳು ಹಾದಿಯು ರಮಿಸದು ತನುವಿಗೆ 
ಸೋಜಿಗದ ಸೌಂದರ್ಯದ ಜಗದ ಒಡಲಲಿ ಚೆಲುವೆಲ್ಲಿದೆ

ಸೌಭಾಗ್ಯದ ನಿನ್ನ ಅಂತಃಕರಣದ ಕೃಪೆಯಿರದೆ ಉಳಿವೆಲ್ಲಿದೆ
ಸಂಗಮವಾಗದೆ ಮನಸುಗಳು ಅಂತರಂಗದ ಆಸೆಗೆ ಗೆಲುವೆಲ್ಲಿದೆ
ಸಹಿತ ನಿನ್ನ ಸಾಂಗತ್ಯದಲೊಮೆ ಚೈತನ್ಯಧಾರೆಯಾಗಲಿ ಬಾಳಿಗೆ 
ಸತ್ಕಾರದ ನಿನ್ನ ಅಕ್ಕರೆಯ ಕಡಲು ವರವಾಗಲಿ ಜೀವಕೆ 

ಸಾಕಾರವಾಗಲಿ ನಮ್ಮ ಸಂಪ್ರೀತಿಯು ಜಗದ ಕೊನೆವರೆಗೂ
ಸಿದ್ಧಿಸುವ ಸತ್ಕಾರ್ಯಗಳಲಿ ಪರಾಕ್ರಮತೋರಲಿ ನಮ್ಮೊಲವು
ಸೀಳುದಾರಿಯೆಂದು ಎದುರಾಗದು ಗೆಳತಿ ಸಾಧನೆಯ ಹಾದಿಗೆ
ಸುಮದಂತೆ ನಿತ್ಯ ನಗುವುದು ಗೆಳತಿ ನಮ್ಮೊಲವ ಗದ್ದುಗೆ 
ಸೂಸುತಾ ಬಾ ನಿನ್ನ ಸಿಹಿನಗುವ ಸೋನೆ ಈ ಬಾಳಿಗೆ

ರಾಮಚಂದ್ರ ಸಾಗರ್