ರಾರಾಜಿಸುತಿದೆ ಗೆಳತಿ ನಿನ್ನೊಲವು
ಹೂ ಬನದ ಮಲ್ಲಿಗೆಯಾಗಿ
ಮಧುರ ಕಂಪು ಸೂಸುತಿಹುದು
ಮೋಹದ ಶರಧಿಯಾಗಿ
ಚಂದ್ರಹಾಸದ ತಣಿರು ಬೆಳಕು
ಸುರಿಯುತಿದೆ ನಿನ್ನಂದಕೆ ಬೆರಗಾಗಿ
ದ್ರವಿಸುತಿದೆ ಚೆಲುವ ಜಗವು
ಶೃಂಗಾರ ಸೌಂದರ್ಯದ ಕುರುಹಾಗಿ
ಸಾವಧಾನ ಮರೆತಿದೆ ಹೃದಯವು
ನಿನ್ನ ನವಿರು ಅಪ್ಪುಗೆಯ ಬಯಸಿ
ಗದ್ದುಗೆಯೇರಿವೆ ಸಿಹಿ ಕನಸುಗಳು
ನೀ ಬರುವ ಸಿಹಿಘಳಿಗೆಗೆ ಹಂಬಲಿಸಿ
ರಮಿಸುವುದು ನಿನ್ನೊಲವು ತನುಮನವನು
ರಗಳೆ ಎನಿಸುವ ವೇಳೆಯಲಿ
ಸಾಗರವಾಗುವುದು ನಿನ್ನ ಅಕ್ಕರೆಯ ಮಡಿಲು
ಮಮತೆಯ ಆಸರೆಯಾಗಿ
ಗತಿಸುವುದು ಹಾಳು ಸುರಿವ ಬಾಳು
ನಿನ್ನ ನಗುವಿನಲೆಯ ಲೇಪನವಾಗಿ ಕೃಪೆಯಾಗಿ
ರಂಜಿಸುವ ಒಲವ ಭನವವಾಗುವುದು ಬದುಕು
ನೀ ಕೈಹಿಡಿವ ಕ್ಷಣವು ಒಲವಾಮೃತವಾಗಿ
ರಾಮಚಂದ್ರ ಸಾಗರ್
(ಈ ಕವಿತೆಯ ಸಾಲುಗಳ ಮೊದಲ ಅಕ್ಷರ ಸೇರುತ್ತಾ ಹೋದರೆ ರಾಮಚಂದ್ರ ಸಾಗರ ಆಗುತ್ತದೆ)
ಎಲ್ಲ ದೇಶಾಭಿಮಾನಿಗಳಿಗೆ 70ನೇ ಗಣರಾಜ್ಯೋತ್ಸವದ ಶುಭಾಶಯಗಳು, ಈ ಸುಸಮಯದಲ್ಲಿ ಎಲ್ಲ ಮನಸ್ಸುಗಳ ಐಕ್ಯತೆ ಮತ್ತಷ್ಟು ಗಟ್ಟಿಯಾಗಲಿ, ಎಲ್ಲರಲ್ಲು ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಛಲ ವೃದ್ಧಿಯಾಗಲಿ, ದೇಶವು ಬರುವ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶದ ಸಾಲಿನಲ್ಲಿ ಬೇಗನೇ ಸೇರಲಿ, ಭಾರತದ ಹೆಸರು ವಿಶ್ವದೆಲ್ಲೆಡೆ ಪ್ರೀತಿಯ ಕುರುಹು ಆಗಲಿ, ಜಗದೆಲ್ಲ ಭಾರತವೇ ಕಂಗೊಳಿಸಲಿ, ಭಾರತದ ವೈವಿದ್ಯತೆಯ ಸತ್ವವು ಜಗಕೆ ಸಂದೇಶಸಾರವಾಗಲಿ ಎನ್ನುತ್ತಾ ಈ ಸಮಯದಲ್ಲಿ ನಾ ಬರೆದ ಕವಿತೆಯನ್ನು ನಿಮ್ಮೊಂದಿಗೆ ನೆನಪುಮಾಡಿಕೊಳ್ಳುತ್ತಿರುವೆ..ಎಲ್ಲಾ ದೇಶಾಭಿಮಾನಿಗಳಿಗೂ ಮತ್ತೊಮ್ಮೆ 70ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು;
ಭಾರತೀಯನೆಂದು ಹೆಮ್ಮೆಯಿಂದ ಬೀಗು
ಕೋಟ್ಯಾಂತರ ಜೀವಿಗಳ ಉಸಿರು
ಸೌಹಾರ್ದ ಸಮ್ಮೇಳನದ ಬೀಡು
ವೈವಿಧ್ಯತೆಮಯ ಸಂಸ್ಕೃತಿಯ ತೇರು
ಭರತ ಭೂತಾಯ ಮಡಿಲು ...
ಜ್ಞಾನಸೆಲೆಯ ಅಮೃತ ಸಿಂಚನವು
ಸಹಿಷ್ಣುತೆ ಸಂದೇಶ ಸಾಗರವು
ಶಾಂತಿಯ ಸತ್ವದ ದೀವಟಿಗೆಯು
ಭರತ ಭೂತಾಯ ನೆಲೆಯು..
ಜಗಕೆ ಶಾಂತಿ ಬೋಧಿಸಿದ ನಾಡು
ಜಗಕೆ ಜ್ಞಾನದ ಕೊಡುಗೆಯ ಬಟ್ಟಲು
ಜಗದ ಸಿರಿವಂತ ಸಂಸ್ಕೃತಿಯ ಕಣಜ
ಜನಿಸಿದ ಎಲ್ಲರ ಪುಣ್ಯಧಾಮ..
ಭರತ ತಾಯ ಮಡಿಲಲಿ ಜನನವೆ
ಪ್ರತಿ ಭಾರತೀಯನ ಹೆಮ್ಮೆ
ಉಸಿರಿನ ಪ್ರತಿ ಘಳಿಗೆ ಮುಡಿಪಾಗಿಡು
ದೇಶ ಗಟ್ಟಿಗೊಳಿಸಲು, ಪ್ರಕಾಶಿಸಲು..
ಭರತ ತಾಯಿ ನೆಲದಲಿ ಜನ್ಮವು
ಸಾವಿರ ಜನ್ಮಕು ತೀರದ ಋಣವು
ದಿವ್ಯ ನಾಡಿನ ದಾರ್ಶನಿಕರ ವಚನದಲಿ
ಪುಣ್ಯ ಪುರುಷರ ಜ್ಞಾನ ಸೆಲೆಯಲಿ
ಜಳಪಿಸುವ ಶಕ್ತಿಯಲಿ ನೀ ಬೆಳಗು..
ಭಾರತೀಯತೆಯ ಉಸಿರು ಜೀವಸೆಲೆಯಾಗಿರಲು
ಭಾರತೀಯನೆಂದು ಹೆಮ್ಮೆಯಿಂದ ಬೀಗು
ನಿನ್ನೆದೆಯ ಪ್ರತಿ ಬಡಿತದಲ್ಲು
ಭಾರತೀಯನೆಂಬ ಸದ್ದಿನ ದನಿ ಕೇಳು
ಪುಣ್ಯನಾಡನು ಆರಾಧಿಸು..ಪ್ರೀತಿಸು..
ರಾಮಚಂದ್ರ ಸಾಗರ್
ಕಾಗುಣಿತದ ಶೈಲಿಯಲ್ಲಿ.....ಬ.ಬಾ ..ಬಿ..ಬೀ ಹೀಗೆ..
ಸಂತಸದ ಹೊನಲಾಗಲಿ
ಬಂಧಿಸುವ ನಿನ್ನ ಕಣ್ಣೋಟದಲಿ ಸೆರೆಯಾಗಿ ಗೆಳತಿ ನನ್ನ ಮನಸು
ಬಾಧಿಸುವ ಸವಿಗನಸಿಗೆ ಉತ್ತರವಾಗಬೇಕಿದೆ ನಿನ್ನ ಸವಿನಗುವು
ಬಿನ್ನಾಣದ ನಿನ್ನ ನಗುವಿನಲ್ಲಿ ನಲಿದಾಡಬೇಕಿದೆ ನನ್ನ ಹೃದಯ
ಬೀಸುವ ತಂಗಾಳಿಯಲಿ ನಿನ್ನ ಸಾಂಗತ್ಯದಲಿ ಸಾಗಬೇಕು
ಬುಗ್ಗೆಯಂತೆ ನಿನ್ನ ಪ್ರೀತಿ ನನ್ನ ಮನಸು ರಮಿಸಲಿ
ಬೃಂದಾವನದ ಹೂಲತೆಗಳು ನಿನ್ನಂದಕೆ ತಲೆಬಾಗಲಿ
ಬೆಡಗು ತುಂಬಿದ ಮೋಹದ ಕಡಲೆ ಬಾಳಾಗಲಿ
ಬೇಡುವ ಚೆಲುವ ಜಗದಲಿ ನಿನ್ನ ಸಾನಿಧ್ಯ ನನಗೊಲಿಯಲಿ
ಬೈಗು ರಂಗಿನ ಓಕುಳಿಯಲಿ ಮೈಮನ ರಂಗೇರಲಿ
ಬೊಂಬೆಯಂತ ನಿನ್ನ ತನುವು ಚಿನ್ನದ ಕಳೆಯೇರಲಿ
ಬೋಧಿಸುವ ನಿನ್ನ ನೀತಿಮಾತು ಬಾಳಿಗೆ ಬೆಳಕಾಗಲಿ
ಬೌದ್ಧಿಕ ಶಕ್ತಿಯೊಲವು ನಿನ್ನಿಂದಲೆ ಸಂಚರಿಸಲಿ
ಬಂಗಾರಿ ನಿನ್ನ ಮಡಿಲಾಸರೆ ಬಾಳಿನುದ್ದ ನನಗಿರಲಿ
ಭವ್ಯದ ಒಲವಸೌಧದಲಿ ಪ್ರೇಮದ ಭವನೆಯಾಗಲಿ
ಭವಣೆ ಕಾಣದ ಒಲವನೌಕೆಯು ನಮ್ಮಯ ಬಾಳಾಗಲಿ
ಭೀತಿ ಕಾಣದೆ ನಮ್ಮೊಲವು ಸಂತಸದ ಹೊನಲಾಗಲಿ
ರಾಮಚಂದ್ರ ಸಾಗರ್
ಭಂಡ ಬದುಕಲಿ ಗೌರವವೆಲ್ಲಿದೆ
ಭಗ್ನ ಮನದಲಿ ನೆಲೆಯೆಲ್ಲಿದೆ
ಭಟ್ಟಂಗಿ ಮಾತಿನಲಿ ಸತ್ಯವೆಲ್ಲಿದೆ
ಭಂಗುರ ಸುಖದಲಿ ಆತ್ಮತೃಪ್ತಿಯೆಲ್ಲಿದೆ
ಬನಿಯಿರದ ಸತ್ವಕೆ ಘನತೆಯೆಲ್ಲಿದೆ
ಬಯಕೆಯಿರದ ಬಾಳಿಗೆ ಗೆಲುವೆಲ್ಲಿದೆ
ಬಲಾತ್ಕಾರದ ಅಪ್ಪುಗೆಯಲಿ ಹಿತವೆಲ್ಲಿದೆ
ಬಯಸದಾ ಹೃದಯಕೆ ಚಾವಟಿಯಾಗದಿರು
ಭಕ್ತಿಯಿರದ ಆರಾಧನೆಯಲಿ ಸತ್ಕಾರವೆಲ್ಲಿದೆ
ಭರವಸೆ ಮೂಡದ ಮನದಲಿ
ಭವವಣೆಯ ಜಗದಲಿ ಸಿದ್ಧಿಯೆಲ್ಲಿದೆ?
ಭವಿತವ್ಯವ ಶಪಿಸಿ ಕೂರುವುದೇಕೆ?
ಭಗ್ನ ಮನದಲಿ ದಿನ ದೂಡದಿರು
ಭವಿಷ್ಯದ ದಿನಗಳಲಿ ಭರತಿ ಮಾನವನಾಗು
ಭವ್ಯ ಲೋಕದಲಿ ಜ್ಞಾನದ ಭವನವಾಗು
ಬಂಜರು ಕಣ್ಗಳಿಗೆ ಸತ್ಯದೋರು
ಬಳಲಿಕೆ ಸಮಾಜಕೆ ಚೈತನ್ಯದ ದಾರ್ಶನಿಕನಾಗು
ಬಾಂಧವ್ಯದ ತೇರೆಳೆವ ಸಾರಥಿಯಾಗು
ಬಾಧಕರ ಮನದಲಿ ಮಾನವೀಯ ಮೌಲ್ಯಗಳ
ಬಿತ್ತುವ ಬಂಧುವಾಗು
ಬಳಲಿದ ಜೀವಗಳ ಕೈಹಿಡಿವ ಭಟನಾಗು
ರಾಮಚಂದ್ರ ಸಾಗರ್