Thursday, 24 January 2019

ಕೈಹಿಡಿವ ಭಟನಾಗು

ಭಂಡ ಬದುಕಲಿ ಗೌರವವೆಲ್ಲಿದೆ
ಭಗ್ನ ಮನದಲಿ ನೆಲೆಯೆಲ್ಲಿದೆ
ಭಟ್ಟಂಗಿ ಮಾತಿನಲಿ ಸತ್ಯವೆಲ್ಲಿದೆ
ಭಂಗುರ ಸುಖದಲಿ ಆತ್ಮತೃಪ್ತಿಯೆಲ್ಲಿದೆ

ಬನಿಯಿರದ ಸತ್ವಕೆ ಘನತೆಯೆಲ್ಲಿದೆ
ಬಯಕೆಯಿರದ ಬಾಳಿಗೆ ಗೆಲುವೆಲ್ಲಿದೆ
ಬಲಾತ್ಕಾರದ ಅಪ್ಪುಗೆಯಲಿ ಹಿತವೆಲ್ಲಿದೆ
ಬಯಸದಾ ಹೃದಯಕೆ ಚಾವಟಿಯಾಗದಿರು

ಭಕ್ತಿಯಿರದ ಆರಾಧನೆಯಲಿ ಸತ್ಕಾರವೆಲ್ಲಿದೆ
ಭರವಸೆ ಮೂಡದ ಮನದಲಿ
ಭವವಣೆಯ ಜಗದಲಿ ಸಿದ್ಧಿಯೆಲ್ಲಿದೆ?
ಭವಿತವ್ಯವ ಶಪಿಸಿ ಕೂರುವುದೇಕೆ?

ಭಗ್ನ ಮನದಲಿ ದಿನ ದೂಡದಿರು
ಭವಿಷ್ಯದ ದಿನಗಳಲಿ ಭರತಿ ಮಾನವನಾಗು
ಭವ್ಯ ಲೋಕದಲಿ ಜ್ಞಾನದ ಭವನವಾಗು
ಬಂಜರು ಕಣ್ಗಳಿಗೆ ಸತ್ಯದೋರು

ಬಳಲಿಕೆ ಸಮಾಜಕೆ ಚೈತನ್ಯದ ದಾರ್ಶನಿಕನಾಗು
ಬಾಂಧವ್ಯದ ತೇರೆಳೆವ ಸಾರಥಿಯಾಗು
ಬಾಧಕರ ಮನದಲಿ ಮಾನವೀಯ ಮೌಲ್ಯಗಳ
ಬಿತ್ತುವ ಬಂಧುವಾಗು
ಬಳಲಿದ ಜೀವಗಳ ಕೈಹಿಡಿವ ಭಟನಾಗು

ರಾಮಚಂದ್ರ ಸಾಗರ್