Wednesday, 23 January 2019

ಹರೆಯ ನೀ ಕರೆವ ಸಮಯದಲ್ಲಿ...

ಆಗ ನೋಡಿದ್ದೆಲ್ಲ ಸೊಬಗು ಮೂಡಿ ನಲಿಸುವ ಸಮಯ, ಮೈಮನದಲ್ಲಿ ಹೊಸತರ ಸಂಚಾರವೇಳುವ ಸಮಯ, ಹದನೆಂಟರ ನಂಟಿನ ಸುಸಮಯವದು. ಪಿ.ಯು.ಸಿ ಮುಗಿದು ಕಾಲೇಜಿಗೆ ಹೋಗುವ ದಿನಗಳು. ಯೌವ್ವನದ ಪಾಶದಲಿ ಬಿದ್ದು ಒದ್ದಾಡುವ ಸಂಭವವದು, ಸಮಯವದು. ಆದರೆ ಇತ್ತ ಮನಚಿತ್ತವಾಗಿ ಓದಿ ಸಾಧನೆಗೈಯ್ಯುವ ಹಠಹೊತ್ತ ಮನಕೆ ಜವಾಬು ಇದೆ. ತಲ್ಲಣಿಸುವ ಮನಕೆ ಒಂದೆಡೆ ಸಾಧನೆ ಇನ್ನೊಂದೆ ಆಕರ್ಷಣೆಯ ತುಡಿತ ಕಡಲಾಗಿ ಕಾಡುವ ಸಮಯ. ನನ್ನ ಪುಟ್ಟ ಹೆಜ್ಜೆಯಲಿ ತುಡಿತದ ಕಡಲನು ದಾಟಲು ಸಾಧ್ಯವೇ ಎನ್ನುವ ಅನುಮಾನ ಕಾಡುವ ದಿನಗಳು ಆರಂಭವಾಗಿದ್ದ ಕಾಲವದು. ಒಂದೆಡೆ ಬಡತನ ಬೇಗೆಯಲ್ಲಿ ನರಳುತ್ತಿರುವ ನನ್ನ ಕುಟುಂಬದಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಮೊದಲ ಜೀವ ನಾನೇ. ಮೊದಲು ಕಾಲೇಜು ಹತ್ತಿದ ಕುಟುಂಬದ ಮೊದಲ ಜೀವಕೆ ಒಳ್ಳೆಯದಾಗಲೆಂದು ತಮ್ಮ ಬದುಕನ್ನೇ ಸಮರ್ಪಿಸಿ ಬೆಳಗ್ಗಿನಿಂದ ರಾತ್ರಿವರೆಗೂ ದುಡಿದು ಬಂದ ಹಣವನ್ನೆಲ್ಲ ಮಗನ ಓದಿಗಿರಲೆಂದು ನಿದ್ರೆ ಬಾರದ ರಾತ್ರಿಯಲ್ಲು ಮಗನ ಏಳ್ಗೆಗಾಗಿ ಪ್ರಾರ್ಥಿಸುವ ತಂದೆ ತಾಯಿ ಇನ್ನೊಂದೆಡೆ.
ಹೀಗೆ ಅಪ್ಪ, ಅಮ್ಮನ ಒಟ್ಟಾಸೆ ಅದನ್ನು ಸ್ಥಿರೀಕರಿಸಿ ಕೈಗೂಡಿಸಿ ಬಾಳು ಸಕಾರಗೊಳಿಸಬೇಕೆಂಬ ಛಲದಲ್ಲಿ ಓದುವ ಹಠಯೋಗಿಯಾಗಿ ನಾನು ಓದುತ್ತಿದ್ದೆ. ಓದಿ ಜ್ಞಾನ ಸಂಪಾದನೆಯೊಂದಿಗೆ ಕುಟುಂಬದ ಏಳ್ಗೆ ಮಾಡಬೇಕೆನ್ನು ಛಲವಂತೂ ಧಮನಿ ಧಮನಿಯಲ್ಲೂ ತುಂಬಿತ್ತು. ಚೆನ್ನಾಗಿ ಓದಿ ಸಾಧಿಸಬೇಕೆನ್ನುವ ಛಲವೇ ಉಸಿರಾಗಿತ್ತು. ಮನದ ಏಕಾಗ್ರತೆಯೆಲ್ಲವನ್ನೂ ಕಾಪಿಟ್ಟು ಪ್ರೀತಿಯಿಂದ ವಿದ್ಯಾರ್ಜನೆಗೈಯ್ಯುವುದು ನನ್ನ ನಿತ್ಯ ಕರ್ಮವಾಗಿತ್ತು. ಒಂದೆಡೆ ಪುಸ್ತಕದಲ್ಲಿ ಅಕ್ಷರಗಳ ಓದುತ್ತಾ ಸಾಗಿದರೆ ಮೆತ್ತನೆ ನಿಟ್ಟುಸಿರು ಬಿಟ್ಟು ಮನ ಸಾವರಸಿಕೊಳ್ಳುವಾಗ ಮನೆ ಅಪ್ಪ, ಅಮ್ಮ ನೆನಪಾಗುತ್ತಿದ್ದರು, ಜೊತೆಗೆ ಮುದ್ದು ತಂಗಿ. 
ಹೀಗೆಯೇ ಸಾಗುವ ನನ್ನ ಜೀವದಲ್ಲಿ ಹೊಸತಾಗಿ ನೋಡುವ ನೋಟದಲ್ಲಿ ಒಂಥರಾ ಸೊಗಸೆನ್ನುವ, ಮನಸ್ಸಿಗೆ ಸೋಲುವ ಕಾಲದ ಅಪ್ಪುಗೆಯಾಗುವ ಸನ್ನಿವೇಶಗಳು ಉದಯಿಸತೊಡಗಿದವು. ಮೇ ಫ್ಲವರ್ ಮರದ ಹೂಗಳು ಸಾಗುವಾಗ ಮೈಮೇಲೆ ಬಿದ್ದಾಗ, ಎದುರು ಬರುವ ಪೋರಿಯರು ತುಸುನಗುತಾ ನಡೆವಾಗ, ಅವರ ನಗುವಿಲೆಗೆ ಮನಸ್ಸು ಕರಗಿಹೋದ ಅನುಭೂತಿ, ಅವರ ಸಂಗವೇ ಬೇಕೆನ್ನುವ ಅಭಯದಾ ಹಠವೂ. ಇದೇನು ಸಂಕಟವೋ ಎಂದು ನನ್ನಲ್ಲೇ ಗೋಗರೆವ ಸಮಯವು ನನ್ನದಾಯಿತು. ನೋಡುವ ನೋಟದದಲ್ಲಿ ಚೆಲುವೆಯ ಸೊಬಗೇ ಕಣ್ಣಿಗೆ ಕಾಡುವಂತೆ ಬಿಂಬವಾಗುವ ಕ್ಷಣವಾಯ್ತು. ಏನೆಂದು ಮರೆತರೂ ನಡೆದಾಡುವಾಗ ಮೈಮರೆತು ಎದುರಾಗುವ ಹುಡಿಗಿಯರ ನೋಡುವ ಚಪಲ, ಏನೋ ಮನಕ್ಕೆ ಇಷ್ಟವೆನಿಸುವ ಕಾರ್ಯ. ಸರಿಯೋ ತಪ್ಪೋ ಅರಿಯದಾ ಬೆಂಬಿಡದ ನಿತ್ಯ ಕರ್ಮ. ಅದೇ ಸುಖದಲ್ಲಿ ಮನ ನಲಿವ ಸಡಗರ.
ಯಾರೋ ಹುಡುಗಿ ಎದುರಾದರೂ ಸಾಕು ತುಡಿವ ಮನಸ್ಸಿಗೆ, ಕನಸುಗಳಿಗೆ, ರೆಕ್ಕೆ ಪುಕ್ಕ ಮೈಗೂಡಿ ನಲಿದು ಸಂಭ್ರಮಕೆ ಚೆಲುವ ಹಂದರ ಏರ್ಪಡುವ ಸುಸಮಯದ ಕನಸು. ಒಬ್ಬನೇ ಏಕೆ? ಜೊತೆಗೆ ಇನ್ನೊಬ್ಬಳು ಬೇಕೆನ್ನುವ ಹಠದ ಮನಸ್ಸು, ಗಟ್ಟಿಯಾಗಿ ಇನ್ನೊಬ್ಬಳು ನಿನ್ನೊಂದಿಗೆ ಬೇಕೆನ್ನುವ ಆಸೆಯನ್ನು ಒತ್ತಿ ಹೇಳುತ್ತಿದೆ. ಏನೋ ಎಂತೋ ಇವಳೋ ಅವಳೋ ಹೀಗೆ ನೋಡಿದವರಲ್ಲೆಲ್ಲಾ ಏನೋ ಕನಸುಗಳು ಏಳುತ್ತಿವೆ. ಕಾರಣವೂ ಕಾಣದೇ, ಸತ್ಯ ಸತ್ವದ ಅರಿವೂ ಮೂಡದೇ! ಏಕತಾನತೆಗೆ ಕೊನೆ ಹೇಳು ಎನ್ನುವ ಮನದ ಮಾತಿಗೆ ಒಕ್ಕೊರಲ ದನಿಯಾಗುವ ವಸಂತಕಾಲದ ನವಿರು ಸ್ಪರ್ಷ. ಕಾಲೇಜು ಉದ್ಯಾನವದಲ್ಲಿ ಅರಳಿದ ಹೂಗಳು ಬೀಸುವ ತಣಿರುಗಾಳಿಯಲ್ಲಿ ಸೌಗಂಧ ಬೆರೆಸಿ ಕಂಪು ಒತ್ತರಿಸಿ ನೂಕುವಾಗ, ಕಾಲೇಜು ಕೋಣೆಯಲ್ಲಿ ಕುಳಿತ ನನ್ನ ಮೊಗವ ನೇವರಿಸಿದಾಗ ತಣಿರುಗಾಳಿ ಮೈಸೋಕಿ ಕಿಟಕಿಯತ್ತ ನೋಡಿದಾಗ ಪಕ್ಕದಲ್ಲೆ ಕುಳಿತ ಹುಡುಗಿಯರತ್ತ ಹರಿದ ಕಣ್ಣೋಟದಲಿ ಏನೋ ಹುಡುಕುವ ಕಾತರ, ಏನೋ ಸೌಂದರ್ಯ ಜಗದ ದರ್ಶನ, ಜೊತೆಗೆ ಮನದಲ್ಲಿ ಯಾರಿಲ್ಲವೆನ್ನುವ, ಮನಸ್ಸಿಗೆ ಒಬ್ಬರು ಜೊತೆಯಾಗಲಿ ಎನ್ನುವ ತವಕ, ಹಠ.
ಹೀಗೆ ಸಾಗುತಾ ಇತ್ತೀಚೆಗೆ ಯಾರಾದರೂ ಹುಡುಗಿಯರೊಂದಿಗೆ ಮಾತನಾಡುವಾಗ ಮನದಲ್ಲಿ ಮೊದಲಿನ ಅನುಭೂತಿಯಿಲ್ಲ, ಏನೋ ನೋಡುವ ನೋಟದಲ್ಲಿ ಕೊಂಚ ಬದಲಾವಣೆ ಕಾಡಿದೆ, ಯೌವ್ವನ ಅಮಲೇರಿ ಹೆಣ್ಣೊಂದು ಜೊತೆಯಾಗಲಿ ಎನ್ನುವ ರಚ್ಚೆ ಕಾಡಿದೆ. ಎದುರಾದ ಗೆಳತಿ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮೊದಲಿನಷ್ಟು ಸಲೀಸಿಲ್ಲ, ಈಗ ನೋಡಿದರೆ ನಾನೇ ಕಳೆದುಹೋಗುವ ದಾವಂತ, ಕಂಡಿತಾ ಕಳೆದೇಹೋಗುವ ಸಂಭವ. ಮೊದಲು ಮೊದಲು ಜೊತೆಯಾಗಿ ಗಂಟೆಗಟ್ಟಲೆ ತರಲೆಮಾಡಿ ಕಾಲಕಳೆದರೂ ಏನೆನ್ನದ ಮನವಿಂದು ಅವಳಲ್ಲಿ ಅದೇನೋ ಹೊಸತನ್ನು ಬೇಡುತ್ತಿದೆ, ಬೇಡವೆಂದರೂ ಅವಳೇ ನಿನ್ನವಳು, ನಿನ್ನ ಮನಕೆ ಬೆಂಗಾವಲು, ಅವಳೊಲುಮೆಯೇ ಬೇಕೆನ್ನುವ ಚಪಲವು ಮನಸ್ಸಿಗೆ.
ಹೀಗೆ ಸಾಗುವ ಗೊಂದಲ ಗೂಡಾದ ಮನಸ್ಸಿಗೆ ಜವಾಬು ಏನು? ರಾತ್ರಿ ಹಾಸ್ಟೆಲ್ ರೂಂನಲ್ಲಿ ಓದಿನಲ್ಲಿ ಕುಳಿತರೆ ತುಸು ಕಾಡುವ ಹಗಲಿನ ನೆನಪು, ಅಂದ್ರೆ ಕಾಲೇಜಿನಲ್ಲಿ ನಗುತ ನಲಿವ ಗೆಳತಿಯ ಸವಿನೆನಪು, ನಿದ್ರೆ ಬಾರದೇ ಏನೋ ಬೇಸರದ ಮನದಲ್ಲಿ ಹೊರಬಂದರೆ ಓಡುವ ಮೋಡದ ಮರೆಯಲ್ಲಿ ಇಣುಕಿ ನೋಡುವ ಚಂದಿರ ನೋಡಿದಾಗ ಅವನ ಮೊಗದಲ್ಲೂ ಆ ಗೆಳತಿ ನೋಡಿ ನಕ್ಕ ಅನುಭೂತಿ. ಚಂದಿರ ಪಳಿಸುವ ಮಂದಹಾಸದ ಬೆಳಕಲ್ಲಿ ಹಾಸ್ಟೆಲ್ ಮುಂದಿನ ಶ್ವೇತ ಸೇವಂತಿಗೆ ತಂಗಾಳಿಗೆ ತಲೆತೂಗುತಾ ತೂಗುವಾಗ, ಮನದ ಕೊಳದಲ್ಲಿ ಸಾವಿರ ಕನಸುಗಳು ಅರಳಿ ಚಿತ್ತ ಕನಲಿಸುವ ಘಳಿಯಾಗಿದೆ. ಸುಂದರ ಪ್ರಕೃತಿಯ ಎಲ್ಲಾ ಇರುವಿಕೆಗಳು ಒಟ್ಟಾಗಿ ಮನದಲ್ಲಿ ಉಲ್ಲಾಸದ ಮಳೆ ಸುರಿಸುತ್ತಿವೆ, ಆದರೆ ದುರ್ಬಲ ಮನದ ಮೇಲೆ ಬೀಳುವ ಬಿರುಮಳೆಗೆ ಮನಸ್ಸು ತಾಳೀತೆ? ತಡೆದು ತಾಳಿದರು ಅದೆಷ್ಟು ಸಮಯ ಭದ್ರ?
ಯೌವ್ವನದ ಹೊಳೆಗೆ ತೂರಿಹೋಗುವ ಮನದ ಗೊಂದಲಕೆ ಪರಿಹಾರವೆಲ್ಲಿ, ಏಕಾಂತವೇ ಬೇಸರವೆಂದು ಜೊತೆಯೇ ಬೇಡುತಾ ಕಾತರಿಸತೊಡಗಿದೆ, ಮೊದಲು ಗೆಳೆಯರೊಂದಿಗೆ ಹರಟೆಹೊಡೆದು, ಆಟವಾಡಿ, ಒಟ್ಟಾಗಿ ಕಾಲಕಳೆದು, ಹಾಸ್ಟೆಲ್ ನಲ್ಲಿ ರಾತ್ರಿ ಓದಿ ಎಲ್ಲರೊಂದಿಗೆ ಹಾಸ್ಯದಲ್ಲಿ ತೊಡಗಿ ನಿದ್ರೆಗೆ ಜಾರುತ್ತಿದ್ದೆ. ರವಿ ಮೂಡುವ ಮೊದಲೇ ಅವರಿಗಿಂತ ನಾನೇ ಮೊದಲೆಂದು ಎದ್ದು ಓದಿನಲ್ಲಿ ತಲ್ಲೀನವಾಗುತ್ತಿದ್ದೆ. ಆದರೆ ಇತ್ತೀಚೆಗೆ ಅದೆಲ್ಲದರ ಜೊತೆಯಲ್ಲಿ ಒಂದಿಷ್ಟು ಸಮಯದಲ್ಲಿ ಗೆಳತಿಯ ಧ್ಯಾನಕ್ಕೆ ಮೀಸಲಾಗಿದೆ. ಎಷ್ಟೊತ್ತಿಗೆ ಕಾಲೇಜಿಗೆ ಹೋಗುತ್ತೇನೋ ಎನ್ನುವ ಗೊಂದಲ, ಹೋದರೂ ಬೇಗ ಮುಗಿಯದಿರಲಿ ಎನ್ನುವ ಮನದ ಪ್ರಾರ್ಥನೆ.
ಹೀಗೆ ಸಾಗುವಾಗ ಒಂದುದಿನ ಮನೆಯಿಂದ ಪತ್ರ ಬಂತು, ಅಪ್ಪ ಅಮ್ಮನಿಗೆ ಬರೆಯಲು ಬರಲ್ಲ, ಅರ್ಧಕ್ಕೆ ಓದು ನಿಲ್ಲಿಸಿದ ತಂಗಿಯ ಕೈಯಲ್ಲಿ ಬರೆಸುತ್ತಾರೆ. ಪತ್ರ ಹೀಗಿತ್ತು, ಮಗನೇ ಓದು ಹೇಗಿದೆ? ಇಲ್ಲಿ ಇರುವ ನಮ್ಮಗಳ ಬಗ್ಗೆ ಯೋಚನೆ ನೀನು ಮಾಡದಿರು, ಈ ವರ್ಷ ಉತ್ತಮ ಬೆಳೆಯಂತೂ ಬರುತ್ತದೆ, ಕಳೆದ ವರ್ಷ ಅತೀವೃಷ್ಟಿಗೆ ಬೆಳೆನಾಶವಾಗಿತ್ತು, ಈ ಬಾರಿ ಅದು ಆಗುವುದಿಲ್ಲ, ನೀನು ಅಂಜದಿರು, ನಿನ್ನ ಓದಿಗಾಗಿ ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ, ನೀನು ಚೆನ್ನಾಗಿ ಓದಿ ನಮ್ಮ ಮನೆಗೆ ನಮಗೆ ಆಶ್ರಯದಾತನಾಗಬೇಕು, ನೀನೇ ಆಧಾರವಾಗಬೇಕು, ನಿನಗಾಗಿ ನಾವು ಯಾವುದಕ್ಕೂ ಸಿದ್ಧ, ದುಡ್ಡಿಗಾಗಿ ಏನು ಮಾಡುತ್ತಾರೋ ಎಂದು ಕೊರಗಬೇಡ, ನಿನ್ನ ಪುಸ್ತಕ, ಪೆನ್ನು ಯಾವುದಕ್ಕೂ ಕೊರತೆ ಬೇಡ. ಏನೇ ಆದರೂ ನೀನು ತಕ್ಷಣ ಪತ್ರ ಬರೆ, ನಾವು ಹಣವನ್ನು ಕಳುಹಿಸುತ್ತೇವೆ, ಈ ದಿನ ನಿನಗಾಗಿ ಹಣವನ್ನು ಮನಿ ಆರ್ಡರ್ ಮೂಲಕ ಕಳುಹಿಸಿದ್ದೇವೆ, ನೀನು ಪೋಸ್ಟ್‍ಮೆನ್ ಬಳಿ ವಿಚಾರಿಸು, ಹಣ ಮುಟ್ಟಿದೊಡನೆ ನಮಗೆ ಪತ್ರ ಬರೆಯುವುದನ್ನು ಮರೀಬೇಡ, ನಿನ್ನ ಓದು ಹೇಗಿದೆ ತಿಳಿಸು...ಹೀಗೆ ಅಪ್ಪ, ಅಮ್ಮ ಬರೆದ ಪತ್ರ ಇಂದು ಕೈಸೇರಿದೆ, ಮೈ ಮೆತ್ತನೆ ಬೆವರುತ್ತಿದೆ,  ಈಗ ಮನದಲ್ಲಿ ಒಂದೇ ಆಲೋಚನೆ.
ಸುಳಿದಾಡುವ ಮೆಲುಗಾಳಿಯಲ್ಲಿ ಸಾಗುತ್ತಾ ಕಾಲೇಜು ಕಡೆ ಹೆಜ್ಜೆ ಹಾಕುತ್ತಿದ್ದೇನೆ, ಆದರೆ ಈಗ ಅಪ್ಪ ಅಮ್ಮ ಬರೆದ ಪತ್ರದ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತಿವೆ, ಮೊದಲಿನಂತೆ ಯಾವುದೇ ಕನಸು ಕಾಡುತ್ತಿಲ್ಲ, ನಾನೇನಿದ್ದರೂ ಓದಿ ಅಪ್ಪ, ಅಮ್ಮ, ತಂಗಿಯ ಋಣ ತೀರಿಸಿಬೇಕು, ಇದೇ ಬದುಕಿನ ಹಠ..
ರಾಮಚಂದ್ರ ಸಾಗರ್

Monday, 21 January 2019

ನಿತ್ಯ ಬೆಳಗುವ ದೀಪವು

ಬಸವ ತತ್ವಗಳ ಸಾಫಲ್ಯದ ಉಸಿರು
ಸಚ್ಚರಿತ ಗುಣಗಳ ಮೈದುಂಬಿದ ಹೊನಲು
ಸಾರುವೆಯಿರದ ಹಾದಿಯ ಕರುಣಾಳು
ನಮ್ಮ ನಡೆದಾಡುವ ದೇವರು

ಆದರ್ಶವೆ ಉಸಿರಾಡಿದ ಯೋಗಿಯು
ವಿದ್ಯಾದೀವಟಿಗೆ ಬೆಳಗಿದ ರವಿಯು
ಬೇದವೆಣಿಸದ ಮಮತಾ ಮಡಿಲು
ಎಲ್ಲರ ಮನದಲಿ ನಿತ್ಯ ಬೆಳಗುವ ಜ್ಯೋತಿಯು

ಹಂದೆ ಮನದಲಿ ಛಲವು ಉಕ್ಕಿಸಿದವರು
ಅಳಲು ತುಂಬಿದವರಲಿ ಸಂತಸವರಳಿಸಿದವರು
ದುಮ್ಮಾನಗಳ ಬದುಕಲಿ ನವ್ಯತೆ ತಂದವರು
ನಮ್ಮ ನಡೆದಾಡುವ ದೇವರು

ಕಾಠಿಣ್ಯದ ದಾರಿಯನು ಹೂವಾಗಿಸಿದವರು
ಮೌಡ್ಯದ ಕಹಿಯನು ದಮನಿಸಿದವರು
ಗಂಡು ಹೆಣ್ಣು ಸರಿಸಮವೆಂದವರು
ಸ್ತ್ರೀಕುಲವೇ ಜಗದಸಿರಿಯೆಂದು ಸಾರಿದವರು

ಜಾತಿ ಧರ್ಮಗಳ ಸಂಕೋಲೆಯನು 
ಪುಡಿಮಾಡಿ ನಕ್ಕವರು
ಶಿಲೆಯ ತಲೆಯಲ್ಲಿ ಹೂವರಳಿಸಿದವರು
ಬರಡು ಮನದಲ್ಲಿ ಹೂ ತುಂಬಿದಾ ಮೋಡಿಗಾರರು
ನಮ್ಮ ನಡೆದಾಡುವ ದೇವರು

ಯಾರಿಲ್ಲವೆಂದವರಿಗೆ ಸ್ನೇಹದ ಸೆಲೆಯಾಗಿ
ಬದುಕಿಗೆಲ್ಲ ಚೈತನ್ಯಧಾರೆಯಾಗಿ ನಕ್ಕವರು
ನಾಡಿನೆಲ್ಲ ಸಜ್ಜನರ ಮಹಲು ಕಟ್ಟಿದವರು
ದುಡಿವ ಕೈಗಳಿಗೆ ಸ್ವರ್ಗವೇ ಕೈಸೆರೆಯೆಂದವರು

ಭೂತಾಯ ಒಲುಮೆಯ ವರವು
ಅಸತ್ಯದ ದಹನಕೆ ಕೈಕಟ್ಟಿದ ಹಠಯೋಗಿಯು
ಸತ್ಯದ ಹಾದಿಯಲಿ ಅವಿರತ ಸಾಗಿದವರು
ದೇಹದಿಂದ ಮರೆಯಾದರೇನು?
ಜಗದ ಸತ್ಯದ ಗೂಡಲಿ ನಿತ್ಯ ಬೆಳಗುವ ದೀಪವು
ನಮ್ಮ ನಡೆದಾಡುವ ದೇವರು

ರಾಮಚಂದ್ರ ಸಾಗರ್

Sunday, 20 January 2019

ನಗುವೇ ಇಂಧನವು

ಗೆಳತೀ..
ನನಗೂ ನಿನಗೂ ನಗುವೇ ಭೂಷಣವು
ಬೀಸುವ ಕಡಲಲೆಯೇ ನಮ್ಮೊಲವಿನ ಗಾನವು
ಒಲವಿನ ಬಾಳಿಗೆ ಆನಂದವೆ ಆಭರಣವು
ಜೊತೆಯಾಗಿ ನಲಿಯುವುದೆ ಸೌಭಾಗ್ಯವು

ಪ್ರೀತಿಯ ನುಡಿಯೆ ಬದುಕಿಗೆ ಬೆಂಗಾವಲು
ಬೆಸೆದ ಹೃದಯಕೆ ಪ್ರೇಮಸುಧೆಯೆ ಚೇತನವು
ಒಮ್ಮನದ ನಗುವೆ ಬಾಳಿಗೆ ಐಶ್ವರ್ಯವು
ಒನಪು ಮೊಗವೆ ನಮಗಿರಲಿ ನಿತ್ಯವು

ಕೊನೆವರೆಗೂ ಒಲಿದ ಮನವೆ ನಮ್ಮದಾಗಲಿ 
ನೀಲಾಗಸದ ಪರಿಧಿಗಿಂತಲು ಸಡಗರವು ಜೊತೆಯಾಗಲಿ 
ಧಮನಿ ಧಮನಿಯಲು ಪ್ರೀತಿಯೆ ಹರಿದಾಡಲಿ
ಕಹಿ ಎಂಬುದು ತುಸುವು ಕಾಡದಿರಲಿ

ಉಸಿರು ಉಸಿರಿನಲಿ ಪ್ರೀತಿಯೆ ಬೆರೆಯಲಿ
ಒಲವ ರಂಗು ಬಾಳಹಾದಿಯುದ್ದಕು ಚೆಲ್ಲಿರಲಿ
ಮನದ ಕಾಂಕ್ಷೆಗಳು ಸದಾ ಈಡೇರುತಿರಲಿ
ಪ್ರೇಮದಾ ಹೊನಲು ಮೈದುಂಬಿ ಸಾಗುತಿರಲಿ

ಸಿಹಿ ಎಂಬುದು ಬದುಕಲಿ ಮಳೆಯಾಗಲಿ
ವಿರಹ ಎಂಬುದು ಅರೆಘಳಿಗೆಯು ಕಾಡದಿರಲಿ
ಪ್ರೀತಿಯ ಸಿರಿಯನು ಕಾಪಿಡುವುದೆ ಕಾಯಕವಾಗಲಿ
ಒಲವನೌಕೆಯು ಎಂದಿಗೂ ನಿಲ್ಲದಿರಲಿ
ನಗುವೇ ಇಂಧನವಾಗಿರಲಿ

ರಾಮಚಂದ್ರ ಸಾಗರ್

Sunday, 13 January 2019

ಇದು ದಿಟವು

ಹುರುಳಿಲ್ಲದ ಸಾರದ ಜಪದಲಿ
ಹುಲು ಮಾನವ ನೀನಾಗದಿರು
ಬಲವಿಲ್ಲದ ಸತ್ವದ ಜೊತೆಯಲಿ
ಸಮಯದ ಕ್ಷಯ ಮಾಡದಿರು

ಹುರಿಯಾಳು ಇರುವ ಜಗದಲಿ
ಗೆಲುವು ತನ್ನದೆಂದು ಮೈಮರೆಯದಿರು
ಹುರಿದು ಹೊಸೆದ ಜೀವದಲಿ
ನಲಿವು ನಲಿದಾಡುವುದು ಮರೆಯದಿರು

ಹುಸಿ ಮಾತಿನ ಮಹಲಿನಲ್ಲಿ
ಮುಗ್ಧರ ಮನ ಘಾಸಿಗೊಳಿಸದಿರು
ಅಸತ್ಯದ ಬಲೆಯ ಮೋಹದಲಿ
ನಂಬಿದವರ ಬೀಳಿಸಿ ನಗದಿರು

ಹುಗಿ ತುಂಬಿದ ನದಿಯಲಿ
ದೋಣಿ ಸಾಗದು ಮರೆಯದಿರು
ಹುಳಿ ತುಂಬಿದ ಮನದಲಿ
ನಗುವು ಅರಳದು ತಿಳಿದಿರು

ಹುಂಬ ಮನದ ಮತಿಯಲಿ
ವಿವೇಕ ಮುದುಡುವುದು ತಿಳಿದಿರು
ಹುಡಿಮಾಡಿದ ಜನರ ಮನದಲಿ
ಸಾಮರಸ್ಯ ಸಾಯುವುದು ಅರಿವಿರಲಿ

ಹುಳು ಹರಿದಾಡುವ ವನದಲಿ
ಸೊಬಗು ಮರೆಯಾಗುವುದು ನಿಶ್ಚಯವು
ಹುಳುಕಾದ ಸಮಾಜದ ನಡೆಯಲಿ
ಜಗವು ಬವಣೆಯಲಿ ಬೇಯುವುದು ದಿಟವು

ರಾಮಚಂದ್ರ ಸಾಗರ್