Sunday, 20 January 2019

ನಗುವೇ ಇಂಧನವು

ಗೆಳತೀ..
ನನಗೂ ನಿನಗೂ ನಗುವೇ ಭೂಷಣವು
ಬೀಸುವ ಕಡಲಲೆಯೇ ನಮ್ಮೊಲವಿನ ಗಾನವು
ಒಲವಿನ ಬಾಳಿಗೆ ಆನಂದವೆ ಆಭರಣವು
ಜೊತೆಯಾಗಿ ನಲಿಯುವುದೆ ಸೌಭಾಗ್ಯವು

ಪ್ರೀತಿಯ ನುಡಿಯೆ ಬದುಕಿಗೆ ಬೆಂಗಾವಲು
ಬೆಸೆದ ಹೃದಯಕೆ ಪ್ರೇಮಸುಧೆಯೆ ಚೇತನವು
ಒಮ್ಮನದ ನಗುವೆ ಬಾಳಿಗೆ ಐಶ್ವರ್ಯವು
ಒನಪು ಮೊಗವೆ ನಮಗಿರಲಿ ನಿತ್ಯವು

ಕೊನೆವರೆಗೂ ಒಲಿದ ಮನವೆ ನಮ್ಮದಾಗಲಿ 
ನೀಲಾಗಸದ ಪರಿಧಿಗಿಂತಲು ಸಡಗರವು ಜೊತೆಯಾಗಲಿ 
ಧಮನಿ ಧಮನಿಯಲು ಪ್ರೀತಿಯೆ ಹರಿದಾಡಲಿ
ಕಹಿ ಎಂಬುದು ತುಸುವು ಕಾಡದಿರಲಿ

ಉಸಿರು ಉಸಿರಿನಲಿ ಪ್ರೀತಿಯೆ ಬೆರೆಯಲಿ
ಒಲವ ರಂಗು ಬಾಳಹಾದಿಯುದ್ದಕು ಚೆಲ್ಲಿರಲಿ
ಮನದ ಕಾಂಕ್ಷೆಗಳು ಸದಾ ಈಡೇರುತಿರಲಿ
ಪ್ರೇಮದಾ ಹೊನಲು ಮೈದುಂಬಿ ಸಾಗುತಿರಲಿ

ಸಿಹಿ ಎಂಬುದು ಬದುಕಲಿ ಮಳೆಯಾಗಲಿ
ವಿರಹ ಎಂಬುದು ಅರೆಘಳಿಗೆಯು ಕಾಡದಿರಲಿ
ಪ್ರೀತಿಯ ಸಿರಿಯನು ಕಾಪಿಡುವುದೆ ಕಾಯಕವಾಗಲಿ
ಒಲವನೌಕೆಯು ಎಂದಿಗೂ ನಿಲ್ಲದಿರಲಿ
ನಗುವೇ ಇಂಧನವಾಗಿರಲಿ

ರಾಮಚಂದ್ರ ಸಾಗರ್