Sunday, 10 June 2018

ಅಕ್ಕರೆಯ ಮಡಿಲು

ಮುಸ್ಸಂಜೆಯ ವೇಳೆಯಲಿ
ವಿನೋದದ ಮಾಲೆಯಾದವಳು
ರಂಗೇರಿದ ಘಳಿಗೆಯಲಿ
ಪ್ರೀತಿಗೆ ಪುರಾವೆಯಾದವಳು

ಪ್ರೇಮದ ಪುಶ್ಕರಿಣಿಯಲಿ 
ಅರಳಿ ಘಮಿಸುವ ಹೂವು
ಪರಿಹಾಸದ ಮೊಗದಲಿ
ಮನ ಪುಳಕಿಸುವ ಉಸಿರು

ಹುಯಿಲಿಡುವ ನನ್ನ ಕನಸಲಿ
ಹುರುಪು ತುಂಬಿದ ಉಲ್ಲಾಸಿನಿಯು
ನನ್ನೆದೆಯ ಜಗುಲಿಯಲಿ
ಪ್ರೀತಿ ಚೆಲ್ಲಿದ ಜತೆಗಾತಿಯು

ಅನುರಾಗದ ಜಲಧಿಯಲಿ
ಉದಿತ ಒಲವ ಪಾವನೆಯು
ಗೆಲುವಿನ ಬಾಳಿನಲ್ಲಿ
ಜೊತೆ ನಗುವ ಜಯದಾತಳು

ಸ್ವಚ್ಛಂದದ ಮಾತಿನಲ್ಲಿ
ಅಭಯದ ಶುಭವಾಣಿ ನುಡಿದವಳು
ಮೆಲು ನಗುವ ಸೊಬಗಿನಲಿ
ಅಕ್ಕರೆಯ ಮಡಿಲಾದವಳು ನೀನು..

ರಚನೆ: ರಾಮಚಂದ್ರ ಸಾಗರ್
ಚಿತ್ರ ಕೃಪೆ: ಇಂಟರ್ನೆಟ್

Thursday, 24 May 2018

ಸಾಗೋಣ ಬಾರೆ

ಪ್ರೀತಿಯ ರಥಬೀದಿಯಲಿ
ಅನುರಾಗದ ಮೆರವಣಿಗೆಯಲಿ
ಒಲವ ಮೇನೆಯೇರಿ
ನಗು ಸೂಸುವ ಮೊಗದಲಿ
ಸಾಗೋಣ ಬಾರೆ

ಪ್ರೀತಿಯ ಹೂಬೀದಿಯಲಿ
ಒಲವ ಇಂಪಿನ ಕಂಪಿನಲಿ
ಅನುಪಮ ಸ್ವರದಲಿ
ಒಲವಗೀತೆಯ ನಾದದಲಿ
ಸಾಗೋಣ ಬಾರೆ

ಪ್ರೀತಿಯ ರಂಗಿನ ಬೀದಿಯಲಿ
ಸವಿ ಕನಸಗಳ ಜೊತೆಯಲಿ
ಚಿತ್ತಾರದ ಬದುಕಿನಾಸೆಯಲಿ
ಸಿದ್ಧಿಸುವ ಬಾಳ ಕಮ್ಮಟದಲಿ 
ಸಾಗೋಣ ಬಾರೆ

ಪ್ರೀತಿಯ ಕರುಣೆಯ ಹಾದಿಯಲಿ
ದಯೆ ತುಂಬಿದ ಮನದಲಿ
ನವ ಬದುಕಿನ ಸ್ವಾಗತದಲಿ
ಹಂಗಿರದ ನುಡಿಗಳಲಿ
ಸಾಗೋಣ ಬಾರೆ

ಪ್ರೀತಿಯ ಸೋಜಿಗದ ಹಾದಿಯಲಿ
ಮಾಧುರ್ಯದ ಸ್ವರ್ಗದಾಸೆಯಲಿ
ಮಧುರ ಸಾಂಗತ್ಯದಲಿ
ಮನಸ್ಸುಗಳ ಲೀನದ ಲೀಲೆಯಲಿ
ಸಾಗೋಣ ಬಾರೆ

ರಾಮಚಂದ್ರ ಸಾಗರ್

Thursday, 3 May 2018

ಎಂದು..?

ಯಾಚನೆ ಎಂಬುದು ಕೊನೆಯಾಗುವುದೆ
ಹಸಿವಿನ ನೋವು ಮರೆಯಾಗುವುದೆ
ಪಾಮರನ ಎದೆಯಲಿ ದಯೆಯರಳುವುದೆ
ಬಡವನ ಮನೆಯಲಿ ಕಣ್ಣೀರು ಕರಗುವುದೆ?

ಹಸಿವು ಎಂಬುದಕ್ಕೆ ಜಾತಿಯಲ್ಲಿದೆ
ಅನ್ನ ನೀರು ಗಾಳಿಗೆ ಬೇದವೆಲ್ಲಿದೆ
ಶ್ರಮಿಕ ತನುವಿಗೆ ನಲಿವೆಲ್ಲಿದೆ
ಬೇಡುವ ಜೀವಕೆ ರಕ್ಷೆಯೆಲ್ಲಿದೆ!

ಬೇಡಿದ್ದೆಲ್ಲ ಜಗದೊಳು ದಕ್ಕರೆ
ದುಡಿದಿದ್ದೆಲ್ಲ ಜೋಳಿಗೆ ತುಂಬಿದರೆ
ಭಾಗ್ಯದ ಉಡುಗೊರೆ ಅರ್ಹನಿಗೆ ಒಲಿದರೆ
ನೀರು ಸುರಿಸುವ ಕಣ್ಣಿಗೆ ಕೆಲಸವಿಲ್ಲಿದೆ?

ಕೃಪಣದ ಮನವು ದಹನವಾಗುವುದೆ
ಸೊರಗಿದ ಜೀವಗಳು ನಗುವುದೆ
ನಿತ್ರಾಣ ಎಂಬುದು ಕೊನೆಯಾಗುವುದೆ
ಸಂಭ್ರಮವು ಜಗದಲಿ ನೆಲೆಯಾಗುವುದೆ?

ಧನಹೀನನ ಧನವಂತನು ಅಪ್ಪುವುದೆಂದು
ಯಾಚಕ ನಾಯಕನಾಗುವುದೆಂದು
ಹತಾಶೆಯ ಮಳೆ ನಿಲ್ಲುವುದೆಂದು
ಬಡವನ ಗುಡಿಸಿಲಲಿ ದೀಪಾವಳಿಯೆಂದು?

ರಾಮಚಂದ್ರ ಸಾಗರ್

Wednesday, 2 May 2018

ಕಾದಿರುವೆ ನಿನಗಾಗಿ

ಕೆಂಗುಲಾಬಿ ನೀ ನೀಡಿದ  ಹಾದಿಯಲಿ
ಪ್ರೀತಿಯ ಶುಭವಾಣಿ ನೀ ನುಡಿದ ಸವಿಯಲಿ
ಮೋಹದ ಬಂಧದ ಅಕ್ಕರೆಯ ಹಿತದಲಿ
ಕಾದಿರುವೆ ಗೆಳೆಯ ನಿನಗಾಗಿ
ನಿನ್ನೊಲುಮೆಯ ಪಥದ ಒಲುಮೆಗಾಗಿ

ಪ್ರೀತಿಯ ಸತ್ಕಾರ ನೀ ಕರುಣಿಸಿದ ಹಾದಿಯಲಿ
ಒಲವರಾಧನೆಯ ಜಪದಲಿ
ಲಕ್ಷ ಲಕ್ಷ ಕನಸುಗಳ ಜೊತೆಯಲಿ
ಕಾದಿರುವೆ ಗೆಳೆಯ ನಿನಗಾಗಿ
ನಿನ್ನೊಲುಮೆಯ ಸತ್ಕಾರದ ಪ್ರೀತಿಗಾಗಿ

ಬಾಳಿಗೆ ಸದ್ಗತಿ ನೀ ನೀಡಿದ ಹಾದಿಯಲಿ
ಸಂಬ್ರಮದ ಬದುಕಿನ ಕನಸಿನಲಿ
ಜೊತೆಯಾಗಲು ನಿನ್ನೊಲವ ಮೆರವಣಿಗೆಯಲಿ 
ಕಾದಿರುವೆ ಗೆಳೆಯ ನಿನಗಾಗಿ
ನಿನ್ನೊಲುಮೆಯ ಸದ್ಗತಿಯ ಬಾಳಿಗಾಗಿ

ಹೃದಯದ ಲಯ ನೀ ತಪ್ಪಿಸಿದ ಹಾದಿಯಲಿ
ಮೋಹದ ಪಾಶ ನೀ ಎಳೆದ ಮನದಲಿ
ಅವಿರತ ಕಾಡುವ ನಿನ್ನ ನೆನಪಿನಲೆಯಲಿ
ಕಾದಿರುವೆ ಗೆಳೆಯ ನಿನಗಾಗಿ
ನೀ ಕೈಹಿಡವ ಘಳಿಗೆಗಾಗಿ

ಒಂಟಿ ಜೀವದ ನೋವಿಗೆ ಕೊನೆಹಾಡಲು
ಉಲ್ಲಾಸದ ಬದುಕು ಪುಟಿದೇಳಿಸಲು
ಭೋರ್ಗರೆವ ಬವಣೆಯ ಹಾದಿಯಲಿ
ಕಾದಿರುವೆ ಗೆಳೆಯ ನಿನಗಾಗಿ
ನೀ ತರುವ ಸೌರಭದ ನಗುವಿಗಾಗಿ

ರಾಮಚಂದ್ರ ಸಾಗರ್