Thursday, 19 April 2018

ಭರವಸೆ

ನವ್ಯತೆಯ ಹಾದಿಯಲ್ಲಿ ಕೈ ಹಿಡಿದು ನಿಂತಾಗ
ರವಿಕಾಂತಿಯ ಆಶಯದ ಕಿರಣವು
ಬಾಳಿಗೆ ಅಭಯದ ಹರುಷವಾಯಿತು
ಬಾಳಲಿ ಬೆಳಗುವ ಭರವಸೆ ನೀಡಿತು

ಬೆಸೆದ ಹೃದಯಗಳ ಒಲುಮೆಯ ದನಿಯಲಿ
ಮುದ್ದು ಮಾತುಗಳ ಅಬ್ಬರದಲಿ
ಅನುರಾಗದ ಗೀತೆಯ ಸ್ವರಮೇಳದಲಿ
ಬಾಳಲಿ ಸುಶ್ರಾವ್ಯ ಗೀತೆಯರಳಿತು

ಮುಂಜಾವಿನ ಸೊಬಗಲ್ಲಿ ಅರಳಿದ ಹೂಗಳತ್ತಾ
ಪ್ರೀತಿಸುವ ಮನಗಳ ನವಿರು ನೋಟದಲ್ಲಿ
ಒಲವಾಂಕುರವು ಬೆಸೆದ ಸಡಗರದಲಿ
ಬಾಳಲಿ ಸಂಭ್ರಮದ ಹೂವರಳಿತು

ಮಲ್ಲಿಗೆಯ ಮುದ್ದಿಸುತ ರವಿ ಕಿರಣ ನಗುವಾಗ
ವಯ್ಯಾರಿ ನಿನ್ನ ಸವಿ ಸಾಂಗತ್ಯದಲಿ
ಪ್ರೇಮದ ಪಲ್ಲಕ್ಕಿಯಲಿ ಬಂಧಿಯಾಗಿರಲು
ಬಾಳಲಿ ಪ್ರೇಮಸಜೆಯು ನಮ್ಮದಾಯಿತು

ರವಿಕಾಂತಿಯ ಸೊಬಗಲಿ ವಸುಂಧರೆಯ ಸನ್ನಿಧಿಯಲಿ
ಕಣ್ತುಂಬ ಸೌಂದರ್ಯವೆ ಪಳಿಸುತಿರಲು
ಜಗದ ಗೂಡು ನಳನಳಿಸುವ ಚೆಲುವೆಯಾಯಿತು
ಸಂತಸದಲಿ ಚೆಲುವ ಬದುಕರಳಿತು  

ರಾಮಚಂದ್ರ ಸಾಗರ್

Wednesday, 18 April 2018

ಅಕ್ಷಯವಾಯಿತು

ಅಕ್ಕರೆಯಿಂದ ನೀ ಕೈಹಿಡಿದು ಸಾಗುತಾ
ಸಕ್ಕರೆಯಂತ ಮಾತುಗಳನು ಗುನುಗುತಾ
ಮನ ಮೋಹಿಸಿ ನೀ ಸಾಗುತಿರಲು
ನವ್ಯ ಕನಸುಗಳ ಅಕ್ಷಯವಾಗುತಿರಲು
ಪ್ರೇಮ ಸಾಗರವಾಯಿತು ನನ್ನೆದೆಯು

ನಿನ್ನ ಮೋಹದ ಮೊಗದ ಶಶಿಹಾಸದಲೆಯ
ನಗುಸುಧೆಯ ಅಕ್ಷಯಧಾರೆಯಲಿ
ಪ್ರೇಮಭವನಕೆ ನಿನ್ನ ಆಹ್ವಾನವಿರಲು
ಪ್ರೇಮಭವನವು ಸಾಕ್ಷಾತ್ಕಾರವಾಯಿತು
ನಮ್ಮೊಲವಿಗೆ ಆಸರೆಯಾಯಿತು

ಸೌಂದರ್ಯ ಸದನದತ್ತ ಸಾಗುತಾ
ಹೃದಯ ನಿವೇದನೆಗೆ ನೀ ಸಮ್ಮತಿಸಿ
ಪ್ರೇಮದ ಶುಭವಾಣಿ ನೀ ಝೇಂಕರಿಸುತಿರಲು
ಬಾಳಲಿ ನವೋಲ್ಲಾಸವು ಅಕ್ಷಯವಾಯಿತು
ಉಲ್ಲಾಸವು ಬದುಕಾಯಿತು

ನಿನ್ನ ವಯ್ಯಾರದ ನಡಿಗೆಯ 
ಸೋಜಿಗದ ಸಿರಿಯ ಬೆಂಬತ್ತಿ ನಡೆವಾಗ
ಸೌಂದರ್ಯಧಾರೆ ಅಕ್ಷಯವಾಗುತಿರಲು
ಚೆಲುವ ಪಥವು ಕಂಗೊಳಿಸುತಿರಲು
ಬಾಳಲಿ ಸೊಬಗಿನ ರಂಗೇರಿತು

ರಾಮಚಂದ್ರ ಸಾಗರ್

Thursday, 29 March 2018

ಪರಿಹಾಸ ಸಾಗರ


ಗೆಳತಿ..

ಪರಿಹಾಸ ಸಾಗರದ ಉಬ್ಬರವೇ
ನೀ ಜೊತೆ ನಗುವ ಕ್ಷಣವು
ಪರಿಹಾಸ ಸಾಗರದ ತಂಪಲೆಯೇ
ನೀ ಅಪ್ಪಿದ ಘಳಿಗೆಯು

ಪರಿಹಾಸ ಸಾಗರದ ತಂಗಾಳಿಯೇ
ನೀ ಕೈಬೀಸಿದ ಘಳಿಗೆಯು
ಪರಿಹಾಸ ಸಾಗರದ ನಿನದವೇ
ನೀ ಗುನುಗುವ ಗಾನವು

ಪರಿಹಾಸ ಸಾಗರದ ಸೌಂದರ್ಯವೇ
ನಿನ್ನ ಮೋಹದ ಮೊಗವು
ಪರಿಹಾಸ ಸಾಗರದ ಸೌಜನ್ಯವೇ
ನಿನ್ನ  ಪ್ರೀತಿಯ ಮಡಿಲು

ಪರಿಹಾಸ ಸಾಗರದ ನಮನವೇ
ನಿನ್ನ ಪಾವಿತ್ರ್ಯ ಬಂಧವು
ಪರಿಹಾಸ ಸಾಗರದ ಭರವಸೆಯೇ
ನಿನ್ನ ಅಭಯದ ನುಡಿಯು

ಪರಿಹಾಸ ಸಾಗರದ ಕಾಣಿಕೆಯೇ
ನಿನ್ನ ಒಲುಮೆಯ ರಥವು
ಪರಿಹಾಸ ಸಾಗರದ ಕಾತರವೇ
ನಿನ್ನ ನೆನಪುಗಳ ಜಾತ್ರೆಯು

ಪರಿಹಾಸ ಸಾಗರದ ನೌಕೆಯೇ
ನಿನ್ನೊಲುಮೆಯ ಬದುಕು
ಪರಿಹಾಸ ಸಾಗರದ ಕುರುಹೇ
ನಿನ್ನ ಮೋಹದ ಉಸಿರು

ರಾಮಚಂದ್ರ ಸಾಗರ್

Thursday, 15 March 2018

ಮದುವೆಯೆಂದರೇ..



ಮದುವೆಯೆಂದರೆ ಬದುಕೊಳಗೆ
ಪ್ರೀತಿ ದೀಪ ಬೆಳಗುವ ಸಂಭ್ರಮವು
ಮದುವೆಯೆಂದರೆ ಜೀವದೊಳಗೆ
ಎದೆಯದನಿಗೊಲಿದ ಜೀವಾತ್ಮವು

ಮದುವೆಯೆಂದರೆ ಜೀವದುಸಿರಿನಲಿ
ಬೆಸೆದ ಜೀವಗಳ ಉಲ್ಲಾಸವು
ಮದುವೆಯೆಂದರೆ ಗಾನದೊಳಗೆ
ಮೊಳಗುವ ಪದಗಳ ಅನುಬಂಧವೂ

ಮದುವೆಯೆಂದರೆ ಮನುಕುಲದುಳುವಿಗೆ
ಒಲುಮೆಯಾ ದಿವ್ಯ ಚೇತನವು
ಮದುವೆಯೆಂದರೆ ಜಗದೊಳಗೆ
ಮಮತೆ ಪ್ರೇಮದ ಹಂದರವು

ಮದುವೆಯೆಂದರೆ ಒಲವ ಜಲಧಿಯಲಿ
ಪಳಿಸುವ ಬೆಳುದಿಂಗಳ ಸೊಬಗು
ಮದುವೆಯೆಂದರೆ ಬಾಳ ಪಥದಲಿ
ಒಲವ ಸಾನಿಧ್ಯ ಸಿದ್ಧಿಸುವ ಘಳಿಗೆಯು

ಮದುವೆಯೆಂದರೆ ಪ್ರೇಮಸೌಧದೊಳಗೆ
ಒಲವಾಮೃತ ಸವಿಯುವ ಸಡಗರವು
ಮದುವೆಯೆಂದರೆ ಒಲವನೌಕೆಯೊಳಗೆ
ಸಾರಥಿಯಾಗುವ ಮನದಾಸೆಯು

ಮದುವೆಯೆಂದರೆ ಒಲವ ಮಂದಿರದೊಳಗೆ
ನಿತ್ಯ ಪೂಜಿಸುವ ಪೂಜ್ಯ ಬಂಧವೂ
ಮದುವೆಯೆಂದರೆ ಕುಟೀರದೊಳಗೆ
ಬೆಸೆದ ಮನಗಳ ಸಿಂಗಾರ ಬಂಧವೂ

ಮದುವೆಯೆಂದರೆ ಬಾಳೊಳಗೆ
ತ್ಯಾಗ ಮಮತೆಯ ಬಂಧವು
ಕಹಿ ಕರಗಿಸಿ ಸಿಹಿ ಸಿಂಚಿಸುವೆಡೆ
ಸಾಗುವ ಒಲುಮೆಯ ಹಠವು

ರಾಮಚಂದ್ರ ಸಾಗರ್