ನಿಧಾನಿಸು ಒಲವೇ ತುಸು ನೀ ನಿಧಾನಿಸು
ಆಲಿಸು ಬಾ ನನ್ನೆದೆಯ ದನಿಯನು
ನಲಿಸು ಬಾ ಮನದ ಮನೆಯನು
ಗುನುಗು ಅಕ್ಕರೆಯ ಸಿಹಿ ನುಡಿಯೊಂದನು
ರಮಿಸು ಈ ಪ್ರೇಮಿಯ ಮನಸನು
ಕೇಳು ಒಲವೇ ತುಸು ನೀ ಕೇಳು
ಒಲವಾರಾಧನೆಯ ಮೊರೆಯನು
ಮೋಹದ ಮನದ ಬಯಕೆಯನು
ಕಾತರಿಸುವ ಕನಸುಗಳ ದುಗುಡವನು
ಒಲವ ಮಂದಿರದ ಪ್ರಾರ್ಥನೆಯ ಸದ್ದನು
ಒಲಿದು ಬಾಳನು ಬೆಳಗು ಬಾ ಒಲವೇ
ಒಲವ ಸುಜ್ಞಾನವ ನೀಡು ಬಾ
ಅಭಯ ಹಸ್ತವ ಚಾಚು ಬಾ
ನಲ್ಮೆಯ ಬಾಳಿಗೆ ಸನ್ಮತಿ ನೀ ಕರುಣಿಸು ಬಾ
ಬಾಳಿಗೆ ಸದ್ಗತಿ ನೀನಾಗಿರು ಬಾ
ಒಲಿದು ಬಾ ಒಲವೇ ಪ್ರೀತಿಯ ಹೊನಲಾಗು ಬಾ
ಮನದ ದೇಹಳಿಯ ನೀ ದಾಟಿ ಬಾ
ಪ್ರೇಮದ ಹೊಗರು ನೀ ಹೊತ್ತು ಬಾ
ಪ್ರೀತಿಯ ನೌಕೆಯ ನೀ ಏರು ಬಾ
ಬಾಳಲಿ ತೀರದ ಜೀವಸೆಲೆಯಾಗು ಬಾ
ರಾಮಚಂದ್ರ ಸಾಗರ್
ಒಲವ ಮಂದಿರದ ಬಾಡದ ಕುಸುಮವೇ
ನಮ್ಮೊಲವಿನ ನಿರ್ಮಲ ನಗುವು
ಒಲವ ಗಾನದ ಮಧುರ ಸ್ವರವೇ
ನಮ್ಮೊಲವಿನ ಅನುರಾಗದ ನಗುವು
ಅನಂತಾನಂತ ಸೌಂಧರ್ಯದ ಹೊಳೆಯೇ
ನಗುತ ಜೊತೆಯಲಿ ಸಾಗುವ ಘಳಿಗೆಯು
ಪಾವಿತ್ರ್ಯ ಆಲಿಂಗನದ ಸುಂದರ ಬಾಳ್ವೆಯೇ
ನಗುತ ಸ್ವಾಗತಿಸುವ ನಮ್ಮೊಲವ ಪರಿಯು
ಮೇರೆಮೀರಿದ ಸೌಖ್ಯದೊಲವ ಕುರುಹೇ
ನವ್ಯತೆ ಅರಳಿಸುವ ನಮ್ಮೊಲವ ನಗುವು
ಪ್ರೇಮ ಪ್ರಭುತ್ವದ ಅಭಯದ ಸಂಕೇತವೇ
ಕಹಿ ಮರೆಸುವ ಸಿಹಿ ಗುಣದ ನಮ್ಮೊಲವ ನಗುವು
ಉಲ್ಲಾಸದ ಬದುಕಿನ ಸವಿ ಸಿಂಗಾರವೇ
ನಗುತ ನುಡಿವ ಸವಿ ಸಲ್ಲಾಪದ ನುಡಿಗಳು
ಉನ್ಮಾದ ಕನಸಿನ ಅವಿರತ ಹಠವೇ
ನಗುತ ಜಗ ಜಯಿಸಬೇಕೆಂಬ ನಮ್ಮೊಲವ ಹಂಬಲವು
ಒಲವ ಉಪಾಸನೆಯ ಭವ್ಯ ಫಲವೇ
ನಗುತ ಒಲವ ಮೇನೆಯೇರಿದ ನಮ್ಮೊಲವ ಸಂಭ್ರಮವು
ಉಪಲಾಲನೆಯಲಿ ಹೊಮ್ಮಿದ ಅಲೆಯೇ
ನಗುವ ಹೃದಯಗಳ ಪ್ರೇಮದ ಬಂಧವು
ರಾಮಚಂದ್ರ ಸಾಗರ್
ಎದೆಯ ದನಿಯು ತೀರುವ ಮೊದಲು
ಜೀವದೊಲುಮೆಯ ಉಸಿರಾಗು ಬಾ ಗೆಳತಿ
ಒಲವ ಪದಗಳು ಕಮರುವ ಮೊದಲು
ಅಭಯದಾ ಮಾತುಗಳೆರಡು ನೀ ನೀಡು ಬಾ ಗೆಳತಿ
ಕಣ್ಣ ನೋಟವು ಕ್ಷಯವಾಗುವ ಮುನ್ನ
ಒಲುಮೆಯ ಮಂದಿರದಲಿ ದೇವತೆಯಾಗು ಬಾ
ಕಾತರಿಸುವ ಕನಸು ಬೂಧಿಯಾಗುವ ಮುನ್ನ
ಒಲವ ಹಂದರದಲಿ ಆಸರೆಯಾಗಲು ಬಾ
ಕಾಂತಾರದ ದುರ್ಗಮದಲಿ ದಾರಿಯಾಗು ಬಾ
ಕಾಂತಿಹೀನ ಜಗದಲಿ ಬೆಳಕಾಗು ಬಾ
ಒಲವ ಕಾರ್ಪಣ್ಯ ಕರಗಿಸುವ ಚೈತನ್ಯವಾಗು ಬಾ
ಕಾವಳದ ಮನಕೆ ದೀಪವಾಗು ಬಾ
ಪ್ರೇಮದ ನಾವೆ ಸುಳಿಗೆ ತುತ್ತಾಗುವ ಮುನ್ನ
ಪ್ರೀತಿಯ ದಯೆ ಬಾಳಿಗೆ ಕರುಣಿಸಲು ಬಾ
ಪ್ರೀತಿಯ ತೇರಿಗೆ ಸಾರಥಿಯಾಗಲು ಬಾ
ಒಲವನೌಕೆಗೆ ಇಂಧನವಾಗು ಬಾ
ಬವಣೆಯಲಿ ಬದುಕು ಬತ್ತುವ ಮುನ್ನ
ಮಮತೆಯಲಿ ಬದುಕು ಅರಳಿಸು ಬಾ
ಸಾರುವೆ ತುಂಬಿದ ಹಾದಿ ದಿಗಿಲೇಳಿಸುವ ಘಳಿಗೆಯಲಿ
ನೋವಿನ ಶರಧಿಯ ಕರಗಿಸುವ ಬಾಳ ಗೆಳತಿಯಾಗು ಬಾ
ರಾಮಚಂದ್ರ ಸಾಗರ್
ಗೆಳತೀ..
ಬಾಳಲಿ ಸದ್ದಿಲ್ಲದೇ ಹರಿವ ಪ್ರೀತಿಯ ಹೊನಲಾದೆ
ಒಲವ ನಾವೆಗೆ ಉಲ್ಲಾಸದ ಹರಿಗೋಲು ನೀನಾದೆ
ಮಮತೆಯ ಸೆಲೆಯ ಜಲಧಿಯು ನೀನಾದೆ
ಬತ್ತದಾ ಸರೋವರದಲಿ ನಗುವ ಕಮಲವಾದೆ
ಸದಾ ಗುನುಗುವ ಗಾನದ ಸ್ವರವಾದೆ
ಸತ್ಕಾರದ ನಗುವಿನ ಕರುಣಾಳು ನೀನಾದೆ
ಒಲವ ಸದನದಲಿ ಸದಾ ಬೆಳಗುವ ದೀಪವಾದೆ
ಸಂಪನ್ನ ಜಗದಲಿ ನಡೆಸುವವಳು ನೀನಾದೆ
ಪ್ರೇಮ ಸಮಾಗಮದಲಿ ನವ್ಯತೆಯ ಕಣಜವಾದೆ
ಪ್ರೀತಿ ಸಂಕೀರ್ತನೆಯಲಿ ಒಲವಗಾಥೆಯಾದೆ
ಸುಯೋಗದ ಬಾಳಲಿ ಚೈತನ್ಯಧಾರೆಯು ನೀನಾದೆ
ಸುಗಂಧದ ಮಮತೆಯಲಿ ಅರಳಿದ ಕುಸುಮವಾದೆ
ಸೊಗಸು ತುಂಬಿದ ಒಲವ ಬನದ ಕುಸುಮವಾದೆ
ಒಲುಮೆಯ ಕಂಪು ಪಸರಿಸುವ ಸೌಗಂಧವಾದೆ
ನಗುವ ಚಂದಿರನ ಕಾಡುವ ಚೆಲುವ ತನೆಯು ನೀನಾದೆ
ಒಲವ ಹೂ ಮೊಗ್ಗು ಅರಳಿಸುವ ಕಿರಣವಾದೆ
ಅವಿರತ ಕಾಡುವ ಕನಸಿಗೆ ಉತ್ತರವು ನೀನಾದೆ
ಆನಂದದ ಆಭರಣವು ಬಾಳಿಗೆ ನೀ ತಂದೆ
ಆಭಾರದ ಗುಣಗಳ ಬಾಳಿಗೆ ತಂದವಳು ನೀನಾದೆ
ಆರಾಧಿಸುವ ಪ್ರೀತಿಗೆ ಮಂದಿರವು ನೀನಾದೆ
ರಾಮಚಂದ್ರ ಸಾಗರ್