Sunday, 30 April 2017

ನಿನ್ನ ಹೆಸರು..

ಬೆಡಗು ತುಂಬಿದ ನಿನ್ನ ನಗುವಿನಲ್ಲಿ 
ಸೆರೆಯಾಗಿದೆ ಗೆಳತಿ ನನ್ನ ಮನಸು
ನಿತ್ಯ ಕಾತರಿಸುವ ನನ್ನ ಮನದಲ್ಲಿ
ಉತ್ತರವಾಗಿದೆ ಗೆಳತಿ ನಿನ್ನ ಹೆಸರು..

ಹೊಸತನ ಕರುಣಿಸಿದ ನಿನ್ನ ಮೋಹದಲಿ
ಹೊಂಗನಸು ಕಾಣುತಿದೆ ಗೆಳತಿ ನನ್ನ ಹೃದಯ
ಬೆಡಗು ತುಂಬಿದ ನಿನ್ನ ವಾತ್ಸಲ್ಯದಲ್ಲಿ
ನಲಿಯುತಿದೆ ಗೆಳತಿ ನನ್ನ ಹೃದಯ
ನಿತ್ಯ ಗುನುಗುತಿದೆ ಗೆಳತಿ ನಿನ್ನ ಹೆಸರು..

ಕಾಂತಿ ತುಂಬಿದ ನಿನ್ನ ನಯನದಲ್ಲಿ
ಹೊಳೆಯುತಿದೆ ಗೆಳತಿ ಬಾಳ ಪಥವು
ಅಕ್ಕರೆ ಬೆಸೆವ ನಿನ್ನ ಮೋಹದಲ್ಲಿ
ಅರಳುತಿದೆ ಗೆಳತಿ ಸಾವಿರ ಕನಸು..
ಕಾರಣವಾಗಿದೆ ಗೆಳತಿ ನಿನ್ನ ಹೆಸರು..

ಬಾಳು ಕಾವಲಿಡುವ ನಿನ್ನ ಅನುರಾಗದಲ್ಲಿ
ಹೂವಾಗಿದೆ ಗೆಳತಿ ನಮ್ಮ ಬದುಕು
ಒಮ್ಮನ ಬೆಸೆದ ನಮ್ಮ ಬಾಳ್ವೆಯಲ್ಲಿ
ಬಲ ಬಂದಿದೆ ಮನಕೆ ಹಗಲಿರುಳು..
ಛಲ ತುಂಬಿದೆ ಗೆಳತಿ ನಿನ್ನ ಹೆಸರು..

ರಾಮಚಂದ್ರ ಸಾಗರ್

Saturday, 29 April 2017

ಸಿಹಿ ನೆನಪುಗಳು.,..

ಚಿನ್ನದಂತ ನಿನ್ನ ಸಿಹಿ ನೆನಪುಗಳು
ಮೆತ್ತನೆ ನನ್ನ ಹೆಗಲೇರಿ ಕುಳಿತಿರಲು
ಗೆಳತಿ ನಾ ಭಾರವಾದ ಮನದಲ್ಲಿ 
ಏಕಾಂಗಿ ನಾನೆಷ್ಟು ದೂರ ಸಾಗಲಿ..

ಒಂಟಿ ಜೀವ ನಾನೆಷ್ಟು ನೋವು ಸಹಿಸಲಿ
ಮುಳ್ಳು ಪಥದಲಿ ನಾ ಹೇಗೆ ಸಾಗಲಿ
ಸುಳ್ಳು ಮಾತಲಿ ಹೃದಯ ಹೇಗೆ ಸಂತೈಸಲಿ
ಬಿರು ಬೇಗೆಯಲಿ ಎಲ್ಲಿ ನಾನು ನೆಲೆಯಾಗಲಿ..

ಹಗಲು ರಾತ್ರಿ ಬಿಡುವು ನೀಡದೆ
ಅರೆ ನಿಮಿಷ ಸುಖವು ಕಾಣದೆ
ನಿನ್ನೊಲವಾರಾಧನೆಯ ಜಪದಲೆ
ಮನಸು ನೊಂದಿದೆ ವಿಧಿಯಿಲ್ಲದೆ...

ಬೆಳುದಿಂಗಳು ಹೊಳಪು ಹಿತವೆನಿಸದು
ತಂಗಾಳಿಯು ತಣಿವು ನೀಡದು
ಹೂಕಂಪು ಸೌಗಂಧವು ಸವಿಯೆನಿಸದು
ಅನ್ನ ನೀರು ತನುವು ಬೇಡದು..

ಗೆಳತೀ..
ನೀ ಬಾರದೇ ಭಾರವಾದ ಮನದಲ್ಲಿ 
ಒಂಟಿ ನಾನೆಷ್ಟು ದೂರ ಸಾಗಲಿ
ಮುಳ್ಳು ಕಂಟಿಯ ಹಾಸಿಗೆಯಲ್ಲಿ 
ಹೊದ್ದು ನಗುತ ಹೇಗೆ ಮಲಗಲಿ

          ರಾಮಚಂದ್ರ ಸಾಗರ್

Sunday, 23 April 2017

ಪ್ರೀತಿಯ ಮಾಲೆ

ಪ್ರೀತಿ ಎಂಬುದು ನನ್ನೆದೆಯಲಿ 
ನೀ ಬರೆದ ಅಕ್ಕರೆಯ ಮಾಲೆ
ಪ್ರೀತಿ ಎಂಬುದು ನನ್ನ ಮನದಲ್ಲಿ 
ನೀ ಹೆಣೆದ ಒಲವ ಮಾಲೆ..

ಪ್ರೀತಿ ಎಂಬುದು ನನ್ನ ಲೇಖನಿಯಲಿ 
ನೀ ಅಚ್ಚಾಗಿಸಿದ ಒಲವ ಪದಮಾಲೆ
ಪ್ರೀತಿ ಎಂಬುದು ಬಾಳ ಹೂದಾರಿಯಲಿ
ನೀ ಚೆಲ್ಲಿದ ಬೆಳುದಿಂಗಳ ಮಾಲೆ..

ಪ್ರೀತಿ ಎಂಬುದು ಜಾರುವ ಕಂಬನಿಯಲಿ
ನಗು ಮರಳಿಸುವ ನಿನ್ನ ಸಾನಿಧ್ಯಮಾಲೆ
ಪ್ರೀತಿ ಎಂಬುದು ಸುಡುವ ವೇದನೆಯಲಿ
ತಣಿವು ತುಂಬುವ ನಿನ್ನ ಅಭಯಮಾಲೆ..

ಪ್ರೀತಿ ಎಂಬುದು ಬಿರುಗಾಳಿಯಲಿ
ರಕ್ಷೆ ನೀಡಿದ ನಿನ್ನ ಮಡಿಲಾಸರೆಯ ವಾತ್ಸಲ್ಯಮಾಲೆ
ಪ್ರೀತಿ ಎಂಬುದು ಕಹಿ ಘಳಿಗೆಯಲಿ
ಸಿಹಿ ತುಂಬುವ ನಿನ್ನ ಅನುರಾಗದ ಮಾಲೆ..

ಪ್ರೀತಿ ಎಂಬುದು ಬಾಳ ಮಾಧುರ್ಯದಲಿ
ನೀ ತುಂಬಿದ ಸವಿಜೇನಿನ ಮಾಲೆ
ಪ್ರೀತಿ ಎಂಬುದು ಬಾಳ ನಕಾಸೆಯಲಿ
ನೀ ಚೆಲ್ಲಿದ ಒಲವ ರಂಗಿನ ಮಾಲೆ..

ರಾಮಚಂದ್ರ ಸಾಗರ್

Thursday, 20 April 2017

ಹೊಳಪಿದೆ..

ನಗುವ ನಿನ್ನ ನಯನದಲ್ಲಿ
ಸಾವಿರ ಕನಸು ಅರಳಿದೆ
ನಯನಕಾಂತಿ ಹೊಳಪಿನಲ್ಲಿ
ಬಾಳಿಗೆ ಭವ್ಯ ಹೊಳಪಿದೆ.. 

ನಿನ್ನೊಲವ ರಂಗಿನ ಜಗದಲಿ
ಪ್ರೀತಿಯ ಜಲಧಿ ಉಕ್ಕಿದೆ
ನವಿರು ದನಿಯ ಹಿತದಲಿ
ಸಹಿತ ಬಾಳುವ ಛಲವಿದೆ..

ಪ್ರೀತಿ ಅಂದಣದ ಮೆರವಣಿಗೆಯಲಿ
ಕೈಹಿಡಿದು ಸಾಗುವ ಮಾತಿದೆ
ಅಜರಾಮರ ಒಲವಾರಾಧನೆಯಲ್ಲಿ
ಜಗ ಜಯಿಸುವ ಜಪವಿದೆ..

ಅವಿರತ ಕಾಡುವ ಕನಸಿಗೆ
ವಿಶ್ರಾಂತಿ ಕಾಣುವ ಕನಸಿದೆ
ಅನುಪಮ ಪ್ರೀತಿ ಪದಗಳಿಗೆ
ಒಲವ ಗೀತೆಯ ಕಳೆಯಿದೆ..

ನಗುವ ನಿನ್ನ ನಯನದಲ್ಲಿ
ಹೊಸತರ ಹೊಳಪಿದೆ
ಕಳೆಯೇರುವ ಜಗದಲಿ
ನಿನ್ನೊಲವ ರಂಗಿನ ಸೊಬಗಿದೆ..

ರಾಮಚಂದ್ರ ಸಾಗರ್