Sunday, 29 January 2017

ನಿನ್ನ ಜೊತೆಯಲ್ಲಿ..

ಒಯ್ಯಾರಿ ನೀ ಹೂವಂತೆ ನಗುತಿರಲು 
ವಿಲಾಸತೆಯ ಬಾಳು ಅರಳಿದಂತೆ
ವಲ್ಲರಿ ನೀ ಕೈಹಿಡಿದು ಸಾಗುತಿರಲು 
ಹೂಲತೆಯು ಜೊತೆಯಾಗಿ ಸಾಗಿದಂತೆ..

ಜತೆಗಾತಿ ನೀನು ಜೊತೆಯಾಗಿರಲು
ಕಹಿಯೆಲ್ಲ ಬಾಳಲಿ ದೂರಾದಂತೆ
ಸಿಹಿಯೆಲ್ಲ ಬಾಳಲಿ ಜೊತೆಯಾದಂತೆ
ಸಂತಸವೆಲ್ಲ ಬಾಳಲಿ ಜಮಾವಣೆಯಾದಂತೆ..

ಸಂಪ್ರೀತಿ ನೀ ನನಗೆಂದೆ ಸುರಿಸುತಿರಲು
ಜಟಿಲ ದಾರಿಯಲ್ಲಿ ಗೆಲುವು ಒಲಿದಂತೆ
ತುಡಿವ ಮನದಲ್ಲಿ ಸಂತುಷ್ಟಿ ಅರಳಿದಂತೆ
ತುಮುಲದ ಬಾಳಲಿ ಜವಾಬು ಬಂದಂತೆ..

ಸಲಹುವ ನಿನ್ನ ನಯನವು 
ನನಗಾಗೆ ನಿತ್ಯ ತವಕಿಸುತಿರಲು
ಬಾಳಲಿ ಅಂಜಿಕೆಯು ಬಾರದೆಂದು 
ಮನದಲಿ ದುಗುಡವು ಮೂಡದೆಂದು..

ವಿಲಾಸತೆಯ ನಗುವಿನಲೆಯಲ್ಲಿ
ವಲ್ಲರಿಯ ಜೊತೆಯಲ್ಲಿ
ಬಾಳು ಅರಿವಿಲ್ಲದೇ ಸಾಗಿದಂತೆ
ಜಗದೆಲ್ಲವೂ ಪ್ರೀತಿಯಲೆಯಲ್ಲಿ ಬೆಸೆದಂತೆ...

              ರಾಮಚಂದ್ರ ಸಾಗರ್

Thursday, 26 January 2017

ಪ್ರೀತಿಯೆಂದರೇ....

ಪ್ರೀತಿಯೆಂದರೆ ಮನದೊಳಗೆ
ನೀ ಬೆಳಗಿದ ದೀವಟಿಯು
ಪ್ರೀತಿಯೆಂದರೆ ಬದುಕೊಳಗೆ 
ನೀ ಹಾಸಿದ ಹೂ ಪಥವು..

ಪ್ರೀತಿಯೆಂದರೆ ಉಸಿರೊಳಗೆ 
ನೀ ಬೆರೆಸಿದ ಅಮೃತವು
ಪ್ರೀತಿಯೆಂದರೆ ಕಾವ್ಯದೊಳಗೆ 
ನೀ ಬರೆಸಿದ ಅಕ್ಷರವೂ..

ಪ್ರೀತಿಯೆಂದರೆ ಗಾನದೊಳಗೆ 
ನೀ ಬೆರೆಸಿದಾ ಸ್ವರವೂ
ಪ್ರೀತಿಯೆಂದರೆ ಪದಗಳಲಿ
ನೀ ಬರೆಸಿದಾ ಒಲವ ಓಲೆಯು..

ಪ್ರೀತಿಯೆಂದರೆ ತುಸು ನಗುವಿನಲಿ
ನೀ ಅರಳಿಸಿದಾ ಆಸೆಯು
ನೀ ಕರಗಿಸಿದ ಕಹಿಯು
ನೀ ಮೂಡಿಸಿದಾ ಭರವಸೆಯೂ..

ಪ್ರೀತಿಯೆಂದರೆ ಒಲವ ಜಗದೊಳಗೆ
ನೀ ತುಂಬಿದ ಒಲವ ರಂಗು
ಪ್ರೀತಿಯೆಂದರೆ ಮನದ ಮನೆಯೊಳಗೆ
ನೀ ಉದಿತ ದೇವತೆಯು..

        ರಾಮಚಂದ್ರ ಸಾಗರ್

ನೀನು-ನಾನು

ಚಿನ್ನದಂತ ನಗುವು 
ಹೊತ್ತು ತಂದೆ ನೀನು
ಜೇನಂತ ಸವಿಯು 
ಹರಡುತಿರುವೆ ನೀನು..

ಒಲವ ಬನದಲಿ 
ಅರಳಿ ನಗುವ ಹೂವು ನೀನು
ಪ್ರೇಮಿ ಮನದಲಿ ನಲಿಸಿ 
ನಲಿವ ಚೆಲುವೆಯು ನೀನು..

ನಟ್ಟಿರುಳು ಕಾಡುವ 
ಕನಸಿಗೆ ಮದ್ದು ನೀನು
ಬೆಳುದಿಂಗಳು ಪಥದಲಿ 
ನಡೆಸುವ ಸಾಧನವು ನೀನು..

ನಲುಮೆಯ ಹೊನಲು 
ಹರಿಸಿ ನಗುವವಳು ನೀನು
ನವ ರಾಗದಲ್ಲಿ ಮನ 
ತೇಲಿಸಿದವಳು ನೀನು..

ನವಿರು ದನಿಯಲ್ಲಿ 
ಒಲವಗಾನ ಹಾಡಿದವಳು 
ಹಂಬಲದ ಕನಸಿಗೆ 
ರಂಗು ಬಳಿದವಳು ನೀನು..

ಹಂದೆ ಮನಕೆ 
ತುಸು ನಗವಿನಲಿ ಸಂತೈಸಿದವಳು 
ಹವಣಿಸುವ ನಿನ್ನ ಕಣ್ಣೋಟಕೆ 
ಸೋತವನು ನಾನು..

       ರಾಮಚಂದ್ರ ಸಾಗರ್

Friday, 20 January 2017

ಬಾರೆ ಕಮಲಿ..

ಉಲ್ಲಾಸದ ಮೇನೆಯಲ್ಲಿ ಸಾಗೋಣ ಬಾರೆ ಕಮಲಿ
ಉಸಿರು ಉಸಿರಿನಲ್ಲಿ ಜೊತೆಯಾಗೋಣ ಬಾರೆ ಕಮಲಿ
ಉದಾರತೆ ನಗುವಿನಲ್ಲಿ ಚೆಲ್ಲೋಣ ಬಾರೆ ಕಮಲಿ
ಉನ್ಮಾದ ಒಲವಿನಲ್ಲಿ ತೇಲೋಣ ಬಾರೆ ಕಮಲಿ..

ಸಾರುವೆ ಇರದ ದಾರಿ ನಮ್ಮದಾಗಲಿ ಕಮಲಿ
ವಿರಸವೇ ಇರದ ಬಾಳು ನಮ್ಮದಾಗಲಿ ಕಮಲಿ
ಪ್ರೇಮ ಸಜಾದಲ್ಲಿ ಬಾಳೋಣ ಬಾರೆ ಕಮಲಿ
ಸಜ್ಜನಿಕೆ ಬಾಳಿನುದ್ದ ತೋರೋಣ ಬಾರೆ ಕಮಲಿ..

ಸದರ ಸಲ್ಲಾಪದಲ್ಲಿ ಗುನುಗೋಣ ಬಾರೆ ಕಮಲಿ
ಸಂಕೋಲೆ ನಗುವಿನಲ್ಲಿ ತೊಡಿಸಿಬಿಡು ಬಾರೆ ಕಮಲಿ
ಮನದ ಸದನಲ್ಲಿ ನೀ ನೃತ್ಯವಾಡು ಬಾರೆ ಕಮಲಿ
ಸತ್ಕಾರ ನಯನದಲ್ಲಿ ನೀಡುಬಾರೆ ಕಮಲಿ..

ಸತಾಯಿಸುವ ಕನಸನು ದೂರಾಗಿಸು ಬಾರೆ ಕಮಲಿ
ಕಾವಳ ಕರಗಿಸಿ ಬೆಳಕನು ಮೂಡಿಸು ಬಾರೆ ಕಮಲಿ
ಕಾರ್ಗಾಲದ ಕಾಲದಲ್ಲಿ ಮಿಂಚಾಗಿ ಬಾರೆ ಕಮಲಿ
ಕಂದೀಲು ಪ್ರೀತಿಯಲ್ಲಿ ಹಚ್ಚೋಣ ಬಾರೆ ಕಮಲಿ..

ಕಾಪಿಡುವೆ ಕದಲದೇ ಬಾಳಿನುದ್ದಕೂ
ನೀ ತುಸು ನಗುತಿರು ಸಾಕು ಬಾರೆ ಕಮಲಿ..

            ರಾಮಚಂದ್ರ ಸಾಗರ್