Saturday, 14 January 2017

ಅಂಜಿಕೆ ಮನ ಕರಗಿಸಿದವಳು...

     ನಗುವಿನ ಮುಖವಾಡ ಹೊದ್ದು ಅಂದು ಶ್ಯಾಮಲೆಯೆದುರು ಕುಳಿತಿದ್ದೆ, ಅವಳಿಗೆ ಯಾವುದೂ ಅರಿವಿಗೆ ಬಾರದಂತೆ ನಟಿಸುವುದು ನನ್ನ ಕೆಲಸವಾಗಿತ್ತು, ಅದು ಅರೆನಿಮಿಷವೂ ಅತೀ ಕಠಿಣವೆಂದು ಅರಿವಿತ್ತು, ಆದರೂ ಮನಕ್ಕೆ ನಾನು ಅಪ್ಪಣೆ ನೀಡಿಯಾಗಿತ್ತು, ಯಾವುದೇ ಕಾರಣಕ್ಕೂ ಅವಳಿಗೆ ನನ್ನ ಮನದ ದುಗುಡ ಹೊರಬರಬಾರದೆಂದು. ಅವಳು ಎಲ್ಲವನ್ನು ನುಡಿಯುತ್ತಾ ಒಮ್ಮೆ ನನ್ನೆಡೆ ನೋಡಿದಳು, ಮನದಲ್ಲಿ ಕೊಂಚ ಅಂಜಿಕೆ ಮೂಡಿದರು ಕಾಣದಂತೆ ನಟಿಸುವುದು ಮೊದಲೇ ನಿರ್ದರಿಸಿದ್ದರಿಂದ ನಗುತಲೇ ಸುಮ್ಮನಿದ್ದೆ. ಆದರೂ ಮನದ ತಳಮಳವ ಹೊರಹಾಕಲಾದೀತೇ..? ಸುಮಾರು 5 ವರ್ಷಗಳು ಜೊತೆಯಲ್ಲೇ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದೆವು, ಇಬ್ಬರೂ ಒಟ್ಟಿಗೆ ಸಾವಿರಾರು ಘಳಿಗೆ ಕೂತು ಹರಟೆಹೊಡೆದೆವು. ನೂರಾರು ಸಾರಿ ಎದುರು ಕೂತು ಊಟ ಮಾಡಿದ್ದೆವು. ಮಾಡಿದ ಚೇಷ್ಟೆ, ಆಡಿದ ತುಂಟಾಟ ಎಲ್ಲವೂ ಕಣ್ಣೆದುರು ಬರುತ್ತದೆ, ಒಮ್ಮೆಲೇ ನಾಳೆಯಿಂದ ಇವಳು ಜೊತೆಯಿರುವುದಿಲ್ಲವೆಂಬ ಕೂಗು ಗಟ್ಟಿಯಾಗುತ್ತದೆ. ರೋಧಿಸುವ ಮನದ ಜೊತೆಗೆ ನಗುವ ನಟನೆಯ ಮೊಗದಲ್ಲಿ ನಾ ಸುಮ್ಮನೆ ಕುಳಿತಿದ್ದೆ. ಅವಳು ಅವಳಿಷ್ಟದ ಪ್ರಶ್ನೆಗಳನ್ನು ಕೇಳುತ್ತಾ ಸಾಗುತ್ತಿದ್ದಳು, ನಾನು ಉತ್ತರಿಸಲು ತೊಡಕಾದರೂ ಪ್ರಯತ್ನಿಸುತ್ತಿದ್ದೆ. ಆಗ ಅವಳ ಗಮನ ನನ್ನೆಡೆ ಬೀಳುವುದು ತಡವಾಗಲಿಲ್ಲ. ಕೇಳಿಯೇ ಬಿಟ್ಟಳು, ಇಂದು ನೀನು ನಿನ್ನೆಯಂತೆ ಇಲ್ಲ, ಏನಾಗಿದೆ ಎಂದಳು. ನಾನೂ ಏನೂ ಇಲ್ಲ, ಹಾಗೇನಿಲ್ಲವೆಂದೆ, ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು. ನನಗೆ ಮನದ ರೋಧನ ತಡೆಯುವುದು ಕಠಿಣವಾಗುತ್ತಿತ್ತು, ಆದರೂ ಮುಖವಾಡದ ಮುಖ ಹೊದ್ದು ನಗಲು ಪ್ರಯತ್ನಿಸತೊಡಗಿದೆ. ಅವಳು ನೇರವಾಗಿ ನನ್ನನ್ನೇ ನೋಡುತ್ತಾ ಕಾರಣವನ್ನು ಬಯಸಿದಂತಿತ್ತು. 

     ಹೌದು, ಇನ್ನು ನನ್ನಿಂದ ಮುಚ್ಚಿಡಲು ಸಾಧ್ಯವೇ, ಇಲ್ಲವೆಂದು ಮನ ಸೋಲೊಪ್ಪುವ ಸಮಯ ಬಂದಂತೆನಿಸಿತು. ಅವಳು ನನ್ನ ಹತ್ತಿರ ಬಂದು ಹೇಳದೇ ನೀನು ಕಾರಣ ಎಷ್ಟು ದೂರ ಹೋಗುತ್ತೀಯ, ಅದು ನಿನ್ನಿಂದಲೂ ಸಾಧ್ಯವಿಲ್ಲ ಮತ್ತು ನನ್ನಿಂದಲೂ ಸಾಧ್ಯವಿಲ್ಲ. ಮತ್ತೆ ನೀನು ಯೋಚಿಸು, ಅವಸರದಲ್ಲಿ ಎಲ್ಲವನ್ನು ಮುಗಿಸಬೇಡ, ಇನ್ನೊಮ್ಮೆ ಅವಲೋಕಿಸು, ನಮ್ಮ ನಡುವಿನ ಬಂಧವು ಅಮರ ಸ್ನೇಹದೊಡಗೂಡಿದ ಪ್ರೇಮ ಬಂಧ. ಅದನ್ನು ಕಾಪಿಡುವ ಸಿದ್ದಿಯು ನಮ್ಮದಾಗಲಿ, ಅಂಜಿಕೆಯೇತಕೆ ಎಂದು ನನ್ನ ಕೈಹಿಡಿದು ಕೇಳಿದಳು. ನನಗೆ ಅವಳ ಪ್ರೀತಿಯನ್ನು ನಿರಾಕರಿಸುವ ಶಕ್ತಿಯು ಇಲ್ಲ, ಜೊತೆಗೆ ಅವಳಿಲ್ಲದೇ ಬದುಕುವ ಧೈರ್ಯವೂ ಇಲ್ಲ, ಪ್ರತಿಘಳಿಗೆಯು ಅವಳಿಗಾಗಿ ಹಪಹಪಿಸುವ ಈ ಮನ, ಅವಳಂಬಿ ಜೀವ, ಅವಳಿರುವ ಕನಸು, ಅವಳಿರುವ ದಾರಿಯು ಎಲ್ಲವನ್ನು ಪ್ರೀತಿಸುವ ನಾನು ಅವಳಿಗಾಗಿ ಮನ ಹಂಬಲಿಸುತ್ತಿದ್ದರು ಮುಖವಾಡದ ಮೊಗದಲ್ಲಿ ಅವಿತು ಕುಳಿತಿದ್ದೆ. ಕಾರಣವದೇ, ಮತ್ತೆ ನನ್ನದೂ ಅದೇ ಉತ್ತರ. ನಮಗೀಗ 23 ಹರಯ, ನಾವೀಗ ಕಾಲೇಜು ಮುಗಿಸಿದ್ದೇವಷ್ಟೇ. ನಮಗೀಗ ದುಡಿದು ತಿನ್ನುವ ತಾಕತ್ತು ಇರಬಹುದು, ಆದರೆ ಉದ್ಯೋಗ ಸಿಗಬೇಕು, ನಾವು ನಮ್ಮ ಬದುಕಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬೇಕು. ಅಷ್ಟು ಉತ್ತಮವಲ್ಲದಿದ್ದರೂ ಬದುಕಿನ ಬಂಡಿ ಸಾಗುವಂತಿರಬೇಕೆಂಬ ಹಂಬಲ. ಆದರೆ ಈಗಷ್ಟೆ ಓದು ಮುಗಿಸಿ ಹೊರಬರುತ್ತಿರುವ ನಾನು ಇವಳಿಗೇನೆಂದು ವಚನ ನೀಡಲಿ. ನೀಡಿದ ಮಾತು ಉಳಿಸಿಕೊಳ್ಳಲು ಸಾಧ್ಯವೇ..? ಏನೇ ಆದರೂ ನೈಜ ಜೀವನಕ್ಕೂ ಕಾಲೇಜು ಜೀವನದ ತುಂಟಾಟಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮ ಐದು ವರ್ಷಗಳ ಸ್ನೇಹ, ಪ್ರೀತಿಯೆಲ್ಲವೂ ಇಲ್ಲಿಯೇ ಕೊನೆಯಷ್ಟೇ.. ಇವಳಿಗೆ ನಾನು ಮದುವೆಯಾಗುವುದು ಸಾಧ್ಯವೇ ಎಂಬ ಕೊರಗು. ಮನದಲ್ಲೇನೋ ಇವಳೇ ಬೇಕೆಂಬ ಹಂಬಲ. ಆದರೆ ಅವಳ ಮನೆಯಲ್ಲಿ ಆಗಲೇ ಅವಳಿಗೆ ವರಾನ್ವೇಷಣೆ ಮಾಡಿ ಮುಗಿಸಿದ್ದಾರೆ. ಅವಳಿಗೆ ಕಾಲೇಜು ಮುಗಿದೊಡನೆ ಮದುವೆಮಾಡುವುದಾಗಿ ಅವರ ಮನೆಯಲ್ಲಿ ನಿರ್ಧರಿಸಿಯಾಗಿದೆ. ಆದರೆ ಅವಳದು ಒಂದೇ ಹಠ. ತಾನೂ ಇನ್ನೂ ಓದುವುದಾಗಿ ಮನೆಯಲ್ಲಿ ನಂಬಿಸುತ್ತೇನೆ, ಇನ್ನೂ ಓದುತ್ತೇನೆ, ನೀನು ಅಷ್ಟರಲ್ಲಿ ಒಂದೊಳ್ಳೆಯ ಕೆಲಸವನ್ನು ಅಂದರೆ ನಮ್ಮ ಪುಟ್ಟ ಸಂಸಾರ ಬದುಕುವಷ್ಟು ಸಂಪಾದನೆ ಬರುವ ಸಣ್ಣ ಕೆಲಸವಾದರೂ ಸಾಕು, ನಮ್ಮ ಬದುಕಿಗೆ ಸಿರಿತನ ಹಂಗಿಲ್ಲ, ನೀನು ನಿನ್ನ ಪಾಡಿಗೆ ನಿನ್ನ ಕೆಲಸಮಾಡು ಎಂಬುದು ಅವಳ ಹಠ. ನನ್ನ ಮನದಾಸೆಯೂ ಅದೇ. ಆದರೆ ಕಾಲೇಜು ಮುಗಿದ ಕೂಡಲೇ ಕೆಲಸಸಿಗಬೇಕು. ಬೇಗನೇ ವರ್ಷ ಕಳೆಯುವುದರೊಳಗಾಗಿ ಅವಳನ್ನು ಸಾಕುವಷ್ಟು ಶಕ್ತಿಯನ್ನು ನಾನು ಹೊಂದಬೇಕು. ಅವಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ನನಗಾಗಿ ಶಬರಿಯಂತೆ ಕಾಯುವ ಅವಳ ಮನದ ಬವಣೆಗೆ ನಾನು ಕೊನೆಕಾಣಿಸಬೇಕು. ಒಲವ ಹಂದರದಲ್ಲಿ ನಾನು ಅವಳು ಒಂದಾಗಬೇಕು. ಇದೆಲ್ಲವೂ ನನ್ನ ಮನದಾಸೆ, ಆದರೆ ಅದು ನೆರವೇರುವುದೇ ಎಂಬ ಗೊಂದಲ ಮತ್ತು ನೋವು. ಆಯಿತು ಈಗ ಮನ ನಿರ್ಧರಿಸಿತು, ಅವಳನ್ನು ಬಿಟ್ಟು ಬದುಕುವುದು ನನ್ನಿಂದ ಸಾಧ್ಯವಿಲ್ಲ, ಅವಳಿಗಿರುವ ಧೈರ್ಯದರ್ಧವಾದರೂ ನಾನು ಹೊಂದದಿದ್ದರೇಗೆ ಎಂಬ ಛಲದಲ್ಲಿ ಅವಳಿಗೆ ಮಾತು ಕೊಟ್ಟೆ. ಗೆಳತೀ ನಾನು ಕಂಡಿತಾ ನಿನಗಾಗಿ ಪಣತೊಡವೆ, ನನ್ನವಳನ್ನಾಗಿ ಮಾಡಿಕೊಳ್ಳಲು ದೇವರಲ್ಲಿ ಬೇಡುವೆನೆಂದು ಅವಳಿಗೆ ಮಾತು ಕೊಟ್ಟೆ. ಅವಳು  ಕಣ್ಣಲ್ಲಿ ಆಗ ಎರಡು ಹನಿ ನೀರುಗಳುದುರಿದವು ಮೆತ್ತನೇ ಜೊತೆಯಲ್ಲಿ ನನ್ನ ಕಣ್ಣಲ್ಲೂ ಕೂಡ. 

ಅವಳ ಮಾತನ್ನು ನನ್ನ ಮನದ ಬಯಕೆಯನ್ನು ಈಡೇರಿಸಿಕೊಳ್ಳಬೇಕೆಂದರೆ ಈಗ ನಾನು ಒಂದು ಒಳ್ಳೆಯ ಕೆಲಸವನ್ನು ಪಡೆಯಬೇಕು, ಆದರೆ ನಾನಿನ್ನೂ ಈಗಷ್ಟೇ ಕಾಲೇಜು ಮುಗಿಸಿಬಂದವನು. ಅನುಭವವಿಲ್ಲದೇ ಎಲ್ಲಿಯೂ ಬೇಗನೇ ಕೆಲಸ ಸಿಗುವುದಿಲ್ಲ. ಏನೇ ಆಗಲಿ ಬೆಂಗಳೂರಿನಲ್ಲಿರುವ ನನ್ನ ಗೆಳೆಯನನ್ನು ಭೇಟಿಮಾಡಿ ಬರೋಣವೆಂದು ನಿರ್ಧರಿ ಪ್ರಯಾಣ ಬೆಳೆಸಿದೆ. ಗೆಳೆಯನೊಡಗೂಡಿ ಒಂದು ವಾರದ ಕಾಲ ಬೆಂಗಳೂರನ್ನು ಅಲೆದಾಡಿದೆ, ಹೇಳಿಕೊಳ್ಳುವಂತಹದೇನು ಕೆಲಸ ಸಿಗಲಿಲ್ಲ, ಗೆಳೆಯ ರೂಂಗೆ ಬರುವುದು ರಾತ್ರಿ ಹತ್ತಕ್ಕೆ.  ಬೇಸರದಲ್ಲಿ ರಾತ್ರಿ ಹಾಗೆಯೇ ಮಲಗಿದ್ದೆ. ಅಷ್ಟೊತ್ತಿಗೆ ಗೆಳೆಯ ಯಾರೋ ಸ್ನೇಹಿತರೊಡನೆ ಬಂದ. ಅವರು ಕೃಷ್ಣಪ್ಪ ಎಂದೂ ಸಣ್ಣ ಕೈಗಾಡಿಯಲ್ಲಿ ಊಟದ ಕ್ಯಾಂಟೀನ್ ನಡೆಸುತ್ತಾರೆಂದು ಪರಿಚಯಿಸಿದ. ನನಗೆ ಅವರದೇ ಕ್ಯಾಂಟೀನ್ ನಿಂದ ತಂದ ಊಟವೆಂದು ಹೇಳಿ ಊಟಕ್ಕೆ ಕರೆದ. ಎಲ್ಲರೂ ಊಟ ಮಾಡುತ್ತಾ ನಮ್ಮ ನಮ್ಮ ಪರಿಚಯ ಇನ್ನೂ ಹತ್ತಿರವಾಯಿತು. ನನ್ನ ಮನದಾಸೆಯು ಕೃಷ್ಣಪ್ಪನವರಿಗೆ ಅರ್ಥವಾಯಿತು. ನಾನು ಕಾಲೇಜು ಓದಿ ಕೆಲಸಕ್ಕಾಗಿ ಅಲೆಯುವುದು ದಿನಾ ಬಂದು ರಾತ್ರಿ ಸ್ನೆಹಿತನ ರೂಂನಲ್ಲಿ ಮಲಗುವುದು ಮಾಮೂಲಾಯಿತು. ದಿನಗಳುರುಳಿ ತಿಂಗಾಯಿತು, ತಿಂಗಳುಗಳುರುಳಿ ಹತ್ತಿರ ಅರ್ಧವರ್ಷವು ಮುಗಿಯಿತು, ಮನದಲ್ಲೂ ದುಗುಡ ಹೆಚ್ಚತೊಡಗಿತು. ಒಂದು ದಿನ ಕುಳಿತಿದ್ದಾಗ ನಾನು ಕೃಷ್ಣಪ್ಪನಿಗೆ ಕೇಳಿದೆ, ನೀವು ಒಂದು ದಿನಕ್ಕೆಷ್ಟು ದುಡಿಮೆಯಾಗುತ್ತದೆಂದು, ಅವರು 4 ರಿಂದ 5 ಸಾವಿರ, ಎಲ್ಲಾ ಖರ್ಚು ಕಳೆದು 7 ರಿಂದ 8 ನೂರು ಉಳಿಯುತ್ತದೆಂದರು. ಜೊತೆಗೆ ನನ್ನದೇ ಕ್ಯಾಂಟೀನ್ ಆದ್ದರಿಂದ ಯಾರದ್ದೂ ಹಂಗಿಲ್ಲವೆಂದರು, ನನಗೆ ಅತೀವ ಸಂತಸವಾಯಿತು. ಸಣ್ಣ ಕೈಗಾಡಿಯಲ್ಲಾದರೂ ಈತನ ದುಡಿಮೆ ಮತ್ತು ನೆಮ್ಮದಿಯ ಜೀವನವನ್ನು ಮೆಚ್ಚಬೇಕೆಂದು ಕೊಂಡೆ, ನನಗೂ ಮನದಲ್ಲಿ ಒಂದು ಆಸೆಯರಳಿತು, ನಾನೀಗ ಉನ್ನತ ವ್ಯಾಸಾಂಗ ಮಾಡಿರಬಹುದು, ಆದರೆ ನಾನೊಬ್ಬ ಬದುಕುವಷ್ಟು ದುಡಿಮೆಯ ಕೆಲಸ ಸಿಗದೇ ಆರು ತಿಂಗಳು ಕಳೆದಾಯ್ತು, ಇನ್ನು ಹೀಗೇ ಮುಂದುವರಿದರೆ ನನ್ನ ಶ್ಯಾಮಲೇ ನನಗೆ ದೊರೆಯುವುದು ಸಾಧ್ಯವೇ ಇಲ್ಲವೆಂಬ ಕೊರಗು ಗಟ್ಟಿಯಾಯಿತು. ಒಮ್ಮೆಗೇ ರಾತ್ರಿ ಸ್ನೇಹಿತ ಬೆಳಿಗ್ಗೆ ಏಳುವುದನ್ನೇ ಕಾಯುತ್ತಾ ರಾತ್ರಿಯಿಡಿ ನಿದ್ರೆ ಬಾರದೇ ಕನವರಿಸುತ್ತಾ ಬೆಳಿಗ್ಗೆ ಎದ್ದವನೇ ಸ್ನೇಹಿತನನ್ನ ಕೇಳಿದೆ, ನಾನು ಕೃಷ್ಣಪ್ಪನಂತೆ ಒಂದು ಕ್ಯಾಂಟೀನ್ ಮಾಡುತ್ತೇನೆ ನೀನು ಸಹಕರಿಸು ಎಂದೆ, ಜೊತೆಗೆ ನಿಧಾನವಾಗಿ ಬೇರೆಕಡೆ ಕೆಲಸವನ್ನು ಜೊತೆಯಲ್ಲೇ ಹುಡುಕುವೆ ಎಂದೆ. ಆತ ಒಮ್ಮೆ ಜೋರಾಗಿ ನಕ್ಕು ಹೇಳುವುದೆಲ್ಲ ಸುಲಭ, ಮಾಡುವುದಲ್ಲವೆಂದು ಸುಮ್ಮನೇ ನಡೆದ, ಸಾಗುತ್ತಾ ಮೊದಲು ನಿನ್ನ ಹುಡುಗಿಗೆ ಕೇಳು ಎಂದಾ.. ಮನದಲ್ಲಿ ಹೌದಲ್ಲವೇ ಎಂದೇ. ಆದರೂ ಎಲ್ಲವನ್ನೂ ಹೇಳುವುದಕ್ಕಿಂತ ಮಾಡುವುದೇ ಮೊದಲು ಲೇಸೆಂದು ಕುಳಿತೆ. ಮತ್ತೆ ಹಠವಿಡಿದೆ ಸ್ನೇಹಿತನ ಬಳಿ. ಆತ  ಕೃಷ್ಣಪ್ಪನೊಡನೆ ಮಾತಾಡೋಣವೆಂದ. ಕಾದು ಕುಳಿತು ಕೃಷ್ಣಪ್ಪನೊಡನೆ ಮಾತಾಡಿದೆವು, ಆಗ ಆತ ಹೇಳಿದ್ದು ಕೇಳಿ ನನಗೂ ಆಶ್ಚರ್ಯವಾಯಿತು. ಕೃಷ್ಣಪ್ಪನೂ ನನಗಿಂತ ಹೆಚ್ಚಿಗೆ ಓದಿದವರು, ಅವರೂ ಎಲ್ಲೂ ಕೆಲಸಸಿಗದೇ ಈ ವೃತ್ತಿಯನ್ನು ಆಯ್ದುಕೊಂಡವರು, ಅವರು ನನ್ನ ಪರಿಸ್ಥಿತಿಯನ್ನು ಆಗಲೇ ಅರಿತವರಾದ್ದರಿಂದ ನನಗೆ ಸಹಕರಿಸಿದರು, ಸ್ನೇಹಿತನ ಕಾಸೇ ಮೊದಲು ನನಗೆ ಬಂಡವಾಳ, ಜೊತೆಗೆ ಕೃಷ್ಣಪ್ಪರ ಹಾರೈಕೆ. ದಿನಕಳೆದಂತೆ ವ್ಯಾಪಾರವು ಉತ್ತಮವೆನಿಸಿತು, ನಾನೂ ಕೃಷ್ಣಪ್ಪ ಸೇರಿ ಒಟ್ಟಿಗೇ ಒಂದು ಸಣ್ಣ ಹೋಟೇಲ್ ತೆಗೆಯುವ ಆಲೋಚನೆ ಮಾಡಿದೆವು. ಅದರಂತೆ ಎಲ್ಲವೂ ಸಿದ್ದಿಸಿತು, ಇದರಲ್ಲೇ ನನ್ನ ಮನ ನಲಿಯತೊಡಗಿತು, ಶ್ಯಾಮಲೆಯ ತವಕ ಮನದಲ್ಲಿ ಇನ್ನು ಹೆಚ್ಚತೊಡಗಿತು.
 
     ಈಗ ಮೊದಲ ಬಾರಿಗೆ ಅವಳನ್ನು ಕಾಣಲು ಅವಳೂರಿಗೆ ಹೊರಟಿದ್ದೇನೆ, ಅವಳಿಗಾಗಿ ಕೊಂಡ ಪ್ರೀತಿಯ ವಸ್ತುಗಳನ್ನು ನನ್ನ ಬಳಿ ಪ್ರೀತಿಯಿಂದ ತೆಗೆದುಕೊಂಡು ಬ್ಯಾಗ್ ನಲ್ಲಿಟ್ಟುಕೊಂಡು ಹಾದಿ ಸವೆದಂತೆ ಆಗಾಗ್ಗೆ ಬ್ಯಾಗ್ ನ್ನು ಗಮನಿಸುತ್ತಾ ಸಾಗಿದೆ. ಊರಿಗೆ ಬಂದವನೇ ನಾವು ದಿನಾ ಸಂಜೆ ಭೇಟಿಯಾಗುವ ಸ್ಥಳದಲ್ಲಿ ಗಜವನ್ನೇ ಗೆದ್ದಂತೆ ಸಾಗಿದೆ. ಅವಳಿಗಾಗಲೇ ನಾನು ಬರುವುದು ತಿಳಿದಿದ್ದರಿಂದ ಅವಳು ನನಗಾಗೇ ಎದುರು ನೊಡುತ್ತಾ ನಿಂತಿದ್ದಳು. ನಾನೂ ಅವಳಿಗೆಂದು ಕಾಯ್ದಿಟ್ಟ ಪ್ರೀತಿಯಿಂದ ತಂದ ಉಡುಗೊರೆಯನ್ನು ಕೊಟ್ಟು, ನನ್ನ ಸ್ಥಿತಿಯನ್ನು ನಿಧಾನವಾಗಿ ವಿವರಿಸಿದೆ, ಅಳುಕುತ್ತಲೇ ನುಡಿದೆ, ಇದು ನಿನಗೇ ಹಿತವೇನು, ನನ್ನೊಂದಿಗೆ ನಿನಗೆ ಬದುಕಲು ಇಷ್ಟವೇ ಎಂದೆ. ಮರುಮಾತಾಡದೇ ಅವಳು ಒಪ್ಪಿದಳು. ದುಡಿಯುವುದಕ್ಕೆ ಯಾವ ಕೆಲಸವಾದರೇನು, ಶ್ರದ್ಧೆ ಮತ್ತು ಪ್ರೀತಿ ಮುಖ್ಯ. ಶ್ರದ್ಧೆಯು ಇದ್ದರೆ ಬಾಳು ಸ್ವರ್ಗ, ಅಳುಕು ಮನವೇಕೆ ಎನ್ನುತ್ತ ನನ್ನ  ಬಿಗಿದಪ್ಪಿದಳು, ಹೌದು, ಉತ್ತಮ ಕೆಲಸವೆಂದು ಕೂರುವ ಬದಲು, ಎಲ್ಲವೂ ಉತ್ತಮವೆಂದು ಬದುಕುವುದು ಜೀವನ...

      ರಾಮಚಂದ್ರ ಸಾಗರ್

ನೀ ತರುವ ನಗುವಿಗಾಗಿ..

     ತಂಪಲೆಯ ತಂಪು ಇಂದೇಕೊ ನನ್ನ ತನುವಿಗೆ ತಣಿಸುತಿಲ್ಲ ಹುಡುಗಾ ನೀ ಬಾರದ ಈ ಘಳಿಗೆ, ನೀ ಜೊತೆಯಿದ್ದು ಹೆಜ್ಜೆ ಹಾಕಿದ ಘಳಿಗೆ ಬಿಸಿಗಾಳಿಯಲ್ಲೂ ತನು ಮನಕೆ ತಂಪೆನಿಸುತ್ತಿತ್ತು ಜೊತೆಗೆ ನನ್ನೇ ನಾ ಮರೆಯುತ್ತಿದ್ದೆ, ನಿನ್ನ ಸಾನಿಧ್ಯದ ಒಲುಮೆಯಲ್ಲಿ ಮನಕೆ ಸಂತಸದ ಹೊನಲೇ ಆಸರೆಯಾಗಿತ್ತು ಆ ಪ್ರೀತಿಯ ನದಿಯಲ್ಲಿ ನೀನು ಮತ್ತು ನಾನು ದೋಣಿಯಲ್ಲಿ ಸಾಗುವ ರಸಘಳಿಗೆ ಮತ್ತು ಒಂದೇ ಸಮನೆ ನಿನ್ನ ಕಣ್ಣೋಟದಲ್ಲಿ ಮುಳುಗೆದ್ದು ಒದ್ದೆಯಾದ ನನ್ನ ಮನ ನಿನ್ನಲ್ಲಿ ಲೀನವಾದ ಈ ಮುಗ್ದೆಯ ಮನದಲ್ಲಿ ನೀ ವಿರಾಜಿಸಿದ್ದೆ. ಆ ಕ್ಷಣವೇ ಮನದರಸನಾದ ನೀನು ಎಂದಿಗೂ ನನ್ನಿಂದ ಮರೆಯಲಾಗದ ಜೀವವಾದೆ ನೀನು. ನಿನ್ನ ಕಣ್ಣೋಟದಲ್ಲೇ ನನ್ನ ಕಣ್ಣೋಟ ಸದಾ ಬೆಸುಗೆಯಾಗಲೆಂಬ ಹಂಬಲದ ಹಠ ತಂದವನು ನೀನಾದೆ. ಎಂದಿಗೂ ಸಹಿಸಿಕೊಳ್ಳುವ ನವಿರು ನೋವು ನೀಡುವ ಅದರಲ್ಲೇ ಸುಖವೆಂಬ ಅನುಭೂತಿ ಕಲ್ಪಿಸಿದವನು ಮನಕೆ ಅಮಲು ಹಿಡಿಸಿದ ಹುಡುಗನೂ ನೀನಾದೆ.. 

       ತಂಗಾಳಿಯ ತಂಪಲ್ಲಿ ಒಲವ ಸೌಗಂಧ ತಂದು ನಿನ್ನ ಪ್ರೀತಿಯ ಕೈಗಳಿಂದ ನನ್ನ ಮೊಗವ ನೇವರಿಸಿ ಕೆಂಗುಲಾಬಿ ಕೊಟ್ಟವನು ಪ್ರೀತಿಯ ನಾವೆಯಲ್ಲಿ ಬಿಗಿದಪ್ಪಿ ಸಾವಿರ ವರುಷಕೂ ಅಳಿಯದ ಪ್ರೀತಿ, ಮಮತೆಗಳನು ನೀಡುವೆನೆಂದು ವಚನಕೊಟ್ಟವನು ನೀನು. ಬೆಳದಿಂಗಳ ಇರುಳಲ್ಲಿ ಸರೋವರದ ನೀರಿನಲ್ಲಿ ಇಣುಕಿ ನೋಡುವ ಚಂದಿರನಂತೆ ನನ್ನ ಮನದ ಮನೆಯ ಕಿಟಕಿಯಲ್ಲಿ ನೀ ಇಣುಕಿದೆ ಆ ಕ್ಷಣವೇ ಶರಣಾದ ನಾನು ಎಂದಿಂದಿಗೂ ನಿನ್ನನೂ ಮರೆಯಲಾಗದ ನಿನ್ನವಲಂಬಿಯಾದೆ ಗೆಳೆಯಾ. ನಿನ್ನ ಮನದಲ್ಲೂ ಹೀಗೇನೆ ಎಂಬುದು ನಿನ್ನೆದೆಯ ನೇವರಿಸಿ ತಂಪಿರುಳ ನದಿ ತಟದಲ್ಲಿ ನಿನ್ನೆದೆಯ ಸದ್ದನ್ನು ಆಲಿಸಿ ಅರಿತವಳು ನಾನು. ನಿನ್ನೆದೆಯ ಕೂಗು ಬಿಡುವು ನೀಡದೇ ಗುನುಗುತಿರುವುದು ನನ್ಹೆಸರು ಎಂಬುದನ್ನು ಅರಿತೊಡನೆ ಗೆಳೆಯ ಅದುವೇ ನಾ ಜೀವನದಲ್ಲಿ ಗಳಿಸಿದ ಅತೀ ಅಮೂಲ್ಯ ಘಳಿಗೆ.. ಅತೀ ಪ್ರೀತಿಯ ಕ್ಷಣ. ಅಂದು ನಿನ್ನೆದೆಯೂ ಅದೆಷ್ಟು ಹಿತವಾಗಿ ನನ್ನನ್ನೇ ಕೂಗುತ್ತಿತ್ತು. ಆಗಲೇ ನಾನು ವಿಸ್ಮಿತಳಾಗಿ ನಿನ್ನಲ್ಲಿ ಲೀನವಾಗಿದ್ದೆ. ನನ್ನ ಮೊಗವನ್ನು ನೀನು ಗುಲಾಬಿ ಎಸಳಿಂದ ನೇವರಿಸಿ ದುಂಡುಮಲ್ಲಿಗೆಯ ಮೊಗದವಳೆಂದು ನೀನು ಮುದ್ದಾಗಿ ಕಿವಿಯಲ್ಲಿ ಪಿಸುಗುಟ್ಟಿದ್ದು ನನಗೆ ಅತೀ ಇಷ್ಟವೆನಿಸುವ ಪದವಾಗಿದೆ. ಅರಳಿದ ನೈದಿಲೆ ಪ್ರೀತಿಸಿ ನಗುವ ಚಂದಿರನಂತೆ ನೀನು ನನಗೆಂದೇ ನಗುಮೊಗದಿಂದ ನಲಿಯುತಿರುವುದನ್ನು ಕಂಡು ನನ್ನ ಮನ ನವಿಲಂತೆ ಕುಣಿಯುತ್ತಿತ್ತು. ಸರೋವರದ ಹಂಸದಂತೆ ನೀ ನಡೆದರೆ ನನ್ನೊಂದಿಗೆ ಬೆಳದಿಂಗಳ ಪಥವೂ ಸಾರ್ಥಕ. ಒಲವದೊರೆ ಶಶಿಗೂ ಮನತೃಪ್ತಿಯೆಂದು ನೀನು ಹೇಳುತ್ತಾ ದಾರಿಯುದ್ದಕ್ಕೂ ನನ್ನೊಂದಿಗೆ ಕೈಹಿಡಿದು ಹರಟುತ್ತಾ ಗಂಟೆಗಟ್ಟಲೆ ಮೈಲುಗಟ್ಟಲೇ ಸವೆಸಿದ ಘಳಿಗೆ ನಿಮಿಷದಂತೆ ಕೆಲವೇ ಹೆಜ್ಜೆಗಳಂತೆ ಕರಗಿಹೋಯಿತು. ಆದರೆ ಅದು ಮುಧುರ ಪಯಣವಾಗಿ ನಿತ್ಯ ಕಾಡತೊಡಗಿದೆ. ಪ್ರೀತಿಯಿಂದ ನೀನು ಕೈಹಿಡಿದು ಕುಸುಮಗಳ ವನದಲ್ಲಿ ನನ್ನ ಜೊತೆಯಾಗಿ ನಡೆವಾಗ ಮೆಲುಗಾಳಿಗೆ ನಲಿವ ಹೂಗಳು ನನ್ನ ನೋಡಿ ನಾಚುತ್ತಿವೆ ಎಂದು ನೀನು ನನ್ನನು ಹೇಳಿದ್ದು ಜೊತೆಗೆ ನನ್ನ ಮೊಗದಲ್ಲಿ ತುಸು ನಗುವು ಹೆಚ್ಚಿಸಿ ನನ್ನ ವಿಸ್ಮಿತಗೊಳಿಸಿ ನಲಿವ ಕುಸುಮಗಳ ಜೊಂಪಲಿ ನಗುವ ಚೆಲುವೆ ನೀನೆಂದು ನನ್ನನ್ನು ಪದೇ ಪದೇ ಹೊಗಳಿದವನು ನೀನು. ಮನಕೆ ಸಿಹಿ ನೆನಪುಗಳನ್ನು ಹೊರೆಯಾಗಿ ನೀಡಿದವನು ನೀನು. 

      ಆದರೆ ಇಂದು ನೀ ಕಾಣದೇ ಮನ ಸೊರಗುತಾ ಉಳಿದೆ..ಮನ  ಎಡೆಬಿಡದೇ ನಿನ್ನ ಸೆರೆಯಲ್ಲಿ ನಿತ್ಯ  ಜಪಿಸುತ್ತಿದ್ದೆ. ಮನದ ದಿಟ ಹಠವೊಂದೇ ಆಗಿದೆ. ಅದೂ ನೀ ಬಂದು ನನ್ನ ಕಾಣುವ ಘಳಿಗೆ. ಮನವು ಹೇಳುತಿದೆ.. 

‘ನೀ ಒಪ್ಪುವುದಾದರೆ ನನ್ನ ಒಪ್ಪಿಬಿಡು
ನಾ ವಿಧಿಯ ಅಪ್ಪುವ ಮುನ್ನಾ…
ಕಾಯಲಾರೆನು ಇನ್ನೂ ಕಡಲತಡಿಯಲಿಂದು’ 

     ಎಂದು ಮನ ಜಪಿಸುತಿದೆ ನಿನ್ನನೂ. ಸಾವಿರ ನೆನಪುಗಳ ಭಾರವನು ನನ್ನ ಹೆಗಲೇರಿಸಿ  ಏಕೆ ಮರೆಯಾದೆ ಇಂದು. ಸಾಗರ ನೇವರಿಸಿ ಬೀಸುವ ತಂಗಾಳಿಯು ನನ್ನ ಅಪ್ಪಿದರೂ ಮನ ತಣಿಯುತ್ತಿಲ್ಲ. ತನುವಿಗೆ ದಣಿವು ಕರಗುತ್ತಿಲ್ಲ. ತಂಗಾಳಿಗೂ ನನ್ನ ರೋಧನ ಕಂಡು ವ್ಯಸನವಾಗಿದೆ ಗೆಳಯಾ..ನನಗೇಕೆ ಹೀಗೆ..? ಎಲ್ಲಾ ನಿನ್ನಿಂದಲೇ ನೀ ಇರದ ನೋವಿಂದಲೇ.. ಮುಸ್ಸಂಜೆ ರಂಗಲ್ಲಿ ಇನನು ಮುಳುಗುವಾಗ ಅವನು ನನ್ನ ದುಗುಡವನ್ನು ಕಂಡು ದುಂಖಿಸಿದಂತೆ ಭಾವ ಅವನಲ್ಲಿ..ಆದರೆ ನಿನಗೇಕೆ ಅಂಜಿಕೆ ಪ್ರೀತಿಯ ಹುಡುಗಾ.. ನಾ ಕಾದಿದ್ದೇನೆ ನೀ ಬರುವ ಸವಿಘಳಿಗೆ ಕಾದು..ಕಾದು..ನೊಂದಿದ್ದೇನೆ. ಬೇಗನೇ ಅಂಜಿಕೆ ಮರೆತು ಆಗಮಿಸಿ ಕಡಲ ತಡಿಯಲ್ಲಿ ಸಿಹಿ ಮಾತುಗಳಿಂದ ನನ್ನ ಮನ ರಂಜಿಸು. ಮುದುಡಿದ ಕುಸುಮವಾಗಿದ ನನ್ನ ಮನವನ್ನು ನೀನು ನಗುವ ಗುಲಾಬಿಯನ್ನಾಗಿಸು.. ಸದಾ ಜೊತೆಯಾಗಿ ನೀ ನಗು ಗೆಳೆಯಾ.. ಬೀಸುವ ಕಡಲಲೆಗಳ ಎಣಿಸೀ.. ಎಣಿಸೀ..ನನ್ನ ನಯನವು ಮಬ್ಬು ಕವಿದಿದೆ, ನಿನ್ನಾಗಮನವನು ಬಯಸುತಾ. ನೀ ಬಂದು ನನ್ನ ನಯನಗಳ ಸಂತೈಸು ಗೆಳೆಯಾ. ಮುಸ್ಸಂಜೆಯ ರಂಗಲ್ಲಿ ಒವಲ ರಂಗೋಲಿ ಹಾಕೋಣ ಬಾ ಗೆಳೆಯಾ..

ನಾ ಕಾದಿರುವೆ ನಿನಗಾಗಿ..ನೀ ತರುವ ನಗುವಿಗಾಗಿ..

      ರಾಮಚಂದ್ರ ಸಾಗರ್


ನೋವಿನ ಶರಧಿ ಕರಗುವುದೇ..

      ಚೂರಾದ ಕನಸು ನನಸಾಗಬೇಕಿದೆ, ಮಾಯವಾದ ಸ್ವರ್ಗವು ಕೈಸೆರೆಯಾಗಬೇಕು, ನಗುವು ಮರೆತ ಮೊಗವು ನಗಬೇಕು, ತಿಳಿ ಸರೋವರದಲ್ಲಿ ಎದ್ದ ಅಲೆಗಳು ನಿಲ್ಲಬೇಕು, ಅದರಲ್ಲಿ ಪ್ರಶಾಂತ ತಂಪಿರುಳಲ್ಲಿ ನಿನ್ನ ಮೊಗವನ್ನು ನೋಡಬೇಕು. ಸಾಲು ಸಾಲು ನಿತ್ತು ಗಹಗಹಿಸುವ ಕಹಿ ನೆನಪುಗಳನ್ನು ನಿನ್ನಾಸರೆಯಲ್ಲಿ ಕರಗಿಸಿ ದೂರಕ್ಕೆಸೆಯಬೇಕು. ಮತ್ತೆ ಅವು ನನ್ನ ತಿರುಗಿ ನೋಡದಷ್ಟು ದೂರ ಎಸೆಯಬೇಕು, ಎಲ್ಲಕ್ಕೂ ನಿನ್ನಾಗಮನವಾಗಬೇಕು, ಮುನಿಸು ಕರಗಬೇಕು, ನೋವಿನ ಶರಧಿಯು ದೂರಾಗಬೇಕು, ಒಲವ ಅಲೆಯ ಬೀಸಬೇಕು. ಎದೆಯಾಳದಿಂದ ಅರಳಿದ ಪದ ನಿನಗೆ ಮೀಸಲಾಗಿ ಅವಿತಿರುವುದು ನನ್ನ ಅಧರದಿಂದ ಗುನುಗಬೇಕು, ನೀ ಬರಬೇಕು, ಮಧುರ ಪದಗಳೆಂದು ನುಡಿಯಬೇಕು. ಮಧುರವಲ್ಲದಿದ್ದರೂ ನಿನಗೆ ಬೇಸರವಾಗದಿದ್ದರೆ ಸಾಕು. ಬೆಳುದಿಂಗಳ ರಾತ್ರಿಯ ತಣ್ಣನೆಯ ಹವೆಯೂ ಬಿಸಿ ಬೇಸಿಗೆಯಂತೆ ಸುಟ್ಟರೆ ನಿನಗದುವು ಸಾಧುವೇ ಗೆಳೆಯಾ.? ಇದೇ ಕಂಪನ, ತಲ್ಲಣದಲ್ಲಿ ದಿನ ಕಳೆಯುವುದು ಹೇಗೆ ಗೆಳೆಯಾ.? ಮನದಲ್ಲಿ ನೀ ಬರುವ ಸೂಚನೆ ಸುಳಿವು ಸಿಗದಾಗಿದೆ, ಆದರೂ ವಿಧಿಯಿಲ್ಲ ನೀ ಬರುವ ಘಳಿಗೆಗಾಗಿ ತಂಪಿರುಳಲ್ಲಿ ಬೆಳುದಿಂಗಳ ಧಾರೆಯಲ್ಲೂ ನೋವಲ್ಲಿ ನಡುಗುವ ತನುವು ನನ್ನದಾಗಿದೆ, ಯಾವೂರು ನೀ ತಲುಪಿದರೂ ಯಾವ ಅಂತರ ನೀ ಮುಟ್ಟಿದರೂ ನೀ ನನ್ನ ಮರೆಯಲಾನೆಂಬ ಜಂಬದಲ್ಲಿ ನನ್ನ ಮನ ತುಂಬಿದೆ. ಏನೆಂದು ಹೆಸರಿಡಬೇಕು ಈ ನನ್ನ ಹುಚ್ಚು ಮನಕ್ಕೆ ..? ಇಲ್ಲೆಲ್ಲಾ ನಿನ್ನ ನೆನಪುಗಳ ಚಟುವಟಿಕೆಯ ಹಾವಳಿ. ನಿತ್ಯ ಕಾಡುವ ಸಲ್ಲಾಫದ ಜಾತ್ರೆಯಲ್ಲಿ ನೀ ಕೊಟ್ಟ ಒಲವ ಒಸಗೆಯ ಗುನುಗು ಇಡೀ ರಾತ್ರಿ ಕಳೆದರೇ ನಾ ಹಗಲು ಅದರಲ್ಲಿ ವ್ಯಯಿಸಿದರೆ ಏನೆಂದು ಕರೆಯಬೇಕು ನನ್ನಾವ್ಯಸಕೆ ಗೆಳೆಯಾ. ಹೊತ್ತಿಲ್ಲ ಗೊತ್ತಿಲ್ಲದೆ ನಿನ್ನ ವಶವಾದ ಮನದ ತಳಮಳಕ್ಕೆ ವಿರಹದ ನೋವೇ ವಾದ್ಯವಾಗಿದೆ, ವಿರಹದ ಗೀತೆಯೇ ಹಾಡಾಗಿದೆ. ಒಲವ ಗೀತೆ ಹೆದರಿ ದೂರಾಗಿದೆ. ಸುರಿವ ಬೆಳುದಿಂಗಳಲ್ಲಿ ನಲಿವ ನೈದಿಲೆಯಲ್ಲಿ ನಾ ದಿಟ್ಟಿಸಿದಾಗ ಮನದಲ್ಲಿ ಉಲ್ಲಾಸವಿಲ್ಲ, ನಿನ್ನ ಕಣ್ಣ ಸಂಭಾಷಣೆಯ ನೈವೇದ್ಯ ಬೇಕಿರಲು ಜಗದೆಲ್ಲ ಸೊಬಗು ಗೌಣ, ಬರೀ ಮೌನ, ರಂಗು ತುಂಬಿದ ಜಗವು ಬೆಳ್ಳಿ ಸೊಬಗು ನೀನಿಲ್ಲದೇ ಕಪ್ಪು ಗೆಳೆಯಾ. ನಮ್ಮಿಬ್ಬರ ಖಾಸಗೀ ಸಂಭ್ರಮಕೆ ಬೇಕಿರುವುದು ನಮ್ಮಿಬ್ಬರ ಮನಗಳ ಮಿಲನವೇ ಹೊರತು ಉಳಿದೆಲ್ಲ ಸೊಬಗು ಗೌಣ ಗೆಳೆಯಾ. ನೆನಪಿನ ಕಿಟಕಿಯ ತೆರೆದು ನೀನೊಮ್ಮೆ ನೋಡು ಗೆಳೆಯಾ. ನಮ್ಮ ಪ್ರೀತಿಯ ಹೊನಲಿನಲ್ಲಿ ಅರಳಿದ ಕುಸುಮವನ್ನಾದರೂ ಕೇಳಿ ನೋಡು, ಒಲವು ಜೀವಂತವಿದೆಯೆಂದು ನೀ ಅರಿತು ನೋಡು, ನೆನೆದು ನೊಂದು ನಿನಗೆಂದು ಮೀಸಲಾದ ಹೃದಯ ರೋಧನ ದೂರದಿಂದಲಾದರು ಒಮ್ಮೆ ದಿಟ್ಟಿಸಿ ನೋಡು. ಒಲವ ನಾವೆ ಮುಳುಗದೇ ಸಾಗಬೇಕು, ಒಲವತೀರ ತಲುಪಬೇಕು, ಅದರಲ್ಲಿ ನಾನು ನೀನು ನಗುತಾ ಸಾಗಬೇಕು. ವಿಧಿಯ ಹಗೆತನವೆಷ್ಟೇ ಕ್ರೂರಿ ಎಂದು ಹಠ ಹಿಡಿದರೂ ಹುಡುಗ ನಾನಿನ್ನ ಕಣ್ಣಲ್ಲಿ ಕದಲದೇ ಕಾಪಿಡುವೆ. ಕಣ್ಣೀರಿಗೂ ಜಾಗವಿರದಂತೆ ಕಾಪಿಡುವೆ ಇದು ದಿಟ. ಚಿನ್ನದಂತ ಕನಸುಗಳು ತುಕ್ಕು ಹಿಡಿದ ಹಳೆಯ ದಾತುವಿನಂತೆ ಕಳೆಗುಂದಿವೆ. ನನ್ನ ಮನದೆಲ್ಲಾ ಆಸೆಯು ಮುದುಡಿವೆ ನಿನ್ನಾಗಮನದ ಜಾಡು ಬಯಸುತಾ ಅರಸುತಾ ನಿನ್ನ ಸ್ಥುತಿಸುವ ಕಾಯಕದಲ್ಲಿ ನೊಂದು ಬೆಂದ ಮನದಲ್ಲಿ ಸಾವರಿಸದ ಮನದಲ್ಲಿ ವಿರಹದ ಬಿರುಗಾಳಿ ಎದ್ದಿದೆ. ಎಷ್ಟೇ ನಾ ಸಂತೈಸಿದರೂ ಅದು ನಿಲ್ಲುತ್ತಿಲ್ಲ, ಕದಲದೇ ಕಾಡುವ ನಿನ್ನ ನೆನಪುಗಳು ನನ್ನ ಪದೇ ಪದೇ ಬೆದರಿಸುತ್ತಿವೆ. ನನ್ನ ಕಡುಕೆಂಪು ಕೆನ್ನೆ ಕಪ್ಪಿಟ್ಟಿದೆ, ನಯನಗಳು ಮಂಜು ಕವಿದಿವೆ, ಮಾತು ಮರೆತು ಮೌನ ತಾಳಿದೆ. ಜೀವದ ಉಸಿರಲ್ಲೂ ಏರು ಪೇರು, ಎಲ್ಲಾ ನಿನ್ನಮಲಿನಲ್ಲಿ ಲೀನವಾದ ವ್ಯಸನ. ಹುಚ್ಚು ಮನದ ಸ್ಥಿರತೆಗೆ ಬೇಕಿದೆ ಗೆಳೆಯ ನಿನ್ನೊಲವ ಸಾನಿಧ್ಯ. ನಿನ್ನ ನಗುವ ಮೊಗದ ದರ್ಶನ. ಜಾತಿ ಮತದ ಗೌಜಿಗೆ , ಸಂಪತ್ತು ಸಿರಿಯ ಅಂತರವ ಎಣಿಸದೆ, ಸಾಧುವಲ್ಲದ ಮಾತುಗಳಿಗೆ ಸಿಲುಕಿ ನಲುಗದೆ, ಅನ್ಯರಿಗೆ ಅಂಜದೇ ನೀ ನನ್ನೆಡೆ ಬಾ ಹುಡುಗಾ. ಉಪವಾಸದ ಮನಸು ನಿನ್ನೊಲವ ಸಾಂಗತ್ಯದಲ್ಲಿ ನಗುತ ಹಸಿವು ದೂರಾಗಿಸಿಕೊಳ್ಳಬೇಕು. ನಿನ್ನ ಮನವನ್ನು ಗೆದ್ದು ಬೀಗಿದ ಹೃದಯ ನನ್ನದು, ನಿನ್ನ ಮನಕೆ ಒಡತಿಯೂ ನಾನು. ನೀ ಎಲ್ಲೇ ಇದ್ದರೂ ನಿನ್ನ ಹೃದಯ ನನ್ನಲ್ಲಿ ಸೆರೆಯಾಗಿದೆ. ನಾ ಇಲ್ಲದೇ ಸಾಗದ ಜೀವ ನೀನು, ಕಂಡಿತಾ ಸಾಗಲಾರೆ ಬಹುದೂರ, ಬಹು ಸಮಯವೆಂಬುದು ನನ್ನ ಕಿವಿಗೆ ಅಪ್ಪಳಿಸಿ ಹೇಳುತ್ತಿದೆ ಬೀಸುವ ತಂಗಾಳಿಯ ಮೊರೆತದ ಪ್ರತೀ ಸದ್ದು. ಒಲವಗರಿಯಿಂದ ನಿನ್ನೆದೆಯಲ್ಲಿ ನಾ ಬರೆದ ಸಾಲು ನಿನ್ನ ಹೃದಯದಿಂದ ಹೊರಬರಲಾರವು ಎಂಬ ದಿಟ ನಂಬಿಕೆಯಲ್ಲೇ ನಿನ್ನಾಗಮನಕ್ಕಾಗಿ ಹಾತೊರೆಯುತಾ ಜಂಬದಲ್ಲೇ ಕುಳಿತಿರುವೆ..!! ಚೂರಾದ ಮನಸು ಒಂದಾಗಿಸುವವನೇ ಬೇಗನೇ ಬಾ..ನೋವಿನ ಶರಧಿಯ ಕರಗಿಸುವವನೇ ಬೇಗನೇ ಬಾ. ಜೊತೆಗೆ ನೀನು ನಗಬೇಕು, ಒಲವ ಪಥದಲಿ ನನ್ನೊಂದಿಗೆ ನಗುತಾ ಸಾಗು.
ಗೆಳೆಯಾ..ನೀ ಬರುವುದನು ಮರೆದಿರು..
ಬರುವಾಗ ತರಲು ಮರೆದಿರೊಂದು ಕೆಂಗುಲಾಬಿಯನೂ..

         ರಾಮಚಂದ್ರ ಸಾಗರ್

Friday, 13 January 2017

ಸಂಕ್ರಮಣವಾಗಲಿ..

ಎಳ್ಳು ಎಂಬ ಸ್ನೇಹವು
ಬೆಲ್ಲ ಎಂಬ ಪ್ರೀತಿಯು
ಮನ ಮನಗಳ ಬೆಸೆಯಲಿ
ಸಹೋದರತೆಯ ಬಂಧದಲಿ
ಈ ಸಮಯದೀ
ಸೌಹಾರ್ದ ಸಂಕ್ರಮಣವು ಸಂಭ್ರಮಿಸಲಿ..


ವಿರಸದ ಮನಸು ಮರೆಯಾಗಲಿ
ಕಹಿ ಘಳಿಗೆಯು ಕಾಡದಿರಲಿ
ವಿಮೋಹ ದುರಾಸೆ ದೂರಾಗಲಿ
ಈ ಸಮಯದೀ
ಸಂಪನ್ನ ಮನಗಳ ಸಂಕ್ರಮಣವಾಗಲಿ..


ವಿರಸ ತಾಪಗಳು ದೂರಾಗಲಿ
ಸ್ನೇಹ ಎಲ್ಲರೆದೆಯ ಗೂಡಾಗಲಿ
ಸಖ್ಯ ಸಮಾಗಮ ಚಿರಾಯುವಾಗಲಿ
ಈ ಸುಸಮಯದೀ
ಗೆಳೆತನದ ಸಂಕ್ರಮಣವಾಗಲಿ..


ವಿಘ್ನ ಬದುಕಲಿ ಬಾರದಿರಲಿ
ಸವೆ ಬಾಳಲಿ ಕಾಡದಿರಲಿ
ಬವಣೆ ಯಾರನು ಮುಟ್ಟದಿರಲಿ
ರೋಧನೆ ಯಾರಿಗೂ ತಟ್ಟದಿರಲಿ
ಈ ಸಮಯದೀ
ಸಂತಸದ ಸಂಕ್ರಮಣವಾಗಲಿ..


ಬಾಂಧವ್ಯಗಳು ಚಿಗುರೊಡೆಯಲಿ
ಬಂಧುರ ಜಗದ ವಿಕ್ರಮವಾಗಲಿ
ಇನನ ಹೊಳಪಿನಲಿ
ವಸುಂಧರೆಯ ಮಡಿಲು
ಈ ಸುಸಮಯದೀ
ಪ್ರೀತಿಯ ಸಂಕ್ರಮಣವಾಗಲಿ..

 
      ರಾಮಚಂದ್ರ ಸಾಗರ್