Sunday, 8 January 2017

ಜಗವನ್ನೇ ಶತ್ರುವಾಗಿಸಿ ನಡೆದಳು..

drinking is injurious to health
      ಏ ಹುಡುಗಿ..ಈ ನೋವಲ್ಲಿ ಸುಟ್ಟ ಮನದ ಸಂಕಟ ನಿನಗೇನು ಗೊತ್ತು, ಸುಮ್ಮನೇ ಸದ್ದಿಲ್ಲದೇ ಸಾಗುತ್ತಿದ್ದ ನನ್ನ ಬದುಕಲ್ಲಿ ನೀನ್ಯಾಕೆ ಬಂದೆ, ಏನೋ ತಣ್ಣೀರು ಕುಡಿದರೂ ಅಮೃತ ಕುಡಿದಂತೆ ನೆಮ್ಮದಿಯಲ್ಲಿ ನಗುತಿದ್ದೆ ಅಂದು ನಾನು, ಬಿಸಿಗಾಲದ ಶೆಕೆಯಲ್ಲಿ ಬೆವರಿಳಿದು ಬೇಯುವವಧಿಯಲ್ಲಿ ಇರುಳು ಬಿಸಿಯ ಹವೆಯೆಬ್ಬಿಸಿ ಕುಣಿದರೂ ಸಾವದಾನದಲ್ಲಿ ಕಣ್ಣುಗಳನ್ನು ನೆಮ್ಮದಿಯಿಂದ ಮುಚ್ಚಿ ಯಾವುದೇ ಆತಂಕವಿಲ್ಲದೇ  ನಿರಾಳವಾಗಿ ನಿದ್ರಿಸುತಿದ್ದೆ, ಹೃದಯದ ರೋಧನೆ, ನೋವಿಲ್ಲದೇ ನಿರಮ್ಮಳವಾಗಿದ್ದೆ. ರಾತ್ರಿ ಅನ್ನ ಉಣ್ಣದಿದ್ದರೂ ಸಂತೋಷದಲ್ಲಿರುತ್ತಿದ್ದೆ, ಬೆಳಿಗ್ಗೆ ರವಿ ಉದಯಿಸಿ ಬಿಸಿಲು ಮುಖಕ್ಕೆ ಬಡಿಯುವವರೆಗೂ ನಿರಾಳವಾಗಿ ನಿದ್ರಿಸುತ್ತಿದ್ದೆ, ಒಂಟಿ ಬದುಕಾದರೂ ಹೃದಯವು ನೆಮ್ಮದಿಯ ಸೆಲೆಯಲ್ಲಿ ಆಶ್ರಮ ಪಡೆದಿತ್ತು. ಎಲ್ಲವೂ ದೇವರ ಕೊಟ್ಟ ಬದುಕು ಬಡತನವಾದರೇನು ಮೂರು ಹೊತ್ತಲ್ಲದಿದ್ದರೂ ಎರಡು ಹೊತ್ತು ಊಟ, ನೆಮ್ಮದಿಯ ನಿದ್ರೆ ಮಾಡಿ ಹಾಯಾಗಿದ್ದವನ ಬದುಕಲ್ಲಿ ನೀ ಬಂದು ಪ್ರೀತಿಯ ಜಗದಲ್ಲಿ ನನ್ನ ಕೈಹಿಡಿದು ನೀನು ಇನ್ನೊಂದು ಜಗವಿದೆ ಎಂದು ಕರೆದೆ, ಪ್ರೀತಿಗೆ ಸೋಲದ ಮನವೆಲ್ಲಿದೆ, ಜಗದ ಮೂಲೆ, ಮೂಲೆಯೂ ಪ್ರೀತಿಯ ಬಂಧದಲ್ಲಿದೆಯೆಂದು ನನ್ನನ್ನು ನೀ ನಂಬಿಸಿದೆ, ನಾನು ನಂಬಿದೆ, ಜಗದೆಲ್ಲವೂ ಪ್ರೀತಿಯ ಸೆಲೆಯ ಬಲದ ಕೃಪೆಯೇ.. 
     
   ಪ್ರೀತಿಯ ಹಂದರಲ್ಲಿಯೇ ಜಗದ ಜೀವ ಉಳಿದಿದೆ, ಪ್ರೀತಿಯಿಲ್ಲದೇ ಜಗದಲ್ಲಿ ಯಾವುದಿದೆ, ಅರಳುವ ಹೂವು ತಂಗಾಳಿಯ ಪ್ರೀತಿಯಲ್ಲಿ ನಗುತಿದೆ ನೋಡು ಎಂದು ನನ್ನ ಮನಸ್ಸನ್ನು ನೀ ಗೆದ್ದೆ, ಸರೋವರದ ತಾವರೆಯ ತೋರಿ ನೀನಂದು ಸರೋವರ ಮತ್ತು ತಾವರೆ ನಡುವೆ ಪ್ರೀತಿಬಂಧವೆಂದೆ. ಸರೋವರವಿಲ್ಲದೇ ತಾವರೆ ಉಳಿವುದೇ, ತಾವರೆಯಿಲ್ಲದೇ ಸರೋವರ ಪಳಿಸುವುದೇ..? ನೀ ಯೋಚಿಸು ಎಂದು ಮನಕ್ಕೆ ನೀ ಲಗ್ಗೆಯಿಟ್ಟೆ, ಜಗದೆಲ್ಲವನ್ನು ಅಷ್ಟೊಂದು ಹತ್ತಿರದಿಂದ ಮನಕ್ಕೆ ಪರಿಚಯಿಸಿ ಪ್ರತಿ ವಸ್ತುವಿನಲ್ಲೂ ಪ್ರೀತಿಯ ಬಂಧವನ್ನು, ಒಲವಿನ ಸಾರವನ್ನು ಅರ್ಥೈಸಿದೆ, ಅರ್ಜುನನಿಗೆ ಸಾರಥಿಯಾದ ಕೃಷ್ಣನ ಉಪದೇಶದಂತೆ ಬದುಕಿನ ಪ್ರತಿದಿನವೂ, ಪ್ರತಿಘಟ್ಟದಲ್ಲೂ, ನನಗೆ ಪ್ರಿತಿಯ ಬಂಧದ ಪರಿಚಯವನ್ನೇ ಮಾಡಿಸುವುದನ್ನು ನೀ ಕಾಯಕವಾಗಿಸಿಕೊಂಡೆ, ನಿನ್ನ ಒಲವ ಉಪದೇಶಗಳಿಗೆ ನಾನು ಕೇಳುವ ಪ್ರಶ್ನೆಗಳಿಗೆ ನಿನ್ನ ಮುದ್ದಾದ ಉತ್ತರಕ್ಕೆ ನಾ ಶರಣಾಗಿ ಹೋದೆ. ನಿನ್ನ ತುಂಟ ನಗುವಿಗೆ ನಾ ಸೋತು ಹೋಗಿದ್ದೆ. ಪ್ರೀತಿಯ ಉಪದೇಶವನ್ನು ಮುಂಜಾನೆಯ ರವಿಯಿಂದ ಆರಂಭಿಸಿ ಮುಸ್ಸಂಜೆಯ ರವಿ ಮರೆಯಾಗುವವರೆಗೂ ನೀಡಿ, ರಾತ್ರಿ ಚಂದಿರನ್ನೂ ತೋರಿಸಿ ಬಿಡುವಿರದೇ, ಅಮವಾಸ್ಯೆಯಂದು ಹೊಳೆವ ತಾರೆಗಳ ಬೆಳಕಲ್ಲೂ ತುಸು ಬಿಡುವೂ ನೀಡದೇ ಎಲ್ಲೆಲ್ಲೂ ಪ್ರೀತಿಯೇ ಎಂದು ಒಲವೋಪದೇಶ ಮಾಡಿದೆ, ಹೊಳೆವತಾರೆಗಳಿಗೆ ಭುವಿಯ ಕುಸುಮಗಳ ಒಲವೆಂದೆ, ನಗುವ ಚಂದಿರನಿಗೆ ನಗುವ ನೈದಿಲೆ ಬೇಕೆಂದೆ ಅದಕಾಗ್ಗೆ ಅವನ ಕಾತರವೆಂದೆ, ಎಲ್ಲವನ್ನೂ ನಾ ಮರುಪ್ರಶ್ನೆ ಹಾಕದೇ ನಿನ್ನ ಮಾತುಗಳನ್ನು ನಂಬಿದೆ ಜೊತೆಗೆ ಸದ್ದಿಲ್ಲದೇ ನಿನ್ನಲಿ ವಶವಾದೆ. 

     ಪ್ರೀತಿಯ ಜಗದಲ್ಲಿ ನನ್ನ ಮನಸ್ಸಿಗೆ ಒಲವ ರಂಗು ಸಾಕಷ್ಟು ಲೇಪಿಸಿದೆ, ಎಷ್ಟೆಂದರೇ ನಾನಿಂದು ಎಷ್ಟೇ ಪ್ರಯತ್ನಿಸಿ ಯಾವ ಶರಧಿಯಲ್ಲಿ ಮುಳುಗೆದ್ದರೂ ನಿನ್ನೊಲ ರಂಗು ಕರಗುತ್ತಿಲ್ಲ ಕಣೇ, ಅಂದು ನಾನು ನೀನು ಕಡಲತಡಿಯ ಬಂಡೆಗಳ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡಿದ್ದೆವು, ಇಂದು ನಾನಲ್ಲಿ ನಡೆದು ಹೋದರೇ ಆ ಬಂಡೆಗಳೇ ಬಂದು ನನ್ನ ಎದೆಗೊರಗಿದಂತೆ ನೋವಾಗುತ್ತಿದೆ, ಜಗದೆಲ್ಲಾ ವಸ್ತುಗಳಲ್ಲಿ ಪ್ರೀತಿಯನ್ನೇ ತೋರಿಸಿ ನೀ ಏನೋ ನಡೆದೆ, ಸದ್ದಿಲ್ಲದೇ ಸಾಗಿಹೋದೆ. ನೀನಿಲ್ಲದೇ ಒಂಟಿಯಾಗಿ ನೋಡುವ ನನ್ನ ಕಣ್ಣಿಗೂ ಸರಿಯಾಗಿ ಕೆಲಸವಿಲ್ಲ, ಮಬ್ಬು ತುಂಬಿದೆ ಸಾಕಷ್ಟು, ಚಿಂತೆಗಳ ಸುರಿಮಳೆಯ ಕೊರೆತದಲ್ಲಿ ಕೊರಗುತಾ, ಮಬ್ಬು ತುಂಬಿದ ಕಣ್ಣಿನಿಂದ ಸರಿಯಾಗಿ ನಾ ಏನೂ ನೋಡಲಿ, ಕಂಡಲ್ಲೆಲ್ಲಾ ನೀ ಮುದ್ದಾಗಿ ತೋರಿಸಿದ ವಸ್ತುಗಳೇ ಕಾಡುತಿರುವಾಗ, ನಾ ನೋಡುವುದೇಗೆ, ದೇವರೇ ನನ್ನನ್ನು ಶಾಶ್ವತವಾಗಿ ಕುರುಡನನ್ನಾಗಿಸು ಎಂಬುದೊಂದೇ ದೇವರಲ್ಲಿ ಪ್ರಾರ್ಥನೆಯಾಗಿದೆ, ಒಂದಂತೂ ಸತ್ಯ ಅವಳಿಲ್ಲದೇ ನಾನೀಗ ಅಕ್ಷರಶಃ ಕುರುಡ, ಮಬ್ಬು ಆವರಿಸಿರಲು ನನ್ನ ತನುವು ನಿಯಂತ್ರಣ ತಪ್ಪಿ ಬಂಡೆಗೊರಗಿ ಬೀಳುತಿದ್ದೆ, ಒಡೆದ ಹಣೆಯಲ್ಲಿ  ಸುರಿವ ರಕ್ತದಲ್ಲಿ ಕೊರೆವ ಛಳಿಗಾಳಿಯಲ್ಲೇ ಇಂದು ನಾನು ಸಾಗುತ್ತಿರುವೆ. ಎಷ್ಟೇ ಬೇಡವೆಂದು ಒದ್ದರೂ ಹೋಗದ ನಿನ್ನ ನೆನಪುಗಳ ಹಾವಳಿ ಎದೆಯನ್ನು ಅವಿರತ ಸುಡುತಿದೆ, ಕೈಲಿದ್ದ ಸರಾಯಿ ಬಾಟಲಿ ನೋಡಿ ಎರಡು ಎಣಿಸುವುದರೊಳಗಾಗಿ ಹೊಟ್ಟೆ ಸೇರುತಿದ್ದೆ, ನೋಡು ನೋಡುತಿದ್ದಂತೆಯೇ ಕರಗುತಿದ್ದೆ, ಕರಗುತ್ತಾ ಯಾವುದೋ ಮಂಪರು ಜಗದಲ್ಲಿ ನಿನ್ನ ಮರೆಯುತ್ತಾ ವಾಲಾಡುತ್ತಿದ್ದೆ. ಇನ್ನು ಅನ್ನದ ಚಿಂತೆಯೆಲ್ಲಿ..? ತಣ್ಣೀರು ಕುಡಿದರೂ ಅಮೃತವೆಂದಿದ್ದ ನನ್ನ ಮನವಿಂದು ಎದುರು ಅಮೃತ ತಂದಿಟ್ಟರೂ ಕುಡಿಯಲು ಒಪ್ಪಿಗೆ ನೀಡುತ್ತಿಲ್ಲ. ಎಲ್ಲವೂ ನಿಶೆಯಲ್ಲೇ, ನಿನ್ನೊಲವ ಅಮಲಿನ ಅಪ್ಪುಗೆಯಲ್ಲಿ ಸರಾಯಿ ಸಹವಾಸದಲ್ಲೇ ವಾಸವಾಗಿದೆ, ಮನ ಸದ್ದಿಲ್ಲದೇ ತನಗೆ ಅರಿವಿಲ್ಲದ ಎಲ್ಲಾ ದುಶ್ಚಟಗಳ ತಾಣವಾಗಿದೆ. ನೋವಿನ ಹಂಗು ನಿನಗೇನು ಗೊತ್ತು, ಅನುಭವಿಸುವ ಮನದ ರೋಧನೆ ನಿನಗೇನು ಕೇಳಿಯಾತು, ಸುರಿವ ಹನಿಗಳಲಿ ನೀನು ಬಿಂಬವಾಗಿ ಕುಣಿಯುತಿರುವೆ ನಿತ್ಯ, ಹಗಲು ಇರುಳು ರೋಧಿಸಿ ನಾ ಹರಿಸಿದ ಕಣ್ಣೀರ ಹೊನಲಿನಲ್ಲಿ ನಿನದೇ ರೂಪ ಬಿಂಬವಾಗಿ ಕಾಡುತಿದೆ, ಇರಬಹುದು ಅದು ನೀನು ನನ್ನ ಕೊನೆಯನ್ನೇ ಬಯಸಿದಂತಿದೆ. ಅಂದು ನೀ ಪ್ರೀತಿಯಿಂದ ನನ್ನ ಮುದ್ದಾಗಿ ಕರೆದೊಯ್ಯತಿದ್ದ ಸಾಗರ ತೀರದ ದಾರಿಯಲ್ಲಿ ಇಂದು ನಾನೊಬ್ಬನೇ ರೋಧಿಸುವ ಮನದೊಂದಿಗೆ ಸಾಗುತಿದ್ದೇನೆ, ಕಣ್ಣೀರು ನನ್ನ ಅನುಮತಿ ಕೇಳದೇ ಸದ್ದಿಲ್ಲದೇ ನೆಲಮುಟ್ಟುತ್ತಿವೆ, ಏನೇ ಆಗಲಿ ಅದು ನೀ ಕೊಟ್ಟ ಕೊಡುಗೆ, ಅದು ಕ್ಷಯವಾಗುವುದುಂಟೇ. 
      
     ಇಂದು ಬಾನಲ್ಲಿ ನಗುವ ಚಂದಿರನನ್ನ ನಾ ನೋಡಿದರೇ ಕಣ್ಣಿಗೆ ಸೂಜಿ ಚುಚ್ಚಿದಂತೆ, ನಗುವ ನೈದಿಲೆಯ ನೋಡಿದರೆ ಕಣ್ಣಿಗೆ ಸುಣ್ಣಬಿದ್ದಂತೆ, ತಂಗಾಳಿ ಮೈಸೋಕಿದರೆ ಬಿಸಿನೀರನ್ನು ಮೈಮೇಲೆ ಚೆಲ್ಲಿದಂತೆ ಭಾಸ. ನೋವಿನ ಸಾಮ್ಯಾಜ್ಯಕ್ಕೆ ನನ್ನನ್ನು ಅಧಿಪತಿಯಾಗಿಸಿ ನೀ ನಡೆದೆ. ಅಂದು ಇದೇ ಸಾಗರದ ತೀರದಲ್ಲಿ ಉರಿವ ಜ್ವಾಲೆಯ ಹೊತ್ತಿಸಿ ಮೈಕಾಯಿಸಿಕೊಂಡಿದ್ದೆವು. ಇಂದು ಯಾರೋ ಹೊತ್ತಿಸಿ ಹೋದ ಬೆಂಕಿಯಲ್ಲಿ ನಾನೊಮ್ಮೆ ನೋಡಿದರೂ ಅಲ್ಲಿಯೂ ನಿನದೇ ನೆನಪು, ನಿನದೇ ಬಿಂಬದ ಕುಣಿತ. ನಿನ್ನ ಹೊರತಂದು ನಾ ಪ್ರಶ್ನಿಸಬೇಕೆಂದು ನಾನು ಹಠವಿಡಿದು ಉರಿವ ಜ್ವಾಲೆಯಲ್ಲಿ ಕೈಸುಟ್ಟುಕೊಂಡು ನೋಯುತ್ತಿದ್ದೇನೆ.. ಕೈಲಿರುವ ಸರಾಯಿ ಬಾಟಲಿ ಕಾಲಿಯಾಗುತಿದೆ, ನಾನು ಕುಡಿದಲ್ಲ ನೋಡಿದರೂ ಸಾಕು, ತಂಪು ಹವೆಯಲ್ಲೂ ನನ್ನ ತನುವು ಬೆವರು ಹನಿಗಳ ಕಣಜವಾಗಿದೆ. ಅಂದು ನಿನ್ನೊಲವ ಸೆರೆಯಲ್ಲಿ ನಿನ್ನ ತಬ್ಬಿ ಹಿಡಿದಾಗ ನಡುಗುತ್ತಾ ಬೆವರಿದ್ದೇ. ಇಂದು ಅದೇ ನೆನಪು ಸಾಕು ನಾನು ಕೊನೆಯಾಗುವವರೆಗೂ ಬೆವರಿಳಿಸಿಕೊಳ್ಳಲು.. 
     
       ಯಾರೋ ನನ್ನ ಬಗ್ಗೆ ಹೇಳಿದ ತಪ್ಪು ಮಾತಿಗೆ ನೀ ಬೆಲೆಕೊಟ್ಟು, ಅವರ ಮಾತು ನಂಬಿ, ನಿರ್ಮಲ ನನ್ನ ಪ್ರೀತಿಯನ್ನು ನೀ ತ್ಯಾಗ ಮಾಡಿದ್ದೂ ಸರಿಯೇ.. ಪ್ರತ್ಯಕ್ಷವಾಗಿ ಕಂಡರೂ ಇನ್ನೊಮ್ಮೆ ಪರಿಶೀಲಿಸಿ ನೋಡೆಂಬ ಮಾತನ್ನು ನೀ ಮರೆತೆಯೇಕೇ..? ನಮ್ಮ ಪ್ರಿತಿಯನ್ನು ಬಯಸದ ವಿಕೃತಿಗಳು ನಮ್ಮೊಲವನು ಬೂಧಿ ಮಾಡಿ, ಒಲವ ಕಣ ಕಣವನ್ನು  ಕರುಣೆಯಿಲ್ಲದೇ ಕೊಂದರು, ಅವರ ಮಾತುಗಳಿಗೆ ನೀ ತುಸು ಎಣಿಸದೇ, ಯೋಚಿಸದೇ ನಡೆದದ್ದು ವಿಧಿಯೇ.  ಅವರಸರದ ಆಟವನ್ನು ನೀನು ಆಡಿಬಿಟ್ಟೆ, ನನ್ನ ಬದುಕು ಈಗ ಕೇಲವ ನೀನಿಲ್ಲದೇ ನಿನ್ನ ಬೇಡವೆಂದರೂ ಕಾಡುವ ನೆನಪುಗಳ ಜೊತೆಗೆ, ಕೈಲಿ ಸರಾಯಿ ಬಾಟಲಿಯ ಹಿಡಿದೂ ಅದೇ ದಾರಿಯಲ್ಲಿ, ನೀನಂದು ಪ್ರೀತಿಯಿಂದ ಕೈಹಿಡಿದು ನಡೆಸುತ್ತಿದ್ದ ದಾರಿಯಲ್ಲಿ ಒಂಟಿಯಾಗಿ ತೂರಾಡುತ್ತಾ, ಸುರಿವ ಕಣ್ಣೀರು ಹನಿಗಳ ಸಂತೈಸುವಿಕೆಗೂ ಒಪ್ಪದೇ  ಸಾಗುತಿದ್ದೇನೆ..ಒಂದಂತೂ ಸತ್ಯ, ನನಗೀಗ ಇಡೀ ಜಗವೇ ಶತ್ರುವಾಗಿ ಕಾಣುತಿದೆ, ಏನನ್ನು ನಾ ಕಂಡರೂ ಹಿತವೆನಿಸುತಿಲ್ಲ..ಯಾವುದೂ ಬೇಡವಾಗಿದೆ, ನೀನೇ ನನ್ನನ್ನು ತಿರಸ್ಕರಿಸಿದ ಮೇಲೆ..ಜಗವೇ ಶತ್ರುವಾಗಿದೆ..

          ರಾಮಚಂದ್ರ ಸಾಗರ್

Friday, 6 January 2017

ಶುಭಕೋರೋಣ ಬಾ ಗೆಳತೀ..

     ನನ್ನದೊಂದು ಆಸೆ ಗೆಳತಿ, ಪ್ರತಿ ಮುಂಜಾನೆ ನಾವು ಎಂದಿಗೂ ಉದಯಿಸುವ ರವಿಗೆ ಸ್ವಾಗತ ಕೋರಬೇಕು, ನೀನು ಮದುವಣಗಿತ್ತಿಯಂತೆ ಸಿದ್ದಗೊಳ್ಳದಿದ್ದರೂ ತುಸುನಗುವಲಿ ಕರೆದರೆ ಸಾಕು ನಾ ಬರುವೆ ನಿನ್ನೊಂದಿಗೆ ಮರುಮಾತಿಲ್ಲದೇ, ಪ್ರೀತಿಯ ಹಂದರದಲ್ಲಿ ನಗುತಾ ನಾವಿಬ್ಬರೂ ಉದಯಿಸುವ ರವಿಗೆ ಸ್ವಾಗತ ಕೋರೋಣ, ಕೈ ಆಗಷ್ಟೇ ಅರಳಿದ ಒಂದೆರಡು ಹೂಗಳನ್ನು ಹಿಡಿದಿರೋಣ ಸಾಕು, ಅವನಿಂದ ಬರುವ ಹೊನ್ನಿನ ಕದಿರು ನನ್ನ ನಿನ್ನ ಮೊಗದ ಮೇಲೆ ಪಳಿಸಲಿ, ಆತನ ಹಿತದಲ್ಲಿ ನಮ್ಮ ಮನದ ಬೆಸುಗೆ ಮತ್ತಷ್ಟು ಗಟ್ಟಿಯಾಗಲಿ, ರವಿ ಕಿರಣಗಳು ಬೆಳ್ಳಿತಟ್ಟೆಯಲ್ಲಿ ಬರುವವರೆಗೂ ನಾವಿಬ್ಬರು ಮುಂಜಾನೆಯ ಸೊಬಗಲ್ಲಿ ನಲಿಯೋಣ, ಆಗಲಷ್ಟೇ ಅರಳಿ ನಗುವ ಕುಸುಮಗಳಿಗೂ ತುಸು ನಾಚಿಸೋಣ, ಅರಳಿ ನಗುವ ಹೂಗಳ ನಡುವೆ ನಾನು ನೀನು ಕೈಹಿಡಿದು ಸಾಗೋಣ, ಪಿಸುಮಾತುಗಳು ಬಿಡುವಿಲ್ಲದೇ ವಿನಿಮಯವಾಗುತಿರಲಿ, ಸುಳಿದಾಡುವ ತಂಗಾಳಿಯಲ್ಲಿ ನಲಿವ ಕುಸುಮವೊಂದನ್ನು ತಂದು ನಿನ್ನ ಮುಡಿಯ ಮೇಲಿಡಬೇಕು ನಾನು ನಿತ್ಯ, ನೀ ನಗುತ ಆ ಘಳಿಗೆಯಲಿ ಸವಿ ಮುತ್ತೊಂದನ್ನು ನೀಡಬೇಕು, ಮೆತ್ತನೇ ಮೆತ್ತನೇ ನೀ ಹೂಬನದ ಹೂಗಳನು ನೇವರಿಸುತಾ ನಲಿಯಬೇಕು, ಅವುಗಳೊಂದಿಗೆ ಸೌಂದರ್ಯದ ಕದನ ನೀ ನಡೆಸಬೇಕು, ಎಲ್ಲವನ್ನು ನೋಡುತಾ ನನ್ನ ಮನ ನೀ ರಮಿಸಬೇಕು. ಹಸಿರೆಲೆಯ ಮೇಲೆ, ಹೂಗರಿಯ ಮೇಲೆ ನಗುವ ಮುಂಜಾನೆಯ ಮಂಜಿನ ಹನಿಗಳನ್ನು ನಾನು ತಂದು ನಿನ್ನ ಮೊಗವ ನೇವರಿಸಬೇಕು, ಮಂಜಿನ ಹನಿಗಳಲಿ ನಾನೂ ನೀನು ಎರಚಾಟವಾಡಬೇಕು, ನಮ್ಮ ಸಂತಸವನ್ನು ಕಂಡು ಕೆಂಪಾದ ರವಿಯ ಮೊಗವು ಇನ್ನೂ ಕೆಂಪಾಗಲಿ ಎನ್ನಬೇಕು, ಮುಂಜಾನೆಯ ಹಾದಿಯಲ್ಲಿ ನಾವಿಬ್ಬರೂ ಒಂದಾಗಿ ಒಲವಗಾಥೆಯ ಗುನುಗುತಾ ಮೈಲುದ್ದ ಸಾಗಬೇಕು, ನೀ ಸಾರಥಿಯಾಗಿ ಗೆಳತಿ ನನ್ನ ಕೈಹಿಡಿದು ರಮಿಸುತಾ ನಡೆಸಬೇಕು, ಸಾಗುವ ಪ್ರತಿ ಘಳಿಗೆಯು ನಿನ್ನ ಕಾಲ್ಗೆಜ್ಜೆಯ ನಾದ ನನ್ನೆದೆಯ ಲಾಲಿಸಬೇಕು, ನೀ ಜೊತೆಯಾಗಿ ನಗುವ ನೈದಿಲೆಯಂತೆ ನಗುತಾ, ಒನಪು ನಗುವು ಚೆಲ್ಲುತಾ ಸಾಗಬೇಕು, ಜೊತೆಗೆ ಕರೆದೊಯ್ಯಬೇಕು ನನ್ನ ಮನವನ್ನೂ...

     ಮುಂಜಾನೆ ತಂಗಾಳಿಗೆ ಕುಣಿವ ನಿನ್ನ ಮುಂಗುರುಳು ನನ್ನನೇ ಬಾ ಎನ್ನಬೇಕು, ಆ ಕುಣಿವ ಮುಂಗುರುಳು ಕರೆಗೆ ನಾ ಓಡೋಡಿ ಬರಬೇಕು, ನಲಿವ ಹೂಗರಿಯೊಂದನ್ನು ಮುಂಜಾನೆಯ ಸೊಬಗಲ್ಲಿ ನಿನ್ನ ಹಣೆಯ ಮೇಲಿಟ್ಟು ಒಲವಗಾಥೆಯ ಪದಗಳು ನಾ ನಿತ್ಯ ನಿನಗಾಗಿ ಗುನುಗಬೇಕು, ನೀನು ನಿತ್ಯ ಹೊಸತರಂತೆ ಆಲಿಸಬೇಕು, ನಿತ್ಯ ನಾವು ಹೊಸತರಂತೆ ಕಂಗೊಳಿಸಬೇಕು, ಪ್ರತಿ ಮುಂಜಾನೆಯು ನಮ್ಮಲ್ಲಿ ಹೊಸತನ ಉದಯಿಸಬೇಕು, ಮನದ ಉಲ್ಲಾಸ ಹೆಚ್ಚಬೇಕು, ಒಲವ ಉಲ್ಲಾಸವು ಒಲವ ಹೊನಲಾಗಿ ಹರಿಯಬೇಕು, ನಾನು ನೀನು ನಗುತಾ ಒಲವ ಹೊನಲಿನಲ್ಲಿ ಮಿಂದು ನಗಬೇಕು, ಮೈ ಮನ ತಣಿಯಬೇಕು. ದಿನವಿಡೀ ನೋವು ಬವಣೆಗಳನ್ನು ಮುಂಜಾನೆಯ ಸವಿ ಘಳಿಗೆಯ ಹಿತದಲ್ಲಿ ಎಲ್ಲವೂ ಸಿಹಿಯಂತೆ ಭಾಸವಾಗಬೇಕು. ದಿನವು ಕ್ಷಣದಂತೆ ಕರಗಬೇಕು. ಪ್ರೀತಿಯ ಹಂದರವು ನಮ್ಮನ್ನು ದಿನವಿಡೀ ರಕ್ಷಿಸಬೇಕು. ಉದಯಿಸುವ ರವಿಯು ಜಗವೆಲ್ಲಾ ಬೆಳಗಿದಂತೆ ನಿತ್ಯ ನಮ್ಮೊಲವ ದೀವಟಿಗೆ ಇಂಧನವನ್ನು ತುಂಬಬೇಕು, ಪ್ರೀತಿಯ ಚಿಲುಮೆಯಂತೆ ಅವನು ನಮಗೆ ಉಲ್ಲಾಸನಾಗಿ ಹರಸಬೇಕು. ಒಲವೋಲ್ಲಾಸದ ವರ್ಷದಲ್ಲಿ ನಾವಿಬ್ಬರೂ ನಲಿಯುತಾ, ಮುಂಜಾನೆಯ ಮಂಜು ಕವಿದ ದಾರಿಯಲ್ಲಿ ನಾನು ನೀನು ಜಗದ ಯಾರ ಹಂಗಿಲ್ಲದೆ ಬಾಯಿ ತುಂಬಾ ಹರಟೆಹೊಡೆಯುತ್ತಾ ಸಾಗಬೇಕು. ಸಾಗುವ ದಾರಿಯು ಪ್ರಿತಿ ಮತ್ತು ಸ್ನೇಹದ ಪ್ರೇಮವಾಗಿರಲಿ, ಅದುವು ನಿತ್ಯ ಬಾಳಿನಲ್ಲಿ ಸವಿಯಾಗಿರಲಿ, ಮತ್ತು ಎಂದಿಗೂ ಬೇಸರವೆನಿಸದ ಪಯಾಣವಾಗಲಿ, ಮಧುರ ಪಥವು ಎಂದಿಗೂ ಚಿರಾಯುವಾಗಿರಲಿ..ಮೂಡಣದಲ್ಲಿ ಮೂಡುವ ರವಿಯು ನಮ್ಮೊಲವಿಗೆ ನಿತ್ಯ ಪ್ರೇರಣೆಯಾಗಿರಲಿ..ನಾವಿಬ್ಬರೂ ದಿನವೂ ಆತನನ್ನು ಶುಭಕೋರಿ ಸ್ವಾಗತಿಸುವುದನ್ನು ಎಂದಿಗೂ ಮರೆಯುವುದೂ ಬೇಡ ಗೆಳತೀ.. 
ಶುಭಕೋರುವುದು ಸಾಗಲಿ ನಮ್ಮ ಬಾಳಿನುದ್ದಕೂ. ನಮ್ಮ ಒಲವ ಪಥದುದ್ದಕೂ..

       ರಾಮಚಂದ್ರ ಸಾಗರ್

Thursday, 5 January 2017

ಲಾಲಿಸುತಿದೆ ಮನ ಅವನನೂ...

     ಅಂದು ನಾ ನಡೆವ ಹಾದಿಯಲ್ಲಿ ಮಳೆಹನಿಗಳು ಒಂದೊಂದೇ ಉದುರುತ್ತಿದ್ದವು, ಗಾಳಿಯು ಜೋರಾಗಿ ಬೀಸಲು ಆರಂಭಿಸಿತು, ಬೇಗನೇ ಮನೆಯೆಡೆ ನನ್ನ ಕಾಲುಗಳು ಹೆಜ್ಜೆ ಹಾಕತೊಡಗಿದವು, ಬಾನೆಡೆ ನಾ ಇಣುಕಿ ನೋಡಿದೆ, ಎಲ್ಲೆಲ್ಲೂ ಕರಿಮೋಡಗಳು, ಕಾರ್ಗಾಲದ ವೇಳೆಯಲ್ಲಿ ರವಿಗೇಗೆ ಅವರಸರವೋ ಎಷ್ಟು ಬೇಗನೇ ಮರೆಯಾದನೋ ಎಂದು ದುಗುಡದ ಮನದಲ್ಲಿ ನಾ ತುಸು ಜೋರಾಗಿಯೇ ಸಾಗುತ್ತಿದ್ದೆ, ಸಾಧ್ಯವಾದಾಗ ಎರಡು ಹೆಜ್ಜೆ ಓಡುತ್ತಿದ್ದೆ, ಈ ದಾವಂತದಲ್ಲಿ ಹಾರಿದ ನನ್ನ ದುಪಟ್ಟಾ ತೂರಿ ಹೋಯಿತು, ಗಾಳಿಯಲ್ಲಿ ಬಹು ದೂರ ತೂರಿ ಹೋಯಿತು, ಮನದ ದುಗುಡ ಇನ್ನಷ್ಟು ಏರಿತು, ಆತಂಕದ ಎಲ್ಲೆಯು ಮೀರಿತು, ಓಡುವ ದುಪಟ್ಟಾ ಹಿಡಿಯಲು ನಾ ಓಡುತ್ತಿದ್ದೆ, ಗಿಡದ ಮೇಲೆ ಕೂತು ನಗುವ ದುಪಟ್ಟಾ ಹಿಡಿಯಲು ಇನ್ನೇನು ನನ್ನ ಕೈ ಮುಂದಾದಾಗ ಮಾಯಾಜಿಂಕೆಯಂತೆ ಅದು ಅಲ್ಲಿಂದ ಕ್ಷಣಮಾತ್ರದಲ್ಲಿ ನಾನು ಕಣ್ಣು ಮಿಟುಕಿಸಿ ಬಿಡುವುದರಲ್ಲಿ ಅದು ಅಲ್ಲಿಂದಲೇ ಮಾಯಾ..ಎಲ್ಲೆಲ್ಲಿ ಎಂದು ಮತ್ತು ನನ್ನ ಭಯದ ಮನ ಕಾತರಿಸುತಾ, ದುಪಟ್ಟಾ ಅರಸುತ್ತಾ ಸಾಗುತಿತ್ತು, ಓ ದೇವಾ ಈ ಸಂಜೆ ಹೊತ್ತಲ್ಲಿ ಇದೆಂತಾ ಅವಘಡವಾ ತಂದಿಟ್ಟೆ ಎಂದು ಪರಿತಪಿಸುವುದಾಗಿತ್ತು, ಆ ಕ್ಷಣವನ್ನು ಶಪಿಸುತ್ತಾ, ಆಗಾಗ ಅಬ್ಬರಿಸುತ್ತಿದ್ದ ಗುಡುಗು ಜೊತೆಗೆ ಕಾಣುವ ಮಿಂಚು ಮನದಲ್ಲಿ ಇನ್ನಷ್ಟು ಭಯ ತುಂಬಿತ್ತು, ಬೇಗನೇ ಮನೆಯೆಡೆ ಸಾಗಲಾರದೇ, ದುಪಟ್ಟ ಕೈಸೇರಲೂ ಇರದೇ, ನಾ ಕಾತರಿಸುವ ಸಮಯದಲ್ಲಿ ಯಾರೋ ದೂರದಲ್ಲಿ ನನ್ನ ಕಡು ನೀಲಿ ದುಪಟ್ಟಾ ಹಿಡಿದು ಓಡಿ ನನ್ನೆಡೆಯೇ ಬಂದಂತೆ ಎನಿಸಿತು, ಮಿಂಚಿನ ಬೆಳಕಲ್ಲಿ ಇನ್ನಷ್ಟು ಸ್ಪಷ್ಟವಾಗಿ ಮೂಡಿತು, ಬಂದು ನನ್ನ ಕೈಲಿಟ್ಟಂತೆ ಎನಿಸಿತು, ನೋಡಿದೆ ಹೌದು ಅದೂ ನನ್ನದೇ ದುಪಟ್ಟಾ, ನಾನು ಪರಿತಪಿಸುತ್ತಿದ್ದ ದುಪಟ್ಟಾ, ಅಯ್ಯೋ ಈ ಗಾಳಿ, ಮಳೆಯಲ್ಲಿ ದೇವರು ಕರುಣಿಸಿದವರೆಂದು ಬೇಗನೇ ಕ್ಷಣ ಕರಗುವುದರೊಳಗಾಗಿ ಮೈಮೇಲೆ ಹೊದ್ದು ನಿಂತೆ, ದುಪಟ್ಟ ಕೊಟ್ಟು ಮೆತ್ತನೇ ನನ್ನೆಡೆಯಿಂದ ಏನನ್ನು ನುಡಿಯದೇ ಹೋಗುವ ಅವನಾರೆಂದು ನೋಡಿದೆ, ಆತನಾರು, ಎಲ್ಲಿಂದ ಬಂದನೆಂದು ತಡವರಿಸಿದರೂ ದೇವರೇ ನಿನಗೂ ನಾ ಋಣಿ ಎನ್ನುತ್ತಾ, ಏನೇ ಆದರೂ ನಾ ಕಷ್ಟ ಪಡುವಾಗ ನನ್ನ ದುಪಟ್ಟಾ ಹಿಡಿದು ಕೊಟ್ಟವನಿಗೆ ಒಮ್ಮೆ ಧನ್ಯವಾದ ಹೇಳಬೇಕೆಂದು ಮನ ಹೇಳುತ್ತಿದ್ದಾರೂ ಕೊಂಚ ಹೆದರಿಕೆ ಕಾಡಿತು, ಈ ಸಮಯದಲ್ಲಿ ಬೇಗನೇ ಮನೆ ಸೇರೋಣವೆಂದು ಮತ್ತೆ ಬೇಗನೇ ಸಾಗತೊಡಗಿದೆ, ಆತನು ನಾ ನಡೆವ ದಾರಿಯಲ್ಲಿ ತುಸು ದೂರದಲ್ಲಿ ಮಬ್ಬಾಗಿ ಕಾಣುತ್ತಿದ್ದ. ನಾನೂ ಅವಸರವಾಗೇ ನಡೆಯುತಿದ್ದೆ, ಸಂಜೆಯೂ ನಿಧಾನವಾಗಿ ಕತ್ತಲೆಯೆಡೆ ಸಾಗುತ್ತಿತ್ತು, ರವಿಗೂ ಕಾರ್ಗಾಲದಲ್ಲಿ ಮರೆಯಾಗಲು ಅದೇನು ದಾವಂತವೋ ಎನೋ, ಒಮ್ಮೊಮ್ಮೆ ಮೋಡಗಳು ಕಡಿಮೆಯಾದಾಗ ಇಣುಕುವ ಚಂದಿರನ ಸೊಬಗೇನೋ ಹಿತ, ಕೊಂಚ ತಿಳಿ ನೀಲಿ ಬೆಳಕಾದರೂ ದಾರಿಯಾಗುವುದೇ ಎನ್ನುತ್ತಾ ತಡಬಡಿಸುತ್ತಿದ್ದೆ. 

     ಮಳೆಗಾಳಿಯು ಒಮ್ಮೆಲೇ ಜೋರಾಯಿತು, ಮುಂದೆ ಸಾಗುವುದು ಕಠಿಣವಾಯಿತು, ಎಷ್ಟು ದೂರ ಮಳೆಯಲ್ಲಿ ಸಾಗುವುದೆಂದು ಅರಿವಾಗದೇ ಮೊದಲೇ ಭಯದಲ್ಲಿ ನಡುಗುತ್ತಾ ಸಾಗುತ್ತಾ ನಡೆವಾಗ ಮೈಯೆಲ್ಲಾ ಒದ್ದೆಯಾಗಿ ಮತ್ತೆ ತಡವರಿಸುವಾಗ, ಮಳೆಹನಿಗಳು ಮತ್ತೆ ಮತ್ತೆ ಜೋರಾಗತೊಡಗಿದವು, ಹನಿಗಳ ಹೊಡೆತಕ್ಕೆ ನಾನು ಕಣ್ಣು ಬಿಡುವುದು ಕಠಿಣವೆನಿಸಿತು, ಅದರಲ್ಲಿ ತನುವು ಚಳಿ ಗಾಳಿಯ ಕೊರೆತಕೆ ನಡುಗಲಾರಂಭಿಸಿತು, ನಡುಗುವ ತನುವಲ್ಲಿ ಮತ್ತೆ ಹೆದರುತ್ತಾ ಸಾಗುವುದು, ಮತ್ತೆ ಮತ್ತೆ ಮನದಲ್ಲಿ ದಾರಿಬೇಗನೇ ಕ್ರಮಿಸಲೆಂದು ಬೇಡುವುದು ಆ ಘಳಿಗೆಯಲ್ಲಿ ಅನಿವಾರ್ಯವಾಗಿತ್ತು. ತುಸು ದೂರನಡೆಯುತಿದ್ದಂತೆ ಮಳೆ ನೀರಿನಲ್ಲಿ ನಾನು ಒಮ್ಮೆಲೇ ಜಾರಿದೇ, ಜೊತೆಗೆ ಜೋರಾಗಿ ಕಿರುಚಿದೆ, ಯಾರೋ ಪಕ್ಕದಲ್ಲಿ ಮಿಂಚಂತೆ ಬಂದು ನಾನು ನೆಲಮುಟ್ಟುವುದರೊಳಗಾಗಿ ಬಂದು ನನ್ನ ಮೇಲೆತ್ತಿದ್ದರು, ಹಾಗೆಯೇ ತುಸುವೂ ವಿರಮಿಸದೇ ಬಡಿಯುತಿದ್ದ ಹೃದಯ ಬಡಿತ ನಾಲ್ಕು ಪಟ್ಟು ಜೋರಾಯಿತು, ನಡುಗುವ ತನುವು ಒಮ್ಮೆ ಬಿಗಿಯಾಯಿತು, ಆರ್ಭಟದ ಗುಡುಗಿನ ಜೊತೆಯಲ್ಲಿ ಜಿಗದ ಮಿಂಚು ಬೆಳಕಲ್ಲಿ ನಾ ನೋಡಿದೆ, ನನ್ನನ್ನು ಗಟ್ಟಿಯಾಗಿ ಹಿಡಿದೆತ್ತಿದವನ ಮೊಗವ, ಅದೂ ಅವನೇ ನನ್ನ ದುಪಟ್ಟಾ ಎತ್ತಿ ಕೊಟ್ಟವನೂ, ನಾನೂ ಕೇಳಿದೆ..ತುಸು ಸಾವರಿಕೊಳ್ಳುತ್ತಾ..ನನ್ನ ದುಪಟ್ಟಾ ತಂದು ಕೊಟ್ಟವರಲ್ಲವೇ ಎಂದೆ.. ಹೌದು ಎಂದ, ತುಸು ದೂರ ಜೊತೆಯಲ್ಲಿ ನಡೆದು ಹೋದೆ, ಏನೇನೋ ಎನ್ನುತ್ತಲೇ ಮನ ಸಾಗಿತು, ಜೊತೆಗೆ ನಡುಗುವ ತನುವಿನೊಂದಿಗೆ, ಊರು ಸನಿಹವಾಗಿ ಮನೆಯ ಹಾದಿಯು ಹತ್ತಿರವಾದಾಗ ಪಕ್ಕದಲ್ಲೇ ಸಾಗಿ ಬರುತ್ತಿದ್ದ ಆತನಿಗೆ ಮತ್ತೊಮ್ಮೆ ಧನ್ಯವಾದವೆಂದೆ.. ಆತನೂ ನನ್ನನ್ನೇ ಮೀರಿಸುವಂತ ನಾಚಿಕೆ ನಂಟಿನವನೇನೋ..ಏನು ಹೆಚ್ಚು ನುಡಿಯದೇ ಬರುವೆಯೆಂದು ನುಡಿದ.. ಮತ್ತೆ ಕಣ್ಣೆತ್ತಿ ಬಾನೆಡೆ ನೋಡಿದೆ, ಅಲ್ಲಿ ಮೋಡಗಳು ಕಡಿಮೆಯಾಗಿವೆ, ಮೆತ್ತನೇ ಚಂದಿರ ನಗುತ್ತಿದ್ದಾನೆ, ನೀಲಿ ಬೆಳಕನ್ನು ನನ್ನೆಡೆ ತೂರುತ್ತಿದ್ದಾನೆ, ಈ ಕಡೆ ನೋಡಿದೆ, ದುಪಟ್ಟಾ ಕೊಟ್ಟವನು  ಮಳೆ ನೀರಲ್ಲಿ ಜಾರಿದಾಗ ಮೇಲಿತ್ತಿದ್ದವನೂ ಮೆತ್ತನೇ ಸಾಗುತ್ತಿದ್ದ. ಒಮ್ಮೆ ಗಟ್ಟಿಯಾಗಿ ಥ್ಯಾಂಕ್ ಕಣ್ರೀ ಎಂದು ಕೂಗಿದೆ. ಮತ್ತೆ ಗಟ್ಟಿಯಾಗಿ ಕೂಗಿದೆ, ಆತ ತಿರುಗಿ ನೋಡಿ ತುಸು ನಕ್ಕು ನಡೆದ..ಮನೆಗೆ ಬಂದು ತುಸು ಕಿಟಕಿಯಲ್ಲಿ ಬಾನೆಡೆ ನೋಡಿದೆ, ಓಡುವ ಮೋಡಗಳು ಕಡಿಮೆಯಾಗಿ ಚಂದಿರ ನಗುತ್ತಿದ್ದಾನೆ, ಮನದಲ್ಲಿ ಮೆತ್ತನೆ ಅವನ ನೆನಪು ಲಾಲಿಸುತಿದೇ..ಏಕೋ ಅರಿವಾಗುತ್ತಿಲ್ಲ..ಏನೆಂದು ತಿಳಿಯುತ್ತಿಲ್ಲ..

      ರಾಮಚಂದ್ರ ಸಾಗರ್

Wednesday, 4 January 2017

ಹರಯ ನೀ ಬಂದ ಸಮಯ...

ನಗುವ ಚಂದಿರ ಕವಿತೆ ಬರೆಸುವ ಸಮಯ
ನಗುವ ನೈದಿಲೆ ಒಲವಾಂಕುರಿಸುವ ಸಮಯ
ಒಲವ ಯುಗಾದಿ ಆಗಮಿಸುವ ಸಮಯ
ಒಲವಗಾಥೆಯ ಗುನುಗುವ ಸಮಯ..

ಒಲವ ಹೊನಲು ತುಂಬುವ ಸಮಯ
ಅನುರಾಗದಲೆಗಳು ಬೀಸುವ ಸಮಯ
ಪ್ರಣಯದ ಕನಸು ಕಾಣುವ ಸಮಯ
ಒಲುಮೆ ಓಲಾಟದಲ್ಲಿ ನಲಿವ ಸಮಯ..

ಒಡನೆ ಸಂಗಾತಿಯ ಬೇಡುವ ಸಮಯ
ಒಲವ ಒಸಗೆಯ ಕಾತರಿಸುವ ಸಮಯ
ಒನಪು ನಗುವಿಗೆ ಹಂಬಲಿಸುವ ಸಮಯ
ಒಯ್ಯಾರದ ಜಗವು ಮೂಡುವ ಸಮಯ..

ಒಂಟಿತನವು ಬೇಸರವೆನಿಸುವ ಸಮಯ
ಒಯ್ಯಾರದ ಜಗವು ಅರಳುವ ಸಮಯ
ಒಲವಕಾವ್ಯವು ಪದವಾಗುವ ಸಮಯ
ಒಲವ ರಂಗು ಕಲನವಾಗುವ ಸಮಯ...


 ಒಲವ ಕುಸುಮ ಕಂಪಿಸುವ ಸಮಯ
ಒಲಿದ ಮನಕೆ ಹಾತೊರೆವ ಸಮಯ
ವಿರಹತಾಪ ಅನುಭವಿಸುವ ಸಮಯ
ಹಗಲುಕನಸು ಬೀಳುವ ಸಮಯ..

ಹರಯ ನೀ ಬಂದ ಸಮಯ
ಒಲವ ಜಲಧಿಯು ಉಕ್ಕುವ ಸಮಯ
ಹರಯ ನೀ ಬಂದ ಸಮಯ
ಒಲವ ಹಂದರ ಕಟ್ಟುವ ಸಮಯ...

       ರಾಮಚಂದ್ರ ಸಾಗರ್