ಮುಂಜಾನೆಯ ತಂಗಾಳಿಯ ಹಾದಿಯಲಿ
ಕಾಡುತಿದೆ ಗೆಳೆಯಾ ನೀನೆನ್ನುವ ಅನುಪಮ ನೆನಪು..
ನಗುವ ಮಲ್ಲಿಗೆಯ ಮೋಹದ ಚೆಲುವಿನಲಿ
ಅರಳುತಿದೆ ಗೆಳೆಯಾ ನೀನೆನ್ನುವ ನಿಸ್ವಾರ್ಥದ ನೆನಪು..
ಸಂಪಿಗೆಯ ಸೌರಭದ ಕಂಪಿನಲೆಯಲಿ
ಘಮಿಸುತಿದೆ ಗೆಳೆಯಾ ನೀನೆನ್ನುವ ಸವಿಧಾರೆಯ ನೆನಪು..
ಮಂಜಿನ ಹನಿಗಳ ಶ್ವೇತ ಮಾಲೆಯಲಿ
ಮೂಡುತಿದೆ ಗೆಳೆಯಾ ನೀನೆನ್ನುವ ನಿರ್ಮಲ ನೆನಪು..
ರವಿ ಕಿರಣಗಳ ಕಾಂತಿಯ ಮೇಳದಲಿ
ಶೋಭಿಸುತಿದೆ ಗೆಳೆಯಾ ನೀನೆನ್ನುವ ಸೋಜಿಗದ ನೆನಪು..
ಒಲವು ತುಂಬಿದ ನನ್ನಯಾ ಕಾತರದ ಕಣ್ಣುಗಳಲಿ
ಸದಾ ಬೇಡಿದೆ ಗೆಳೆಯಾ ನೀನೆನ್ನುವ ಪ್ರೀತಿಯ ನೆನಪು..
ಬೆಡಗು ತುಂಬಿದ ಕೋಮಲ ನಡಿಗೆಯಲಿ
ನಿನ್ನದೇ ಸಾನಿಧ್ಯವೆ ಜೊತೆಯಾದ ನವಿರಾದ ನೆನಪು...
ರಚನೆ: ರಾಮಚಂದ್ರ ಸಾಗರ್
ಚಿತ್ರ: ಶಿಲ್ಪಾ ರಾಜನ್
