ಎಲ್ಲರಿಗೂ ನಮಸ್ಕಾರ..
ಆತ್ಮೀಯರೇ, 2020ನೇ ವರ್ಷ ಹಲವು ದುಗುಡಗಳಿಂದಲೇ ಸಮಯವನ್ನು ಮರೆಯಾಗಿಸಿದೆ. ನೋವೇ ಆವರಿಸಿಕೊಂಡು ಇಡೀ ಜಗವು ನರಳಿತು.. ಅನೇಕ ಬಡ ಕುಟುಂಬಗಳು ಅನುಭವಿಸಿದ ಯಾತನೆ ಪದಗಳಿಂದ ಹೇಳುವುದು ಕಷ್ಟವೇ! ನೋವು ನುಂಗದ ಜೀವಿಯಿಲ್ಲ ಎನ್ನುವಂತೆ ಮಾಡಿದ್ದು ಈ 2020 ನೇ ವರ್ಷ.
ನೋವಿನ ನಡುವೆಯೂ ನಮ್ಮ ಕಾರ್ಯದಲ್ಲಿ ಸಾಧ್ಯವೆನಿಸಿದ್ದನ್ನು ಸಾಧಿಸಿದ್ದೇವೆ. ಅನ್ನಕ್ಕಾಗಿ ಕೈಲಾಗಿದ್ದು ದುಡಿದಿದ್ದೇವೆ. ಎಲ್ಲರ ನೋವಿನೊಂದಿಗೆ ಆಗದಿದ್ದರೂ ಕೈಲಾದ ಒಂದೆರಡು ಜನರಿಗೆ ಸ್ಪಂದಿಸಿದ ನೆಮ್ಮದಿಯಂತೂ ಇದೆ..
ಹೊರ ಜಗತ್ತು ದುಗುಡ, ತಲ್ಲಣ, ರೋದನೆ ಮಳೆ ಸುರಿಸಿತು. ಮನದೊಳಗಿನ ಜಗತ್ತು ಆ ನೋವಿನ ಅಲೆಯಿಂದ ಮೂಕವಾಗಿಯೇ ಉಳಿವುದಾಯಿತು! ಕಾಣದ ವೈರಸ್ ಇಡೀ ಜಗವನ್ನು ಬೆಂಡಾಗಿಸಿ ಮನುಕುಲಕ್ಕೆ ಸಂಕಷ್ಟ ತಂದೊಡ್ಡಿದ ಸಮಯದಲ್ಲೂ ನಮ್ಮೊಳಗಿನ ದ್ವೇಷ, ಅಸೂಯೆ, ಹಿಂಸೆ, ದುರಾಸೆಗಳು ಹಾಗೇ ಉಳಿದಿದ್ದು ವಿಪರ್ಯಾಸ! ಈ ಸಮಯದಲ್ಲೂ ಒಂದೆನ್ನುವ ಭಾವ ಮೂಡಲಿಲ್ಲ..ಇನ್ನು ಮುಂದೆಯೂ ಅದು ಅಸಂಭವವೇ!
ಈ ಸಮಯದಲ್ಲೂ ಮನದಲ್ಲಿ ಬೇಸರವಿದ್ದರೂ ತೋಚಿದ್ದಂತೂ ಬರೆದಿದ್ದೇನೆ.. ಬರವಣಿಗೆ ನಿಲ್ಲಬಾರದು ಎನ್ನುವ ಉದ್ದೇಶದಿಂದ.. ಎಲ್ಲರೂ ನನ್ನ ಬರಹಗಳನ್ನು ಓದಿ ಅಕ್ಕರೆಯಿಂದ ಹಾರೈಸಿದ್ದೀರಿ..ಎಲ್ಲರಿಗೂ ವಂದನೆಗಳು..
ಈಗ “ಹೃದಯ ಹಿಂಡದೇನು?” ಎನ್ನುವ ಕವಿತೆಯೊಂದಿಗೆ ಈ ವರ್ಷಕ್ಕೆ ವಿದಾಯ ಹೇಳುತ್ತಿದ್ದೇನೆ..ಇದು ಜೀವನದಲ್ಲಿ ಕಂಡ ಹಲವು ವೈರುದ್ಯಗಳ ಪಟ್ಟಿಯಾಗಿದೆ. ಅದರಲ್ಲಿ ಕೆಲವೊಂದು ಆಯ್ದುಕೊಂಡಿದ್ದು ಬರೆದಿದ್ದೇನೆ. ಇದು ನಿಮ್ಮ ಮನದ ಮಾತು ಆಗಿರಲೂಬಹುದು..
ಇದು ಈ 2020 ವರ್ಷದ ನನ್ನ ಕೊನೆಯ ಕವಿತೆ..
ದಯವಿಟ್ಟು ಕವಿತೆ ಓದಿ ಹಾರೈಸಿ.. ಮತ್ತೆ ಮುಂದಿನ ವರ್ಷವೇ ಅಂದರೆ 2021ರಲ್ಲಿ ಹೊಸ ಕವಿತೆ ರಚಿಸುತ್ತೇನೆ..
ಎಲ್ಲರಿಗೂ ಮತ್ತೊಮ್ಮೆ ತಮ್ಮ ಅಭಿಮಾನದ ಸಹಕಾರಕ್ಕೆ ವಂದನೆಗಳು..
ಹೃದಯ ಹಿಂಡದೇನು?
ಕಳ್ಳನನು ರಕ್ಷಕನೆಂದು ಹಾಡಿ ಹೊಗಳುವುದೇಕೆ
ಸುಳ್ಳನನು ಸತ್ಯವಂತನೆಂದು ಗುಣಗಾನಿಸುವುದೇಕೆ
ಕಪಟಿಯ ಬೂಟಾಟಿಕೆಯ ಸುಯೋಗವೆನುವುದೇಕೆ
ಕಕವನ ಆಷಾಢಭೂತಿಗೂ ಮರುಳಾಗುವುದೇಕೆ?
ದರೋಡೆಕೋರನ ದಾನಿಯೆಂದು ಪೂಜಿಸುವುದೇಕೆ
ಕರೋಟವಿಲ್ಲದ ಸಾಹಿತ್ಯವನು ಜ್ಞಾನಸಾಗರವೆನುವುದೇಕೆ
ದೋಷದ ದುರ್ವ್ಯಸನಿಯ ಸಚ್ಚರಿತನೆನುವುದೇಕೆ
ಮೋಸದ ದುಷ್ಟನ ಕುಣಿತಕೆ ಬೆರಗಾಗುವುದೇಕೆ?
ಮಂಜು ತುಂಬಿದ ಹಾದಿ ಶುಭ್ರವೆನುವುದೇಕೆ
ಮಂಕು ಮಾತನು ಅಪ್ಪಿ ಸಂಭ್ರಮಿಸುವುದೇಕೆ
ಪುಣ್ಯದ ಮನುಜನ ಅಪವಿತ್ರನೆನುವುದೇಕೆ
ಧನ್ಯದ ನದಿಗೆ ಕೊಳಚೆ ಚೆಲ್ಲುವುದೇಕೆ?
ಹುಸಿ ಸೊಲ್ಲನು ಸತ್ಯಸಾರವೆನುವುದೇಕೆ
ಮುಸಿ ಜನರನು ಪಾವನರೆನುವುದೇಕೆ
ಸೈಂಧವವ ಸಿಹಿಯೆಂದು ನಟಿಸುವುದೇಕೆ
ಸೈದ್ದಾಂತ ಅಹಿತವಾದರೂ ಜೈಯೆನುವುದೇಕೆ?
ಅಜ್ಞಾನಿಗೆ ಪಾಂಡಿತ್ಯನೆಂದು ಹಾರ ಹಾಕುವುದೇಕೆ
ಸುಜ್ಞಾನಿಗೆ ಗಾಂಪರನೆಂದು ಒದೆಯುವುದೇಕೆ
ಮೂರ್ಖನಿಗೆ ಮಹೋದಯನೆಂದು ಮೆರವಣಿಗೆಯೇಕೆ
ಮೂರ್ಖನಾದಕೆ ಬೆಪ್ಪಾಗಿ ಕುಣಿಯುವುದೇಕೆ?
ನಂಜು ಮನವನು ನಿರ್ಮಲವೆನುವುದೇಕೆ
ನಂಬಿಕೆ ಕೊಂದ ದ್ರೋಹಿಗಳಲಿ ವಿಶ್ವಾಸಿಸುವುದೇಕೆ
ಅನಂಗನ ಸರ್ವಾಂಗಿಯೆನುತ ಭಜಿಸುವುದೇಕೆ
ಅನಂತದ ಸತ್ಯಕೆ ಸಾವಿದೆ ಎನ್ನುವುದೇಕೆ...?
ಸತ್ಯದ ಜಗವನು ಮೆಚ್ಚದೆ ನಿತ್ಯ ಸಾಯುವುದೇಕೆ
ಮಿಥ್ಯದ ಲೋಕವನು ಅಪ್ಪಿ ಓದ್ದಾಡುವುದೇಕೆ
ಮುಖವಾಡದ ಬದುಕು ಎಷ್ಟು ಹಿತವು?
ಮುಖಮುದ್ರೆ ಬದಲಾಗಿ ಹೃದಯ ಹಿಂಡದೇನು?
ರಚನೆ: ರಾಮಚಂದ್ರ ಸಾಗರ್
