Wednesday, 23 January 2019

ಬಾರೆ ಗೆಳತಿ..

ಪ್ರೀತಿಯ ಮಾತೊಂದನು ನೀ ಹೇಳು ಬಾ ಗೆಳತಿ
ಅಕ್ಕರೆಯ ಅಹವಾಲನು ನೀ ಕೇಳು ಬಾ ಗೆಳತಿ
ಹೃದಯದ ನಿವೇದನೆಯನು ನೀ ಅರಿತು ಬಾ
ಮೌನದ ಕನಸನು ನನಸಾಗಿಸು ಬಾ

ನಿನ್ನೊಲವ ರಂಗಲಿ ಮನ ನಲಿಸು ಬಾ
ಒಲವ ಮೇನೆಯಲಿ ಜೊತೆಯಾಗು ಬಾ
ಒಲವ ಕಾವ್ಯದಲಿ ಕಾವ್ಯ ಕನ್ನಿಕೆಯಾಗಿ ಬಾ
ಎದೆಯ ದನಿಗೆ ಜೀವದ ಉಸಿರಾಗು ಬಾ

ಪುಟಿದೇಳುವ ಬಯಕೆಗಳಿಗೆ ಉತ್ತರವಾಗು ಬಾ
ಮಿಟುಕಿಸುವ ಕಣ್ಣೋಟದಲೆ ಸಂತೈಸು ಬಾ
ನವಿರೇಳಿದ ಕನಸುಗಳಿಗೆ ಒಡತಿಯಾಗು ಬಾ
ಪುನೀತ ಪ್ರೀತಿಗೆ ಜೊತೆಯಾಗು ಬಾ

ಒಲವಗಾನದಲಿ ಸ್ವರಮೇಳವಾಗು ಬಾ
ಮೋಹದ ಪದಗಳಲಿ ಕವಿತೆಯಾಗಿ ಬಾ
ಸತ್ಯದ ಪ್ರೀತಿಗೆ ಪುರಾವೆ ನೀನಾಗು ಬಾ
ಪ್ರೇಮದಾ ಪುಶ್ಕರಿಣಿಯಲಿ ನಲಿಸು ಬಾ

ಪುಳಕಿತ ಜಗದಲಿ ಹೆಮ್ಮೆಯಿಂದ ನಡೆಸು ಬಾ
ಸೌಮ್ಯದ ಶರಧಿಯಲಿ ನೌಕೆಯಾಗು ಬಾ
ಒಲವ ಸೌರಭದ ಗೂಡಲಿ ಕಂಪು ಸೂಸು ಬಾ
ಸೌಖ್ಯದ ಬದುಕಲಿ ಒಂದಾಗೋಣ ಬಾ ಗೆಳತಿ

ರಾಮಚಂದ್ರ ಸಾಗರ್