Friday, 17 March 2017

ನೀನೇ ಗೆಳತಿ..

ಕಡಲ ಕಿನಾರೆಯ ಮುಸ್ಸಂಜೆಯ ತಂಪಲಿ
 ಪ್ರೀತಿಸುವ ಇರಾದೆಯ ಮನದಲ್ಲಿ ನೂಕಿದವಳು
 ನಿನ್ನೊಲವ ರಂಗಿನ ಪ್ರೇಮದ ಶರಧಿಯಲಿ
ಪ್ರೇಮಿಸುವ ಬಯಕೆಯನು ಮನದಲ್ಲಿ ಬಿತ್ತಿದವಳು..
ನೀನೇ ಗೆಳತಿ..


ಸುರಿವ ಹನಿಯ ನವಿರು ನಾದಲ್ಲಿ
 ಪ್ರೇಮಗೀತೆಯ ಎದೆತುಂಬಿ ಹಾಡಿದವಳು
 ಪ್ರೀತಿಸುವ ಮನದ ತಳಿರು ಭಾವದಲ್ಲಿ
 ಪ್ರೀತಿಯ ಪದಗಳಿಗೆ ದನಿಯಾಗಿ ಬಂದವಳು
 ನೀನೇ ಗೆಳತಿ..


ಮುಂಜಾವಿನ ಸೊಬಗಿನ ಪಳಿಸುವ ಕಿರಣಗಳಲಿ
 ಪ್ರೀತಿಯ ಹಾರವನು ಪೋಣಿಸಿ ಎದುರಾದವಳು
 ಹೂಬನದ ಸುಗಂಧದ ನವಿರು ಕಂಪಲಿ
 ಪ್ರೇಮದ ಲೇಪವ ಮನದ ತುಂಬ ಸವರಿದವಳು..
ನೀನೇ ಗೆಳತಿ..


ತುಸು ನಗುವ ಸೊಬಗಲ್ಲಿ ನವ್ಯತೆಯ ಭಾವವರಳಿಸಿ
 ಭವ್ಯದಾ ಪಥದಲ್ಲಿ ಕೈಹಿಡಿದು ಕರೆದವಳು
 ಪ್ರೀತಿಸೆಲೆಯ ಮನದಲ್ಲಿ ಒಲವದೀಪವಾಗಿ
 ಪ್ರೀತಿಯಾ ಬದುಕಲ್ಲಿ ಬೆಳಕಾಗಿ ಮೂಡಿದವಳು..
ನೀನೇ ಗೆಳತಿ..


ಕಣ್ಣಲ್ಲಿ ಕಣ್ಣಿಟ್ಟು ಸವಿಘಳಿಗೆಯ ತಂದವಳು
 ಪ್ರೀತಿಯ ಇರಾದೆಯ ಮನದಲ್ಲಿ ತುಂಬಿದವಳು
 ಪ್ರೀತಿಸುವ ಮನಕೆ ಒಲವಧಾರೆಯಾಗಿ ಸುರಿದವಳು
 ಚೆಲುವ ಬದುಕಿಗೆ ತಂಗಾಳಿಯಾಗಿ ಬೀಸಿದವಳು
 ನೀನೇ ಗೆಳತಿ..


          ರಾಮಚಂದ್ರ ಸಾಗರ್