Saturday, 1 November 2025

ಕನ್ನಡವೇ ವರವು

 ಕನ್ನಡವೇ ವರವು ಕನ್ನಡವೇ ದೈವವು


ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡವೇ ಅಮೃತವು ಕನ್ನಡವೇ ಸಂಪನ್ನವು

ಕನ್ನಡವೇ ಸಂಸ್ಕಾರವು ಕನ್ನಡವೇ ವೈಭವವು..


ಕನ್ನಡವೇ ಸುಯೋಗವು ಕನ್ನಡವೇ ಸತ್ಕಾರವು

ಕನ್ನಡವೇ ಸಂಭ್ರಮವು ಕನ್ನಡವೇ ಸತ್ರವು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..



ಕನ್ನಡವೇ ನಿಶ್ಚಯವು ಕನ್ನಡವೇ ನಿಬ್ಬೆರಗು

ಕನ್ನಡವೇ ಬೆಳಕು ಕನ್ನಡವೇ ಬೆಡಗು..


ಕನ್ನಡವೇ ಉಲ್ಲಾಸವು ಕನ್ನಡವೇ ಉನ್ನತಿಕೆಯು

ಕನ್ನಡವೇ ಸೌಖ್ಯವು ಕನ್ನಡವೇ ಸೌಂರ‍್ಯವು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡವೇ ಕಾರುಣ್ಯವು ಕನ್ನಡವೇ ಕಾರುಬಾರು

ಕನ್ನಡವೇ ಕನಕವು ಕನ್ನಡವೇ ನಾಕವು..


ಕನ್ನಡವೇ ದಿವ್ಯತೆಯು ಕನ್ನಡವೇ ದಿಗಂತವು

ಕನ್ನಡವೇ ದಿಟವು ಕನ್ನಡವೇ ದೀವಟಿಗೆಯು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡವೇ ಹುರುಳು ಕನ್ನಡವೇ ಬಲವು

ಕನ್ನಡವೇ ಅಮರವು ಕನ್ನಡವೇ ಜಗವು..


ಕನ್ನಡಿಗನೆ ಪುನೀತನು ಕನ್ನಡಗನೆ ಸಜ್ಜನನು

ಕನ್ನಡಿಗನೆ ಉದಾರಿಯು ಕನ್ನಡಿಗನೆ ಉದ್ಧಾರಕನು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡಿಗನೆ ಉದಾತ್ತನು ಕನ್ನಡಿಗನೆ ಉಚ್ಛ್ರಾಯನು

ಕನ್ನಡಿಗನೆ ಸೌಹರ‍್ದನು ಕನ್ನಡಿಗನೆ ಸೌಷ್ಠವನು..


ಕನ್ನಡ ನುಡಿಯೆ ಸ್ವಾರಸ್ಯದ ದನಿಯು

ಕನ್ನಡ ನುಡಿಯೆ ಜ್ಞಾನದ ಸಿದ್ಧಿಯು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


ಕನ್ನಡ ನುಡಿಯೆ ಪಾವನ ಸ್ವರವು

ಕನ್ನಡ ನುಡಿಯೆ ಹೃದಯಕೆ ಘನತೆಯು..


ಕನ್ನಡವೇ ವರವು ಕನ್ನಡವೇ ದೈವವು

ಕನ್ನಡವೇ ಉಸಿರು ಕನ್ನಡವೇ ಸಿರಿಯು..


Sunday, 17 August 2025

ಮುಂಗಾರು ಮಳೆಯಲಿ




ಮುಂಗಾರು ಮಳೆಯಲಿ ನಿನ್ನೊಂದಿಗೆ ನಲಿವ ಘಳಿಗೆ ಮತ್ತೆ ಬಂದಾಗಿದೆ ಗೆಳೆಯಾ..

ಸುರಿವಾ ಹನಿಗಳಲಿ ನಿನ್ನೊಂದಿಗೆ ಸಾಗುವ 

ಯೋಗ ಮತ್ತೆ ಬಂದಾಗಿದೆ..(ಪ)


ತುಂಟ ನೋಟದ ನಿನ್ನ ನಗುವು ನನ್ನೆದೆಗೆ  ಸಿಹಿ ಜೇನಾಗಿದೆ ಗೆಳೆಯಾ..

ಇನಿದಾದ ನಿನ್ನ ಮೆಲುನಗುವು ಹೃದಯಕೆ ನೀನೇ ಬೇಕೆಂದಿದೆ

ಗೆಳೆಯಾ..


ಮುಂಗಾರು ಮಳೆಯಲಿ ನಿನ್ನೊಂದಿಗೆ ನಲಿವ ಘಳಿಗೆ ಮತ್ತೆ ಬಂದಾಗಿದೆ ಗೆಳೆಯಾ..

ಸುರಿವಾ ಹನಿಗಳಲಿ ನಿನ್ನೊಂದಿಗೆ ಸಾಗುವ 

ಯೋಗ ಮತ್ತೆ ಬಂದಾಗಿದೆ..(ಪ)


ಪ್ರೀತಿ ತುಂಬಿದ ನಿನ್ನ ಮನಸಲಿ ನನ್ನದೇ ಹೆಸರು ಬೆರೆತಾಗಿದೆ ಇನಿಯಾ..

ನನ್ನ ಮನದ ಉಸಿರಲು ನಿನ್ನ ಹೆಸರೇ ಸದಾ ಗುನುಗುತಿದೆ ಗೆಳೆಯಾ..


ಮುಂಗಾರು ಮಳೆಯಲಿ ನಿನ್ನೊಂದಿಗೆ ನಲಿವ ಘಳಿಗೆ ಮತ್ತೆ ಬಂದಾಗಿದೆ ಗೆಳೆಯಾ..

ಸುರಿವಾ ಹನಿಗಳಲಿ ನಿನ್ನೊಂದಿಗೆ ಸಾಗುವ 

ಯೋಗ ಮತ್ತೆ ಬಂದಾಗಿದೆ..(ಪ)


ಮಳೆಯಲಿ ನಡುಗುವ ತನುವಿಗೆ ನಿನ್ನ ತುಂಟ ನೋಟವೇ ಬಿಸಿ ನೀಡಿದೆ ಗೆಳೆಯಾ..

ನಿನ್ನ ಸನಿಹದ ಸಹವಾಸ ಮನಕೆ ಸದಾ ಹಿತ ನೀಡಿದೆ ಗೆಳೆಯಾ..


ಒಲವಿನ ರಂಗಿನಲಿ ನಿನ್ನ ಪ್ರೇಮದ ಪಥದಲ್ಲಿ ನಾವು ಅನುದಿನವೂ ಸಾಗಬೇಕಿದೆ..

ಪ್ರೀತಿಯ ಮಳೆಯಲಿ ತನುಮನ ರಂಗೇರಿ ನಲಿಯಲಿ ಸಂಭ್ರಮದಿ...


ಮುಂಗಾರು ಮಳೆಯಲಿ ನಿನ್ನೊಂದಿಗೆ ನಲಿವ ಘಳಿಗೆ ಮತ್ತೆ ಬಂದಾಗಿದೆ ಗೆಳೆಯಾ..

ಸುರಿವಾ ಹನಿಗಳಲಿ ನಿನ್ನೊಂದಿಗೆ ಸಾಗುವ 

ಯೋಗ ಮತ್ತೆ ಬಂದಾಗಿದೆ..(ಪ)


ರಚನೆ: ರಾಮಚಂದ್ರ ಸಾಗರ್





Wednesday, 2 July 2025

ನಾನಲ್ಲವೇ..?

ಚಿತ್ರ ಕೃಪೆ: ಗಹನ ಗೌಡ

ಗುಳಿಕೆನ್ನೆಯಲಿ ಮೂಡಿದ ಅನುಪಮ ನಗುವಿನೊಡೆಯ 

ನನ್ನೊಲವಿನ ಮಮತೆಯ ಗೆಳೆಯಾ ನೀನಲ್ಲವೇ..


ಸೌಜನ್ಯದ ಹೆಜ್ಜೆಗೆ ಹೂಮಾಲೆಯ ತೋರಣವನು

ಪೋಣಿಸಿದ ಹೂವಿನ ಮನದೊಡೆಯ ನೀನಲ್ಲವೇ..


ಅನುರಾಗದ ಹಾಡಿಗೆ ಸಂಪ್ರೀತಿಯ ಪದಮಾಲೆಯು

ಕಟ್ಟಿದ ಒಲುಮೆಯ ಗಾರುಡಿಗನು ನೀನಲ್ಲವೇ..


ಅಕ್ಷಯದ ನಗುವನು ಬಾಳಿಗೆ ಕರುಣಿಸಿದವನು

ನಗುಧಾರೆಯ ಸಂಭಾವಿತ ಕರುಣಾಳು ನೀನಲ್ಲವೇ..


ತುಟಿಯಂಚಲಿ ಅರಳಿದ ಮೆಲುಗಾನದ ಸ್ವರವನು

ಪೋಣಿಸಿದ ಅಕ್ಕರೆಯ ಪೋರನು ನೀನಲ್ಲವೇ.. 


ಸಂಭ್ರಮದ ಜಾತ್ರೆಯಲಿ ಒಲವಿನ ತೇರನು

ನನಗಾಗಿ ಸಿಂಗರಿಸಿ ತಂದವನು ನೀನಲ್ಲವೇ..


ಹಸಿರುವನದ ಚೆಲುವಿನ ಚಿತ್ತಾರದ ಸಿರಿಯಲಿ

ನನ್ನೊಲವಿಗೆ ಹಾತೊರೆದು ಬರುವವನು ನೀನಲ್ಲವೇ..


ಜಗದೆಲ್ಲ ಪ್ರೀತಿಯನು ಕೈಸೆರೆಯಾಗಿಸಿ ನನ್ನೊಳು

ಧಾರೆಯೆರೆವ ಹೃದಯವಂತ ನೀನಲ್ಲವೇ..


ಒಲವಾಮೃತದ ಸವಿ ಪಾತ್ರೆಯನು ನಿನಗಾಗಿ

ನನ್ನಲಿಟ್ಟು ನಿನ್ನೊಲವು ಬಯಸಿದವಳು ನಾನಲ್ಲವೇ..?


ರಚನೆ: ರಾಮಚಂದ್ರ ಸಾಗರ್

ಪ್ರೀತಿಯ ನದಿಯ ಜೊತೆಯಾಗಿ ..

 

(ಚಿತ್ರದಲ್ಲಿರುವ ರೂಪದರ್ಶಿ: ಪ್ರೀತು ಪೂಜ)

ಪ್ರೀತಿಯ ಮಾಯೆಯ ಇಂಪು ಸೊಗಸಾಗಿ ನನ್ನ ತನು ಮನಕ್ಕೆ ಆವರಿಸಿ ಕಾಡುತಿದೆ. ಪ್ರೀತಿಯ ಸುಂದರ ಕುಸುಮದಲ್ಲಿ ನಿರ್ಮಲತೆ ಆ ಭಾವದಲ್ಲಿ ಮೂಡಿದ ಪಾವನ ಸತ್ಕಾರದ ಪ್ರತಿಯೊಂದು ಹಿತಧಾರೆಯ ಮೊರೆತ ಸುಯೋಗದ ಅನುಭವವನ್ನು ನೀಡುತ್ತಿರಲು ನಾನು ನಿನ್ನದೇ ಸವಿ ನೆನಪುಗಳ ಮೂಟೆಯ ಭಾರವನ್ನು ಹೊತ್ತು ಅದೇ ನದಿಯ ತಟದಲ್ಲಿ ಆಸೀನಳಾಗಿದ್ದೇನೆ ನಿನ್ನದೇ ಕನವರಿಕೆಯಲ್ಲಿ..!

ಪ್ರತಿ ಮುಂಜಾನೆ ಅರಳುವ ಮಲ್ಲಿಗೆಯ ನಗುವಿನಲ್ಲಿ ಪಳಿಸಿ ನಗುವ ಮೋಹಕ ರವಿಕಾಂತಿಯ ಹೊಳಪು ಸೊಬಗಿನಲ್ಲಿಯೂ ನಿನ್ನದೇ ರೂಪ ಮೂಡಿದಂತೆ, ನೀನೆ ತುಂಟ ನಗುಬೀರಿ ನಕ್ಕಂತೆ. ಹಾಗೇ ನದಿಯ ಸಾವರಿಸಿ ಬೀಸುವ ತಂಗಾಳಿಯ ಹಿತಧಾರೆಯ ಸ್ಪರ್ಶದಲ್ಲಿ ನೀನೇ ಬಂದು ಸಮೀಪಿಸಿ ಒಲುಮೆಯಿಂದ ನನ್ನ ಕೈಹಿಡಿದಂತ ಅನುಭೂತಿ. ನದಿಯ ಜುಳು ಜುಳು ನಿನಾದದ ಸವಿಗಾಗನದಲ್ಲಿ ನನ್ನನ್ನು ನೀ ಪ್ರೀತಿಯಿಂದ ಕರೆದಂತ ಸುಖ..!

ಮುಂಜಾನೆಯ ಮಂಜು ಲೇಪಿತ ಗಿರಿ ಶಿಖರದ ಮೇಲಿನ ಸೊಬಗಿನ ರೂಪಕದಲ್ಲಿ ನೀ ನುಡಿದಂತೆ ನನ್ನದೇ ರೂಪದ ಬೊಂಬೆ ಉದಿತವಾದಾಗ ನೀ ಕೈಹಿಡಿದು ನಡೆಸುವ ಸುಂದರ ಪಥದಡೆ ನಿನ್ನನ್ನೇ ಸೌಜನ್ಯದಿಂದ ಒಪ್ಪಿ ಸಮ್ಮತದಿಂದ ಸಾಗುವ ಪರಮ ಒಲುಮೆಯ ಸಾನಿಧ್ಯವನ್ನು ಅಪೇಕ್ಷಿಸುವ ಮನದಿಂದ ನಾ ನಲಿಯುತಿರುವೆ ಗೆಳೆಯ..!

ಮಳೆ ಬಿಡುವು ನೀಡಿ ಭೂಮಿ ಸೂರ್ಯನ ಒಲುಮೆಯಿಂದ ಕರೆದಾಗ ಆಗಸದಿಂದ ಚಿಮ್ಮಿದ ಬಣ್ಣದ ಚಿತ್ತಾರದ ವೈಯ್ಯಾರದ ರೂಪಕದ ಕಾಮನ ಬಿಲ್ಲಿನ ರಂಗು ನಿಸರ್ಗವ ಸ್ವರ್ಗವಾಗಿಸಿ ರಂಗು ಚೆಲ್ಲಿ ಚಿತ್ತಾರ ತುಂಬಿದಾಗ ನನ್ನ ಮೊಗದಲ್ಲಿ ನೆಲೆಯಾದ ಆಗ ರಂಗಿನ ತುಸು ನಗುವು ಕೂಡ ನಿನ್ನ ಕಾಡುವ ತುಂಟ ನಗುವಿನ ಹಿತವಲ್ಲವೇ..?

ದಿನವಿಡೀ ಕಾಯುತ್ತಾ ಮನವೆಲ್ಲಾ ಕಾದು ನಿನ್ನದೇ ನೆನಪಲ್ಲಿ ಮುಸ್ಸಂಜೆಯ ಸ್ವಾಗತಿಸುವ ಬದುಕು ನನ್ನದಾದರೇ ಅದೇ ಮುಸ್ಸಂಜೆಯ ರವಿಯಾಗಿ ನನ್ನೆದೆಯ ಪ್ರೇಮದ ಕಡಲನ್ನು ಸೇರಲು ಹಾತೊರೆದು ಬರುವ ನಾವಿಕ ನೀನಲ್ಲವೇ..? ನಾನಿಲ್ಲದೇ ನೀನಿರಲು ಸಾಧ್ಯವಿಲ್ಲ ಎನ್ನುವುದು ಕೂಡ ಈ ವಿಶ್ವದಲ್ಲಿ ರವಿ, ಚಂದ್ರರ ಇರುವಿಕೆಯಷ್ಟೇ ಸತ್ಯ. 

ಪ್ರೀತಿ ನದಿಯಾಗಿ ನಾನು, ಒಲುಮೆಯಾ ನಾವಿಕನಾಗಿ ನೀನು...ಹೀಗೆ ನಾವಿಬ್ಬರೂ ಒಂದಾಗಿ ಪ್ರೇಮದ ಕಡಲಿನಲ್ಲಿ ಪ್ರೀತಿಯ ನೌಕೆಯಲ್ಲಿ ಒಂದಾಗಿ ಬಾಳೋಣ ಬಾ ಗೆಳೆಯಾ.. ಪ್ರೀತಿಯೆನ್ನುವ ಮಾಯೆ.. ಪ್ರೀತಿ ಎನ್ನುವ ಅಮೃತ ಎರಡೂ ನಮ್ಮ ಬಾಳಿಗೆ ಉಡುಗೊರೆಯಲ್ಲವೇ..? ಎಲ್ಲವೂ ಅರಿತ ಸವಿನಯದ ಸೌಜನ್ಯ ಹೆಜ್ಜೆಯ ಸಾರಥ್ಯ ನಮ್ಮದು ಎನ್ನುವುದು ನಿನಗೂ ಗೊತ್ತು. ಇದೇ ಪ್ರೀತಿಯ ಹಂದರಲ್ಲಿ ಸವಿ ಮಾತುಗಳ ಓಲೆ ನಿನಗಾಗಿ ಈ ಕ್ಷಣ ಹೆಣೆದಿರುವೆ ಒಲುಮೆಯಿಂದ ಆಗಮಿಸಿ ಪ್ರೀತಿಯಿಂದ ಕಿವಿಗೊಟ್ಟು ನನ್ನೆದೆಯ ಉಸಿರಲ್ಲಿ ಕೇಳು ಬಾ ಇನಿಯಾ.

ಕಾದಿರುವೆ ನಿನ್ನದೇ ನಿರೀಕ್ಷೆಯಲ್ಲಿ ಅಪರಿಮಿತ ಕನಸುಗಳ ನದಿಯಾಗಿ.. 

ನೀನೆನ್ನುವ ಪ್ರೀತಿಯ ಕಡಲನು ಸೇರುವ ನಿನ್ನೊಲವಿನ ಗೆಳತಿಯಾಗಿ..

ರಚನೆ: ರಾಮಚಂದ್ರ ಸಾಗರ್