Wednesday, 26 January 2022

ಭಾರತೀಯನೆಂದು ಹೆಮ್ಮೆಯಿಂದ ಬೀಗು


 ಎಲ್ಲ ದೇಶಾಭಿಮಾನಿಗಳಿಗೆ  ಗಣರಾಜ್ಯೋತ್ಸವದ ಶುಭಾಶಯಗಳು. ಈ ಸುಸಮಯದಲ್ಲಿ ಎಲ್ಲ ಮನಸ್ಸುಗಳ ಐಕ್ಯತೆ ಮತ್ತಷ್ಟು ಗಟ್ಟಿಯಾಗಲಿ, ಎಲ್ಲರಲ್ಲು ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಛಲ ವೃದ್ಧಿಯಾಗಲಿ, ದೇಶವು ಬರುವ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ದೇಶದ ಸಾಲಿನಲ್ಲಿ ಬೇಗನೇ ಸೇರಲಿ, ಭಾರತದ ಹೆಸರು ವಿಶ್ವದೆಲ್ಲೆಡೆ ಪ್ರೀತಿಯ ಕುರುಹು ಆಗಲಿ, ಜಗದೆಲ್ಲ ಭಾರತವೇ ಕಂಗೊಳಿಸಲಿ, ಭಾರತದ ವೈವಿದ್ಯತೆಯ ಸತ್ವವು ಜಗಕೆ ಸಂದೇಶಸಾರವಾಗಲಿ ಎನ್ನುತ್ತಾ ಈ ಸಮಯದಲ್ಲಿ ನಾ ಬರೆದ ಕವಿತೆಯನ್ನು ನಿಮ್ಮೊಂದಿಗೆ ನೆನಪುಮಾಡಿಕೊಳ್ಳುತ್ತಿರುವೆ..ಎಲ್ಲಾ ದೇಶಾಭಿಮಾನಿಗಳಿಗೂ ಮತ್ತೊಮ್ಮೆ  ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು;

ಭಾರತೀಯನೆಂದು ಹೆಮ್ಮೆಯಿಂದ ಬೀಗು


ಕೋಟ್ಯಾಂತರ ಜೀವಿಗಳ ಉಸಿರು

ಸೌಹಾರ್ದ ಸಮ್ಮೇಳನದ ಬೀಡು

ವೈವಿಧ್ಯತೆಮಯ ಸಂಸ್ಕೃತಿಯ ತೇರು

ಭರತ ಭೂತಾಯ ಮಡಿಲು ...


ಜ್ಞಾನಸೆಲೆಯ ಅಮೃತ ಸಿಂಚನವು

ಸಹಿಷ್ಣುತೆ ಸಂದೇಶ ಸಾಗರವು

ಶಾಂತಿಯ ಸತ್ವದ ದೀವಟಿಗೆಯು

ಭರತ ಭೂತಾಯ ನೆಲೆಯು..


ಜಗಕೆ ಶಾಂತಿ ಬೋಧಿಸಿದ ನಾಡು

ಜಗಕೆ ಜ್ಞಾನದ ಕೊಡುಗೆಯ ಬಟ್ಟಲು

ಜಗದ ಸಿರಿವಂತ ಸಂಸ್ಕೃತಿಯ ಕಣಜ

ಜನಿಸಿದ ಎಲ್ಲರ ಪುಣ್ಯಧಾಮ..


ಭರತ ತಾಯ ಮಡಿಲಲಿ ಜನನವೆ

ಪ್ರತಿ ಭಾರತೀಯನ ಹೆಮ್ಮೆ

ಉಸಿರಿನ ಪ್ರತಿ ಘಳಿಗೆ ಮುಡಿಪಾಗಿಡು

ದೇಶ ಗಟ್ಟಿಗೊಳಿಸಲು, ಪ್ರಕಾಶಿಸಲು..


ಭರತ ತಾಯಿ ನೆಲದಲಿ ಜನ್ಮವು

ಸಾವಿರ ಜನ್ಮಕು ತೀರದ ಋಣವು

ದಿವ್ಯ ನಾಡಿನ ದಾರ್ಶನಿಕರ ವಚನದಲಿ

ಪುಣ್ಯ ಪುರುಷರ ಜ್ಞಾನ ಸೆಲೆಯಲಿ

ಜಳಪಿಸುವ ಶಕ್ತಿಯಲಿ ನೀ ಬೆಳಗು..


ಭಾರತೀಯತೆಯ ಉಸಿರು ಜೀವಸೆಲೆಯಾಗಿರಲು

ಭಾರತೀಯನೆಂದು ಹೆಮ್ಮೆಯಿಂದ ಬೀಗು

ನಿನ್ನೆದೆಯ ಪ್ರತಿ ಬಡಿತದಲ್ಲು

ಭಾರತೀಯನೆಂಬ ಸದ್ದಿನ ದನಿ ಕೇಳು

ಪುಣ್ಯನಾಡನು ಆರಾಧಿಸು..ಪ್ರೀತಿಸು..


ರಾಮಚಂದ್ರ ಸಾಗರ್


Wednesday, 20 October 2021

ಅವಳ ಡೈರಿ


 ಎಲ್ಲರಿಗೂ ನಮಸ್ತೇ,

ನನ್ನ ಹೊಸ ಕಾದಂಬರಿ ಹಾಗೂ ಈ ವರ್ಷದ ಮೊದಲ ಕೃತಿ "ಅವಳ ಡೈರಿ" ಯು ಸದ್ಯದಲ್ಲೇ ಹೊರಬರಲಿದೆ. ಈ ಕಾದಂಬರಿಯ ಕಥೆಯು ನೈಜ ಘಟನೆ ಎನ್ನುವುದು ದಿಟ.  ಸತ್ಯ ಘಟನೆಗಳು ಈ ಕಾದಂಬರಿಯ ಕತೆಯಲ್ಲಿ ಒಳಕಥೆಗಳಾಗಿ ತೆರೆದಿಟ್ಟಿದ್ದೇನೆ. ಇದು ಪರೋಕ್ಷವಾಗಿಯಾದರೂ ಹಲವರ ಬಾಳಿನ ಕಥೆಯೆನ್ನುವುದಂತೂ ಸತ್ಯ. ಮನಕ್ಕೆ ಅನ್ನಿಸಿದ್ದನ್ನು, ಹೇಳಬೇಕೆನ್ನುವುದನ್ನು,ಯಾವುದನ್ನು ಮುಲಾಜಿಲ್ಲದೇ ಬರೆದಿದ್ದೇನೆ. ಸತ್ಯವನ್ನು ಹೇಳುವಾಗ ಹೆದರಿಕೆಯೇಕೆ? ಸತ್ಯಕ್ಕೆ ಒಂದೇ ದಾರಿ. ಸುಳ್ಳಿಗೆ ಸಾವಿರ ದಾರಿ. ಆದ್ದರಿಂದ ಸತ್ಯಕ್ಕೆ ತಲೆಭಾಗಿ ಇದ್ದುದ್ದನ್ನು ಜೀವನದಲ್ಲಿ ಕಂಡಿದ್ದನ್ನು ಧೈರ್ಯವಾಗಿ ನುಡಿದಿದ್ದೇನೆ.. ಹಲವರ ಬಾಳಿನ ಸುಖದಲ್ಲೂ ನೋವಿರುತ್ತದೆ ಹಾಗೂ ಜೊತೆಗೆ ಅನುಭವಿಸುವ ನೋವಿನಲ್ಲೂ ಹಲವೊಮ್ಮೆ ತ್ಯಾಗದ ಭಾವವೇ ಮೂಡಿರುತ್ತದೆ. ಯಾರದೋ ಕೃತ್ಯಕ್ಕೆ ಯಾರದೋ ಜೀವನ ಬಲಿಯಾಗುತ್ತದೆ. "ಅತಿಯಾದ ಪ್ರೀತಿ, ನಂಬಿಕೆಗಳು ಸಹಾ ಮೋಸದ ಇನ್ನೊಂದು ಭಾಗವೇ ಆಗಿಹೋಗುತ್ತವೆ.." ಎಲ್ಲವೂ, ಎಲ್ಲವನ್ನೂ ಕಾಲವೇ ನಿಶ್ಚಯಿಸಬೇಕಲ್ಲವೇ? ಇನ್ನೂ ಈ ಕಥೆಯಲ್ಲಿ ನನ್ನದೂ ಒಂದು ಪಾತ್ರವಿದೆ ಎನ್ನುವುದು ಸಂತಸವೋ, ಬೇಸರವೋ? ಗೊತ್ತಿಲ್ಲ..! ಅದು ಕಥೆಯನ್ನು ಓದಿ ನೀವೇ ಹೇಳಬೇಕು..

ಇನ್ನೂ ಈ ಕೃತಿಯನ್ನು "ಮಂದಾರ ಪುಸ್ತಕ ಭಂಡಾರ, ಬೆಂಗಳೂರು" ಇವರು ಪ್ರಕಾಶಿಸಿದ್ದಾರೆ. ತುಂಬು ಅಕ್ಕರೆ ಮತ್ತು ಅಭಿಮಾನದಿಂದ ಈ ಕೃತಿಯನ್ನು ಸಮಾಜಕ್ಕೆ ತೆರೆದಿಡಲು ಪ್ರಕಾಶನದ ಶ್ರೀಯುತ ಭದ್ರಾವತಿ ರಾಮಚಾರಿ ಅವರ ಪರಿಶ್ರಮಕ್ಕೆ ನಾನು ತುಂಬು ಹೃದಯದ ಧನ್ಯವಾದಗಳನ್ನು ಹೇಳುವೆ..

ಈ ಕಾದಂಬರಿಗೆ ನಾಡಿನ ಹೆಸರಾಂತ ಸಾಹಿತಿಗಳಾದ ಶ್ರೀಯುತ ಡಾ. ನಾ.ಡಿಸೋಜ ಅವರು ಬಹಳ ಆತ್ಮೀಯತೆಯಿಂದ ತಮ್ಮ ಪದಗಳಲ್ಲಿ ನನಗೆ ಆಶೀರ್ವದಿಸಿದ್ದಾರೆ..ಅವರಿಗೂ ನನ್ನ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ..

ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಕೃತಿಯನ್ನು ದೊರೆಯುವ ವ್ಯವಸ್ಥೆಯನ್ನು ಖಂಡಿತವಾಗಿಯೂ ಪ್ರಕಾಶಕರು ಮಾಡುತ್ತಾರೆ. ದಯವಿಟ್ಟು ಎಲ್ಲರೂ ಈ ಕೃತಿಯನ್ನು ಕೊಂಡು ಓದಿ ಹಾರೈಸಬೇಕೆಂದು ತಮ್ಮಲ್ಲಿ ಸೌಜನ್ಯಯುತವಾಗಿ ಬೇಡಿಕೊಳ್ಳುತ್ತೇನೆ..

ಪ್ರಕಾಶಕರ ದೂರವಾಣಿ ಸಂಖ್ಯೆ: ೮೦೭೩೧೪೭೯೬೧

ಧನ್ಯವಾದಗಳೊಂದಿಗೆ..

ರಾಮಚಂದ್ರ ಸಾಗರ್



Saturday, 2 October 2021

ಪ್ರೇಮದ ಮಳೆ


ಪ್ರೇಮದ ಸಿಹಿ ಮಳೆಯಾಗುತಿದೆ 

ಒಲುಮೆಯಾ ಸಿರಿ ಜಗದೊಳಗೆ

ಜೊತೆಯಾಗು ಬಾ ಗೆಳೆಯನೆ

ಅನುರಾಗದ ಸವಿ ಬಾಳಿನೊಳಗೆ..


ಪ್ರೀತಿಯ ಅಮಲಿನ ಉಡುಗೊರೆಯೆ

ಮೊಗದಲಿ ಅನುಪಮ ನಗುವು ಬೆಳಗಿಸಿದೆ

ರಂಗೇರಿದ ಸ್ವಪ್ನಗಳ ಸವಿಯೊಳಗೆ

ನಿನದೇ ನೆನಪು ಕಾಡುತಿದೆ..


ಹರುಷದ ಹಾದಿಯಲಿ ಮೂಡುತಿದೆ 

ನಿನದೇ ಅನುಪಮ ಸವಿಗಾನವು

ಸಂಭ್ರಮದ ಕನಸಿನಲಿ ಅರಳುತಿದೆ 

ನಿನದೇ ಅನುತಾಪದ ಅಭಿಮಾನವು..


ಚಡಪಡಿಸುವ ಕಳವಳದ ಕಣ್ಣಿಗೆ 

ನೀ ಒಲವಿನ ಸುಧೆಯಾಗಿರುವೆ

ಚೆಲುವಿನ ಬಾಳಿನ ಚಲನೆಗೆ

ನೀ ಪ್ರೀತಿಯ ವರವಾಗಿರುವೆ


ಮೈಮರೆಸುವ ಮೋಹದ ಘಳಿಗೆಗೆ

ನೀ ಪ್ರೀತಿಯ ಉತ್ತರವಾಗು ಬಾ

ನಲ್ಮೆಯ ವಿನಯದ ಬೆಸುಗೆಗೆ

ನೀ ಕರುಣೆಯ ಒಲವಾಗು ಬಾ


ವಿರಹದ ನೋವಿನ ಪರಿಹಾರಕೆ

ನೀ ನಗುವಿನ ದೊರೆಯಾಗು ಬಾ

ವಿನಯದ ಪ್ರೇಮದ ಕೋರಿಕೆಗೆ

ನೀ ಪ್ರೇಮದ ಅಂಕಿತವಾಗು ಬಾ..


ರಾಮಚಂದ್ರ ಸಾಗರ್


Thursday, 9 September 2021

ಸರ್ವರಿಗೂ ಗೌರಿ, ಗಣೇಶ ಹಬ್ಬದ ಶುಭಾಶಯಗಳು;



 ಪರಿಸರ ಸ್ನೇಹಿ ಗೌರಿ, ಗಣಪ

ಸಡಗರಿಸೋಣ ಬಾಂಧವರೆ ಒಟ್ಟಾಗಿ ಬನ್ನಿ
ಪರಿಸರ ಸ್ನೇಹಿ ಗೌರಿ ಗಣಪರ ಭಕ್ತಿಯಲಿ ಕರೆತನ್ನಿ
ಸಜ್ಜನರಾಗೋಣ ರಾಸಾಯನಿಕದ ಮೂರ್ತಿಗಳ ತ್ಯಜಿಸಿ
ಸಂಭ್ರಮಿಸೋಣ ಹಬ್ಬದುದ್ದಗಲ ಧರಿತ್ರಿಯ ಪ್ರೀತಿಸಿ

ಸತ್ರದಲಿ ರಂಗೋಲಿ, ಸಿಂಗಾರ, ಕುಂಕುಮವು
ಸಕಲ ಪೂಜಾ ಪರಿಕರವು ಸಸ್ಯೋಜನ್ಯವಾಗಲಿ
ಸಜ್ಜನಿಕೆಯ ಮಣ್ಣಿನ ದೀಪಗಳೆ ಬೆಳಗಲಿ
ಸನಾತನ ಸಂಸ್ಕೃತಿಯು ಸೋಜಿಗದಿ ಮೇಳೈಸಲಿ

ಸಚ್ಚರಿತ ಸಂಗೀತದ ಸ್ವರಮೇಳವೆ ಹೊಮ್ಮಲಿ
ಸಭ್ಯವಲ್ಲದ ಅಶ್ಲೀಲದ ಗೀತೆಗಳು ತೊಲಗಲಿ
ಸದ್ಗತಿಗೆ ಗೌರಿ ಗಣಪರಲಿ ಆರಾಧಿಸೋಣ
ಸತ್ಕಾರದ ಭಾವನೆಗಳಲಿ ನಾಡಿಗಾಗಿ ಪ್ರಾರ್ಥಿಸೋಣ

ಸಂಪನ್ನವಾಗುವುದು ನಮ್ಮೆಲ್ಲರ ಪ್ರಾರ್ಥನೆಯು
ಸಂಭ್ರಮದ ಸುಂದರ ವಸುಂಧರೆಯ ಮಹಲಿನೊಳು
ಸಕಲವು ಮಂಗಳವಾಗುವುದು ಗೌರಿಯ ಸ್ತುತಿಯಲಿ
ಸಫಲತೆಯು ಒಲಿವುದು ಗಣೇಶನ ಒಲುಮೆಯಲಿ

ಶಬ್ದಮಾಲಿನ್ಯದ ಪಟಾಕಿಯೆನ್ನುವ ಪಿಶಾಚಿಯೇತಕೆ?
ಸಮಂಜಸದ ದೇಸೀ ದೀವಿಗೆಗಳು ಜಗಮಗಿಸಲಿ
ಸಖ್ಯದ ಬಟ್ಟೆ ಚೀಲವು ಹಣ್ಣು ಕಾಯಿಗಿರಲಿ
ಸಖ್ಯವಲ್ಲದ ಪ್ಲಾಸ್ಟಿಕ್ ಚೀಲವು ಮರೆಯಾಗಲಿ

ಸಡಗರದ ಮೆರವಣಿಗೆಯಲಿ ದೇವನೊಲುಮೆ ಬಯಸೋಣ
ಸೌಜನ್ಯದ ದೈವದಾ ಗೀತೆಗೆ ಹೆಜ್ಜೆಯನು ಹಾಕೋಣ
ಸಡಗರಿಸುವುದು ಭಾವೈಕ್ಯದ ಸಮಾಜದ ಕನಸಾಗಲಿ
ಸಭ್ಯತೆಯ ಹಬ್ಬವು ಮತ್ತೆ ಮತ್ತೆ ಬರಲಿ..

ರಾಮಚಂದ್ರ ಸಾಗರ್