Thursday, 9 September 2021

ಸರ್ವರಿಗೂ ಗೌರಿ, ಗಣೇಶ ಹಬ್ಬದ ಶುಭಾಶಯಗಳು;



 ಪರಿಸರ ಸ್ನೇಹಿ ಗೌರಿ, ಗಣಪ

ಸಡಗರಿಸೋಣ ಬಾಂಧವರೆ ಒಟ್ಟಾಗಿ ಬನ್ನಿ
ಪರಿಸರ ಸ್ನೇಹಿ ಗೌರಿ ಗಣಪರ ಭಕ್ತಿಯಲಿ ಕರೆತನ್ನಿ
ಸಜ್ಜನರಾಗೋಣ ರಾಸಾಯನಿಕದ ಮೂರ್ತಿಗಳ ತ್ಯಜಿಸಿ
ಸಂಭ್ರಮಿಸೋಣ ಹಬ್ಬದುದ್ದಗಲ ಧರಿತ್ರಿಯ ಪ್ರೀತಿಸಿ

ಸತ್ರದಲಿ ರಂಗೋಲಿ, ಸಿಂಗಾರ, ಕುಂಕುಮವು
ಸಕಲ ಪೂಜಾ ಪರಿಕರವು ಸಸ್ಯೋಜನ್ಯವಾಗಲಿ
ಸಜ್ಜನಿಕೆಯ ಮಣ್ಣಿನ ದೀಪಗಳೆ ಬೆಳಗಲಿ
ಸನಾತನ ಸಂಸ್ಕೃತಿಯು ಸೋಜಿಗದಿ ಮೇಳೈಸಲಿ

ಸಚ್ಚರಿತ ಸಂಗೀತದ ಸ್ವರಮೇಳವೆ ಹೊಮ್ಮಲಿ
ಸಭ್ಯವಲ್ಲದ ಅಶ್ಲೀಲದ ಗೀತೆಗಳು ತೊಲಗಲಿ
ಸದ್ಗತಿಗೆ ಗೌರಿ ಗಣಪರಲಿ ಆರಾಧಿಸೋಣ
ಸತ್ಕಾರದ ಭಾವನೆಗಳಲಿ ನಾಡಿಗಾಗಿ ಪ್ರಾರ್ಥಿಸೋಣ

ಸಂಪನ್ನವಾಗುವುದು ನಮ್ಮೆಲ್ಲರ ಪ್ರಾರ್ಥನೆಯು
ಸಂಭ್ರಮದ ಸುಂದರ ವಸುಂಧರೆಯ ಮಹಲಿನೊಳು
ಸಕಲವು ಮಂಗಳವಾಗುವುದು ಗೌರಿಯ ಸ್ತುತಿಯಲಿ
ಸಫಲತೆಯು ಒಲಿವುದು ಗಣೇಶನ ಒಲುಮೆಯಲಿ

ಶಬ್ದಮಾಲಿನ್ಯದ ಪಟಾಕಿಯೆನ್ನುವ ಪಿಶಾಚಿಯೇತಕೆ?
ಸಮಂಜಸದ ದೇಸೀ ದೀವಿಗೆಗಳು ಜಗಮಗಿಸಲಿ
ಸಖ್ಯದ ಬಟ್ಟೆ ಚೀಲವು ಹಣ್ಣು ಕಾಯಿಗಿರಲಿ
ಸಖ್ಯವಲ್ಲದ ಪ್ಲಾಸ್ಟಿಕ್ ಚೀಲವು ಮರೆಯಾಗಲಿ

ಸಡಗರದ ಮೆರವಣಿಗೆಯಲಿ ದೇವನೊಲುಮೆ ಬಯಸೋಣ
ಸೌಜನ್ಯದ ದೈವದಾ ಗೀತೆಗೆ ಹೆಜ್ಜೆಯನು ಹಾಕೋಣ
ಸಡಗರಿಸುವುದು ಭಾವೈಕ್ಯದ ಸಮಾಜದ ಕನಸಾಗಲಿ
ಸಭ್ಯತೆಯ ಹಬ್ಬವು ಮತ್ತೆ ಮತ್ತೆ ಬರಲಿ..

ರಾಮಚಂದ್ರ ಸಾಗರ್


Sunday, 15 August 2021

"ಭಾರತೀಯನೆಂದು ಹೆಮ್ಮೆಯಿಂದ ಬೀಗು"

 


ಎಲ್ಲ ದೇಶಾಭಿಮಾನಿಗಳಿಗೂ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯಗಳು.
ದೇಶ ಸಾಕಷ್ಟು ಅಭಿವೃದ್ಧಿಯತ್ತ ದಾಪುಗಾಲಿಡುತ್ತಾ ಇತ್ತೀಚಿನ ವರ್ಷಗಳಲ್ಲಿ ಭಾರತವೆಂದರೆ ವಿಶ್ವದ ಹೃದಯ ಎನ್ನುವಂತಹ ಮಾತುಗಳು ವಿಶ್ವದೆಲ್ಲೆಡೆ ರಾರಾಜಿಸುತ್ತಿದೆ, ಜಗತ್ತಿನಲ್ಲಿ ಎಲ್ಲೇ ಹೋದರು ಭಾರತೀಯನಿಗೆ ಸಿಗುವ ಗೌರವ ಅಪಾರ. ಸುಂದರ ಸಂಸ್ಕಾರವಂತ ಮನದ ದೇಶ ನಮ್ಮದು ಎನ್ನುವುದು ನಮ್ಮೆಲ್ಲರ ಹೆಮ್ಮೆ.

ಈ ಸಂಭ್ರಮದ ಸಮಯದಲ್ಲಿ ನಾ ಬರೆದ ಕವಿತೆ, "ಭಾರತೀಯನೆಂದು ಹೆಮ್ಮೆಯಿಂದ ಬೀಗು" ಮತ್ತೊಮ್ಮೆ ಪೋಸ್ಟ್ ಮಾಡುತ್ತಿರುವೆ, ಓದಿ ಹಾರೈಸಿ..

ಎಲ್ಲರಿಗೂ ಇನ್ನೊಮ್ಮೆ ಶುಭಾಶಯಗಳು..

ಭಾರತೀಯನೆಂದು ಹೆಮ್ಮೆಯಿಂದ ಬೀಗು

ಕೋಟ್ಯಾಂತರ ಜೀವಿಗಳ ಉಸಿರು

ಸೌಹಾರ್ದ ಸಮ್ಮೇಳನದ ಬೀಡು

ವೈವಿಧ್ಯತೆಮಯ ಸಂಸ್ಕೃತಿಯ ತೇರು

ಭರತ ಭೂತಾಯ ಮಡಿಲು ...

ಜ್ಞಾನಸೆಲೆಯ ಅಮೃತ ಸಿಂಚನವು

ಸಹಿಷ್ಣುತೆ ಸಂದೇಶ ಸಾಗರವು

ಶಾಂತಿಯ ಸತ್ವದ ದೀವಟಿಗೆಯು

ಭರತ ಭೂತಾಯ ನೆಲೆಯು..

ಜಗಕೆ ಶಾಂತಿ ಬೋಧಿಸಿದ ನಾಡು

ಜಗಕೆ ಜ್ಞಾನದ ಕೊಡುಗೆಯ ಬಟ್ಟಲು

ಜಗದ ಸಿರಿವಂತ ಸಂಸ್ಕೃತಿಯ ಕಣಜ

ಜನಿಸಿದ ಎಲ್ಲರ ಪುಣ್ಯಧಾಮ..

ಭರತ ತಾಯ ಮಡಿಲಲಿ ಜನನವೆ

ಪ್ರತಿ ಭಾರತೀಯನ ಹೆಮ್ಮೆ

ಉಸಿರಿನ ಪ್ರತಿ ಘಳಿಗೆ ಮುಡಿಪಾಗಿಡು

ದೇಶ ಗಟ್ಟಿಗೊಳಿಸಲು, ಪ್ರಕಾಶಿಸಲು..

ಭರತ ತಾಯಿ ನೆಲದಲಿ ಜನ್ಮವು

ಸಾವಿರ ಜನ್ಮಕು ತೀರದ ಋಣವು

ದಿವ್ಯ ನಾಡಿನ ದಾರ್ಶನಿಕರ ವಚನದಲಿ

ಪುಣ್ಯ ಪುರುಷರ ಜ್ಞಾನ ಸೆಲೆಯಲಿ

ಜಳಪಿಸುವ ಶಕ್ತಿಯಲಿ ನೀ ಬೆಳಗು..

ಭಾರತೀಯತೆಯ ಉಸಿರು ಜೀವಸೆಲೆಯಾಗಿರಲು

ಭಾರತೀಯನೆಂದು ಹೆಮ್ಮೆಯಿಂದ ಬೀಗು

ನಿನ್ನೆದೆಯ ಪ್ರತಿ ಬಡಿತದಲ್ಲು

ಭಾರತೀಯನೆಂಬ ಸದ್ದಿನ ದನಿ ಕೇಳು

ಪುಣ್ಯನಾಡನು ಆರಾಧಿಸು..ಪ್ರೀತಿಸು..

ರಾಮಚಂದ್ರ ಸಾಗರ್

Saturday, 3 July 2021

ಪ್ರೇಮದ ಕಡಲು..


ನಿನ್ನ ಕಣ್ಣೋಟದಿಂದಲೇ ಒಲವು ಉಕ್ಕುತಿರಲು

ನೀನಲ್ಲವೇ ಗೆಳತಿ ಸಿಹಿ ಪ್ರೇಮದಾ ಕಡಲು..


ನಿನ್ನ ನಗುಮೊಗದಿಂದಲೇ ಸ್ವರ್ಗವು ಬಾಳಾಗಿರಲು

ನೀನಲ್ಲವೇ ಗೆಳತಿ ಹರುಷದಾ ಸರೋವರವು..


ನಿನ್ನ ಸತ್ಕಾರದ ಸೌಜನ್ಯವೇ ಸಿರಿಯೆನಿಸಿರಲು

ನೀನಲ್ಲವೇ ಚೆಲುವೆ ಬಾಳಿನಾ ಆದರವು..


ನಿನ್ನ ಕೈಸೆರೆಯಿಂದಲೇ ಸಂಭ್ರಮವು ಜೊತೆಯಾಗಿರಲು

ನೀನಲ್ಲವೇ ಕೋಮಲೆ ಸಂತಸದ ಹಾದಿಯು..


ನಿನ್ನ ನುಡಿಯಿಂದಲೇ ಹೃದಯವು ನಲಿಯುತಿರಲು

ನೀನಲ್ಲವೇ ನಲ್ಲೆ ಅಭಯದ ರಕ್ಷೆಯು..


ನಿನ್ನ ನಡೆಯಿಂದಲೇ ಸದ್ಗುಣಗಳು ಸಂಭವಿಸುತಿರಲು

ನೀನಲ್ಲವೇ ಸಂಭಾವಿತೆ ಸಭ್ಯತೆಯ ಹೊನಲು..


ನಿನ್ನ ಪ್ರೀತಿಯ ಬಲದಿಂದಲೇ ಸುಯೋಗವು ಒಲಿದಿರಲು

ನೀನಲ್ಲವೇ ಬೆಡಗಿ ಬಾಳಿಗೆ ಭಾಗ್ಯದ ಬಂಧನವು..


ರಚನೆ: ರಾಮಚಂದ್ರ ಸಾಗರ್


Friday, 2 July 2021

ನೀನೆನ್ನುವ ನೆನಪು....


ಮುಂಜಾನೆಯ ತಂಗಾಳಿಯ ಹಾದಿಯಲಿ

ಕಾಡುತಿದೆ ಗೆಳೆಯಾ ನೀನೆನ್ನುವ ಅನುಪಮ ನೆನಪು..


ನಗುವ ಮಲ್ಲಿಗೆಯ ಮೋಹದ ಚೆಲುವಿನಲಿ

ಅರಳುತಿದೆ ಗೆಳೆಯಾ ನೀನೆನ್ನುವ ನಿಸ್ವಾರ್ಥದ ನೆನಪು..


ಸಂಪಿಗೆಯ ಸೌರಭದ ಕಂಪಿನಲೆಯಲಿ

ಘಮಿಸುತಿದೆ ಗೆಳೆಯಾ ನೀನೆನ್ನುವ ಸವಿಧಾರೆಯ ನೆನಪು..


ಮಂಜಿನ ಹನಿಗಳ ಶ್ವೇತ ಮಾಲೆಯಲಿ

ಮೂಡುತಿದೆ ಗೆಳೆಯಾ ನೀನೆನ್ನುವ ನಿರ್ಮಲ ನೆನಪು.. 


ರವಿ ಕಿರಣಗಳ ಕಾಂತಿಯ ಮೇಳದಲಿ

ಶೋಭಿಸುತಿದೆ ಗೆಳೆಯಾ ನೀನೆನ್ನುವ ಸೋಜಿಗದ ನೆನಪು..


ಒಲವು ತುಂಬಿದ ನನ್ನಯಾ ಕಾತರದ ಕಣ್ಣುಗಳಲಿ

ಸದಾ ಬೇಡಿದೆ ಗೆಳೆಯಾ ನೀನೆನ್ನುವ ಪ್ರೀತಿಯ ನೆನಪು..


ಬೆಡಗು ತುಂಬಿದ ಕೋಮಲ ನಡಿಗೆಯಲಿ

ನಿನ್ನದೇ ಸಾನಿಧ್ಯವೆ ಜೊತೆಯಾದ ನವಿರಾದ ನೆನಪು...


ರಚನೆ: ರಾಮಚಂದ್ರ ಸಾಗರ್

ಚಿತ್ರ: ಶಿಲ್ಪಾ ರಾಜನ್