Sunday, 9 May 2021

ನೋವಿನ ನದಿಯ ಹೃದಯ ಕಂಬನಿಯಿದು-ಮೌನಸೆರೆ

 

ಶ್ರೀಯುತ ಗಣಪತಿ ಹೆಗಡೆ ದಾಂಡೇಲಿಯವರ ಕಾದಂಬರಿ "ಮೌನಸೆರೆ" ಕೃತಿಯನ್ನು ಓದಲು ಕೈಗೆತ್ತುಕೊಂಡು ಕುಳಿತೆ. ಹೊರಗಡೆ ತುಸು ಕಿಟಕಿಯಿಂದ ಆಚೆ ನೋಡಿದೆ. ದವನದ ಹುಣ್ಣಿಮೆಯ ಚಂದಿರ ನಗುತ್ತಿದ್ದ. ಇತ್ತ ಕಥಾ ಹಂದರವು ಬಹಳ ಕುತೂಹಲದಿಂದ ಓದಿಸಿಕೊಂಡು ಹೋಗುತ್ತಿತ್ತು. ಅಷ್ಟೇ ಉತ್ತಮವಾದ ಪದಗಳ ಲಾಲಿತ್ಯವೂ ಕಾಡುತ್ತಿತ್ತು. ಭಾವನೆಗಳಿಗೆ ಬೆಲೆಕೊಡುವ ಮನಕೆ ಆತ್ಮೀಯವಾಗುವ ಸಾಲುಗಳು ಪ್ರತಿ ಪುಟದಲ್ಲೂ ಪುಟಿಪುಟಿದು ಮನದ ಆಲೋಚನೆಗಳಿಗೆ ಕೆಲಸ ಕೊಟ್ಟಿದ್ದಂತೂ ಸತ್ಯ.

ಬದುಕು ಎನ್ನುವುದು ಸುಂದರವಾಗಿರಬೇಕೆನ್ನುವುದು ಎಲ್ಲರ ಆಸೆ. ಮಾನವನಾಗಿ ಹುಟ್ಟಿದ ಪ್ರತಿಯೊಬ್ಬನ ಸಾಮಾನ್ಯ ಆಸೆಯಿದು. ಆತ ಬಡವನಾಗಲಿ, ಉಳ್ಳವನಾಗಲಿ ಆತನ ಬದುಕು ಉತ್ತಮವಾಗಲಿ ಎಂದು ಪ್ರತಿ ನಿಮಿಷವೂ ಹವಣಿಸುತ್ತಾ ದೇವರಲ್ಲಿ ಬೇಡುತ್ತಾನೆ. ಬದುಕಿನ ಸಣ್ಣ ಏರುಪೇರಿಗೆ ಮಾನವ ಪರಿತಪಿಸುತ್ತಾನೆ. ಆದರೆ ಆತ ಎಣಿಸಿದ್ದೆಲ್ಲಾ ಬದುಕಿನಲ್ಲಿ ನಡೆಯುವುದೆ? ಬದುಕು ನಾವು ಎಣಿಸಿದಂತೆ ನಡೆದಿದ್ದೇ ಆದರೆ ವಿಧಿಯಾಟಕ್ಕೆ ಕೆಲಸವೆಲ್ಲಿ? ಅಪಘಾತ, ನೋವು, ಬೇಸರ, ದುಃಖ, ಕಂಬನಿಗಳಿಗೆ ಜಾಗವೆಲ್ಲಿ? 

ಬರೀ ಸಂತೋಷವನ್ನೇ ಹುಡುಕಿಕೊಳ್ಳುವ ದಾರಿಯಾವುದಾರೂ ಇದ್ದರೆ ಮಾನವ ಅದನ್ನೇ ಬಯಸುತ್ತಿದ್ದ. ಆದರೆ ಕೇವಲ ಸಂತೋಷ ಎನ್ನುವುದು ಯಾವ ದಾರಿಯಲ್ಲು ಸಿಗಲಾರದು ಎನ್ನುವುದು ಬಾಳಿನಲ್ಲಿ ನಿಶ್ಚಿತ..! ದುಃಖವು ನಾವು ಸಾಗುವ ಹಾದಿಯಲ್ಲಿ ಕೈಹಿಡಿದು ಜೊತೆಯಾಗೇ ಬಿಡುತ್ತದೆ. ಆದರೆ ದುಂಃಖವೇ ದಾರಿಯಾದರೆ ಜೀವದ ಗತಿಯೇನು?

ಕಳೆದೆರಡು ದಿನಗಳಿಂದ ಊರಿನಲ್ಲಿ ಸಾಕಷ್ಟು ಮಳೆಯು ಸುರಿದಿದ್ದರಿಂದ ಹೊರಗಡೆ ತಂಗಾಳಿಯದೇ ನರ್ತನ. ಉತ್ತಮ ಕಥೆಯಲ್ಲಿ ತೋಯುತ್ತಿದ್ದ ಮನಕ್ಕೆ ಪ್ರಕೃತಿಯು ಉಲ್ಲಾಸವನ್ನು ನೀಡುತ್ತಿತ್ತು. ಹಾಗಾಗಿ ಒಂದೇ ಸಮನೆ ಕಥೆಯನ್ನು ಓದುತ್ತಾ ಹೋದೆ. 

ಈಗ ಕಥೆಯಲ್ಲಿ ವೈಶಾಲಿ ತನ್ನ ಹೋರಾಟದ ಬದುಕಿನಲ್ಲಿ ಸಾಗುತ್ತಾ ಬಹಳ ದೂರ ಸಾಗಿ ತನ್ನ ತವರು ಮನೆಯೆದುರು ಬಂದು ನಿಂತಿದ್ದಾಳೆ. ಬದುಕಿನ ಕುಲುಮೆಯಲ್ಲಿ ಬಯಕೆಗಳ ಅರಳಿಸಿಕೊಳ್ಳುವ ಪ್ರಯತ್ನಗಳ ಅವಳ ಛಲದ ನಡಿಗೆಯನ್ನು ಕ್ರಮಿಸಿ ಅದೇ ತವರಿನ ಮನೆಯ ಬಾಗಿಲು ಬೀಗವನ್ನು ತೆಗೆದು ಒಳಬರುತ್ತಾಳೆ. ಅದೇ ಧೂಳು ಕವಿದ ಮನೆ, ಜೇಡರ ಬಲೆಯ ಎಳೆಗಳು ಮುಖಕ್ಕೆ ರಪ್ಪೆಂದು ಬಡಿದ ಭಾಸವಾಗುತ್ತದೆ. ಮುರಿದ ಹೆಂಚುಗಳು, ಮಾಸಿಹೋದ ಅಂಗಳದಲ್ಲಿ ಬಾಡಿದ ತುಳಸಿ ಗಿಡವಿದೆ. ಎಲ್ಲವನ್ನು ನೋಡುತ್ತಾ ಧೂಳಿನ ಆಲಯದೊಳಗೆ ಜೋತು ಬಿದ್ದಿದ್ದ ಅಪ್ಪ ಹಾಗೂ ತಂಗಿಯ ಫೋಟೋ, ಇತ್ತ ಅಮ್ಮ ಮಲಗುತ್ತಿದ್ದ ಕೋಣೆಯಿಂದ ಬಾ ವೈಶಾಲಿ ಎಂದು ನುಡಿಯೊಂದು ವೈಶಾಲಿಯ ಕರ್ಣಗಳಿಗೆ ಅಪ್ಪಳಿಸಿದ ಭಾಸ..

ಈಗ ಪುಸ್ತಕ ಓದುತ್ತಿದ್ದ ನಾನು ಭಾರವಾದ ಮನದಲ್ಲಿ ಎದ್ದು ಮನೆಯಿಂದ ಹೊರಬಂದು ಒಂದೆರಡು ಹೆಜ್ಜೆಹಾಕಿದೆ. ಮುಗಿಲನ್ನು ನೋಡಿದೆ. ಆಗಸದಲ್ಲಿ ಚಂದಿರ ಚೆಲುವು ತುಂಬಿಕೊಂಡು ಬಹಳ ಸೌಮ್ಯವಾಗಿ ನಗುತ್ತಿದ್ದಾನೆ. ಮನೆಯೆದುರಿನ ತಂಗಾಳಿಯ ಹಾದಿಯು ನಡೆಯಲು ಬಹಳ ಹಿತವಾಗಿದೆ. ಆದರೆ ಮನದಲ್ಲಿನ ಚಿಂತನೆಗಳು ಭುವಿಯಿಂದ ಆಗಸದ ಚಂದಿರವರೆಗೂ ಸಾಲುದ್ದ ನಿಂತಿವೆ..ಕಾರಣ ವೈಶಾಲಿ ಸಾಧನೆಯ ಹಾದಿಯಲ್ಲಿ ಇಲ್ಲಿಯವರೆಗೆ ಬಂದು ನಿಂತ ಬಗೆಯೇ ಹಾಗಿದೆ..ಈ ಜಗದಲ್ಲಿ ಚೆಲುವು ಎನ್ನುವುದು ಈಗ ಸಂಪೂರ್ಣ ಕಳಾಹೀನವಾಗಿ ಕಾಣುತ್ತಿದೆ..! ಆಸೆ ಕಾಣುವುದು ತಪ್ಪೇ ಎನ್ನುತ್ತಿದೆ..!

ಈಗ ಮನದಲ್ಲಿ ಪ್ರಶ್ನೆಗಳ ಮಳೆಯೇ ಸುರಿಯುತ್ತಿದೆ. ಕಂಡ ಕನಸುಗಳೆಲ್ಲವೂ ಯಾರ ಜೀವನದಲ್ಲಿಯೂ ಸಂಪೂರ್ಣವಾಗಿ ನನಸಾಗುವುದಿಲ್ಲ. ಆದರೆ ಕೆಲವಾದರೂ ನನಸಾಗುತ್ತವೆ. ಕೊನೆ ಪಕ್ಷ ಒಂದಾದರೂ ನೆರವೇಗಬೇಕು. ಆದರೆ ಇಲ್ಲಿ ವೈಶಾಲಿಯ ಜೀವನದಲ್ಲಿ ನಡಯುವುದೇ ವ್ಯತಿರಿಕ್ತ. "ಕಷ್ಟಪಟ್ಟರೆ ಸುಖ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇಲ್ಲಿ ಕಷ್ಟವಾಗುತ್ತದೆ. ಕಷ್ಟಕ್ಕೆ ಕಷ್ಟವೇ ಬಳುವಳಿಯಾಗಿದೆ." ಈ ರೀತಿಯ ವ್ಯತಿರಿಕ್ತ ಫಲಕ್ಕೆ ಕಾರಣವನ್ನು ಹುಡುಕುವುದೇ ಈ ಕ್ಷಣದಲ್ಲಿ ಮನಸ್ಸಿಗೆ ಬಹಳ ನೋವು ನೀಡಿದ್ದಂತೂ ದಿಟ..

ಬದುಕು ಬಡತನದಲ್ಲಿ ಬಂಧಿಯಾದರೇನು? ಕಾಣುವ ಕನಸುಗಳಿಗೆ ಎಲ್ಲೆ ಎಲ್ಲಿ? ಸುಂದರ ಬದುಕನ್ನು ಕಟ್ಟಿಕೊಳ್ಳಲೇಬೇಕೆನ್ನುವ ಇರಾದೆ ಮತ್ತು ಛಲಕ್ಕಂತೂ ಸೋಲಿಲ್ಲ ಎನ್ನುವುದು ನನ್ನ ನಂಬಿಕೆ. ಆದರೆ ಆ ನಂಬಿಕೆಯೇ ಹುಸಿಯಾದರೆ ಏನು ಮಾಡುವುದು! ಕಥೆಯ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಸುಂದರ ಬದುಕಿಗಾಗಿ ಸಕಾರಾತ್ಮಕ ಗುರಿಯೊಂದಿಗೆ ಹೋರಾಡುವ ಗುಣವೇ ತುಂಬಿದೆ. ಹಲವು ಪಾತ್ರಗಳು ಇಲ್ಲಿ ದುರಾಸೆಯಲ್ಲಿ ನರ್ತಿಸಿದರೆ ಇನ್ನುಳಿದ ಪಾತ್ರಗಳು ಹೇಳಬೇಕಾದುದನ್ನು ಹೇಳದೇ ನರಳಿವೆ. 

ನಿಸ್ವಾರ್ಥದಲ್ಲಿ ಮಾಡಿದ ಸೇವೆಗೆ ಖಂಡಿತವಾಗಿಯೂ ಒಳಿತೇ ಆಗುತ್ತದೆ ಎನ್ನುವುದು ವೈಶಾಲಿಯ ಬಾಳಿಗಂತೂ ಕೇವಲ ಕನಸೆ? ಏನೇ ಆಗಲಿ ಸದ್ಯಕ್ಕೆ ಆಕೆಯ ಬದುಕೀಗ ನೋವಿನ ನದಿ.. ಆ ನೋವಿನ ನದಿಯ ಹೃದಯದ ಕಂಬನಿಯ ಮಾತುಗಳು ಏನು ಹೇಳುತ್ತವೆ? ಮುಂದೆ ಆಕೆಯ ಬದುಕು ಎಲ್ಲಿಗೆ ಸಾಗುತ್ತದೆ? ಕಂಬನಿಯ ಗೂಡಿನಿಂದ ಆಕೆ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾಳೆ..ಒಂಟಿ ಹಾದಿಯಲ್ಲಿ ರೋಧನೆಯ ಮಳೆಯಾಗುತ್ತಿರುವಾಗ ಆಕೆಗೆ ಆಸೆ ಎನ್ನುವುದೇ ಕಮರಿಹೋದಾಗ ಆಕೆಗೆ ಉಳಿದಿದ್ದಾರೂ ಏನು? ಆಕೆಗೆ ಆಸರೆಯಾದರೂ ಏನು?

"ಆಸೆ" ಎನ್ನುವುದೇ "ನೋವೆ" ಎಂದು ಅಪ್ಪಿ ಉಸಿರಾಡುತ್ತಾ ವೈಶಾಲಿ ಈಗ ಹೊರಟಿದ್ದಾರೂ ಎಲ್ಲಿಗೆ? ನೋವಿನ ನದಿಯಾದ ಅವಳೀಗ ಕಂಬನಿಗಳ ಸುರಿಸುತ್ತಾ ಯಾವ ಕಡಲನ್ನು ಅಪ್ಪುತ್ತಾಳೆ? ನೆಮ್ಮದಿಯ ನೆರಳು ಅವಳಿಗೆ ಜೊತೆಯಾಗುವುದೆ?  

ಮನದಲ್ಲಿ ಎದ್ದ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ! ಎಲ್ಲವನ್ನು ನಾನೇ ಹೇಳಿದರೆ ಉತ್ತಮವಲ್ಲ. ಕಥೆಯ ಮುಂದಿನ ಭಾಗವನ್ನು ನಿಮಗೆ ಬಿಡುತ್ತೇನೆ. ದಯವಿಟ್ಟು ಒಂದು ಉತ್ತಮ ಕಥೆಯ ಹಂದರವನ್ನು ಹೊಂದಿದ "ಮೌನಸೆರೆ"ಯನ್ನು ಓದಿ ಎಲ್ಲರೂ ಶ್ರೀಯುತ ಗಣಪತಿ ಹೆಗಡೆಯವನ್ನು ಹಾರೈಸಿ..

ಇಲ್ಲಿ ಗಣಪತಿ ಹೆಗಡೆಯವರು ಮನಸ್ಸು ಮಾಡಿದ್ದರೆ ಈ ಕೃತಿಗೆ ಉತ್ತಮ ಶೀರ್ಷಿಕೆಯನ್ನು ಇಡಬಹುದಿತ್ತು. ಆದರೆ ಎಡವಿದ್ದಾರೂ ಏಕೆ? ನನಗೂ ಗೊತ್ತಿಲ್ಲ..ಏನೇ ಆಗಲಿ ಅದು ಕೃತಿಕಾರನ ಹಕ್ಕು.. ನಾನು ಮೌನಿಯಾಗಿರಬೇಕು ಅಷ್ಟೇ.

ಒಟ್ಟಾರೆ "ನೋವಿನ ನದಿಯ ಹೃದಯದ ಕಂಬನಿಗಳ ದನಿಗೆ ನನ್ನ ಮನವೀಗ ಸಾವಿರ ಪ್ರಶ್ನೆಗಳ ಸುಳಿಯೊಳಗೆ ಸಿಲುಕಿದೆ ಎನ್ನುವುದಂತೂ ದಿಟ.."

ರಾಮಚಂದ್ರ ಸಾಗರ್


Wednesday, 5 May 2021

ಕನಸಿನ ಮಳೆಯಾದಳು..

ಪ್ರೀತಿಸುವ ಹೃದಯದಲ್ಲಿ ನಿತ್ಯ ಸಾವಿರ ಕನಸುಗಳ ನರ್ತನವಾಗುತ್ತದೆ.

ಜೊತೆ ಬಯಸುವ ಜೀವದ ಸಾನಿಧ್ಯವನ್ನೇ ಸದಾ ಮನ ಕನಸು ಕಾಣುತ್ತದೆ.

ಹಗಲು, ರಾತ್ರಿ ಹೃದಯದಲ್ಲಿ ಕನಸುಗಳೇ ಉಸಿರಾಗಿ ದನಿಸುತ್ತವೆ.

ಪ್ರೇಮದ ಹೂವುಗಳು ಅರಳಿ ಘಮಿಸುತ್ತಾ ಕನಸಿಗೆ ಹಾರೈಸುತ್ತವೆ.

ಕನಸಿನ ಹಾದಿಯಲ್ಲಿ ಬೆಳುದಿಂಗಳ ಚೆಲುವು ಕಳೆಯೇರಿ ಮನ ರಮಿಸುತ್ತದೆ.

ಬಯಕೆಯ ಕಡಲಿನಲ್ಲಿ ಮುಗ್ಧ ಮನದ ಕನಸುಗಳಿಗೆ ಪ್ರೇಮವೇ ದೈವವಾಗುತ್ತದೆ.

ಸುರಿವ ಮಳೆಯಲ್ಲಿ ಪ್ರತಿ ಹನಿಯು ಪ್ರೇಮದ ಅಮೃತವಾಗಿ ಕಂಗೊಳಿಸುತ್ತದೆ.

ಮಿಂಚಿನ ಬೆಳಕಲ್ಲಿ ಪ್ರಿಯತಮೆಯ ಅಂದವಾದ ಮೊಗದ ದರ್ಶನವಾಗುತ್ತದೆ.

ಬೀಸುವ ತಂಗಾಳಿಯಲ್ಲಿ ಪ್ರೇಮದ ಶುಭದ  ಸ್ವರಮೇಳವೇ ಉದಿತವಾಗುತ್ತದೆ.

ಮುಸ್ಸಂಜೆಯ ಕಡಲ ತಡಿಯಲ್ಲಿ ಮನದ ಕನಸುಗಳಿಗೆ ಪ್ರಕೃತಿ ರಂಗೇರಿಸಿ ನಲಿಸುತ್ತದೆ..

ಜೊತೆಯಾದ ಜೀವ ಅರೆಕ್ಷಣ ಕಾಣದಿದ್ದರೂ ಮನ ರೋಧನೆಯ ಮಳೆಯಲ್ಲಿ ತೋಯುತ್ತಾ ನರಳುತ್ತದೆ.

ಒಂಟಿ ಜೀವ ಮುಳ್ಳುಕಂಟಿಯ ಹಾದಿಯಲ್ಲಿ ಭಾರವಾದ ಹೆಜ್ಜೆಯನ್ನಿಡುತ್ತದೆ..

ಒಲಿದ ಜೀವ ಎದುರಾದರೆ ಮನದ ತಲ್ಲಣವೆಲ್ಲವೂ ಮರೆಯಾಗಿ ಮನಸು ಸಡಗರದ ಉಯ್ಯಾಲೆಯಲ್ಲಿ ಜೀಕುತ್ತದೆ.


ಒಟ್ಟಾರೆ...

 "ಪ್ರೀತಿಯ ಹಾದಿಯಲ್ಲಿ ಪ್ರೇಮದ ಹೂವು ಹಿಡಿದು ಕುಳಿತ ಪ್ರೇಮಿಯ ಹೃದಯ ಪಾವನ ಕನಸುಗಳು ಎಂದಿಗೂ ಅಮರ.. ಎಂದಿಗೂ ಸಂಭ್ರಮದ ಚಿತ್ತಾರ..."


ಇವೆಲ್ಲವುಗಳು ಸಂಗಮದ ಬಿಂಬವೇ ಒಂದು ಮಧುರವಾದ ಚಿತ್ರ. ಅದುವೇ "ಕನಸಿನ ಮಳೆಯಾದಳು.."

ದಯವಿಟ್ಟು ಈ ಚಿತ್ರವನ್ನು ಎಲ್ಲರೂ ಬೆಂಬಲಿಸಿ ಸಹಕರಿಸಿ..

ಈ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಈ ಕೆಳಗಿನ ಲಿಂಕ್ https://www.youtube.com/watch?v=VU43UgmGiUM ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ..

ತಾವು ಪ್ರತಿಕ್ರಿಯಿಸಿ ಹಾಗೂ ಲಿಂಕ್ ನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ ಹಾಗೂ ಚಿತ್ರವು ಇದೇ ತಿಂಗಳು ಒ.ಟಿ.ಟಿ. ಪ್ಲಾಟ್ ಫಾರಂನಲ್ಲಿ ಬಿಡುಗಡೆಯಾಗಲಿದ್ದು ಎಲ್ಲರೂ ನೋಡಿ ಹಾರೈಸಿ..

 ರಾಮಚಂದ್ರ ಸಾಗರ್.

#ಕನಸಿನ_ಮಳೆಯಾದಳು_ಚಿತ್ರತಂಡ


Sunday, 18 April 2021

ಒಂದಾಗೋಣ ಬಾ ಗೆಳೆಯಾ...


ಅನುರಾಗದ ಪ್ರೇಮ ಮಂದಿರದಲಿ 

ನಗುತಾ ಒಂದಾಗೋಣ ಬಾ ಗೆಳೆಯಾ

ಅನುಪಮ ಪ್ರೇಮದ ಸುಳಿಯಲಿ 

ಸೆರೆಯಾಗೋಣ ಬಾ ಇನಿಯಾ...


ನಾ ಬೇಡುವ ಆಸೆಯ ಹಾದಿಯಲಿ 

ದಿನವೂ ನಿನ್ನಾಗಮನವಾಗಲಿ 

ಅನುರಾಗದ ಚೆಲುವಿನ ಬಾಳಿನಲಿ

ನಿನ್ನದೇ ಜೊತೆಯಿರಲಿ ಗೆಳೆಯಾ..


ನೃತ್ಯವಾಡುವ ಕನಸುಗಳ ಮಹಲಿನಲಿ

ಪ್ರೀತಿಯ ಅಕ್ಷಯವಾಗಲಿ ಗೆಳೆಯಾ

ಸವಿಜೇನಿನನ ಕೊಳದ ಸಿಹಿಯಲಿ

ಬಯಕೆಯ ಹೂರಾಶಿಯೆ ಅರಳಲಿ

ಬಾ ಗೆಳೆಯಾ...


ಬೀಸುವ ಕಡಲಲೆಯ ಗಾನದಲಿ

ನಮ್ಮೊಲವು ಸಂಚಯನವಾಗಲಿ

ಮಲ್ಲಿಗೆ ಹೂಬನದ ಸೊಬಗಿನಲಿ

ನಮ್ಮದೇ ಪ್ರೀತಿಯು ಶೋಭಿಸಲಿ 

ಬಾ ಗೆಳೆಯಾ..


ನಗುವೇ ವೈಭವದಾ ಬದುಕಾಗಲಿ

ಸೌಜನ್ಯವೇ ಸಭ್ಯತೆಯ ಸಂಕೇತವಾಗಲಿ

ಸಂಕೋಚವು ಮನದಲಿ ಮರೆಯಾಗಲಿ

ಸಿಂಗಾರದ ಸಂಕೋಲೆ ನಮ್ಮದಾಗಲಿ

ಬಾ ಗೆಳೆಯಾ..


ರಚನೆ: ರಾಮಚಂದ್ರ ಸಾಗರ್


Wednesday, 14 April 2021

ಮಹಾನಾಯಕ

 


ಈ ದಿವಸ ಜಗತ್ತು ಕಂಡ ಮಹಾನ್ ಮಾನವತಾವಾದಿ, ಸುಜ್ಞಾನದ ಸಾಗರ, ಸಮಾಜಮುಖಿ ಚಿಂತನೆಯ ಹರಿಕಾರ. ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತೋತ್ಸವ. ಈ ಸುದಿನ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗಾಗಿ ಧಾರೆಯೆರೆದ ಜ್ಞಾನದ ಬೆಳಕನ್ನು ಸಮಾಜದ ಸರ್ವತೋಮುಖ ಶ್ರೇಯಕ್ಕಾಗಿ ನಿತ್ಯವೂ ಸಶಕ್ತವಾಗಿ ಬಳಸಿಕೊಳ್ಳಲು ಪಣತೊಡುತ್ತೇವೆ ಎನ್ನುವ ಆಶಯದೊಂದಿಗೆ ಎಲ್ಲರಿಗೂ ಶ್ರೀಯುತರ 130ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುತ್ತಾ ನಾ ಬರೆದ "ಮಹಾನಾಯಕ" ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ..

ವಂದನೆಗಳೊಂದಿಗೆ...


ಮಹಾನಾಯಕ


ಜಾತಿ ಧರ್ಮಗಳ ಸಂಕೋಲೆಯನು

ವಿಮುಕ್ತಿಗೊಳಿಸಿದ ಮಹಾನಾಯಕನು

ವರ್ಣ ದ್ವೇಷಗಳ ಜ್ವಾಲೆಯನು

ಆರಿಸಿದ ದಿವ್ಯ ಯೋಗಿಯು..


ಸಂವಿಧಾನ ರಚಿಸಿದ ಶಿಲ್ಪಿಯು

ಭವ್ಯ ದೇಶ ಬೆಳಗಿದ ಕಿಡಿಯು

ದೀನ ದಲಿತರ ದೀವಟಿಗೆಯು

ಶ್ರಮಿಕ ಕಾಯಕೆ ಸ್ಪೂರ್ತಿಯು..


ಶಿಕ್ಷಣ ಜ್ಞಾನವು ಬೆಳಕೆಂದರು

ಬವಣೆಗಳ ಪರಿಹರಿಸಿಕೊಳ್ಳಲು

ಸಂಘಟನೆಯೆ ಪರಿಹಾರವೆಂದರು

ಒಂದಾಗಿ ನಡೆವುದೆ ಬಾಳೆಂದರು..


ಮಾನವೀಯತೆ ಸಹಬಾಳ್ವೆ

ಪ್ರೀತಿ ವಿಶ್ವಾಸಗಳನು ಆರಾಧಿಸೆಂದರು

ಬೇದವೆಣಿಸದ ಕುಲಕೇಳದ ನಾಡು

ಎಲ್ಲರೆದೆಯ ಗುರಿಯಾಗಲೆಂದರು...


ದಾರಿದ್ರ್ಯ ಬಡತನ ಕೊನೆಯಾಗಿಸಲು 

ಜೀವಮಾನವನು ಸವೆಸಿದರು

ಜೀವದುಸಿರಿನ ಕೊನೆವರೆಗು

ಬುದ್ಧ ನುಡಿಯನು ನುಡಿದವರು..


ಜಗದ ಇತಿಹಾಸ ಪುಟದಲಿ 

ಪದಗಳಿಗೆ ಸೀಮಿತಗೊಳ್ಳದ ಮಹಾನಾಯಕನು

ನಮ್ಮೆಲ್ಲರ ಹೃದಯದಲ್ಲಿ

ನಿತ್ಯ ಬೆಳಗುವ ದೇವನು...


ರಚನೆ: ರಾಮಚಂದ್ರ ಸಾಗರ್