Wednesday, 5 May 2021

ಕನಸಿನ ಮಳೆಯಾದಳು..

ಪ್ರೀತಿಸುವ ಹೃದಯದಲ್ಲಿ ನಿತ್ಯ ಸಾವಿರ ಕನಸುಗಳ ನರ್ತನವಾಗುತ್ತದೆ.

ಜೊತೆ ಬಯಸುವ ಜೀವದ ಸಾನಿಧ್ಯವನ್ನೇ ಸದಾ ಮನ ಕನಸು ಕಾಣುತ್ತದೆ.

ಹಗಲು, ರಾತ್ರಿ ಹೃದಯದಲ್ಲಿ ಕನಸುಗಳೇ ಉಸಿರಾಗಿ ದನಿಸುತ್ತವೆ.

ಪ್ರೇಮದ ಹೂವುಗಳು ಅರಳಿ ಘಮಿಸುತ್ತಾ ಕನಸಿಗೆ ಹಾರೈಸುತ್ತವೆ.

ಕನಸಿನ ಹಾದಿಯಲ್ಲಿ ಬೆಳುದಿಂಗಳ ಚೆಲುವು ಕಳೆಯೇರಿ ಮನ ರಮಿಸುತ್ತದೆ.

ಬಯಕೆಯ ಕಡಲಿನಲ್ಲಿ ಮುಗ್ಧ ಮನದ ಕನಸುಗಳಿಗೆ ಪ್ರೇಮವೇ ದೈವವಾಗುತ್ತದೆ.

ಸುರಿವ ಮಳೆಯಲ್ಲಿ ಪ್ರತಿ ಹನಿಯು ಪ್ರೇಮದ ಅಮೃತವಾಗಿ ಕಂಗೊಳಿಸುತ್ತದೆ.

ಮಿಂಚಿನ ಬೆಳಕಲ್ಲಿ ಪ್ರಿಯತಮೆಯ ಅಂದವಾದ ಮೊಗದ ದರ್ಶನವಾಗುತ್ತದೆ.

ಬೀಸುವ ತಂಗಾಳಿಯಲ್ಲಿ ಪ್ರೇಮದ ಶುಭದ  ಸ್ವರಮೇಳವೇ ಉದಿತವಾಗುತ್ತದೆ.

ಮುಸ್ಸಂಜೆಯ ಕಡಲ ತಡಿಯಲ್ಲಿ ಮನದ ಕನಸುಗಳಿಗೆ ಪ್ರಕೃತಿ ರಂಗೇರಿಸಿ ನಲಿಸುತ್ತದೆ..

ಜೊತೆಯಾದ ಜೀವ ಅರೆಕ್ಷಣ ಕಾಣದಿದ್ದರೂ ಮನ ರೋಧನೆಯ ಮಳೆಯಲ್ಲಿ ತೋಯುತ್ತಾ ನರಳುತ್ತದೆ.

ಒಂಟಿ ಜೀವ ಮುಳ್ಳುಕಂಟಿಯ ಹಾದಿಯಲ್ಲಿ ಭಾರವಾದ ಹೆಜ್ಜೆಯನ್ನಿಡುತ್ತದೆ..

ಒಲಿದ ಜೀವ ಎದುರಾದರೆ ಮನದ ತಲ್ಲಣವೆಲ್ಲವೂ ಮರೆಯಾಗಿ ಮನಸು ಸಡಗರದ ಉಯ್ಯಾಲೆಯಲ್ಲಿ ಜೀಕುತ್ತದೆ.


ಒಟ್ಟಾರೆ...

 "ಪ್ರೀತಿಯ ಹಾದಿಯಲ್ಲಿ ಪ್ರೇಮದ ಹೂವು ಹಿಡಿದು ಕುಳಿತ ಪ್ರೇಮಿಯ ಹೃದಯ ಪಾವನ ಕನಸುಗಳು ಎಂದಿಗೂ ಅಮರ.. ಎಂದಿಗೂ ಸಂಭ್ರಮದ ಚಿತ್ತಾರ..."


ಇವೆಲ್ಲವುಗಳು ಸಂಗಮದ ಬಿಂಬವೇ ಒಂದು ಮಧುರವಾದ ಚಿತ್ರ. ಅದುವೇ "ಕನಸಿನ ಮಳೆಯಾದಳು.."

ದಯವಿಟ್ಟು ಈ ಚಿತ್ರವನ್ನು ಎಲ್ಲರೂ ಬೆಂಬಲಿಸಿ ಸಹಕರಿಸಿ..

ಈ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಈ ಕೆಳಗಿನ ಲಿಂಕ್ https://www.youtube.com/watch?v=VU43UgmGiUM ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ..

ತಾವು ಪ್ರತಿಕ್ರಿಯಿಸಿ ಹಾಗೂ ಲಿಂಕ್ ನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ ಹಾಗೂ ಚಿತ್ರವು ಇದೇ ತಿಂಗಳು ಒ.ಟಿ.ಟಿ. ಪ್ಲಾಟ್ ಫಾರಂನಲ್ಲಿ ಬಿಡುಗಡೆಯಾಗಲಿದ್ದು ಎಲ್ಲರೂ ನೋಡಿ ಹಾರೈಸಿ..

 ರಾಮಚಂದ್ರ ಸಾಗರ್.

#ಕನಸಿನ_ಮಳೆಯಾದಳು_ಚಿತ್ರತಂಡ


Sunday, 18 April 2021

ಒಂದಾಗೋಣ ಬಾ ಗೆಳೆಯಾ...


ಅನುರಾಗದ ಪ್ರೇಮ ಮಂದಿರದಲಿ 

ನಗುತಾ ಒಂದಾಗೋಣ ಬಾ ಗೆಳೆಯಾ

ಅನುಪಮ ಪ್ರೇಮದ ಸುಳಿಯಲಿ 

ಸೆರೆಯಾಗೋಣ ಬಾ ಇನಿಯಾ...


ನಾ ಬೇಡುವ ಆಸೆಯ ಹಾದಿಯಲಿ 

ದಿನವೂ ನಿನ್ನಾಗಮನವಾಗಲಿ 

ಅನುರಾಗದ ಚೆಲುವಿನ ಬಾಳಿನಲಿ

ನಿನ್ನದೇ ಜೊತೆಯಿರಲಿ ಗೆಳೆಯಾ..


ನೃತ್ಯವಾಡುವ ಕನಸುಗಳ ಮಹಲಿನಲಿ

ಪ್ರೀತಿಯ ಅಕ್ಷಯವಾಗಲಿ ಗೆಳೆಯಾ

ಸವಿಜೇನಿನನ ಕೊಳದ ಸಿಹಿಯಲಿ

ಬಯಕೆಯ ಹೂರಾಶಿಯೆ ಅರಳಲಿ

ಬಾ ಗೆಳೆಯಾ...


ಬೀಸುವ ಕಡಲಲೆಯ ಗಾನದಲಿ

ನಮ್ಮೊಲವು ಸಂಚಯನವಾಗಲಿ

ಮಲ್ಲಿಗೆ ಹೂಬನದ ಸೊಬಗಿನಲಿ

ನಮ್ಮದೇ ಪ್ರೀತಿಯು ಶೋಭಿಸಲಿ 

ಬಾ ಗೆಳೆಯಾ..


ನಗುವೇ ವೈಭವದಾ ಬದುಕಾಗಲಿ

ಸೌಜನ್ಯವೇ ಸಭ್ಯತೆಯ ಸಂಕೇತವಾಗಲಿ

ಸಂಕೋಚವು ಮನದಲಿ ಮರೆಯಾಗಲಿ

ಸಿಂಗಾರದ ಸಂಕೋಲೆ ನಮ್ಮದಾಗಲಿ

ಬಾ ಗೆಳೆಯಾ..


ರಚನೆ: ರಾಮಚಂದ್ರ ಸಾಗರ್


Wednesday, 14 April 2021

ಮಹಾನಾಯಕ

 


ಈ ದಿವಸ ಜಗತ್ತು ಕಂಡ ಮಹಾನ್ ಮಾನವತಾವಾದಿ, ಸುಜ್ಞಾನದ ಸಾಗರ, ಸಮಾಜಮುಖಿ ಚಿಂತನೆಯ ಹರಿಕಾರ. ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತೋತ್ಸವ. ಈ ಸುದಿನ ಮಹಾನ್ ಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗಾಗಿ ಧಾರೆಯೆರೆದ ಜ್ಞಾನದ ಬೆಳಕನ್ನು ಸಮಾಜದ ಸರ್ವತೋಮುಖ ಶ್ರೇಯಕ್ಕಾಗಿ ನಿತ್ಯವೂ ಸಶಕ್ತವಾಗಿ ಬಳಸಿಕೊಳ್ಳಲು ಪಣತೊಡುತ್ತೇವೆ ಎನ್ನುವ ಆಶಯದೊಂದಿಗೆ ಎಲ್ಲರಿಗೂ ಶ್ರೀಯುತರ 130ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುತ್ತಾ ನಾ ಬರೆದ "ಮಹಾನಾಯಕ" ಕವಿತೆಯನ್ನು ಪೋಸ್ಟ್ ಮಾಡುತ್ತಿರುವೆ..

ವಂದನೆಗಳೊಂದಿಗೆ...


ಮಹಾನಾಯಕ


ಜಾತಿ ಧರ್ಮಗಳ ಸಂಕೋಲೆಯನು

ವಿಮುಕ್ತಿಗೊಳಿಸಿದ ಮಹಾನಾಯಕನು

ವರ್ಣ ದ್ವೇಷಗಳ ಜ್ವಾಲೆಯನು

ಆರಿಸಿದ ದಿವ್ಯ ಯೋಗಿಯು..


ಸಂವಿಧಾನ ರಚಿಸಿದ ಶಿಲ್ಪಿಯು

ಭವ್ಯ ದೇಶ ಬೆಳಗಿದ ಕಿಡಿಯು

ದೀನ ದಲಿತರ ದೀವಟಿಗೆಯು

ಶ್ರಮಿಕ ಕಾಯಕೆ ಸ್ಪೂರ್ತಿಯು..


ಶಿಕ್ಷಣ ಜ್ಞಾನವು ಬೆಳಕೆಂದರು

ಬವಣೆಗಳ ಪರಿಹರಿಸಿಕೊಳ್ಳಲು

ಸಂಘಟನೆಯೆ ಪರಿಹಾರವೆಂದರು

ಒಂದಾಗಿ ನಡೆವುದೆ ಬಾಳೆಂದರು..


ಮಾನವೀಯತೆ ಸಹಬಾಳ್ವೆ

ಪ್ರೀತಿ ವಿಶ್ವಾಸಗಳನು ಆರಾಧಿಸೆಂದರು

ಬೇದವೆಣಿಸದ ಕುಲಕೇಳದ ನಾಡು

ಎಲ್ಲರೆದೆಯ ಗುರಿಯಾಗಲೆಂದರು...


ದಾರಿದ್ರ್ಯ ಬಡತನ ಕೊನೆಯಾಗಿಸಲು 

ಜೀವಮಾನವನು ಸವೆಸಿದರು

ಜೀವದುಸಿರಿನ ಕೊನೆವರೆಗು

ಬುದ್ಧ ನುಡಿಯನು ನುಡಿದವರು..


ಜಗದ ಇತಿಹಾಸ ಪುಟದಲಿ 

ಪದಗಳಿಗೆ ಸೀಮಿತಗೊಳ್ಳದ ಮಹಾನಾಯಕನು

ನಮ್ಮೆಲ್ಲರ ಹೃದಯದಲ್ಲಿ

ನಿತ್ಯ ಬೆಳಗುವ ದೇವನು...


ರಚನೆ: ರಾಮಚಂದ್ರ ಸಾಗರ್


Tuesday, 13 April 2021

ಪ್ರೀತಿಗಾಗಿ ಬೇಡುವೆ..!

 

ಬೇಡುವೆ ದೇವನೇ.. ಅನುದಿನವು ನಾ ಬೇಡುವೆ

ಕನಸಲಿ ಕಾಡುವ ಆ ಹುಡುಗನ ಪ್ರೀತಿಯನು..(ಪ)

ಮನಮೆಚ್ಚಿನ ಆ ಗುಣವಂತನ ಜೊತೆಯನು

ಕನಸಿನ ಬಾಳಿಗೆ ಉಸಿರಾದ ಜೀವದಾ ಆಸರೆಯನು...


.....ಆ ಹುಡುಗನ ಪ್ರೀತಿಯನು..(ಪ)..

ಪಾವನ ಪ್ರೀತಿಯಲಿ ನಿತ್ಯವೂ ಪ್ರಾರ್ಥಿಸುವೆ

ನಮ್ಮೊಲವು ನಿನ್ನಿಂದಲೆ ಅರಳಲಿ ಎನುವೆ

ಬಯಸಿದ ಬಾಳು ನಿನ್ನಿಂದಲೆ ಬೆಳಗಲಿ

ಮನಮೆಚ್ಚಿದ ಒಲವಿಗೆ ನೀನೇ ವರವಾಗಲಿ..


.....ಆ ಹುಡುಗನ ಪ್ರೀತಿಯನು..(ಪ)..

ದೇವ ಮಂದಿರದ ಗಂಟೆಯ ನಾದದಲಿ

ನಮ್ಮೊಲವಿನ ಅನುರಾಗದ ಪದಗಳ ಪೋಣಿಸಿ

ಒಲವಿನ ತೋರಣ ಸಡಗರದಿ ಸಿಂಗರಿಸಿ

ಕಾದಿರುವೆ ಓ ಹುಡುಗನೆ ನಿನಗಾಗಿ..


ಆ ಹುಡುಗನ ಪ್ರೀತಿಯನು..(ಪ)

ಶಾಂತತೆಯ ಆನಂದದ ಘಳಿಗೆಯಲಿ

ನಿರ್ಮಲ ಹೃದಯದ ಕೋಣೆಯಲಿ

ಮುಗುದೆಯ ಕನುಸಗಳು ಜಿನುಗುತಿರಲು

ಚೆಲುವಿನ ಚಿತ್ತಾರನೆ ನೀ ಬರಬಾರದೇನು?


ಆ ಹುಡುಗನ ಪ್ರೀತಿಯನು..(ಪ)

ನನ್ನೆದೆಯ ಗುಣಗಾನದ ಗುಣವಂತನೆ

ಪೂಜ್ಯ ಪ್ರೇಮದ ನಾವೆಯ ಒಡೆಯನೆ

ಸತ್ಕಾರದ ಪ್ರೀತಿಯ ಸಮ್ಮತಿಸಿ ಬರಬಾರದೇ

ಸಂಭ್ರಮದ ಬಾಳಿಗೆ ಹಂಬಲಿಸಿ ಒಪ್ಪಬಾರದೇ?


ಆ ಹುಡುಗನ ಪ್ರೀತಿಯನು..(ಪ)

ಬೀಸುವ ತಂಗಾಳಿಯ ಸಪ್ಪಳದ ಜಾಡಿನಲಿ

ತುಂಟಾಟದ ಪೋರನೇ ನೀ ಜೊತೆಯಾದಂತೆ

ದೇವಗುಡಿಯ ಹೂಗಂಧದ ಮಧುರತೆಯಲಿ

ಒಲವಿನ ಹೂ ಉಡುಗೊರೆಯಾಗಿರಲು

ನೀ ಬರಬಾರದೇ?


ರಚನೆ: ರಾಮಚಂದ್ರ ಸಾಗರ್