Saturday, 13 March 2021

ಸದಸ್ಯರಿಗೂ ಅಧಿಕಾರ ನೀಡಿ

 


ಎಲ್ಲರಿಗೂ ನಮಸ್ಕಾರ...

ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಘೋಷಣೆಯಾಗಿದೆ. ಮೊದಲು ಮೂರು ವರ್ಷಗಳಿಗೊಮ್ಮೆ ಇದ್ದ ಚುನಾವಣೆ ಈಗ 5ವರ್ಷಗಳಿಗೆ ಬದಲಾಗಿದೆ. ಈಗ ಪ್ರಸ್ತುತ ಅಧ್ಯಕ್ಷರಾಗಿರುವ ಮನು ಬಳಿಗಾರ್ ಅವರ ಅವಧಿಯಲ್ಲೇ ಬೈಲಾ ತಿದ್ದುಪಡಿಯಾಗಿ 5ವರ್ಷಗಳ ಅವಧಿಯ ಅಧಿಕಾರವು ಸೃಜನೆಯಾಯಿತು. ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕಾರವನ್ನು ಹಿಡಿಯುವವರು ಐದು ವರ್ಷಗಳ ಆಡಳಿತ ನಡೆಸುತ್ತಾರೆ.

ಇದು ಒಂದೆಡೆ ಆದರೆ ಪರಿಷತ್ತಿನ ಸದಸ್ಯರು ಯೋಚಿಸಬೇಕಾದವು ಹಲವು ವಿಚಾರಗಳಿವೆ. ಬೈಲಾಗೆ ಇನ್ನೂ ಹಲವು ತಿದ್ದುಪಡಿಗಳಾಗಿದ್ದರೆ ಸೊಗಸಾಗಿತ್ತು. ಕೇವಲ ಅಧಿಕಾರದ ವಿಚಾರವೊಂದೇ ಬದಲಾದರೆ ಸಾಕೆ? ಈಗ ಚುನಾವಣೆಯ ಸಮಯವಾದ್ದರಿಂದ ಹಲವು ಜನ ಅಕಾಂಕ್ಷಿಗಳು ಸದಸ್ಯರ ಮನೆಕಡೆಗೆ ಗಮನ ಹರಿಸಿದ್ದಾರೆ. ಹಲವರಿಂದ ದೂರವಾಣಿ ಕರೆಗಳು/ಪತ್ರಗಳು ಬರುತ್ತಿವೆ. ಇವೆಲ್ಲಾ ಮುಗಿದು ಮುಂದೊಂದು ದಿನ ಯಾರೋ ಅಧಿಕಾರಕ್ಕೆ ಬರುತ್ತಾರೆ ಬಿಡಿ. ಆದರೆ ಪರಿಷತ್ತಿನೊಳಗಿನ ಸಮಸ್ಯೆಗೆ ಪರಿಹಾರ ನಿಜವಾಗಿಯೂ ದೊರೆಯುತ್ತದೆಯೇ? ಈ ಸಮಯದಲ್ಲಿ ಕೊಟ್ಟ ಆಶ್ವಾಸನೆಗಳು ಈಡೇರುತ್ತವೆಯೇ?

ಪರಿಷತ್ತಿನ ಕಾರ್ಯಕ್ರಮಗಳನ್ನು ಕಾರ್ಯಕಾರಿ ಮಂಡಳಿಯವರೇ ನಿರ್ಧರಿಸುತ್ತಾರೆ. ಅವರೇ ಸರ್ವ ತೀರ್ಮಾನವನ್ನು ಕೈಗೊಳ್ಳುತ್ತಾರೆ. ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯೂ ಅವರಿಂದಲೇ ಆಗುತ್ತದೆ. ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಹೆಚ್ಚೆಂದರೆ ಸದಸ್ಯರು ಭಾಗವಹಿಸಬಹುದು ಅಷ್ಟೇ. ಇಷ್ಟಕ್ಕೇ ಸದಸ್ಯ ಸೀಮಿತವಾಗಬೇಕೆ? ಆತನಿಗೂ ಏನಾದರೂ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ನೀಡುವುದು ಬೇಡವೇ?

ನಾಡಿನಲ್ಲಿ ಸುಮಾರು ಮೂರುವರೆ ಲಕ್ಷ ಜನ ಪರಿಷತ್ತಿನ ಸದಸ್ಯರಿದ್ದಾರೆ. ಇವರೆಲ್ಲರ ಪ್ರತಿನಿಧಿಯಾಗಿ ಆಯ್ಕೆಯಾದವರೇ ಎಲ್ಲ ಅಧಿಕಾರವನ್ನು ಚಲಾಯಿಸುತ್ತಾರೆ. ಇದೆಲ್ಲದರ ಹೊರತಾಗಿ ಕೊನೆಪಕ್ಷ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ವಿಚಾರದಲ್ಲಿಯಾದರೂ ಪರಿಷತ್ತಿನ ಸದಸ್ಯರನ್ನು ಪರಿಗಣಿಸಬೇಕು. ಇನ್ನು ಮುಂದೆ ಆಯ್ಕೆಯಾದವರು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸಿ ಆಯೋಜಿಸುತ್ತಾರೆ. ಇವರಾದರೂ ಸರ್ವಾಧ್ಯಕ್ಷರನ್ನು ಸದಸ್ಯರ ಅಭಿಮತವನ್ನು ಪಡೆದು ಆಯ್ಕೆಮಾಡಿದರೆ ಸಂತಸ. ಅಂದರೆ ಈಗ ಹೇಗೆ ಎಲ್ಲರ ಮನೆ ಮನೆಗೂ ಭೇಟಿ ನೀಡಿ ಮತ ಕೇಳುತ್ತಿದ್ದಾರೋ ಹಾಗೇಯೆ ಮುಂದಿನ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆಮಾಡಲು ಅಭಿಪ್ರಾಯ ಕೇಳಲು ಅವರಿಗೆ ಕಷ್ಟವಂತೂ ಅಲ್ಲ ಬಿಡಿ. ಎಲ್ಲದಕ್ಕೂ ಹಂಬಲ ಮತ್ತು ಉದ್ದೇಶ ಮುಖ್ಯ. ಈ ನಿಟ್ಟಿನಲ್ಲಿ ಈಗಲೇ ಸದಸ್ಯರೆಲ್ಲ ಒಗ್ಗಟ್ಟಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು.

 ಆಗಲಾದರೂ ಕನ್ನಡ ಹಿರಿಯ ಕಾದಂಬರಿಗಾರರಾದ ಎಸ್. ಎಲ್.ಭೈರಪ್ಪ, ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಹಾಗೂ ಜನಪರ ಸಾಹಿತಿ ಹಾಗೂ ಸಮಾಜಮುಖಿ ಚಿಂತನೆಯ ಚಿಲುಮೆ ದೇವನೂರು ಮಹಾದೇವರಂತಹ ಸಜ್ಜನರು ಹಾಗೂ ಸರಸ್ವತಿ ಪುತ್ರರನ್ನು ಸವಾಧ್ಯಕ್ಷರಾಗಿ ವೇದಿಕೆಯ ಮೇಲೆ ಕಾಣುವ ಅವಕಾಶ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಜೊತೆಗೆ ಕನ್ನಡ ನಾಡಿನ ಜನತೆಗೆ ಸಿಗಬಹುದೇನೊ.

ನಾನಂತೂ ಮನೆಗೆ ಮತ ಕೇಳಲು ಬಂದವರಿಗೆ ಹಾಗೂ ದೂರವಾಣಿ ಮೂಲಕ ಮತ ಕೇಳಿದವರಿಗೆ ಇದೇ ಪ್ರಶ್ನೆ ಕೇಳುತ್ತಿದ್ದೇನೆ. ಇನ್ನು ನೀವು?

ವಂದನೆಗಳೊಂದಿಗೆ..

ರಾಮಚಂದ್ರ ಸಾಗರ್


Sunday, 17 January 2021

ಸ್ವಾಗತಿಸೋಣ ಬಾ ಗೆಳತಿ..


(ಹೊಸ ಬಾಳಿಗೆ ಪ್ರೀತಿಯಿಂದ ಹೆಜ್ಜೆಯನಿಡಿತ್ತಿರುವ ಮಹೇಶ್ ಮತ್ತು ಪ್ರಿಯಾ  ಇವರಿಗೆ ಮದುವೆಯ ಮಮತೆಯ ಶುಭಾಶಯಗಳು..)


ಗೆಳತಿ..
ಪ್ರೇಮದ ಕಡಲಿನ ಅನುರಾಗದ ಅಲೆಯು
ನಮ್ಮೆಡೆಗೆ ಬೀಸುತಿದೆ ನಿಜವಲ್ಲವೇ ಗೆಳತಿ...?

ಹರುಷದ ಬಾಳಿನ ವೈಭವದ ಯಾತ್ರೆಯು
ಹೂತುಂಬಿ ಕರೆಯುತಿದೆ ಸಾಗೋಣವೇ ಗೆಳತಿ..

ಸಂಭ್ರಮದ ಪ್ರೀತಿಯು ಕುಸುಮವಾಗಿರಲು
ಮಧುರ ಮನಗಳಲಿ ನಲಿಯೋಣವೇ ಗೆಳತಿ..

ಸಾವಿರ ವರುಷಕೂ ನಮ್ಮೊಲವು ಗಂಧವಾಗಿರಲು
ಸೌಗಂಧದ ಮೋಹದಲಿ ಬಾಳೋಣವೇ ಗೆಳತಿ..

ಮುಸ್ಸಂಜೆಯ ರಂಗು ಒಲವಿನ ರಥವಾಗಿರಲು
ನಗುತ ರಥವೇರಲು ಒಂದಾಗೊಣವೇ ಬಾ ಗೆಳತಿ..

ಘಮಿಸುವ ಮಲ್ಲಿಗೆಯ ತೋಟದ ಹಾದಿಯಲಿ
ನೀ ಬಿನ್ನಾಣದ ಕೋಮಲೆಯಾಗಲು ಬಾ ಗೆಳತಿ..

ಸವಿನೋಟದ ಆಲಾಪವೇ ಬಾಳಿಗೆ ಅಮೃತವಾಗಿರಲು
ಸಿಹಿಜೇನಿನ ನೌಕೆಯಲಿ ನಾವಿಕಳಾಗಲು ಬಾ ಗೆಳತಿ..

ಪ್ರೀತಿಯ ಮಾಲೆಗೆ ಮನಸುಗಳು ಬೇಡುತಿರಲು
ಒಲವ ಮಂದಿರದಲಿ ಹೊಸ ಬಾಳಿಗೆ ಸ್ವಾಗತಿಸೋಣ ಬಾ ಗೆಳತಿ..

ರಚನೆ: ರಾಮಚಂದ್ರ ಸಾಗರ್
ಚಿತ್ರ: ಅಶೋಕ್ ಕಾರ್ಕೆರ

Monday, 4 January 2021

ಮುಳ್ಳು ಹೂವಾಗುವುದು...


ಮುಳ್ಳೇ ಹಾದಿಯಾದರೇನು ನೋವೇ ಜಗವಾದರೇನು 

ನಿನ್ನಾಸರೆಯು ಹೂವಂತೆ ಎನುವೆ ಅಮ್ಮ ನಾನು..


ನಿನ್ನ ವಾತ್ಸಲ್ಯವೇ ಬಾಳಿಗೆ ಶ್ರೀರಕ್ಷೆಯು ಇದುವೇ ಸತ್ಯವು

ನನ್ನ ಉಸಿರೇ ಬೇಡುವುದು ನಿನ್ನ ಜೊತೆಯನೇ ನಿತ್ಯವು..


ನೀನಿರಲು ಬಾಳು ಮರೆಯುವುದು ನೂರೊಂದು ನೋವು

ನಡೆವ ದಾರಿಯಲ್ಲಿ ದಣಿವೆನಿಸದು ಮನಕೆ ಅರೆಕ್ಷಣವು..


ದುಃಖದ ಬಿರುಮಳೆಯಲ್ಲು ನಗುವುದನೇ ಕಲಿಯುವೆನು

ಸುಖದ ಗಿರಿಗೆ ಏರುವುದನು ಗುರಿಯಾಗಿಸುವೆನು ದಿನವು..


ಸೋಲೆ ಅಲೆಯಾದರೇನು ದುಗುಡವೆ ಮನೆಯಾದರೇನು

ಸೋಗೆಯರಳಿ ಜಯವು ಲಭಿಸದೇ ಉಳಿಯುವುದೇನು...


ಮಮತೆಯ ಅನುಜಾತೆಯು ಆನಂದದಿ ಬಾಳಲಿ

ಮಮಕಾರವೇ ನಿನ್ನಿಂದಲೇ ನಮಗಾಮೃತವಾಗಲಿ...


ದುಮ್ಮಾನವು ದೂರಾಗುವುದು ಆತಂಕವು ಆರುವುದು

ಸುಮ್ಮಾನವು ನನಸಾಗಿ ಬಾಳಿನೊಳು ಸುರಿಯುವುದು....


ನೀನಿಡುವ ಹೆಜ್ಜೆಗೆ ನೋವಿಗೇ ಸೋಲಾಗುವುದು

ನಾನಿರಲು ಜೊತೆಯಲಿ ಜಾರದಿರಲಿ ಹನಿ ಕಣ್ಣೀರು...


ನೀನಿರಲು ಬಾಳು ಕಾಣುವುದು ನೂರೊಂದು ಕನಸು

ಆ ಸಂಭ್ರಮದ ದಿನಗಳೆಡೆಗೆ ಸಾಗೋಣ ಮರೆಯುತಾ ನೋವು..


ಬಾಡಿದ ಮೊಗದಲ್ಲಿ ನಗುವುದು ನಲಿದಾಡುವುದು

ನಿನ್ನ ಮಮತೆಯ ಹಾರೈಕೆಯು ಸಿದ್ಧಿಸುವುದು ದಿಟವು..


ಛಲದ ನಡಿಗೆಯು ಗೆಲ್ಲುವುದು ನೀ ನೋಡುತಿರು

ಪಣದ ಯಾತ್ರೆಯಲಿ ಮುಳ್ಳು ಹೂವಾಗುವುದು ನೀ ಮರೆಯದಿರು..


ರಚನೆ: ರಾಮಚಂದ್ರ ಸಾಗರ್


Thursday, 31 December 2020

“ಹೊಸ ವರುಷ”

 


ಎಲ್ಲರಿಗೂ  2025 ನೇ ಹೊಸ ವರ್ಷದ ಶುಭಾಶಯಗಳು. ಎಲ್ಲರಿಗೂ ಈ ಹೊಸತರ ಸಂಚಾರದಲ್ಲಿ ಹೊಸತನ ಮೂಡಲಿ. 2024 ರಲ್ಲಿ ಕಾಡಿದ ಕಹಿ ಘಳಿಗೆಗಳು ಮರೆಯಾಗಲಿ. ಬರುವ ದಿನಗಳು ಸಂತಸವನ್ನು ಅಲೆಯಾಗಿಸಲಿ ಎಂದು ಆಶಿಸುತ್ತೇನೆ. ಎಲ್ಲರ ಪ್ರೀತಿ, ಸ್ನೇಹ, ಮಮತೆಯಿಂದ ಎಲ್ಲರೊಳಗೊಂದಾಗಿ ಬದುಕುವುದೇ ಜೀವನವೆನ್ನುತ್ತಾ ಎಲ್ಲರ ಹಾರೈಕೆಯನ್ನು ಈ ಸಮಯದಲ್ಲಿ ಬಯಸುತ್ತೇನೆ ಬಂಧುಗಳೇ..

"ಪ್ರೀತಿ ಬೇಡುವ ಸ್ನೇಹದ ಹೃದಯದಲಿ

ಒಲವ ಸಾಗರವೆ ನಿಮ್ಮ ಸ್ನೇಹವು

ನೋವು ಜೊತೆಯಾದ ಕಹಿ ದಿನಗಳಲಿ

ಸಂತೋಷದ ಹಿತಧಾರೆಯೆ ನಿಮ್ಮ ಸ್ನೇಹವು"

ಈ ಕ್ಷಣದಲ್ಲಿ ಹೊಸ ವರ್ಷ ಕವಿತೆಯನ್ನು ಪುನಃ ಪೋಸ್ಟ್ ಮಾಡುತ್ತಿರುವೆ..ನಿಮಗಾಗಿ, ನಿಮ್ಮೆಲ್ಲರ ಅಕ್ಕರೆಯ ಸ್ನೇಹದ ಪ್ರತೀಕವಾಗಿ..


“ಹೊಸ ವರುಷ”

ಹೊಸ ವರುಷವೆ ನೀ ಬೆಳಕಾಗು

ರೋಧನೆಯಿಲ್ಲದ ಜಗವಾಗು..


ಜ್ಞಾನ ದೀವಟಿಯು ನಿತ್ಯ ಬೆಳಗುತಿರಲಿ

ಸಂತಸದ ಹೊನಲು ನಿತ್ಯ ತುಂಬಿರಲಿ

ಎಲ್ಲರ ಮನಸು ಸದಾ ನಗುತಿರಲಿ

ಎಲ್ಲರ ಬದುಕು ಸದಾ ಪಳಿಸುತಿರಲಿ...


ಯಶಸ್ಸಿನ ಫಲವು ಸದಾ ಒಲಿಯಲಿ

ಜಗದ ಚೆಲುವು ಸದಾ ಸಂಭ್ರಮಿಸಲಿ

ಎಲ್ಲರ ಮೊಗದಲಿ ನಿತ್ಯ ನಗುವಿರಲಿ

ಸಹೋದರ ಬಂಧುಗಳಲಿ ನಿತ್ಯ ಹಿತವಿರಲಿ...


ಪ್ರಕೃತಿಯ ಮುನಿಸು ಕಾಡದಿರಲಿ

ಮಳೆ ಬೆಳೆಯು ಚಿನ್ನವಾಗಲಿ

ಜಗದ ಜೀವಗಳು ಸೊರಗದಿರಲಿ

ಸಂತುಷ್ಟಿಯ ಹಿತವು ಮೇಳೈಸುತಿರಲಿ...


ಕ್ಷಾಮ ರೋಗಗಳು ಬಾರದಿರಲಿ

ಕಹಿಯ ಸತ್ವವು ನುಸುಳದಿರಲಿ

ನಾಡಿನ ನಾಯಕರು ಸೇವಕರಾಗಿರಲಿ

ನಾಡಿನ ಜನರು ನಗುತಿರಲಿ...


ರಚನೆ: ರಾಮಚಂದ್ರ ಸಾಗರ್