Monday, 4 January 2021

ಮುಳ್ಳು ಹೂವಾಗುವುದು...


ಮುಳ್ಳೇ ಹಾದಿಯಾದರೇನು ನೋವೇ ಜಗವಾದರೇನು 

ನಿನ್ನಾಸರೆಯು ಹೂವಂತೆ ಎನುವೆ ಅಮ್ಮ ನಾನು..


ನಿನ್ನ ವಾತ್ಸಲ್ಯವೇ ಬಾಳಿಗೆ ಶ್ರೀರಕ್ಷೆಯು ಇದುವೇ ಸತ್ಯವು

ನನ್ನ ಉಸಿರೇ ಬೇಡುವುದು ನಿನ್ನ ಜೊತೆಯನೇ ನಿತ್ಯವು..


ನೀನಿರಲು ಬಾಳು ಮರೆಯುವುದು ನೂರೊಂದು ನೋವು

ನಡೆವ ದಾರಿಯಲ್ಲಿ ದಣಿವೆನಿಸದು ಮನಕೆ ಅರೆಕ್ಷಣವು..


ದುಃಖದ ಬಿರುಮಳೆಯಲ್ಲು ನಗುವುದನೇ ಕಲಿಯುವೆನು

ಸುಖದ ಗಿರಿಗೆ ಏರುವುದನು ಗುರಿಯಾಗಿಸುವೆನು ದಿನವು..


ಸೋಲೆ ಅಲೆಯಾದರೇನು ದುಗುಡವೆ ಮನೆಯಾದರೇನು

ಸೋಗೆಯರಳಿ ಜಯವು ಲಭಿಸದೇ ಉಳಿಯುವುದೇನು...


ಮಮತೆಯ ಅನುಜಾತೆಯು ಆನಂದದಿ ಬಾಳಲಿ

ಮಮಕಾರವೇ ನಿನ್ನಿಂದಲೇ ನಮಗಾಮೃತವಾಗಲಿ...


ದುಮ್ಮಾನವು ದೂರಾಗುವುದು ಆತಂಕವು ಆರುವುದು

ಸುಮ್ಮಾನವು ನನಸಾಗಿ ಬಾಳಿನೊಳು ಸುರಿಯುವುದು....


ನೀನಿಡುವ ಹೆಜ್ಜೆಗೆ ನೋವಿಗೇ ಸೋಲಾಗುವುದು

ನಾನಿರಲು ಜೊತೆಯಲಿ ಜಾರದಿರಲಿ ಹನಿ ಕಣ್ಣೀರು...


ನೀನಿರಲು ಬಾಳು ಕಾಣುವುದು ನೂರೊಂದು ಕನಸು

ಆ ಸಂಭ್ರಮದ ದಿನಗಳೆಡೆಗೆ ಸಾಗೋಣ ಮರೆಯುತಾ ನೋವು..


ಬಾಡಿದ ಮೊಗದಲ್ಲಿ ನಗುವುದು ನಲಿದಾಡುವುದು

ನಿನ್ನ ಮಮತೆಯ ಹಾರೈಕೆಯು ಸಿದ್ಧಿಸುವುದು ದಿಟವು..


ಛಲದ ನಡಿಗೆಯು ಗೆಲ್ಲುವುದು ನೀ ನೋಡುತಿರು

ಪಣದ ಯಾತ್ರೆಯಲಿ ಮುಳ್ಳು ಹೂವಾಗುವುದು ನೀ ಮರೆಯದಿರು..


ರಚನೆ: ರಾಮಚಂದ್ರ ಸಾಗರ್