Monday, 26 October 2020

ಅಲ್ಲವೇನೆ ಗೆಳತಿ..???


ಚಂದಿರ ಎಂದರೇನು ನಿನ್ನ ಮುದ್ದಾದ ಮೊಗವೇ ಎನುವೆ ನಾನು

ಚೆಲುವು ಅಂದರೇನು ನಿನ್ನ ಮೋಹದ ನಗುವೇ ಅಲ್ಲವೇನು?


ಸ್ವರ್ಗ ಎಂದರೇನು ನಿನ್ನ ಮಮತೆಯ ಮಡಿಲು ಎನುವೆ ನಾನು

ಸ್ವಪ್ನ ಅಂದರೇನು ನಿನ್ನ ಮನೋಹರ ನೆನಪು ಅಲ್ಲವೇನು?


ನೋವು ಎಂದರೇನು ನೀ ಇರದ ಘಳಿಗೆ ಎನುವೆ ನಾನು

ಸುಖವು ಅಂದರೇನು ನೀ ಇರುವ ಘಳಿಗೆ ಅಲ್ಲವೇನು?


ಸೊಬಗು ಎಂದರೇನು ನೀನಿರುವ ಜಗವು ಎನುವೆ ನಾನು

ಪ್ರೇರಣೆ ಅಂದರೇನು ನೀನಿರುವ ಬದುಕು ಅಲ್ಲವೇನು?


ಹೂವು ಎಂದರೇನು ನಿನ್ನ ಕೋಮಲ ತನುವು ಎನುವೆ ನಾನು

ಬೆಡಗು ಅಂದರೇನು ನಿನ್ನ ಚಾತುರ್ಯದ ಮಾತು ಅಲ್ಲವೇನು?


ಹಿತವು ಎಂದರೇನು ಅನುಕ್ಷಣವು ನಿನ್ನ ಸ್ಮರಣೆಯು ಎನುವೆ ನಾನು

ರಕ್ಷೆ ಅಂದರೇನು ಅಭಯದಾ ನಿನ್ನ ಸವಿ ಅಪ್ಪುಗೆಯು ಅಲ್ಲವೇನು? 


ಬದುಕು ಎಂದರೇನು ನಿನ್ನ ಒಲವಿನ ಬಲವು ಎನುವೆ ನಾನು

ಹಾದಿ ಅಂದರೇನು ನಿನ್ನ ಹೆಜ್ಜೆಯ ಗುರುತು ಅಲ್ಲವೇನು?


ಬೆಳಕು ಎಂದರೇನು ನಮ್ಮ ಒಮ್ಮನದ ಹೊಳಪು ಎನುವೆ ನಾನು

ಬೆರಗು ಅಂದರೇನು ನಮ್ಮ ಅನುಪಮ ಜೋಡಿ ಅಲ್ಲವೇನು?


ಗೀತೆ ಎಂದರೇನು ನಮ್ಮ ಅನುರಾಗದ ಹಾಡು ಎನುವೆ ನಾನು

ಆಸೆ ಅಂದರೇನು ನಮ್ಮ ಆನಂದದ ಬಾಳು ಅಲ್ಲವೇನು?


ಸೌಂದರ್ಯ ಎಂದರೇನು ನಿನ್ನ ಪಾವನ ಮನಸು ಎನುವೆ ನಾನು

ಸೌರಭ ಅಂದರೇನು ನಿನ್ನ ಹೂಮನದ ಪರಿಮಳವು ಅಲ್ಲವೇನು?


ಮಧುರ ಎಂದರೇನು ನಿನ್ನ ಸವಿನೋಟದ ಸಿಹಿಯು ಎನುವೆ ನಾನು

ಮಂದಿರ ಅಂದರೇನು ನಿನ್ನ ಸಂಗೋಪನೆಯ ಗೊಪುರವು ಅಲ್ಲವೇನು?


ಪ್ರೀತಿ ಎಂದರೆ ನಮ್ಮೊಲವಿನ ಸಡಗರದ ಬಿರುಮಳೆಯು ತಾನೆ

ಪ್ರೇಮ ಅಂದರೆ ನಮ್ಮೊಲವ ಸಂಭ್ರಮದ ಯಾತ್ರೆಯು  ಅಲ್ಲವೇನೆ ಗೆಳತಿ..???


ರಚನೆ: ರಾಮಚಂದ್ರ ಸಾಗರ್


Thursday, 22 October 2020

ಬರೆಸಿದೆ ನೀನು...!!!

ಬರೆಸಿದೆ ನೀನು ಸಾವಿರ ಕವಿತೆ
ನಿನ್ನ ಸವಿನೋಟದ ಸಿಹಿಯಲಿ
ಬೆಳಗಿದೆ ನೀನು ಪ್ರೇಮದ ಹಣತೆ
ನಿನ್ನೊಲುಮೆಯ ಬೆಳಕಿನಲಿ...(ಪಲ್ಲವಿ)

ಗುನುಗಿದೆ ನೀನು ಪ್ರೇಮದೋಲೆ
ನಿನ್ನ ನವಿರು ದನಿಯ ಹಿತದಲಿ
ಕುಣಿಸಿದೆ ನೀನು ಮೋಹದಲೆಯಲಿ
ನಿನ್ನ ಮಮಕಾರದ ಮಜಲಿನಲಿ

...ಬರೆಸಿದೆ ನೀನು....(ಪಲ್ಲವಿ)

ಹೂವಾಗಿ ಅರಳಿದೆ ನೀನು ಒಲವೆ
ನನ್ನೆದೆಯ ಅಂಗಳದ ಬನದಲಿ
ನೆನಪಾಗಿ ಕಾಡಿದೆ ನೀನು ಪ್ರಿಯೆ
ಈ ಜೀವದಾ ಧಮನಿ ಧಮನಿಯಲಿ

...ಬರೆಸಿದೆ ನೀನು....(ಪಲ್ಲವಿ)

ಬಯಕೆಯಾಗಿ ಕಾಡಿದೆ ಬಲ್ಲಿದೆ
ನೀ ಶಶಿತುಂಬಿದ ತಂಪು ರಾತ್ರಿಯಲಿ
ಚೆಲುವಿನ ಚಿತ್ತಾರವಾಗಿ ಒಲಿದೆ
ನೀ ಮಂದಹಾಸದ ಸೌಂದರ್ಯದಲಿ

...ಬರೆಸಿದೆ ನೀನು....(ಪಲ್ಲವಿ)

ರಮ್ಯತೆಯ ಬಾಳಿಗೆ ಸಿಂಗಾರವಾದೆ
ನೀ ಅನುಪಮ ಕೋಮಲೆಯಾಗಿ
ಮೋಹದ ಕುಟೀರಕೆ ಶೋಭೆಯಾದೆ
ನೀ ಶುಭದ ರೂಪದ ಗೆಳತಿಯಾಗಿ..

...ಬರೆಸಿದೆ ನೀನು....(ಪಲ್ಲವಿ)

ಮೋಹಿಸುವ ಮನಕೆ ಪ್ರೇರಣೆಯಾದೆ
ನೀ ಸುಮಧುರ ದನಿಯ ಇಂಪಾಗಿ
ಕವಿ ಮನಕೆ  ಒಡತಿಯಾದೆ ಒಲವೆ
ನೀ ಬರೆಸುತ ನಿತ್ಯ ಪ್ರೇಮದ ಕವಿತೆ
....ಬರೆಸಿದೆ ನೀನು....(ಪಲ್ಲವಿ)

ರಾಮಚಂದ್ರ ಸಾಗರ್

Monday, 19 October 2020

ಕಾದಿರುವೆ ಗೆಳೆಯ..


ಹಸಿರು ಬನದ ಆ ಹಾದಿಯಲಿ

ಪ್ರೀತಿ ತುಂಬಿದ ಕಂಗಳಲಿ

ನಾ ಕಾದಿರುವೆ ಗೆಳೆಯ ನಿನಗಾಗಿ

ನಿನ್ನೊಲುಮೆಯ ಸವಿ ನುಡಿಗಾಗಿ


ಹೂಗಾಳಿಯ ಕಂಪಿನಲಿ

ಮನವಿಂದು ಹೂವಾಗಿರಲು

ನೀನೆನ್ನುವ ಮಮತೆಯ ನೆನಪು

ಅಲೆಯಾಗುತಿದೆ ಜಗವೆಲ್ಲವು

ಸವಿ ನೆನಪುಗಳೆ ಹೆಗಲೇರಿವೆ 

ನೀ ನೋಡು ಬಾ ಗೆಳೆಯ...


ರಮಿಸುವ ತಂಗಾಳಿಯ ಸುಖದಲಿ

ಹೂಬನದ ವೈಭವದ ಹಾದಿಯಲಿ

ನೀ ಕೈಹಿಡಿದು ನಡೆಸುವೆಯ?

ನಿನ್ನೊಲವಿಗೆ ಹೂವಾಗಿ 

ನಾ ನಗುವೆವು ಅನುದಿನವು ಗೆಳೆಯ..


ಹನಿ ಹನಿ ಪ್ರೀತಿಯು ಮಳೆಯಾಗುತಿದೆ

ನೀನೆನ್ನುವ ಜೀವವು ಮನಕೆ ಆವರಿಸಿರಲು

ಅಕ್ಕರೆಯ ನದಿಯು ಮೈದುಂಬಿದೆ 

ಬಾಳಿಗೆ ನೀ ಚೇತನವಾಗಿ ನಗುತಿರಲು

ನೋಡು ಬಾ ಗೆಳೆಯ.. 


ಗಿರಿಯ ಸಾವರಿಸಿದ ತಂಗಾಳಿಯ ಸಪ್ಪಳದಲ್ಲು

ನನ್ನ ಕಾಲ್ಗೆಜ್ಜೆಯ ನಾದದ ಖುಷಿಯಲ್ಲು

ಆಲಿಸುತಿದೆ ನಿನದೇ ಹೆಸರು

ನಿನ್ನೊಲುಮೆಯದೆ ಗುಣಗಾನವು

ಏನಿದು ಮಾಯೆಯು ಗೆಳೆಯ..!


ಭರವಸೆ ತುಂಬಿದ ಕಂಗಳಲಿ

ನಾ ಕಾದಿರುವೆ ಗೆಳೆಯಾ

ಹರುಷದ ಬಾಳಿಗೆ ವರವಾಗು

ಕನಸಿನ ನಾವೆಗೆ ಜೊತೆಯಾಗು

ಕಾದಿರುವೆ ಗೆಳೆಯಾ ನಿನಗಾಗಿ

ನೀ ಬರುವ ಸವಿ ಘಳಿಗೆಗಾಗಿ...


ರಚನೆ: ರಾಮಚಂದ್ರ ಸಾಗರ್

ಚಿತ್ರ: ವಿಂದ್ಯಾ ನಾಗರಾಜ್ ಹೆಗಡೆ


Sunday, 18 October 2020

ಹಾದಿಯಲಿ


ಸಚ್ಚರಿತ ಹಾದಿಯಲಿ ಸಂಪನ್ನತೆಯ ಫಲವಿದೆ

ಸಜ್ಜನಿಕೆಯ ಹಾದಿಯಲಿ ಶೀಲವಂತರ ಬಲವಿದೆ

ಸಖ್ಯದ ಹಾದಿಯಲಿ ಸ್ನೇಹದ ಲಯವಿದೆ

ಸಭ್ಯತೆಯ ಹಾದಿಯಲಿ ವಿನೀತದ ಸಿರಿಯಿದೆ


ಸತ್ಯದ ಹಾದಿಯಲಿ ನ್ಯಾಯದ ಹೊನಲಿದೆ

ಪಥ್ಯದ ಹಾದಿಯಲಿ ಹಿತದ ಒಳಿತಿದೆ

ಸಮ್ಮಿಲನದ ಹಾದಿಯಲಿ ಐಖ್ಯತೆಯ ಗೂಡಿದೆ

ಸಮ್ಮಿಳಿತದ ಹಾದಿಯಲಿ ಜಗದ ನಲಿವಿದೆ


ಕಂಪನದ ಹಾದಿಯಲಿ ಸಿದ್ಧಿಯು ಗೌಣವು

ಕಂಗೆಡದ ಹಾದಿಯಲಿ ದೆಸೆಗೆಡೆದು ಮನವು

ಮುಳ್ಳು ಹಾದಿಯಲಿ ಬಂಗಾರವು ಇಹುದು

ಮುನಿಸಿನ ಹಾದಿಯಲಿ ಬವಣೆಯು ತೀರದು


ಅಕ್ಕರೆಯ ಹಾದಿಯಲಿ ಆನಂದದ ಮನೆಯಿದೆ

ಅಪ್ಪಳಿಕೆಯ ಹಾದಿಯಲಿ ಸಂಘರ್ಷದ ಮತವಿದೆ

ಪಾಪದ ಹಾದಿಯಲಿ ಅಧರ್ಮದ ಗುಹೆಯಿದೆ

ಪಾವನ ಹಾದಿಯಲಿ ಶುದ್ಧತೆಯ ಗುಡಿಯಿದೆ


ರಾಮಚಂದ್ರ ಸಾಗರ್