ಬರೆಸಿದೆ ನೀನು ಸಾವಿರ ಕವಿತೆ
ನಿನ್ನ ಸವಿನೋಟದ ಸಿಹಿಯಲಿ
ಬೆಳಗಿದೆ ನೀನು ಪ್ರೇಮದ ಹಣತೆ
ನಿನ್ನೊಲುಮೆಯ ಬೆಳಕಿನಲಿ...(ಪಲ್ಲವಿ)
ಗುನುಗಿದೆ ನೀನು ಪ್ರೇಮದೋಲೆ
ನಿನ್ನ ನವಿರು ದನಿಯ ಹಿತದಲಿ
ಕುಣಿಸಿದೆ ನೀನು ಮೋಹದಲೆಯಲಿ
ನಿನ್ನ ಮಮಕಾರದ ಮಜಲಿನಲಿ
...ಬರೆಸಿದೆ ನೀನು....(ಪಲ್ಲವಿ)
ಹೂವಾಗಿ ಅರಳಿದೆ ನೀನು ಒಲವೆ
ನನ್ನೆದೆಯ ಅಂಗಳದ ಬನದಲಿ
ನೆನಪಾಗಿ ಕಾಡಿದೆ ನೀನು ಪ್ರಿಯೆ
ಈ ಜೀವದಾ ಧಮನಿ ಧಮನಿಯಲಿ
...ಬರೆಸಿದೆ ನೀನು....(ಪಲ್ಲವಿ)
ಬಯಕೆಯಾಗಿ ಕಾಡಿದೆ ಬಲ್ಲಿದೆ
ನೀ ಶಶಿತುಂಬಿದ ತಂಪು ರಾತ್ರಿಯಲಿ
ಚೆಲುವಿನ ಚಿತ್ತಾರವಾಗಿ ಒಲಿದೆ
ನೀ ಮಂದಹಾಸದ ಸೌಂದರ್ಯದಲಿ
...ಬರೆಸಿದೆ ನೀನು....(ಪಲ್ಲವಿ)
ರಮ್ಯತೆಯ ಬಾಳಿಗೆ ಸಿಂಗಾರವಾದೆ
ನೀ ಅನುಪಮ ಕೋಮಲೆಯಾಗಿ
ಮೋಹದ ಕುಟೀರಕೆ ಶೋಭೆಯಾದೆ
ನೀ ಶುಭದ ರೂಪದ ಗೆಳತಿಯಾಗಿ..
...ಬರೆಸಿದೆ ನೀನು....(ಪಲ್ಲವಿ)
ಮೋಹಿಸುವ ಮನಕೆ ಪ್ರೇರಣೆಯಾದೆ
ನೀ ಸುಮಧುರ ದನಿಯ ಇಂಪಾಗಿ
ಕವಿ ಮನಕೆ ಒಡತಿಯಾದೆ ಒಲವೆ
ನೀ ಬರೆಸುತ ನಿತ್ಯ ಪ್ರೇಮದ ಕವಿತೆ
....ಬರೆಸಿದೆ ನೀನು....(ಪಲ್ಲವಿ)
ರಾಮಚಂದ್ರ ಸಾಗರ್
