ಹಸಿರು ಬನದ ಆ ಹಾದಿಯಲಿ
ಪ್ರೀತಿ ತುಂಬಿದ ಕಂಗಳಲಿ
ನಾ ಕಾದಿರುವೆ ಗೆಳೆಯ ನಿನಗಾಗಿ
ನಿನ್ನೊಲುಮೆಯ ಸವಿ ನುಡಿಗಾಗಿ
ಹೂಗಾಳಿಯ ಕಂಪಿನಲಿ
ಮನವಿಂದು ಹೂವಾಗಿರಲು
ನೀನೆನ್ನುವ ಮಮತೆಯ ನೆನಪು
ಅಲೆಯಾಗುತಿದೆ ಜಗವೆಲ್ಲವು
ಸವಿ ನೆನಪುಗಳೆ ಹೆಗಲೇರಿವೆ
ನೀ ನೋಡು ಬಾ ಗೆಳೆಯ...
ರಮಿಸುವ ತಂಗಾಳಿಯ ಸುಖದಲಿ
ಹೂಬನದ ವೈಭವದ ಹಾದಿಯಲಿ
ನೀ ಕೈಹಿಡಿದು ನಡೆಸುವೆಯ?
ನಿನ್ನೊಲವಿಗೆ ಹೂವಾಗಿ
ನಾ ನಗುವೆವು ಅನುದಿನವು ಗೆಳೆಯ..
ಹನಿ ಹನಿ ಪ್ರೀತಿಯು ಮಳೆಯಾಗುತಿದೆ
ನೀನೆನ್ನುವ ಜೀವವು ಮನಕೆ ಆವರಿಸಿರಲು
ಅಕ್ಕರೆಯ ನದಿಯು ಮೈದುಂಬಿದೆ
ಬಾಳಿಗೆ ನೀ ಚೇತನವಾಗಿ ನಗುತಿರಲು
ನೋಡು ಬಾ ಗೆಳೆಯ..
ಗಿರಿಯ ಸಾವರಿಸಿದ ತಂಗಾಳಿಯ ಸಪ್ಪಳದಲ್ಲು
ನನ್ನ ಕಾಲ್ಗೆಜ್ಜೆಯ ನಾದದ ಖುಷಿಯಲ್ಲು
ಆಲಿಸುತಿದೆ ನಿನದೇ ಹೆಸರು
ನಿನ್ನೊಲುಮೆಯದೆ ಗುಣಗಾನವು
ಏನಿದು ಮಾಯೆಯು ಗೆಳೆಯ..!
ಭರವಸೆ ತುಂಬಿದ ಕಂಗಳಲಿ
ನಾ ಕಾದಿರುವೆ ಗೆಳೆಯಾ
ಹರುಷದ ಬಾಳಿಗೆ ವರವಾಗು
ಕನಸಿನ ನಾವೆಗೆ ಜೊತೆಯಾಗು
ಕಾದಿರುವೆ ಗೆಳೆಯಾ ನಿನಗಾಗಿ
ನೀ ಬರುವ ಸವಿ ಘಳಿಗೆಗಾಗಿ...
ರಚನೆ: ರಾಮಚಂದ್ರ ಸಾಗರ್
ಚಿತ್ರ: ವಿಂದ್ಯಾ ನಾಗರಾಜ್ ಹೆಗಡೆ
